ಶಾಲೆಗಳನ್ನು ತೆರೆಯದೆ ಬಡಮಕ್ಕಳ ಹಿತರಕ್ಷಣೆ ಮಾಡಲು ವಿಫಲವಾಗಿರುವ ಮಾನ್ಯ ಶಿಕ್ಷಣ ಸಚಿವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಮಕ್ಕಳ ನಡೆ -ಶಾಲೆಯ ಕಡೆ ಅಭಿಯಾನದ ಸಮಿತಿಯು ಶಿಕ್ಷಣ ಸಚಿವರಿಗೆ ಬಹಿರಂಗ ಪತ್ರ ಬರೆದಿವೆ. ಇದೇ ಸಮಿತಿ ಡಿಸೆಂಬರ್ 7ರಂದು ಡಿಸೆಂಬರ್ 15ರೊಳಗೆ ಎಲ್ಲಾ ಶಾಲೆಗಳನ್ನು ಪೂರ್ಣವಾಗಿ ತೆರೆಯಬೇಕೆಂದು ಶಿಕ್ಷಣ ಸಚಿವರಿಗೆ ಬಹಿರಂಗ ಪತ್ರ ಬರೆದಿತ್ತು.
ರಾಜ್ಯದಲ್ಲಿ ಕೊರೊನಾ ಸೋಂಕಿನ ಹರಡುವಿಕೆಯು ಗಣನೀಯವಾಗಿ ಇಳಿದಿದ್ದರೂ, ಮಾರ್ಚ್ ತಿಂಗಳಿನಿಂದಲೇ ಮುಚ್ಚಿದ ಶಾಲೆ-ಕಾಲೇಜುಗಳನ್ನು ಪುನರಾರಂಭಿಸದಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಈ ಸಮಿತಿ ಖಂಡಿಸಿತ್ತು. ಜೊತೆಗೆ ಬಾಲವಾಡಿಯಿಂದ 12ನೇ ತರಗತಿಯವರೆಗೆ ಎಲ್ಲಾ ಶಾಲೆಗಳನ್ನು ಡಿಸೆಂಬರ್ 15ರೊಳಗೆ ಪೂರ್ಣವಾಗಿ ತೆರೆಯಬೇಕೆಂದು ಶಿಕ್ಷಣ ಸಚಿವರಿಗೆ ಪತ್ರ ಬರೆದು ಮನವಿ ಮಾಡಿತ್ತು.
ರಾಜ್ಯದಲ್ಲಿ ಶಾಲೆಗಳನ್ನು ತೆರೆಯಲು ನಿರ್ಧರಿಸಬೇಕಿರುವ ಸರಕಾರವು ಜನವರಿ 1ರಿಂದ ಸೀಮಿತ ಮಟ್ಟದಲ್ಲಿ ವಿದ್ಯಾಗಮ ಕಾರ್ಯಕ್ರಮವನ್ನು ಶಾಲಾ ಕೊಠಡಿಗಳಲ್ಲೇ ಆರಂಭಿಸುವುದಾಗಿ ಹೇಳಿದೆ. ಈ ನಿರ್ಧಾರಕ್ಕೆ ರಾಜ್ಯದ ಕೊರೋನ ಕಾರ್ಯಪಡೆ – ತಾಂತ್ರಿಕ ಸಲಹಾ ಸಮಿತಿಯು 10 ಮತ್ತು 12ನೆ ತರಗತಿಗಳನ್ನು ಜನವರಿ 1 ರಿಂದ ತೆರೆಯಬಹುದೆಂದೂ, 6 ರಿಂದ 9 ಮತ್ತು 11ನೇ ತರಗತಿಗಳಿಗೆ ಜನವರಿ 14ರಿಂದ ವಿದ್ಯಾಗಮ ಆರಂಭಿಸಬಹುದೆಂದೂ, 6ಕ್ಕಿಂತ ಕೆಳಗಿನ ತರಗತಿಗಳನ್ನು ತೆರೆಯಲೇಬಾರದೆಂದೂ ಸಲಹೆ ನೀಡಿರುವುದನ್ನು ಪರಿಗಣಿಸಲಾಗಿದೆ ಎಂದು ವರದಿಯಾಗಿದೆ. ಆದರೆ ಇದು ಸಂಪೂರ್ಣವಾಗಿ ಅವೈಜ್ಞಾನಿಕವೂ, ಅಪಾಯಕಾರಿಯೂ ಆಗಿದ್ದು, ಮಕ್ಕಳ ಭವಿಷ್ಯವನ್ನು ಶಾಶ್ವತವಾಗಿ ಕೆಡಿಸಲಿದೆ. ಈ ಸಲಹೆಯು ಈ ಶೈಕ್ಷಣಿಕ ವರ್ಷವಿಡೀ ಶಾಲೆಗಳನ್ನು ತೆರೆಯದಿರುವ ಹುನ್ನಾರವೆಂಬುದು ಸ್ಪಷ್ಟವಾಗುತ್ತದೆ ಎಂದು ಸಮಿತಿಯು ಆರೋಪಿಸಿದೆ.
ಇದನ್ನೂ ಓದಿ: ಡಿ. 15ರೊಳಗೆ ಶಾಲೆ ಆರಂಭಿಸಿ: ಸಂಘಟನೆಗಳಿಂದ ಶಿಕ್ಷಣ ಸಚಿವರಿಗೆ ಬಹಿರಂಗ ಪತ್ರ
ಈ ವರದಿಯ ಪ್ರಕಾರ, ಬಡ ವಿದ್ಯಾರ್ಥಿಗಳು ಒಂದು ವರ್ಷ ಕಲಿಕೆಯಿಂದ ವಂಚಿತರಾದರೆ 3-15 ವಯಸ್ಸಿನ ಮಕ್ಕಳು ಹಿಂದಿನದನ್ನು ಮರೆತು, ಮುಂದಿನದನ್ನು ಕಲಿಯಲಾಗದೆ ಕಷ್ಟಕ್ಕೀಡಾಗಲಿದ್ದಾರೆ ಎಂದು ಸಮಿತಿ ಕಳವಳ ವ್ಯಕ್ತಪಡಿಸಿದೆ.
ಜೊತೆಗೆ, ಈ ಸಂಕಷ್ಟಕ್ಕೆ ಒಳಗಾಗುವ ಬಹುತೇಕ ಮಕ್ಕಳು ಅತ್ಯಂತ ಕೆಳಸ್ತರದ ಸಮುದಾಯಗಳಿಗೆ ಸೇರಿದವರಾಗಿದ್ದು, ಈಗಾಗಲೇ ಬಾಲ್ಯ ವಿವಾಹ ಮತ್ತು ಮಕ್ಕಳ ಸಾಗಾಣಿಕೆ ಹೆಚ್ಚಿರುವ ಸಂದರ್ಭದಲ್ಲಿ, ಶಾಲೆ ತೊರೆದು ಬಾಲ ಕಾರ್ಮಿಕ ಹಾಗು ಜೀತ ಕಾರ್ಮಿಕರಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ರಾಜ್ಯವು ಸೇರಿದಂತೆ ವಿಶ್ವದಾದ್ಯಂತದಿಂದ ಲಭ್ಯವಿರುವ ವರದಿಗಳನುಸಾರ ಕೊರೊನಾ ಸೋಂಕು 10 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಯಾವ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ. 10ರಿಂದ 20ರವರೆಗಿನ ಮಕ್ಕಳಲ್ಲೂ ಅತಿ ಸೌಮ್ಯ ಸೋಂಕಾಗಿ, ಯಾವುದೇ ಸಮಸ್ಯೆಯನ್ನುಂಟು ಮಾಡದೆ ವಾಸಿಯಾಗುತ್ತದೆ ಎಂದು ವರದಿಯಾಗಿದೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ: ವಿಸ್ಟ್ರಾನ್ ದುರ್ಘಟನೆಗೆ ಕಂಪನಿಯೆ ಕಾರಣ: AICCTU ಸತ್ಯಶೋಧನಾ ವರದಿ
ಇಂತಹ ಸಂದರ್ಭದಲ್ಲಿ ರಾಜ್ಯದ ತಾಂತ್ರಿಕ ಸಲಹಾ ಸಮಿತಿಯು ಈ ವೈಜ್ಞಾನಿಕ ಸತ್ಯಕ್ಕೆ ತೀರಾ ತದ್ವಿರುದ್ಧವಾದ, ಅಸಂಬದ್ಧವಾದ ಸಲಹೆಯನ್ನು ನೀಡಿರುವುದು ಖಂಡನೀಯವಾಗಿದ್ದು, ಮಕ್ಕಳ ಹಿತಾಸಕ್ತಿಗಳಿಗೆ ಮಾರಕವಾದ ಸಲಹೆಗಳನ್ನು ನೀಡುವ ತಾಂತ್ರಿಕ ಸಮಿತಿಯನ್ನು ಈ ಕೂಡಲೇ ರದ್ದು ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದೆ.
ಕೊರೊನಾ ಸೋಂಕಿನಿಂದ ಯಾವುದೇ ಸಮಸ್ಯೆ ಇಲ್ಲವೆಂದು ಹಲವು ವರದಿಗಳು ಬಂದಿರುವ ಕಾರಣ, ಈ ಕೂಡಲೇ ಶಾಲೆಗಳನ್ನು ತೆರೆಯುವುದರಿಂದ ಜೂನ್ ವರೆಗೆ ಈ ಶೈಕ್ಷಣಿಕ ವರ್ಷದ ಪಾಠಗಳನ್ನು ಕಲಿಸುವುದಕ್ಕೂ ಸಾಧ್ಯವಾಗಲಿದೆ ಎಂದು ಸಮಿತಿ ಆಗ್ರಹಿಸಿದೆ.
ಇದಲ್ಲದೇ, ಶಾಲೆಗಳನ್ನು ತೆರೆಯದೇ ಇರುವುದು ಮಕ್ಕಳ ಶಿಕ್ಷಣದ ಹಕ್ಕು, ಆಹಾರದ ಹಕ್ಕು, ಮಾನವಾಧಿಕಾರ ಮತ್ತಿತರ ಎಲ್ಲಾ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಅದರಲ್ಲೂ 3-10 ವಯಸ್ಸಿನ ಮಕ್ಕಳ, ದೈಹಿಕ, ಮಾನಸಿಕ, ಶೈಕ್ಷಣಿಕ ಮತ್ತು ಮಿದುಳಿನ ಬೆಳವಣಿಗೆಗಳ ಮೇಲೆ ಶಾಶ್ವತವಾದ ಹಾನಿಯನ್ನುಂಟು ಮಾಡಲಿವೆ ಎಂದು ಮಕ್ಕಳ ನಡೆ -ಶಾಲೆಯ ಕಡೆ ಅಭಿಯಾನದ ಸಮಿತಿ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟವನ್ನು ಬೆಂಬಲಿಸಿ ಆತ್ಮಹತ್ಯೆ ಮಾಡಿಕೊಂಡ ಸಿಖ್ ಧರ್ಮಗುರು!
ಇವುಗಳ ನಡುವೆ, ಶಾಲೆ ಆರಂಭಿಸದಿದ್ದರೇ, ಸಮಿತಿ ಈ ಹಿಂದೆಯೇ ತಿಳಿಸಿರುವಂತೆ ನಮ್ಮೂರ ಶಾಲೆಗಳನ್ನು ನಾವೇ ತೆರೆಯುವ ಅಭಿಯಾನವನ್ನು ಇನ್ನಷ್ಟು ವ್ಯಾಪಕವಾಗಿ ನಡೆಸಲಿದ್ದೇವೆ ಎಂದು ಘೋಷಿದ್ದಾರೆ. ಜೊತೆಗೆ ಕರ್ನಾಟಕದ ಬಡವಿದ್ಯಾರ್ಥಿಗಳ ಹಿತರಕ್ಷಣೆ ಮಾಡಲು ವಿಫಲವಾಗಿರುವ ಮಾನ್ಯ ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಮಾವಳ್ಳಿ ಶಂಕರ್, ಜ್ಯೋತಿ ಕೆ, ವಾಸುದೇವ ರೆಡ್ಡಿ ಕೆ, ಸರೋವರ್ ಬೆಂಕೀಕೆರೆ, ಡಾ.ಶ್ರೀನಿವಾಸ್, ತೋಳಿ ಭರಮಣ್ಣ, ತಿಪ್ಪೇಸ್ವಾಮಿ ಕೆಟಿ, ಪುಷ್ಪರಾಜ್ ಬೋಳೂರು, ಡಾ. ನಿರಂಜನಾರಾಧ್ಯ ವಿಪಿ, ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಡಾ.ಯೋಗಾನಂದ ರೆಡ್ಡಿ, ಡಾ. ಸಿದ್ದನಗೌಡ ಪಾಟೀಲ, ಡಾ. ವಡ್ಡಗೆರೆ ನಾಗರಾಜಯ್ಯ, ಶ್ರೀಪಾದ ಭಟ್, ಡಾ. ಬಿಆರ್ ಮಂಜುನಾಥ್, ಬಿ.ಆರ್ ಭಾಸ್ಕರ್ ಪ್ರಸಾದ್, ಡಾ.ಕೆಎಸ್ ಜನಾರ್ಧನ, ಡಾ. ಹೆಚ್ ಜಿ ಜಯಲಕ್ಷ್ಮಿ, ಪ್ರೊ. ನರೇಂದ್ರ ನಾಯಕ್, ಡಾ. ಪಿವಿ ಭಂಡಾರಿ, ಡಾ. ವಾಣಿ ಕೋರಿ, ಡಾ. ಬಾಲಸರಸ್ವತಿ, ಡಾ. ಭಾನು ಪ್ರಕಾಶ್ ಎಎಸ್, ರಾಜಾರಾಂ ತಲ್ಲೂರು, ಜಿ ರವಿ, ಪಾರ್ಥಸಾರಥಿ ಕೆಎಸ್, ಭಾರತಿ ಪ್ರಶಾಂತ್ ಮುಂತಾದವರು ಪತ್ರಕ್ಕೆ ಸಹಿ ಮಾಡಿದ್ದಾರೆ.
ಇದನ್ನೂ ಓದಿ: ರೈತರು ಮಾತು ಕೇಳಲು ಇನ್ನೆಷ್ಟು ರೈತರ ಬಲಿಬೇಕು?: ಕೃಷಿ ಮಸೂದೆ ಹರಿದು ಆಕ್ರೋಶ ಹೊರಹಾಕಿದ…


