ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅದರ ಎಂಟು ಅಂಗಸಂಸ್ಥೆಗಳ ಚಟುವಟಿಕೆಗಳನ್ನು ಪ್ರಚಾರ ಮಾಡುವುದನ್ನು ತಡೆಯಲು ಅವರ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲು ಒಕ್ಕೂಟ ಸರ್ಕಾರವು ಆದೇಶಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಮಂಗಳವಾರ ತಡರಾತ್ರಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಸಂಘಟನೆಯನ್ನು ಸರ್ಕಾರ ನಿಷೇಧಿಸಿತ್ತು.
ಪಿಎಫ್‌ಐ, ರಿಹಬ್ ಇಂಡಿಯಾ ಫೌಂಡೇಶನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (NCHRO), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರೆಹಬ್ ಫೌಂಡೇಶನ್ (ಕೇರಳ)ನ ಟ್ವಿಟರ್, ಫೇಸ್‌ಬುಕ್, ಇನ್ಸ್‌ಟಾಗ್ರಾಂ ಖಾತೆಗಳು, ಯೂಟ್ಯೂಬ್ ಚಾನಲ್‌ಗಳು ಅಥವಾ ಅದರ ಆನ್‌ಲೈನ್ ಉಪಸ್ಥಿತಿಯನ್ನು ಶಾಶ್ವತವಾಗಿ ನಿರ್ಬಂಧಿಸಲಾಗಿದೆ. ಈ ಸಂಘಟನೆಗಳು ಪೋಸ್ಟ್ ಮಾಡಿದ ವಿಷಯವನ್ನು ಸಹ ತೆಗೆದುಹಾಕಲಾಗುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪಿಎಫ್‌ಐ, ಆರ್‌ಐಎಫ್ ಮತ್ತು ಎಐಐಸಿ ವೆಬ್‌ಸೈಟ್‌ಗಳನ್ನು ಈಗಾಗಲೆ ನಿರ್ಬಂಧಿಸಲಾಗಿದೆ. ದೂರಸಂಪರ್ಕ ಇಲಾಖೆಯ ಆದೇಶದ ಮೇರೆಗೆ ಇತರರ ವೇದಿಕೆಯನ್ನೂ ನಿರ್ಬಂಧಿಸುವ ಪ್ರಕ್ರಿಯೆಯಲ್ಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಹೇಳಿದೆ.
ಇದನ್ನೂ ಓದಿ: ಪಿಎಫ್‌ಐ ಮತ್ತು ಅದರ ಅಂಗ ಸಂಸ್ಥೆಗಳಿಗೆ ಐದು ವರ್ಷಗಳ ನಿಷೇಧ
ಭಯೋತ್ಪಾದಕ ಸಂಘಟನೆ ಎಂದು ಘೋಷಣೆಯಾಗಿರುವ ಪಿಎಫ್‌ಐಗೆ ಸಂಬಂಧಿಸಿದ ಖಾತೆಗಳು ಅಥವಾ ಅದಕ್ಕೆ ಸಂಬಂಧಪಟ್ಟ ಯಾವುದೇ ವಿಷಯವನ್ನು ತೆಗೆದುಹಾಕಲು ಫೇಸ್‌ಬುಕ್ ಮತ್ತು ಟ್ವಿಟರ್ ಸೇರಿದಂತೆ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ನಿರ್ದೇಶನಗಳನ್ನು ಕಳುಹಿಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಪಿಎಫ್‌ಐ ಅನ್ನು “ಕಾನೂನುಬಾಹಿರ ಸಂಘಟನೆ” ಎಂದು ಘೋಷಿಸಲಾಗಿದ್ದು, ಅವರು ಯಾವುದೇ ಪತ್ರಿಕಾ ಹೇಳಿಕೆಗಳನ್ನು ನೀಡುವುದನ್ನು ನಿರ್ಬಂಧಿಸಲಾಗಿದೆ.
ಪಿಎಫ್‌ಐ, ಸಿಎಫ್‌ಐ, ಆರ್‌ಐಎಫ್ ಮತ್ತು ಇತರ ಅಂಗಸಂಸ್ಥೆಗಳಿಗೆ ಲಿಂಕ್ ಮಾಡಲಾದ ವಾಟ್ಸಾಪ್ ಖಾತೆಗಳ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಯಾವುದೇ ದೇಶ ವಿರೋಧಿ ಚಟುವಟಿಕೆಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಹೇಳಿದೆ.
ಇದನ್ನೂ ಓದಿ: PFI ನಿಷೇಧ ಸಾಲದು, RSS ಅನ್ನು ಕೂಡ ನಿಷೇಧಿಸಬೇಕು: ಕಾಂಗ್ರೆಸ್ ಸಂಸದನ ಆಗ್ರಹ
ಪಿಎಫ್‌ಐ ಅಥವಾ ಅದರ ಯಾವುದೇ ಅಂಗಸಂಸ್ಥೆಗಳು ತಮ್ಮ ಚಟುವಟಿಕೆಗಳಿಗಾಗಿ ಯಾವುದೇ ಪ್ರಾಕ್ಸಿ ಸಾಮಾಜಿಕ ಮಾಧ್ಯಮ ಖಾತೆಗಳು ಅಥವಾ ವೆಬ್‌ಸೈಟ್‌ಗಳನ್ನು ತೆರೆದರೆ, ಅವುಗಳನ್ನು ಸಹ ನಿರ್ಬಂಧಿಸಬಹುದು ಎಂದು ಅಧಿಕಾರಿ ಹೇಳಿದ್ದಾರೆ.


