Homeಪುಸ್ತಕ ವಿಮರ್ಶೆಭಗತ್‌ಸಿಂಗ್ ಜನ್ಮದಿನ ವಿಶೇಷ; 1924ರ ’ಸರ್ಫರೋಶಿ ಕೀ ತಮನ್ನಾ’: ಭಾಗ-2

ಭಗತ್‌ಸಿಂಗ್ ಜನ್ಮದಿನ ವಿಶೇಷ; 1924ರ ’ಸರ್ಫರೋಶಿ ಕೀ ತಮನ್ನಾ’: ಭಾಗ-2

- Advertisement -
- Advertisement -

ಸತ್ವಿಂದರ್ ಜಸ್ ಅವರ ’ಭಗತ್ ಸಿಂಗ್- ಎ ಲೈಫ್ ಇನ್ ರೆವೊಲ್ಯೂಶನ್’ ಪುಸ್ತಕದಿಂದ ಆಯ್ದ ಅಧ್ಯಾಯ

ಇಡೀ ಉಪಖಂಡದಲ್ಲಿ ನೆಲೆಸಿರುವ ರಾಜಕೀಯದ ಕಾರಣಕ್ಕಾಗಿ, ಇಂದು ಕ್ರಾಂತಿಕಾರಿಗಳ ಬದಲಿ ಪರಂಪರೆಯನ್ನು ಗುರುತಿಸುವುದು ಹಿಂದೆಂದಿಗಿಂತಲೂ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ. ನಿರ್ದಿಷ್ಟವಾಗಿ 1925ರಲ್ಲಿ ನಾಗಪುರದಲ್ಲಿ ಆರೆಸ್ಸೆಸನ್ನು ಸಂಘಟಿಸಲಾಗುತ್ತಿದ್ದ ಹೊತ್ತಿನಲ್ಲಿ ಭಗತ್ ಸಿಂಗ್ ಮತ್ತವರ ಸಂಗಾತಿಗಳು 1926ರಲ್ಲಿ ಲಾಹೋರಿನಲ್ಲಿ ನೌಜವಾನ್ ಭಾರತ್ ಸಭಾವನ್ನು ಸ್ಥಾಪಿಸಿದರು ಎಂಬುದನ್ನು ನಾವು ಮರೆತುಬಿಟ್ಟಿದ್ದೇವೆ. ಒಂದು ವಿಭಜನೆಗಾಗಿ; ಇನ್ನೊಂದು ಏಕತೆಗಾಗಿ ನಿಂತಿತ್ತು. ಒಂದು ಧರ್ಮದ ತಳಹದಿಯನ್ನು ಆಧರಿಸಿದ್ದರೆ, ಇನ್ನೊಂದು ಜಾತ್ಯತೀತತೆಯನ್ನು ಆಧರಿಸಿತ್ತು. ಆದುದರಿಂದ ನಾವು- ’ಭಗತ್ ಸಿಂಗ್ ಕೋಮುವಾದದಿಂದ ಬೆಳೆಯುತ್ತಿರುವ ಅಪಾಯದ ಬಗೆಗೆ ತೀರಾ ಅರಿವು ಹೊಂದಿದ್ದ 1920ರ ದಶಕದ’ ಸಮಯವನ್ನು ಮರೆಯಬಾರದು. ಯಾಕೆಂದರೆ, ಈ ದಶಕವು ಹಿಂದೂ ಮಹಾಸಭಾ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹುಟ್ಟನ್ನು ಕಂಡಿತು ಎಂಬುದಕ್ಕಾಗಿ ಮಾತ್ರವಲ್ಲ, ಆಗಲೇ ತಬ್ಲೀಗೀ ಜಮಾತ್‌ನಂತ ನಿರ್ದಿಷ್ಟವಾದ ಮುಸ್ಲಿಮರ ಸಂಘಟನೆಗಳೂ ಇದ್ದವು ಎಂಬುದಕ್ಕಾಗಿ ಕೂಡ. ಅಂತಿಮವಾಗಿ 1947ರಲ್ಲಿ ದೇಶ ವಿಭಜನೆಗೆ ಕಾರಣವಾದ ಪರಸ್ಪರ ಪೈಪೋಟಿಯ ಕೋಮುವಾದದ ನೀತಿಗೆ ಪ್ರೋತ್ಸಾಹ ನೀಡುವುದನ್ನು ಭಗತ್ ಸಿಂಗ್ ವಿರೋಧಿಸಿದರು. ಆದುದರಿಂದ, ಗಾಂಧೀವಾದಿ ಅಹಿಂಸೆಯ ಹಾದಿಯನ್ನು ತ್ಯಜಿಸಿದ ಭಾರತೀಯ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಈ ಬದಲಿ ಹಾದಿಯು ಎಷ್ಟು ಮಹತ್ವದ್ದಾಗಿತ್ತು ಎಂದರೆ, ಸರಕಾರವು ಹಲವಾರು ಪ್ರಕರಣಗಳ ಜೊತೆಗೆ- ಕಾಕೋರಿ ರೈಲು ದರೋಡೆ ಪ್ರಕರಣ ಮಾತ್ರವಲ್ಲದೇ, ದೇವಗಢ ಸಂಚು ಪ್ರಕರಣ, ಕಾನ್ಪುರ ಸಂಚು ಪ್ರಕರಣ, ಮೀರತ್ ಸಂಚು ಪ್ರಕರಣ ಮತ್ತು ಲಾಹೋರ್ ಸಂಚು ಪ್ರಕರಣಗಳಲ್ಲಿ ಕ್ರಮ ಜರುಗಿಸಿತು. ಇವುಗಳಲ್ಲಿ ಅತ್ಯಂತ ಮಹತ್ವದ್ದಾಗಿದ್ದುದು ಕೊನೆಯದು.

ವಸಾಹತುಶಾಹಿಯ ಈ ’ನಾಗರಿಕಗೊಳಿಸುವ ಯೋಜನೆ’ಯೇ ಈ ಬದಲಿ ಸಂಪ್ರದಾಯದ ಬೆಳವಣಿಗೆಗೆ ಕಾರಣವಾಯಿತು ಮತ್ತು ಈ ಮತ್ತೊಂದು ಕಾರಣಕ್ಕಾಗಿಯೂ ಕ್ರಾಂತಿಕಾರಿ ಸಂಪ್ರದಾಯವನ್ನು ಸ್ಮರಣೀಯಗೊಳಿಸಬೇಕಾದ ಅಗತ್ಯವಿದೆ. ಇದು ’ಸರ್ಫರೋಶಿ’ ಮತ್ತು ಸ್ವಯಂ ಬಲಿದಾನದ ಸಂಪ್ರದಾಯ. ಇದು ಭಗತ್ ಸಿಂಗ್ ಅವರ ಜೀವನದಲ್ಲಿ ಕಾಣಿಸಿಕೊಂಡಿತು; ಏಕೆಂದರೆ, ಅವರು ವಸಾಹತುಶಾಹಿಯ ಹಲವಾರು ಹಿಂಸಾತ್ಮಕ ಘಟನೆಗಳಿಗೆ ಸಾಕ್ಷಿಯಾಗಿದ್ದರು. ಮೊದಲ ಲಾಹೋರ್ ಸಂಚು ಪ್ರಕರಣದ ವಿಚಾರಣೆಯಲ್ಲಿ ಮರಣದಂಡನೆಗಳನ್ನು ವಿಧಿಸಿದಾಗ ಅವರು ಕೇವಲ ಎಂಟು ವರ್ಷ ಪ್ರಾಯದವರಾಗಿದ್ದರು. ಇವುಗಳು ವಿಫಲಗೊಂಡ ಘದ್ದರ್ ಸಂಚಿನ ಬಳಿಕ, 26 ಏಪ್ರಿಲ್‌ನಿಂದ 13 ಸೆಪ್ಟೆಂಬರ್ 1915ರ ತನಕ ಪುಟಿದೆದ್ದ ಸುಮಾರು ಒಂಬತ್ತು ಪ್ರಕರಣಗಳನ್ನು ಹೊಂದಿದ್ದವು. ಮತ್ತೊಮ್ಮೆ ಈ ವಿಚಾರಣೆಗಳನ್ನು 1925ರ ಭಾರತ ರಕ್ಷಣಾ ಕಾಯಿದೆ (ಡಿಫೆನ್ಸ್ ಆಫ್ ಇಂಡಿಯಾ ಆಕ್ಟ್) ಪ್ರಕಾರ ರಚಿಸಲಾದ ವಿಶೇಷ ಟ್ರಿಬ್ಯೂನಲ್‌ಗಳ ಮೂಲಕ ನಡೆಸಲಾಗಿತ್ತು. ಶಿಕ್ಷೆ ವಿಧಿಸಲಾದ 291 ಮಂದಿಯಲ್ಲಿ 42 ಮಂದಿಗೆ ಮರಣದಂಡನೆ ವಿಧಿಸಲಾಗಿತ್ತು. ಹೆಚ್ಚಿನವರಿಗೆ, ಅಂದರೆ, 114 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 93 ಮಂದಿಗೆ ವಿವಿಧ ಅವಧಿಗಳ ಜೈಲುವಾಸದ ಶಿಕ್ಷೆ ವಿಧಿಸಲಾಗಿತ್ತು. ವಿಚಾರಣೆಯಲ್ಲಿದ್ದ ಆರೋಪಿಗಳ ಪೈಕಿ ಕೇವಲ 42 ಮಂದಿ ಮಾತ್ರ ದೋಷಮುಕ್ತರಾದರು.

ನೌಜವಾನ್ ಭಾರತ್ ಸಭಾ

ಆಗ ಗಲ್ಲಿಗೇರಿಸಲಾದ ಒಬ್ಬರು ಕರ್ತಾರ್ ಸಿಂಗ್ ಸರಭ. ಭಗತ್ ಸಿಂಗ್ ಯಾವಾಗಲೂ ಕರ್ತಾರ್ ಸಿಂಗ್ ಅವರ ಚಿತ್ರವನ್ನು ಲಾಕೆಟ್‌ನಲ್ಲಿ ಧರಿಸಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತದೆ. ಅವರು ಹಾಗೆ ಮಾಡಿದ್ದರೆ, ಅದರಲ್ಲಿ ಆಶ್ಚರ್ಯವೇನಿಲ್ಲ. ಮುಂದೆ ಅವರ ಜೀವನವು ಕರ್ತಾರ್ ಸಿಂಗ್ ಅವರದ್ದಕ್ಕಿಂತ ವಿಭಿನ್ನವಾಗೇನೂ ಆಗಿರಲಿಲ್ಲ.

ಕರ್ತಾರ್ ಸಿಂಗ್ ಕೂಡಾ ರಾಷ್ಟ್ರೀಯ ವೇದಿಕೆಯಲ್ಲಿ ಏಕಾಏಕಿಯಾಗಿ ಮೂಡಿಬಂದು, ಭಾರತದ ಭವಿಷ್ಯದಲ್ಲಿ ಕಣ್ಣೀರ ಹನಿಯೊಂದನ್ನು ಬಿಟ್ಟುಹೋದರು. 1912ರಲ್ಲಿ ಕರ್ತಾರ್ ಸಿಂಗ್ ಪಂಜಾಬಿನ ಲುಧಿಯಾನವನ್ನು ಬಿಟ್ಟು ಯುಎಸ್‌ಎಯ ಸಾನ್‌ಫ್ರಾನ್ಸಿಸ್ಕೋಗೆ ಹೋಗಿ ಕ್ರಾಂತಿಯ ಒಲವು ಹಿಡಿಸಿಕೊಂಡರು. ಅಲ್ಲಿ ಬರ್ಕ್‌ಲೀ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದಾಗಲೇ ಅಲ್ಲಿದ್ದ ಇತರ ಭಾರತೀಯ ವಿದ್ಯಾರ್ಥಿಗಳ ಜೊತೆ ಸೇರಿ ಘದ್ದರ್ ಪಾರ್ಟಿಯ ಸ್ಥಾಪನೆ ಮಾಡಿದರು. ಮೊದಲ ವಿಶ್ವಯುದ್ಧ ಆರಂಭವಾದಾಗ, ಘದ್ದರ್ ಪಕ್ಷ ಕೂಡಾ ಬ್ರಿಟನ್ ಮೇಲೆ ’ಐಲಾನ್-ಇ-ಜಂಗ್’ ಅಂದರೆ ಯುದ್ಧ ಘೋಷಣೆ ಹೊರಡಿಸಿತು. ನಂತರ, ಕರ್ತಾರ್ ಸಿಂಗ್ ಬೇಗನೇ ಭಾರತಕ್ಕೆ ಮರಳಿದರು. ಆದರೆ, ಇಲ್ಲಿ ಭಗತ್ ಸಿಂಗ್ ಅವರಿಗೆ ಆದಂತೆಯೇ, 1915ರಲ್ಲಿ ಸಹವರ್ತಿಯೊಬ್ಬ ಕರ್ತಾರ್ ಅವರಿಗೆ ದ್ರೋಹ ಬಗೆದ.

ಕರ್ತಾರ್ ಸಿಂಗ್ ಅವರ ಬಂಧನದ ಬಳಿಕ ಮೊದಲ ಲಾಹೋರ್ ಸಂಚು ಪ್ರಕರಣದಲ್ಲಿ ಅವರಿಗೆ ಮರಣದಂಡನೆ ವಿಧಿಸಲೆಂದೇ ವಿಶೇಷವಾಗಿ ಟ್ರಿಬ್ಯೂನಲ್ ಒಂದನ್ನು ರಚಿಸಲಾಯಿತು.

ಭಗತ್ ಸಿಂಗ್ ಅವರ ರೀತಿಯಲ್ಲಿಯೇ, ಕೇವಲ 19 ವರ್ಷ ಪ್ರಾಯವಾಗಿದ್ದ ಹದಿಹರೆಯದ ಹುಡುಗನನ್ನು 1915ರ ನವೆಂಬರ್‌ನಲ್ಲಿ ಗಲ್ಲಿಗೇರಿಸಲಾಯಿತು. ಭಗತ್ ಸಿಂಗ್ ಅವರಂತೆಯೇ ಕರ್ತಾರ್ ಸಿಂಗ್ ಕೂಡಾ ತುರ್ತು ಸ್ಥಿತಿಯ ನಿಯಮಗಳ ಪ್ರಕಾರ ಸಾಮಾನ್ಯ ಕಾನೂನಿಗೆ ಹೊರತಾಗಿ ಮರಣದಂಡನೆ ಎದುರಿಸಿದವರೆಂಬುದನ್ನು ಮತ್ತು ಭಗತ್ ಸಿಂಗ್ ಮೇಲೆ ಅವರ ಪರಿಣಾಮ ಆಳ ಮತ್ತು ದೀರ್ಘವಾಗಿತ್ತೆಂಬುದನ್ನು ಬಹುತೇಕ ಮರೆಯಲಾಗುತ್ತದೆ.

ಭಗತ್ ಸಿಂಗ್ ಆವರು ’ಕೀರ್ತಿ’ ಪತ್ರಿಕೆಯ 1927ರ ಏಪ್ರಿಲ್/ಮೇ ಸಂಚಿಕೆಯಲ್ಲಿ ’ಭಾಯ್ ಕರ್ತಾರ್ ಸಿಂಗ್ ಸರಭ’ ಎಂಬ ಶೀರ್ಷಿಕೆಯಲ್ಲಿ ಒಂದು ಲೇಖನ ಬರೆದು, ಅವರನ್ನು “ಕದನ ದೇವತೆಯ ಸಾಹಸಿ ಅನುಯಾಯಿ” ಎಂದು ಬಣ್ಣಿಸಿ “ಅವರು ತಮ್ಮ ಜೀವ ಬಲಿದಾನ ಮಾಡಿದಾಗ 20 ವರ್ಷಗಳೂ ಆಗಿರಲಿಲ್ಲ. ಅವರು ಸುಂಟರಗಾಳಿಯಂತೆ ಹಠಾತ್ತಾಗಿ ಪ್ರತ್ಯಕ್ಷರಾಗಿ ಅತ್ಯುನ್ನತ ಬಲಿದಾನ ಮಾಡಿದರು. ಯಾಕೆಂದರೆ, ತನ್ನ ಸುತ್ತಲಿನ ಘಟನೆಗಳಿಂದ ವಿಚಲಿತರಾಗದೇ ಇರುವುದು ಅವರಿಗೆ ಅಸಾಧ್ಯವಾಗಿತ್ತು” ಎಂದರು. ಭಗತ್ ಮುಂದುವರಿದು, “ಅಹಿಂಸೆಯ ಹಾದಿಯು ವಿಫಲವಾದರೆ, ದೇಶವು ಸ್ವತಂತ್ರವಾಗುವುದು ಹೇಗೆ ಎಂಬ ಪ್ರಶ್ನೆ ಅವರನ್ನು ನಿರಂತರವಾಗಿ ಕಾಡುತ್ತಿತ್ತು” ಎಂದು ಬರೆದಿದ್ದಾರೆ.

ಏಪ್ರಿಲ್ 1927ರಲ್ಲಿ ಭಗತ್ ಸಿಂಗ್ ಅವರು ಕರ್ತಾರ್ ಸಿಂಗ್ ಸರಭ ಅವರ ಇನ್ನೊಂದು ಜೀವನ ಚಿತ್ರಣವನ್ನು ಬರೆದರು. “ಕರ್ತಾರ್ ಸಿಂಗ್‌ಜೀ ಅಮೆರಿಕಕ್ಕೆ ಹೋದಾಗ, ಅವರು ಇಲ್ಲಿನ ಗುಲಾಮಗಿರಿಯಿಂದ ಹೋದರು. ಅಲ್ಲಿ ಅವರು ಸ್ವತಂತ್ರ ಜನರ ಚಳವಳಿಗಳನ್ನು ಕಂಡಾಗ ಅವರಿಗೆ ತವರಿನ ನೆನಪಾಯಿತು. ಅದು ಅವರ ದೇಶವಾಸಿಗಳು ಕೊಳೆಯುತ್ತಿದ್ದ ತವರಾಗಿತ್ತು. ಅಲ್ಲಿಂದ ಅವರು ಆಗಷ್ಟೇ ಹಿಂದಿರುಗಿದ್ದರು. ಅವರನ್ನು ನ್ಯಾಯಾಲಯದ ಮುಂದೆ ತಂದಾಗ ಅವರು ಅಲ್ಲಿ ಎರಡು ಮಹಾನ್ ಹೇಳಿಕೆಗಳನ್ನು ನೀಡಿದರು. ಅಲ್ಲಿ ಅವರು ತಮ್ಮ ಧೀರತನದಿಂದ ಎಲ್ಲವನ್ನೂ ಒಪ್ಪಿಕೊಂಡರು. ಯಾಕೆಂದರೆ, ಕರ್ತಾರ್ ಸಿಂಗ್ ಧೈರ್ಯವಂತರಾಗಿದ್ದರು ಮತ್ತು ಹೇಡಿಯಾಗಿ ಸಾಯುವುದು ಹೇಗೆಂದು ಅವರಿಗೆ ಗೊತ್ತಿರಲಿಲ್ಲ” ಎಂದು ಅವರು ಅಲ್ಲಿ ವಿವರಿಸಿದ್ದಾರೆ. ಇದು ಸ್ವತಃ ಭಗತ್ ಸಿಂಗ್ ಅವರು ಮರಣವನ್ನು ಎದುರಿಸಿದ ಯತಾವಥ್ ರೀತಿಯೂ ಹೌದು.

ಕರ್ತಾರ್ ಸಿಂಗ್ ಸರಭ

ಭಗತ್ ಸಿಂಗ್ ಅವರ ಜೀವನವನ್ನು ರೂಪುಗೊಳಿಸಿದ್ದರಲ್ಲಿ ಮತ್ತೊಂದು ಪ್ರಮುಖವಾದ ಘಟನೆಯಿದೆ; ಭಾರತದಲ್ಲಿ ವಸಾಹತುಶಾಹಿಯ ದಮನಕಾರಿ ತಂತ್ರಗಳಿಗೆ ಪ್ರಮುಖ ಉದಾಹರಣೆಯಾದ, 1919ರ ಅಮೃತಸರದ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡವೂ ಅದರಲ್ಲೊಂದು. 2019ರಲ್ಲಿ ಅದರ ಶತಮಾನೋತ್ಸವದ ಆಚರಣೆಯ ಸಂದರ್ಭದಲ್ಲಿ ಆ ನೆನಪುಗಳು ಉಜ್ವಲವಾಗಿ ಮರುಹುಟ್ಟು ಪಡೆದವು. ಹಲವಾರು ಕಾರ್ಯಕ್ರಮಗಳು ನಡೆದು, ಪುಸ್ತಕಗಳು, ಲೇಖನಗಳ ಮಹಾಪೂರವೇ ಹರಿಯಿತು. ನೂರು ವರ್ಷಗಳ ಹಿಂದೆ ನಡೆದ ಈ ಘಟನೆಯ ಕುರಿತು ವಿಶ್ವ ನಾಯಕರು ತಮ್ಮ ವಿಷಾದದ ಧ್ವನಿಗಳನ್ನು ಸೇರಿಸಿದರು. ಉಧಾಮ್ ಸಿಂಗ್ ಎಂಬ ಹೆಸರು ಪಾಶ್ಚಾತ್ಯ ಮಾಧ್ಯಮಗಳಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು. ಜಲಿಯನ್ ಹತ್ಯಾಕಾಂಡಕ್ಕೆ ಮುಖ್ಯ ಕಾರಣಕರ್ತ ಎಂದು ಪರಿಗಣಿಸಲಾಗುವ ಆಗಿನ ಪಂಜಾಬಿನ ಲೆಫ್ಟಿನೆಂಟ್ ಗವರ್ನರ್ ಮೈಕೆಲ್ ಓ’ಡ್ವಾಯರ್‌ನನ್ನು ಕೊಲ್ಲಲು ಹಲವಾರು ವರ್ಷಗಳ ಕಾಲ ಯೋಜನೆ ಹಾಕಿದವರು ಇವರಾಗಿದ್ದರು. ಆಗ ಕೆಲವರು ಕಂಡುಕೊಂಡ ವಿಷಯವೆಂದರೆ, ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡಕ್ಕೆ ಸೇಡು ತೀರಿಸಿಕೊಂಡ ಉಧಾಮ್ ಸಿಂಗ್ ಮೇಲೆ ಪ್ರಭಾವ ಹೊಂದಿದ್ದ ಭಗತ್ ಸಿಂಗ್ ಎಂಬ ಹೆಸರಿನ ವ್ಯಕ್ತಿಯ ಬಗ್ಗೆ. ಅವರ ಪ್ರಸಿದ್ಧಿ ಎಷ್ಟರಮಟ್ಟಿಗೆ ಇತ್ತೆಂದರೆ, ಅವರು ’ಶಹೀದ್-ಎ-ಆಝಂ ಸರ್ದಾರ್ ಉಧಾಮ್ ಸಿಂಗ್’ ಎಂದು ಜನಜನಿತರಾಗಿದ್ದರು. ಅನಿತಾ ಸಿಂಗ್ ಅವರು ತಮ್ಮ ಇತ್ತೀಚಿನ ಪುಸ್ತಕದಲ್ಲಿ ನೆನಪಿಸಿರುವಂತೆ, ಅಮೃತಸರ ಹತ್ಯಾಕಾಂಡಕ್ಕೆ ಕಾರಣವಾದ ಘಟನೆಗಳಿಗೆ ಜವಾಬ್ದಾರನಾದ ಓ’ಡ್ವಾಯರ್‌ನನ್ನು 1919ರ ಹತ್ಯಾಕಾಂಡ ನಡೆದ 20 ವರ್ಷಗಳ ನಂತರ, 1940ರ ಮಾರ್ಚ್ ತಿಂಗಳಲ್ಲಿ ಲಂಡನ್‌ನಲ್ಲಿ ಗುಂಡಿಟ್ಟು ಹತ್ಯೆ ಮಾಡಿದವರು ಇವರೇ ಆಗಿದ್ದರು.

ಗಲ್ಲಿಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಅವರು ತನ್ನನ್ನು ’ಮೊಹಮ್ಮದ್ ಸಿಂಗ್ ಆಜಾದ್’ ಎಂದು ಕರೆಯಬೇಕೆಂದು ಹಠ ಹಿಡಿದಿದ್ದರು. ಯಾಕೆಂದರೆ, ಈಸ್ಟ್ ಇಂಡಿಯಾ ಅಸೋಸಿಯೇಷನ್ ಮತ್ತು ಸೆಂಟ್ರಲ್ ಏಷ್ಯನ್ ಸೊಸೈಟಿಯ ಜಂಟಿ ಸಭೆಯನ್ನು ಕರೆಯಲಾಗಿದ್ದ ಕಾಕ್‌ಸ್ಟನ್ ಹಾಲ್‌ನಲ್ಲಿ ಭಾಷಣ ಮಾಡಲು ವೇದಿಕೆ ಹತ್ತುತ್ತಿದ್ದ ಓ’ಡ್ವಾಯರ್‌ನಿಗೆ ಗುಂಡು ಹಾರಿಸಿ ಕೊಂದಾಗ ತಾನು, ಅಮೃತಸರದಲ್ಲಿ 1919ರ ಆ ಮಬ್ಬುಕವಿದ ಸಂಜೆ, ಹತ್ಯಾಕಾಂಡದಲ್ಲಿ ಸಾವಿಗೀಡಾಗಿದ್ದ ಹಿಂದೂ, ಮುಸ್ಲಿಂ ಮತ್ತು ಸಿಕ್ಖರ ಪರವಾಗಿ ಇದನ್ನು ಮಾಡಿದ್ದೆ ಎಂಬುದಕ್ಕೆ. ಉಧಾಮ್ ಸಿಂಗ್ ಅವರನ್ನು ಕೊಲೆ ಆರೋಪದ ಮೇಲೆ 1940ರ ಜೂನ್ 4 ಮತ್ತು 5ರಂದು ಸೆಂಟ್ರಲ್ ಕ್ರಿಮಿನಲ್ ಕೋರ್ಟಿನಲ್ಲಿ ಜಸ್ಟಿಸ್ ಅಟ್ಕಿನ್ಸನ್ ಮುಂದೆ ವಿಚಾರಣೆ ನಡೆಸಲಾಯಿತು.

ದುರದೃಷ್ಟವಶಾತ್, ಉಧಾಮ್ ಸಿಂಗ್ ಅವರ ಪರವಾಗಿ ನಡೆದ ವಾದ ಪ್ರಹಸನದಂತಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಸ್ವತಃ ಸ್ವಾತಂತ್ರ್ಯ ಹೋರಾಟಗಾರ ಎಂದು ವ್ಯಾಪಕವಾಗಿ ಕಾಣಲಾಗುತ್ತಿದ್ದ ಕೃಷ್ಣ ಮೆನನ್ ಅವರ ಪಕ್ಕಾ ಅವಕಾಶವಾದ ಮತ್ತು ಅದಕ್ಷತೆಯಿಂದಾಗಿ ಉಧಾಮ್ ಸಿಂಗ್ ಪರವಾದ ವಾದದಲ್ಲಿ ಎಡವಟ್ಟಾಯಿತು. ಲೆಕ್ಕಾಚಾರದ ಮನುಷ್ಯ ಎಂದು ಬಣ್ಣಿಸಲಾಗಿರುವ ಕೃಷ್ಣ ಮೆನನ್, ’ಜೋರಿನ ಮತ್ತು ತೀರಾ ಜಾರಿಕೊಳ್ಳುವ ಸ್ವಭಾವದ ವ್ಯಕ್ತಿಯಾಗಿದ್ದು, ಯಾವತ್ತೂ ತಾನೇ ಸರಿಯೆಂದು ಸಾಧಿಸುವ ಮಹತ್ವಾಕಾಂಕ್ಷೆಯಿಂದ ಪ್ರೇರಿತರಾಗಿದ್ದರು.’ ಅವರು ನೆಹರೂ ಅವರ ಆಪ್ತ ಗೆಳೆಯನಾಗಿದ್ದು, ಕೆಲವರ ದೃಷ್ಟಿಯಲ್ಲಿ ನೆಹರೂ ಅವರು ಪ್ರಧಾನಿಯಾದ ನಂತರ, ಇಡೀ ಭಾರತದಲ್ಲಿ ಅವರ ನಂತರದ ಎರಡನೇ ಪ್ರಬಲ ವ್ಯಕ್ತಿಯಾಗಿದ್ದರು. ಅವರು ಮೊದಲಿಗೆ ’ಉಧಾಮ್ ಸಿಂಗ್ ಕೃತ್ಯದಿಂದ ಅಂತರ ಕಾಯ್ದುಕೊಳ್ಳಲು ಬಯಸಿದ್ದರು’. ಮತ್ತು ’ಗುಂಡು ಹಾರಿಸಲಾದ ಕೆಲವೇ ಗಂಟೆಗಳಲ್ಲಿ ಆ ಘಟನೆಯ ಬಗ್ಗೆ ನಿರಾಕರಣೆಯ ಭಾವ ತಳೆದಿದ್ದರು’. ನಂತರ ಅವರು ಮನಸ್ಸು ಬದಲಿಸಲು ಕಾರಣ ಏನಿರಬಹುದೆಂದು ಯೋಚಿಸಿದರೆ, ’ಗಾಂಧಿ ಮತ್ತು ನೆಹರೂ ಅವರು ಬ್ರಿಟಿಷರೊಂದಿಗೆ ಸೂಕ್ಷ್ಮವಾದ ಸಂಧಾನದಲ್ಲಿ ತೊಡಗಿದ್ದರು. ಸರ್ ಮೈಕೆಲ್ ಓ’ಡ್ವಾಯರ್‌ನ ವಾದಕ್ಕೆ ಪ್ರತಿಯಾಗಿ, ’ಭಾರತೀಯರು ಹಿಂಸಾ ಪ್ರವೃತ್ತಿಯ ಅನಾಗರಿಕರಲ್ಲ ಎಂಬ ಒಂದು ಪ್ರತಿಕಥನವನ್ನು ಪ್ರಚಾರಮಾಡಲು ತೀರಾ ಉತ್ಸುಕರಾಗಿದ್ದರು’. ಆದರೆ, ’ಉಧಾಮ್ ಸಿಂಗ್ ಪ್ರಕರಣ ಪಡೆಯುತ್ತಿರುವ ಪ್ರಚಾರ ಮತ್ತು ಅವರಿಗೆ ಬ್ರಿಟಿಷ್ ಭಾರತೀಯ ವಲಯಗಳಲ್ಲೇ ಎಷ್ಟೊಂದು ಬೆಂಬಲವಿತ್ತೆಂದು ಸ್ಪಷ್ಟವಾದಾಗ, ಕೃಷ್ಣ ಮೆನನ್ ತಮ್ಮ ಸ್ವಂತ ನಿಲುವಿನ ಕುರಿತು ಮರುಚಿಂತನೆ ನಡೆಸಿದಂತೆ ಕಂಡುಬಂತು. ಒಂದು ವೇಳೆ ವಿಚಾರಣೆ ನಡೆದರೆ, ಅದೊಂದು ಅತ್ಯಂತ ಉನ್ನತ ಮಟ್ಟದ ಗಮನ ಸೆಳೆಯುವ ಸಂಗತಿಯಾಗುತ್ತಿತ್ತು; ಈ ಪ್ರಕರಣದಲ್ಲಿ ಯಾವುದೇ ಕಾನೂನು ಸ್ಥಾನಮಾನ ಇಲ್ಲದೇ ಇದ್ದರೂ ಕೃಷ್ಣ ಮೆನನ್, ’ನಾನು ಉಧಾಮ್ ಸಿಂಗ್ ಪರವಾಗಿ ವಾದಿಸಲಿದ್ದೇನೆ’ ಎಂದು ಎಲ್ಲರಿಗೂ ಹೇಳಲಾರಂಭಿಸಿದರು. ಈ ಘಟನೆಯಲ್ಲಿ, ’ಕೃಷ್ಣ ಮೆನನ್ ಅವರು ಉಧಾಮ್ ಸಿಂಗ್ ಅವರ ಪ್ರೇರಣೆ ಅಥವಾ ಅವರ ಮನಸ್ಥಿತಿಯ ಬಗ್ಗೆ ಚಿಂತಿಸಲಿಲ್ಲ.’ ತನ್ನ ಭಾಗವಹಿಸುವಿಕೆಯು ’ಭಾರತದಲ್ಲಿರುವ ಗೆಳೆಯರಾದ ನೆಹರೂ ಮತ್ತು ಗಾಂಧಿಯವರಿಗೆ ಆದಷ್ಟು ಅನುಕೂಲಕರವಾಗುವ ರೀತಿಯಲ್ಲಿ ವಿಚಾರಣೆಯ ದಿಕ್ಕು ಬದಲಿಸಲು ತನಗೆ ಸಾಧ್ಯವಾಗುವುದು’ ಎಂದು ನಂಬಿದ್ದರು. ’ಉಧಾಮ್ ಸಿಂಗ್ ಅವರ ರಾಷ್ಟ್ರೀಯವಾದವನ್ನು ನ್ಯಾಯಾಲಯದ ಮುಂದೆ ತರುವುದರಿಂದ, ಅದು ಅವರ ಹಿತಾಸಕ್ತಿಗಳಿಗೆ ಅನುಕೂಲವಾಗದೇ ಇದ್ದಲ್ಲಿ, ತಾನದನ್ನು ನ್ಯಾಯಾಲಯದಿಂದ ದೂರ ಇಡುತ್ತೇನೆ’ ಎಂಬುದು ಅವರ ಚಿಂತನೆಯಾಗಿತ್ತು. ಉಧಾಮ್ ಸಿಂಗ್ ಅವರಿಗೆ ನೇಣಿನ ಮೂಲಕ ಮರಣದಂಡನೆಯನ್ನು ವಿಧಿಸಲಾದಾಗ, ಮತ್ತು ಹಲವರು ಅದನ್ನು ಜೀವಾವಧಿ ಶಿಕ್ಷೆಗೆ ಇಳಿಸಲು ಹೆಣಗುತ್ತಿರುವಾಗ, ’ಕೃಷ್ಣ ಮೆನನ್ ಏನನ್ನೂ ಮಾಡಲಿಲ್ಲ.’ ಸ್ವಾತಂತ್ರ್ಯದ ಬಳಿಕ, 1947ರಲ್ಲಿ ಕಾಂಗ್ರೆಸ್ ಪಕ್ಷವು ಕೃಷ್ಣ ಮೆನನ್ ಅವರನ್ನು ಯುನೈಟೆಡ್ ಕಿಂಗ್ಡಮ್‌ಗೆ ಮೊದಲ ಹೈ ಕಮೀಷನರ್ ಅಥವಾ ರಾಯಭಾರಿಯನ್ನಾಗಿ ನೇಮಿಸಿತು.

ಸಾರ್ವಜನಿಕವಾಗಿ ಲಭ್ಯವಿರುವ ಮತ್ತು ನ್ಯೂ ಸ್ಕಾಟ್‌ಲ್ಯಾಂಡ್ ಯಾರ್ಡ್‌ನ ನ್ಯಾಯಾಂಗ ದಾಖಲೆಗಳ ಪ್ರಕಾರ ಜ್ಯೂರಿಯು (ಸಾರ್ವಜನಿಕರನ್ನೊಳಗೊಂಡ ನ್ಯಾಯಮಂಡಳಿ) ಕೇವಲ ಎರಡು ಗಂಟೆಗಳ ಕಾಲ ವಿಚಾರ ವಿನಿಮಯ ನಡೆಸಿ, ’ಕೊಲೆಯ ತಪ್ಪಿತಸ್ಥ’ ಎಂಬ ತೀರ್ಪು ನೀಡಿತು.

’ಆಗ ಸಿಂಗ್ ಕಾಗದದ ಮೇಲೆ ಬರೆದ ಯಾವುದೋ ಹೇಳಿಕೆಯಂತದ್ದನ್ನು ಓದಲಾರಂಭಿಸಿದರು. ಸ್ವಲ್ಪ ಸಮಯದಲ್ಲೇ ಅದನ್ನು ಕೈಬಿಟ್ಟು ಸರಿಯಾಗಿ ಕೇಳಿಸದ ಅಸ್ಪಷ್ಟವಾದ ಶಬ್ದಗಳಲ್ಲಿ ನ್ಯಾಯಾಲಯವನ್ನುದ್ದೇಶಿಸಿ ನೇರವಾಗಿ ಮಾತನಾಡಲು ಆರಂಭಿಸಿದರು. ಅದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿತ್ತು’. ಹೀಗಿದ್ದರೂ, ’ತಾನು ಸಾಯಲು ಹೆದರುವುದಿಲ್ಲ’ ಎಂದೂ, ’ತಾನು ಸತ್ತ ನಂತರ ತನ್ನ ದೇಶದ ಸಾವಿರಾರು ಜನರು “ನಿಮ್ಮ ಕೊಳಕು ನಾಯಿಗಳನ್ನು ನನ್ನ ದೇಶದಿಂದ ಓಡಿಸುವರು” ಎಂದು ಹೇಳಿದ್ದು ಕೇಳಿಸಿತು’ ಎಂದು ದಾಖಲೆಯಲ್ಲಿ ಹೇಳಲಾಗಿದೆ. ’ತನ್ನ ಮರಣದಂಡನೆಯ ತೀರ್ಪು ಘೋಷಣೆಯಾದ ನಂತರ ಸಿಂಗ್ ತನ್ನ ಬಲಗೈಯ್ಯನ್ನು ಮೇಲೆತ್ತಿ, ಮೂರು ಬಾರಿ “ಇಮ್ರಾಹ್” (ಬಂಡಾಯ) ಎಂದು ಕೂಗಿದರು. ಅವರು ನ್ಯಾಯಾಧೀಶರ ಕೆಳಗಿದ್ದ ಮೇಜಿನ ಮೇಲೆ ಉಗಿದರು ಕೂಡಾ.’ ಎಂದೂ ಹೇಳಲಾಗಿದೆ.

ಉಧಾಮ್ ಸಿಂಗ್

“ಉಧಾಮ್ ಸಿಂಗ್ ಅವರ ವಿಚಾರಣೆಯ ನಂತರ ನ್ಯಾಯಾಲಯವನ್ನು ಉದ್ದೇಶಿಸಿ ಅವರು ಮಾತನಾಡುವಾಗ, ನ್ಯಾಯಾಧೀಶರು ಮತ್ತೆಮತ್ತೆ ಅದನ್ನು ಅಡ್ಡಿಪಡಿಸಿ ನಿಲ್ಲಿಸಿದಾಗ, ಅವರು ಬಳಸಿದ ಶಬ್ದಗಳಲ್ಲಿ ’ಬಾವಾ’ (ಗೆಳೆಯರು ಅವರನ್ನು ಕರೆಯುತ್ತಿದ್ದುದು ಹಾಗೆ) ಎಂದು ಸಹಿಹಾಕಲಾಗಿದ್ದ ಉರ್ದು ಕವಿತೆಯ ಸಾಲುಗಳು ಸೇರಿದ್ದವು. ಹೀಗಿದ್ದರೂ, ಅವರು ಸಿಬ್ಬರು ಬಳಸುವ ಪಂಜಾಬಿಯ ಗುರುಮುಖಿ ಲಿಪಿಯಲ್ಲಿದ್ದ ಭಾರತೀಯ ಹುತಾತ್ಮರ ಕುರಿತ ಕವಿತೆಯನ್ನೂ ಓದಿದರು. ಅದರಲ್ಲಿನ ಭಗತ್ ಸಿಂಗ್, ದತ್ (ಬಟುಕೇಶ್ವರ್), ತಿಲಕ್, ಲಾಜ್‌ಪತ್ ಎಂಬ ಪದಗಳು ಭಾರತದ ರಾಷ್ಟ್ರೀಯ ಹೋರಾಟದ ಪ್ರಸಿದ್ಧ ವ್ಯಕ್ತಿಗಳ ಹೆಸರುಗಳಾಗಿದ್ದು ಈ ಕವನದಲ್ಲಿ ಪ್ರಮುಖವಾಗಿ ಬರುತ್ತವೆ” ಎಂದು ದಾಖಲೆ ಹೇಳುತ್ತದೆ.

ಈ ದಾಖಲೆಯಲ್ಲಿ 20 ಜೂನ್, 1940 ಎಂಬ ದಿನಾಂಕ ಇದ್ದು, ಎಡ ಮೇಲ್ಭಾಗದಲ್ಲಿ ’ಸೀಕ್ರೆಟ್’ ಎಂದು ದೊಡ್ಡ ಅಕ್ಷರಗಳಲ್ಲಿ ಮುದ್ರೆ ಒತ್ತಲಾಗಿದೆ. ಇದರಲ್ಲಿ ಏನು ಹೇಳಲಾಗಿದೆ ಎಂದರೆ, ’ನಾನು ಇದರಲ್ಲಿ, ಈ ಕಚೇರಿಯಲ್ಲಿ ಸಿದ್ಧಪಡಿಸಲಾಗಿರುವ ಟಿಪ್ಪಣಿಯ ಜೊತೆಗೆ, ಉಧಾಮ್ ಸಿಂಗ್ ತನಗೆ ಮರಣದಂಡನೆ ವಿಧಿಸಲಾಗಿದ್ದ ದಿನ ತನ್ನೊಂದಿಗೆ ನ್ಯಾಯಾಲಯಕ್ಕೆ ತಂದಿದ್ದ ಕಾಗದಪತ್ರಗಳ ವಿಷಯಗಳನ್ನು ನೀಡುತ್ತಿದ್ದೇನೆ. ಈ ಕಾಗದಗಳಲ್ಲಿ ಇಂಗ್ಲಿಷ್, ಉರ್ದು ಮತ್ತು ಗುರುಮುಖಿಯಲ್ಲಿ ಬರೆಯಲಾಗಿದ್ದ, ಆರೋಪಿಯ ಕೈಬರಹದ ನಾಲ್ಕು ಪತ್ರಗಳಿದ್ದವು. ಹೊರಗಿನ ಪ್ರಭಾವವನ್ನು ಸೂಚಿಸುವ ಯಾವುದೂ ಅವುಗಳಲ್ಲಿ ಇದೆ ಎಂದು ನಾನು ಯೋಚಿಸುವುದಿಲ್ಲ; ವ್ಯಕ್ತಪಡಿಸಲಾಗಿರುವ ಭಾವನೆಗಳು ಅರ್ಧ ಶಿಕ್ಷಣ ಹೊಂದಿದ, ’ಘದ್ರ್’ (ಘದ್ದರ್) ಕ್ರಾಂತಿಕಾರಿಯ ಯೋಚನೆಗಳಿಗೆ ಅನುಗುಣವಾಗಿವೆ. ಬರವಣಿಗೆಯು ಕೆಲವು ವಾರಗಳ ಅವಧಿಯಲ್ಲಿ ಬರೆಯಲಾಗಿದೆ ಎಂದು ಗೋಚರಿಸುತ್ತದೆ’. ಅರೆ ಶಿಕ್ಷಿತರಾಗಿರಲೀ, ಇಲ್ಲದಿರಲಿ, ಭಗತ್ ಸಿಂಗ್ ಮತ್ತು ಆ ಕಾಲದ ಇತರ ಕ್ರಾಂತಿಕಾರಿಗಳು ಉಧಾಮ್ ಸಿಂಗ್ ಮೇಲೆ ಪ್ರಭಾವ ಬೀರಿದ್ದರೆಂಬುದು ಸ್ಪಷ್ಟವಾಗುತ್ತದೆ.

ತನ್ನ ಅದ್ಭುತವಾದ ’ಅಮೃತ್‌ಸರ್-1919’ ಪುಸ್ತಕವನ್ನು ಕಿಮ್ ವ್ಯಾಗ್ನರ್, ’ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಪ್ರತೀಕಾರ ಮಾಡಿದ ಉಧಾಮ್ ಸಿಂಗ್ ಜೊತೆಗೆ ಭಗತ್ ಸಿಂಗ್ ಇಂದು ಪಂಜಾಬಿನ ಅತ್ಯಂತ ಆರಾಧಿತ ವ್ಯಕ್ತಿ’ ಎಂಬ ಟಿಪ್ಪಣಿಯೊಂದಿಗೆ ಕೊನೆಗೊಳಿಸುತ್ತಾರೆ. ಈ ವ್ಯಕ್ತಿಗಳಿಬ್ಬರ ಬಗ್ಗೆ ಬಹಳಷ್ಟು ಜಾನಪದ ಮತ್ತು ದಂತಕತೆಗಳು ಬೆಳೆದುಬಂದಿವೆ. ವಾಸ್ತವ ಮತ್ತು ಕಾಲ್ಪನಿಕ ಕತೆಗಳು ಒಂದಕ್ಕೊಂದು ಬೆಸೆದುಕೊಂಡಿವೆ. ’ಜಲಿಯನ್‌ವಾಲಾ ಬಾಗ್‌ನಲ್ಲಿ ಉಧಾಮ್ ಸಿಂಗ್ ಸ್ವಂತ ಹಾಜರಿದ್ದರು ಮತ್ತು ಅವರ ತೋಳಿಗೆ ಗಾಯವಾಗಿತ್ತು’ ಎಂದು ’ಯಾವುದೇ ಸಾಕ್ಷ್ಯಾಧಾರ ಇಲ್ಲದೇ ಇರುವಾಗ’ ಹೇಗೆ ಹೇಳಲು ಸಾಧ್ಯ ಎಂದು ಅವರು ಕೇಳುತ್ತಾರೆ. ಸಂಶಯವೇ ಇಲ್ಲದ ವಿಷಯವೇನಾದರೂ ಇದ್ದರೆ, ’ಸ್ವತಃ ಉಧಾಮ್ ಸಿಂಗ್- ಭಗತ್ ಸಿಂಗ್ ಅವರ ಚಟುವಟಿಕೆಗಳಿಂದ ಆಳವಾಗಿ ಪ್ರಭಾವಿತರಾಗಿದ್ದರು’ ಮತ್ತು 1935ರಲ್ಲಿ ಕಾಶ್ಮೀರಕ್ಕೆ ಭೇಟಿ ನೀಡಿದಾಗ, ಅವರು ’ತನ್ನ ಜೊತೆಗೆ ಭಗತ್ ಸಿಂಗ್ ಚಿತ್ರವನ್ನು ಹೊಂದಿದ್ದರು ಮತ್ತು ತಪ್ಪದೇ ಭಗತ್ ಸಿಂಗ್ ತನ್ನ ಗುರು ಎಂದು ಹೇಳುತ್ತಿದ್ದರು…’

ವಾಸ್ತವದಲ್ಲಿ ಉಧಾಮ್ ಸಿಂಗ್ ಯಾವತ್ತೂ ತನ್ನ ಬಳಿ ಭಗತ್ ಸಿಂಗ್ ಮತ್ತಿತರ ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರನ್ನು ಉಲ್ಲೇಖಿಸುವ ಟಿಪ್ಪಣಿಗಳನ್ನು ಹೊಂದಿರುತ್ತಿದ್ದರು. ಮಾಲ್ವಿಂದರ್‌ಜಿತ್ ಸಿಂಗ್ ವರೈಚ್, ತಾನು – ಭಗತ್ ಸಿಂಗ್ ಕುಟುಂಬದಲ್ಲಿ ಭಗತ್ ಸಿಂಗ್ ಅವರ ತಾಯಿ ಸೇರಿದಂತೆ ಉಳಿದ ಸದಸ್ಯರ- ಸಂದರ್ಶನ ಮಾಡಿದಾಗ, ಅವರ ಮನೆಯಲ್ಲಿದ್ದ, ರಕ್ತಸಿಕ್ತ ಮರಳು ತುಂಬಿದ್ದ ಒಂದು ಶೀಷೆಯಲ್ಲಿ ತನ್ನ ಸಂಬಂಧವನ್ನೂ ಕಂಡರು. ಅದರಲ್ಲಿ ಹೀಗೆ ಬರೆಯಲಾಗಿತ್ತು: ’ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡವು ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಐತಿಹಾಸಿಕ ತಿರುವಿನ ಘಟನೆಯಾಗಿದೆ. ಭಗತ್ ಸಿಂಗ್‌ನ ಎಳೆಯ ಜೀವನದಲ್ಲಿ ಕೂಡಾ ಇದು ತಿರುವಿನ ಬಿಂದುವಾಗಿತ್ತು’.

ಹೀಗಿದ್ದರೂ, ಭಗತ್ ಸಿಂಗ್ ಜೀವನದಲ್ಲಿ ಅವರ ಮನಸ್ಸಿನ ಮೇಲೆ ಅತ್ಯಂತ ಪ್ರಭಾವ ಬೀರಿದ ಇನ್ನೊಂದು ಘಟನೆ ಎಂದರೆ, 1923ರ ಬಬ್ಬರ್ ಅಖಾಲಿ ಚಳವಳಿ. 1926ರಲ್ಲಿ ತನ್ನ ಮದುವೆಯ ಸಂಭವದ ಕಾರಣದಿಂದ ಲಾಹೋರಿನ ನ್ಯಾಷನಲ್ ಕಾಲೇಜಿನಿಂದ ಭಗತ್ ಸಿಂಗ್ ಪರಾರಿಯಾಗಿ ಕಾನ್ಪುರಕ್ಕೆ ಹೋದ ನಂತರ ನಡೆದ ಘಟನೆಯಿದು. ಅವರು ವಾರಪತ್ರಿಕೆಯಾದ ’ಪ್ರತಾಪ್’ ಸಂಪಾದಕೀಯ ಮಂಡಳಿ ಸೇರಿ, ಪ್ರಕಾಶನ ಆರಂಭಿಸಿದರು. ಅಲ್ಲಿಯೇ ಅವರು ಬಹಳ ಕಾಲ ತನ್ನ ಸಂಗಾತಿಗಳಾಗಿ ಉಳಿದ ಕ್ರಾಂತಿಕಾರಿ ಗೆಳೆಯರ ಪರಿಚಯವನ್ನು ಸಂಪಾದಿಸಿದರು: ಅವರಲ್ಲಿ ಕೆಲವರನ್ನು ಹೆಸರಿಸಬೇಕೆಂದರೆ- ಶಿವ್ ವರ್ಮಾ, ಜೈ ದೇವ್ ಕಪೂರ್, ಬಟುಕೇಶ್ವರ ದತ್, ಬಿಜೋಯ್ ಕುಮಾರ್ ಸಿನ್ಹಾ. ಅಲ್ಲಿನ ಜೀವನದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡು, ಕಾನ್ಪುರದ ಮಹಾನೆರೆಯ ಸಂದರ್ಭದಲ್ಲಿ ಪರಿಹಾರ ಕಾರ್ಯಗಳಲ್ಲೂ ಸಕ್ರಿಯವಾಗಿ ಭಾಗವಹಿಸಿದರು. ಇನ್ನೊಬ್ಬ ಕ್ರಾಂತಿಕಾರಿ ನಾಯಕ ’ಪ್ರತಾಪ್’ನ ಮಾಲೀಕ ಗಣೇಶ್ ಶಂಕರ್ ವಿದ್ಯಾರ್ಥಿಯವರ ನಂತರ ಅವರನ್ನು ಆಲಿಘಡ್ ಜಿಲ್ಲೆಯ ಶಾದಿಪುರ್ ಗ್ರಾಮದ ರಾಷ್ಟ್ರೀಯ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ಎಂದೂ ನೇಮಿಸಲಾಯಿತು. ಪೊಲೀಸರ ಹದ್ದಿನ ಕಣ್ಣುಗಳಿಂದ ತಪ್ಪಿಸಲು ಅವರನ್ನು ಅಲ್ಲಿಗೆ ಕಳುಹಿಸಲಾಗಿತ್ತು. ಹೀಗಿರುವಾಗ, ಬಬ್ಬರ್ ಅಕಾಲಿ ಗುಂಪಿನ ಆರು ಮಂದಿ ಕಾರ್ಯಕರ್ತರನ್ನು 27 ಫೆಬ್ರವರಿ, 1926ರಂದು ಹೋಳಿಯ ದಿನದಂದು, ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಯುದ್ಧ ಸಾರಿದ್ದಕ್ಕಾಗಿ ಗಲ್ಲಿಗೇರಿಸಿದಾಗ ಭಗತ್ ಸಿಂಗ್, 15 ಮಾರ್ಚ್ 1926ರಂದು ’ಪ್ರತಾಪ್’ ಪತ್ರಿಕೆಯಲ್ಲಿ ’ಹೋಳಿಯ ದಿನ ರಕ್ತದ ಕಲೆಗಳು’ ಎಂಬ ಒಂದು ಪ್ರಬಂಧವನ್ನು ಬರೆದರು. (ಹೋಲಿ ಕೇ ದಿನ್ ಖೂನ್ ಕೆ ಚಿಟ್ಟೇ). ಭಗತ್ ಸಿಂಗ್ ಅವರಿಗೆ ಆಗ ಕೇವಲ 18 ವರ್ಷ ವಯಸ್ಸಾಗಿತ್ತು ಮತ್ತು ಇದು ಅವರ ಮನಸ್ಸಿನ ಮೇಲೆ ಆಳವಾದ ಗಾಯವನ್ನು ಉಂಟುಮಾಡಿತ್ತು.

ಸಮಯ ಕಳೆದಂತೆ, ಮುಂದೊಂದು ದಿನ, ಅವರ ಉದಾಹರಣೆಗಳಿಂದ ತಾನೂ ಅವರಂತೆ ಬೆಳೆಯುವೆ ಎಂಬುದನ್ನು ಅವರು ಕಲಿತರು. ಹೀಗೆಯೇ, ಹೇಗೆ ಅಸಡ್ಡೆ ಮತ್ತು ಹಗುರ ಹೃದಯದಿಂದ ವಿಚಾರಣೆಯ ವೇಳೆ ಅವರೆಲ್ಲಾ ಸಾವಿನ ಆ ದಿನಕ್ಕಾಗಿ ಹೇಗೆ ಕಾಯುತ್ತಿದ್ದರು ಎಂಬುದನ್ನು ಸಾಬೀತುಪಡಿಸುತ್ತದೆ. ವಾಸ್ತವದಲ್ಲಿ ’ಮಾನ್ಯ ನ್ಯಾಯಾಧೀಶರು, ತಿಂಗಳುಗಳ ನಂತರ ತನ್ನ ತೀರ್ಪನ್ನು ಪ್ರಕಟಿಸುತ್ತಿದ್ದಂತೆ’, ಈ ’ಧೈರ್ಯಶಾಲಿ ಹೋರಾಟಗಾರರು ಹೇಗೆ ಗುಡುಗಿದರು’ ಮತ್ತು ’ಹೇಗೆ ಅವರ ಉತ್ಸಾಹದ ವಿಜಯೋದ್ಘೋಷದಿಂದ ಅನುರಣಿಸಿತು’ ಎಂಬುದನ್ನು ಯಾರೂ ಕಾಣಬಹುದಾಗಿತ್ತು. ಮೊದಲಿಗೆ ಐವರಿಗೆ ಮರಣದಂಡನೆ ವಿಧಿಸಲಾಗಿತ್ತು. ಆರನೆಯವರಿಗೆ ಅಂಡಮಾನ್ ಜೈಲಿನ ಶಿಕ್ಷೆ ವಿಧಿಸಲಾಗಿತ್ತು. ಆಗಿನ ವಸಾಹತುಶಾಹಿ ಆಡಳಿತ ಎಷ್ಟು ಕ್ರೂರವಾಗಿ ವರ್ತಿಸಿತ್ತೆಂದರೆ, ಮೇಲ್ಮನವಿ ಸಲ್ಲಿಸಿದಾಗ, ಐವರ ಮರಣದಂಡನೆಯ ಶಿಕ್ಷೆ ಇಳಿಸುವುದಕ್ಕೆ ಬದಲಾಗಿ, ಎಲ್ಲಾ ಆರು ಮಂದಿಗೆ ಗಲ್ಲಿನ ಮೂಲಕ ಮರಣದಂಡನೆ ಕಾಯಂ ಮಾಡಲಾಯಿತು.

ಈ ರೀತಿಯಲ್ಲಿ ಇದು ನಡೆಯುತ್ತಿರುವಂತೆಯೇ ’ನಗರವು ಹೋಳಿಯ ಸಂಭ್ರಮದಲ್ಲಿ ಮುಳುಗಿರುವಾಗ’ ಮತ್ತು ’ಜನರು ಎಂದಿನಂತೆ ಹಾದಿಹೋಕರ ಮೇಲೆ ಬಣ್ಣಗಳನ್ನು ಎರಚುತ್ತಿರುವಾಗ’ ’ಏಕಾಏಕಿಯಾಗಿ ನಾವು ಒಂದು ಚಿಕ್ಕ ಜನರ ಗುಂಪೊಂದು ಹೋಳಿಯ ದಿನ ಶವಗಳನ್ನು ಹೊತ್ತೊಯ್ಯುತ್ತಿರುವುದನ್ನು ಕಂಡೆವು’. ಯಾಕೆಂದರೆ, ’ಅವರ ಕೊನೆಯ ವಿಧಿಗಳು ಶಾಂತಿಯಿಂದ ನಡೆಯಲಿ’ ಎಂದು. ’ಹೀಗಿದ್ದರೂ ಅವರು ಭಯವೇ ಇಲ್ಲದ ದೇಶಪ್ರೇಮಿಗಳಾಗಿದ್ದರು’ ಎಂಬುದನ್ನು ನಾವು ಮರೆಯದಿರೋಣ. ಈ ದೌರ್ಭಾಗ್ಯಶಾಲಿ ದೇಶಕ್ಕಾಗಿ ಅವರೇನು ಮಾಡಿದ್ದಾರೋ, ಅದನ್ನು ’ಅನ್ಯಾಯವನ್ನು ಸಹಿಸಲು ಸಾಧ್ಯವೇ ಇಲ್ಲದೇ ಮಾಡಿದ್ದಾರೆ ಮತ್ತು ದೇಶವನ್ನು ಈ ಅಧಃಪತನದ ಸ್ಥಿತಿಯಲ್ಲಿ ನೋಡಲಾಗದೇ’ ಮಾಡಿದ್ದಾರೆ. ಪರಿಣಾಮ ಏನಾಯಿತು ಎಂದರೆ, ’ದುರ್ಬಲರ ಮೇಲಿನ ದೌರ್ಜನ್ಯ ಅವರಿಗೆ ಸಹಿಸಲು ಅಸಾಧ್ಯ’ ಎಂಬಷ್ಟಾಯಿತು. ಕೊನೆಗೂ ಅವರೆಲ್ಲರೂ ದಾರ್ಶನಿಕರಾಗಿದ್ದರು. ಭಗತ್ ಸಿಂಗ್ ಕೂಡಾ ಅವರಿಂದ ಮುಂದೆ ಕಲಿಯಲಿದ್ದರು ಎಂಬುದರಲ್ಲಿ ಸಂಶಯವಿಲ್ಲ.

(ಲಂಡನ್‌ನ ಕಿಂಗ್ಸ್ ಕಾಲೇಜಿನಲ್ಲಿ ಕಾನೂನು ಪ್ರೊಫೆಸರ್ ಆಗಿರುವ ಡಾ. ಸತ್ವಿಂದರ್ ಜಸ್ ಅವರು ಬರೆದಿರುವ ಈ ಪುಸ್ತಕವನ್ನು ಪೆಂಗ್ವಿನ್ ರ್‍ಯಾಂಡಮ್ ಹೌಸ್ ಸಂಸ್ಥೆ ಪ್ರಕಟಿಸಿದೆ. ಪೆಂಗ್ವಿನ್ ರ್‍ಯಾಂಡಮ್ ಹೌಸ್ ಅನುಮತಿಯ ಮೇರೆಗೆ ಈ ಭಾಗವನ್ನು ಪ್ರಕಟಿಸಲಾಗಿದೆ)

ಕನ್ನಡಕ್ಕೆ: ನಿಖಿಲ್ ಕೋಲ್ಪೆ


ಇದನ್ನೂ ಓದಿ: 1924ರ ’ಸರ್ಫರೋಶಿ ಕೀ ತಮನ್ನಾ’; ಸತ್ವಿಂದರ್ ಜಸ್ ಅವರ ’ಭಗತ್ ಸಿಂಗ್- ಎ ಲೈಫ್ ಇನ್ ರೆವೊಲ್ಯೂಶನ್’ ಪುಸ್ತಕದಿಂದ ಆಯ್ದ ಅಧ್ಯಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅದೃಶ್ಯ ಮತದಾರರಿಗೆ ಮೋದಿ ಹೆದರುತ್ತಾರೆ, ಅದಕ್ಕಾಗಿಯೇ ಅವರು ಕಾಂಗ್ರೆಸ್‌ನ್ನು ಟೀಕಿಸುತ್ತಾರೆ: ಮಲ್ಲಿಕಾರ್ಜುನ ಖರ್ಗೆ

0
'ಲೋಕಸಭೆ ಚುನಾವಣೆಯ ಮೊದಲ ಸುತ್ತಿನ ಮತದಾನ ಮುಗಿದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದೃಶ್ಯ ಮತದಾರರ ಭಯವಿದೆ, ಅದಕ್ಕಾಗಿಯೇ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿದ್ದಾರೆ' ಎಂದು ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಬುಧವಾರ...