Homeಚಳವಳಿದಲಿತ ಕುಟುಂಬದ ಮೇಲೆ ಹಲ್ಲೆ, ಜಾತಿನಿಂದನೆ - ಪ್ರಕರಣ ದಾಖಲಾದರೂ ನಿಲ್ಲದ ದೌರ್ಜನ್ಯ

ದಲಿತ ಕುಟುಂಬದ ಮೇಲೆ ಹಲ್ಲೆ, ಜಾತಿನಿಂದನೆ – ಪ್ರಕರಣ ದಾಖಲಾದರೂ ನಿಲ್ಲದ ದೌರ್ಜನ್ಯ

ಸವರ್ಣಿಯ ಮಕ್ಕಳೊಂದಿಗೆ ನಮ್ಮ ಮಗು ಆಟವಾಡಿದ್ದಕ್ಕೆ ಹೊಡೆದರು, ಪ್ರಶ್ನಿಸಿದ್ದಕ್ಕೆ ನಮ್ಮನ್ನೂ ಥಳಿಸಿದರು ಎನ್ನುವ ದಲಿತ ಮೇಷ್ಟ್ರು ಮುನಿಆಂಜಿನಪ್ಪನವರ ನೋವಿನ ಕತೆಯಿದು..

- Advertisement -
- Advertisement -

ಮುನಿಆಂಜಿನಪ್ಪ ದಲಿತ ಸಮುದಾಯದವರು, ಮಕ್ಕಳಿಗೆ ಪಾಠ ಹೇಳುವ ಮೇಷ್ಟ್ರು. ಇವರ ಪತ್ನಿ ಕೆ.ಎಂ.ಅರುಣಾ ಆಶಾ ಕಾರ್ಯಕರ್ತೆ. ಈ ದಂಪತಿ ಇಬ್ಬರು ಪುಟ್ಟ ಮಕ್ಕಳೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ರಾಮನಾಥಪುರದಲ್ಲಿ ವಾಸವಿದ್ದಾರೆ. ಇವರ ಏಳು ವರ್ಷದ ಕಿರಿಯ ಮಗು ಸ್ಪಶ್ಯ ಜಾತಿಯ ಮಕ್ಕಳೊಂದಿಗೆ ಆಟವಾಡಿದ್ದೇ ಜಾತೀಯ ಮನಸ್ಥಿತಿಗಳಿಗೆ ತಡೆಯಲಾಗಿರಲಿಲ್ಲ. ಆಟವಾಡುತ್ತಿದ್ದ ಮಗುವನ್ನು ಕಾಂಕ್ರೀಟ್‌ ರಸ್ತೆಗೆ ನೂಕಿ ಒಬ್ಬಾತ ಗಾಯಗೊಳಿಸಿದ. ಮಗು ಜ್ವರದಿಂದ ನರಳಿದ್ದನ್ನು ಸಹಿಸಲಾಗದ ತಾಯಿ, ಮಗುವಿಗೆ ಹೊಡೆದವನನ್ನು ಪ್ರಶ್ನಿಸಿದಳು. ಇಷ್ಟನ್ನೂ ಸಹಿಸದ ಆತ, “ಹೊಲೆಮಾದಿಗಳಾದ ನೀನು ನನ್ನ ಪ್ರಶ್ನಿಸುತ್ತೀಯಾ?” ಎಂದು ದೌರ್ಜನ್ಯ ಎಸಗಿದ. ಅವನೊಂದಿಗೆ ಅವನ ಕುಟುಂಬದ ಇನ್ನಿಬ್ಬರು ಸೇರಿಕೊಂಡು ಅರುಣಾ ಹಾಗೂ ಮುನಿಆಂಜಿನಪ್ಪ ಅವರನ್ನು ಥಳಿಸಿದರು. ಪೊಲೀಸ್‌ ಮೆಟ್ಟಿಲೇರಿದ ಪ್ರಕರಣ, ಏನೆಲ್ಲ ತಿರುವುಗಳನ್ನು ಪಡೆದಿದೆ ಎಂದು ನೋಡುತ್ತಾ ಹೋದರೆ, “ನಾವು ಯಾವ ಸಮಾಜದಲ್ಲಿ ಬದುಕುತ್ತಿದ್ದೇವೆ” ಎಂದು ಆತಂಕವಾಗುತ್ತದೆ. ಪೊಲೀಸರು ರಕ್ಷಣೆ ನೀಡಿದ್ದರೂ ಇಂದಿಗೂ ಈ ದಲಿತ ಕುಟುಂಬ ಒಂದಲ್ಲ ಒಂದು ರೀತಿ ಜೀವಭಯದಲ್ಲೇ ಇದ್ದು, ಕಿರುಕುಳ ಅನುಭವಿಸುತ್ತಲೇ ಇದೆ.

ಮುನಿಆಂಜಿನಪ್ಪ ಅವರು ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಪ್ರಾಥಮಿಕ ಶಾಲೆಯೊಂದರಲ್ಲಿ ಸರ್ಕಾರಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಪತ್ನಿ ಅರುಣಾ ಅವರು ರಾಮನಾಥಪುರದಲ್ಲೇ ಆಶಾ ಕಾರ್ಯಕರ್ತೆಯಾಗಿದ್ದಾರೆ. ಆಗಸ್ಟ್‌ 14ರಂದು ಶ್ರಾವಣ ಶನಿವಾರದ ಪ್ರಯುಕ್ತ ಊರ ಉತ್ಸವ ಮಾಡಿ, ಪ್ರಸಾದ ವಿತರಣಾ ಕಾರ್ಯಕ್ರಮವನ್ನು ಊರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಆಗ ಮುನಿಆಂಜಿನಪ್ಪ-ಅರುಣಾ ದಂಪತಿಯ ಏಳು ವರ್ಷದ ಕಿರಿಯ ಮಗು ಧನುಷ್ ಪ್ರಸಾದ ಪಡೆಯಲು ಹೋಗಿದೆ. ಪ್ರಸಾದ ತಿಂದ ಬಳಿಕ ಸವರ್ಣೀಯ ಮಕ್ಕಳ ಜೊತೆಗೆ ಆಟವಾಡುತ್ತಿದ್ದಾಗ, ಒಕ್ಕಲಿಗ ಜಾತಿಗೆ ಸೇರಿದ ಕಿಶೋರ ಎಂಬಾತ ಈ ಸಂದರ್ಭದಲ್ಲಿ ಮಗುವನ್ನು ಹೊಡೆದು, “ಮಾದಿಗ ನನ್ಮಗ ಇಲ್ಲಿಗೆ ಬಂದೀದ್ದೀಯಲ್ಲೋ” ಎಂದು ತಳ್ಳಿದ್ದಾನೆ. ಮಗು ಕಾಂಕ್ರೀಟ್‌ ರಸ್ತೆ ಮೇಲೆ ಬಿದ್ದಿದೆ. ಕಾಲಿಗೆ ಗಾಯವಾಗಿ, ರಕ್ತ ಸುರಿಸಿಕೊಂಡು ಧನುಷ್‌ ಮನೆಗೆ ಬಂದಿದ್ದಾನೆ. ಶನಿವಾರವಾದ್ದರಿಂದ ಮಧ್ಯಾಹ್ನವೇ ಕೆಲಸ ಮುಗಿಸಿ ಗಂಡ-ಹೆಂಡತಿ ಮನೆಗೆ ಬಂದಿದ್ದಾರೆ. ಅರುಣಾ ಆತಂಕಿತರಾಗಿದ್ದಾರೆ. “ತಲೆಗೆ ಏನಾದರೂ ಪೆಟ್ಟು ಬಿದ್ದಿದ್ದರೆ…” ಎಂದು ಗಾಬರಿಯಾಗಿದ್ದಾರೆ. ಆ ನೋವಿನಿಂದಾಗಿ ಮಗುವಿಗೆ ಜ್ವರ ಬಂದಿದೆ. ಮಾರನೇ ದಿನ ಸ್ವಾತಂತ್ರ್ಯ ದಿನಾಚರಣೆಯಂದು ಭಾನುವಾರ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಮಗುವಿಗೆ ಹೊಡೆದವನನ್ನು ವಿಚಾರಿಸಲು ಸಾಧ್ಯವಾಗಿಲ್ಲ.

ಇದನ್ನೂ ಓದಿರಿ: ಕಾಂಗ್ರೆಸ್‌ನಲ್ಲಿ ಮಾತ್ರ ದಲಿತರು ಸಿಎಂ ಆಗಲು ಸಾಧ್ಯ, ದಲಿತರು ಸಿಎಂ ಆಗಲು ನನ್ನ ವಿರೋಧವಿಲ್ಲ: ಸಿದ್ದರಾಮಯ್ಯ

ಮುನಿಆಂಜಿನಪ್ಪ ಅವರ ಮನೆಯಲ್ಲಿ ಹಸುವನ್ನು ಸಾಕಿದ್ದು, ಅರುಣಾ ಅವರು ಆಗಸ್ಟ್‌ 16ರಂದು ಹಾಲನ್ನು ಡೇರಿಗೆ ಹಾಕಲು ಹೋದಾಗ ಸುಮಾರು ಸಂಜೆ 4.15ರ ವೇಳೆಗೆ ಕಿಶೋರ ಎದುರಾಗಿದ್ದಾನೆ. ಮನೆಯ ಹತ್ತಿರದಲ್ಲೇ ಸಿಕ್ಕಿದ ಆತನಿಗೆ, “ಯಾಕಪ್ಪ ಮಗುವಿಗೆ ಹೊಡೆದಿದ್ದೀಯಾ?” ಎಂದು ಸೌಜನ್ಯವಾಗಿ ಅರುಣಾ ಕೇಳಿದಾಗ, “ನಮ್ಮ ಹುಡುಗರ ಜೊತೆ ಗಲಾಟೆ ಮಾಡಿಕೊಂಡಿದ್ದಕ್ಕೆ ಹೊಡೆದೆ” ಅಂತ ಸಬೂಬು ನೀಡಿದ್ದಾನೆ. “ನಿಮ್ಮ ಮಗ ಎಂದು ಗೊತ್ತಿರಲಿಲ್ಲ” ಎಂದು ದಬಾಯಿಸಿದ್ದಾನೆ. “ಯಾರ ಮಗುವಾದರೆ ಏನಪ್ಪ, ಮಕ್ಕಳೆಲ್ಲ ಒಂದೇ ತಾನೇ? ಸರಿ ಏನೋ ಹೊಡೆದೆ ಬಿಡಪ್ಪ, ಕಾಲು ಕಿತ್ತು ಹೋಗೋ ಹಾಗೆ ಯಾಕಪ್ಪ ಹೊಡೆದೆ. ಮಗುವಿಗೆ ಜ್ವರ ಬಂದಿದೆ. ರಾತ್ರಿಯೆಲ್ಲ ಅವನು ನಿದ್ದೆ ಮಾಡಿಲ್ಲ. ತಲೆಗಿಲೇಗೆ ಏಟಾಗಿದ್ದರೆ ಏನು ಮಾಡಬೇಕಾಗಿತ್ತು?” ಎಂದು ಅರುಣಾ ಪ್ರಶ್ನಿಸಿದ್ದಾರೆ. ಅಷ್ಟಕ್ಕೇ ಸಿಟ್ಟಿಗೆದ್ದ ಕಿಶೋರ, “ಏನು ನಮ್ಮನ್ನೇ ಕೇಳುವ ಮಟ್ಟಕ್ಕೆ ಬೆಳೆದಿದ್ದೀಯಾ ನೀನು?” ಎಂದು ಹೊಡೆಯಲು ಬಂದಾಗ, ಅರುಣಾ ತನ್ನ ಗಂಡನನ್ನು ಕೂಗಿದ್ದಾರೆ. ಮುನಿಆಂಜಿನಪ್ಪ ಓಡಿ ಬಂದು, “ಏನೋ ನಿನ್ನದು ದುಂಡಾವರ್ತನೆ” ಎನ್ನುತ್ತಾ, ಅರುಣಾ ಕೇಳಿದ ಪ್ರಶ್ನೆಯನ್ನೇ ಕೇಳಿದ್ದಾರೆ. ಅದಕ್ಕೆ ಕಿಶೋರ, “ನೀನೊಬ್ಬನೇನಾ ಹುಟ್ಟಿಸಿರೋದು? ನಮ್ಮನ್ನೇ ಕೇಳೋ ಹಂಗೆ ಆದ್ರಾ?” ಎಂದು ಪೋನ್‌ ಮಾಡಿ ತಮ್ಮ ಕಡೆಯವರನ್ನು ಕರೆಸಿಕೊಂಡಿದ್ದಾನೆ.

ಕಿಶೋರನ ಚಿಕ್ಕಪ್ಪ ಮಂಜುನಾಥ್‌ ಬೈಕ್‌ನಲ್ಲಿ ತಕ್ಷಣ ಬಂದು, ಗಾಡಿ ನಿಲ್ಲಿಸಿದವನೇ ಮೇಷ್ಟ್ರ ಕೊರಳಪಟ್ಟಿ ಹಿಡಿದಿದ್ದಾನೆ. ಅರುಣಾ ಅವರು, “ಏನನ್ನೂ ಕೇಳದೆ, ಯಾಕಣ್ಣ ನಮ್ಮ ಯಜಮಾನರನ್ನು ಹಿಡಿದುಕೊಂಡಿದ್ದೀರಾ?” ಎಂದಾಗ ಆಕೆಯನ್ನು ನೂಕಿ ಗಾಯಗೊಳಿಸಿದ್ದಾರೆ. ಮುನಿಆಂಜಿನಪ್ಪ ಈಗಾಗಲೇ ಅಪಘಾತವೊಂದರಲ್ಲಿ ಗಾಯಗೊಂಡಿದ್ದರೂ ಹೆಂಡತಿ ಮೇಲೆ ನಡೆದ ಹಲ್ಲೆಯನ್ನು ತಡೆಯಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಬೈಕ್‌ನಲ್ಲಿ ಬಂದ ಕಿಶೋರ ತಂದೆ ವೆಂಕಟೇಗೌಡ, ದೊಣ್ಣೆಗಳನ್ನು ತೆಗೆದುಕೊಂಡು ಏನನ್ನೂ ವಿಚಾರಿಸದೆ ಹೊಡೆಯಲಾರಂಭಿಸಿದ್ದಾನೆ. ಸವರ್ಣೀಯ ಜಾತಿಯ ಈ ಮೂವರು, ಅರುಣಾ ಹಾಗೂ ಮನಿಆಂಜಿನಪ್ಪ ಅವರ ಜಾತಿ ನಿಂದನೆ ಮಾಡಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. “ನನ್ನ ಹೆಂಡತಿ ಮೇಲೆ ಇಷ್ಟು ದೌರ್ಜನ್ಯ ಆಗುತ್ತಿದ್ದರೂ, ಮೊದಲೇ ಗಾಯಗೊಂಡಿದ್ದ ನಾನು ಬಿಡಿಸಿಕೊಳ್ಳಲಾಗದೆ ಅಸಹಾಯಕನಾಗಿ ನಿಂತಿದ್ದೆ. ಅವಳ ಎದೆಯ ಭಾಗಕ್ಕೆಲ್ಲ ಗಾಯಗೊಳಿಸಿದರು” ಎಂದು ಕಣ್ಣೀರು ಹಾಕುತ್ತಾರೆ ಮುನಿಆಂಜಿನಪ್ಪ.

ಅಷ್ಟರಲ್ಲಿ ದಲಿತ ಕಾಲೋನಿಯಲ್ಲಿದ್ದ ಕೆಲವು ಹುಡುಗರು ಬಂದು ಪ್ರಶ್ನೆ ಮಾಡಿದ್ದಾರೆ. ತಕ್ಷಣವೇ ಪೊಲೀಸರಿಗೆ ದೂರು ನೀಡಲು ಹೊರಟಾಗ, “ನೀವು ಪೊಲೀಸಿನವರಿಗೆ ದೂರು ಕೊಟ್ಟರೆ ಏನೂ ಕಿತ್ತುಕೊಳ್ಳಲು ಆಗಲ್ಲ. ಪೊಲೀಸರಿಗೆ ಒಂದ್ ಸಾವಿರ ಕೊಟ್ಟು ಹೀಗೆ ಹೋಗಿ, ಹಾಗೇ ವಾಪಸ್ ಬರ್ತೀವಿ” ಎಂದು ಧಮ್ಕಿ ಹಾಕಿದ್ದಾರೆ. ಅರುಣಾ ಮತ್ತು ಮುನಿಆಂಜಿನಪ್ಪ ಅವರು ವಿಶ್ವನಾಥಪುರ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ, ಇನ್‌ಸ್ಪೆಕ್ಟರ್‌ ಇರುತ್ತಾರೆ. ಹಲ್ಲೆ ನಡೆಸಿದವರ ಹೆಸರುಗಳನ್ನು ಪಡೆದುಕೊಂಡು, ಅವರನ್ನು ಕರೆದುಕೊಂಡು ಬರಲು ಪೊಲೀಸರಿಬ್ಬರನ್ನು ಕಳುಹಿಸಿದ್ದಾರೆ.

“ನಾವು ತೀವ್ರವಾಗಿ ಗಾಯಗೊಂಡಿದ್ದೆವು. ಇದನ್ನು ಗಮನಿಸಿದ ಇನ್‌ಸ್ಪೆಕ್ಟರ್‌, ನೀವು ಮೊದಲು ಆಸ್ಪತ್ರೆಗೆ ಹೋಗಿ ಬನ್ನಿ, ಆಮೇಲೆ ದೂರು ನೀಡುವಿರಂತೆ ಎಂದು ತಿಳಿಸಿದರು. ದೊಡ್ಡಬಳ್ಳಾಪುರ ಆಸ್ಪತ್ರೆಗೆ ಹೋಗಿ, ಪೊಲೀಸರು ಹೀಗೆ ಹೇಳಿ ಕಳುಹಿಸಿದರೆಂದು ತಿಳಿಸಿ, ಚಿಕಿತ್ಸೆ ಪಡೆದೆವು. ಸಂಜೆ ಸುಮಾರು ಆರು ಮುಕ್ಕಾಲು ಆಗಿತ್ತು. ದೂರು ಬರೆದು ಕೊಡುವ ವೇಳೆಗೆ ಊರಿನ ಮುಖಂಡರಿಬ್ಬರು ಬಂದರು. ‘ಮೇಷ್ಟ್ರೇ, ಏನೋ ತಪ್ಪು ಮಾಡಿದ್ದಾರೆ, ಊರಿನ ಮುಖ ನೋಡಿ’ ಎಂದರು. ‘ಊರಲ್ಲಿ ಪಂಚಾಯಿತಿ ಮಾಡಿ, ನಿಮಗೆ ನ್ಯಾಯ ದೊರೆಕಿಸುತ್ತೇವೆ’ ಎಂದು ತಡೆದರು” ಎನ್ನುತ್ತಾರೆ ದಂಪತಿ.

ಅರುಣಾ ಅವರು ದೂರು ದಾಖಲಿಸಲೇಬೇಕು ಎಂದು ಪಟ್ಟು ಹಿಡಿದರು. ದೇಹದ ಮೇಲೆ ಆಗಿರುವ ಗಾಯದ ಗುರುತುಗಳನ್ನು ಬಟ್ಟೆ ಬಿಚ್ಚಿ ತೋರಿಸಿದರು. ಎಫ್‌ಐಆರ್‌ ಮಾಡಲೇಬೇಕು ಎಂದು ದಂಪತಿ ಪಟ್ಟು ಹಿಡಿದಾಗ, ‘ಇಂತಹ ವಿಷಯಗಳನ್ನು ಡಿವೈಎಸ್‌ಪಿ ಸಾಹೇಬರ ಗಮನಕ್ಕೆ ತರಬೇಕು. ಅವರಿಗೆ ಕರೆ ಮಾಡಿದ್ದೇನೆ. ಅವರು ಮೀಟಿಂಗ್‌ನಲ್ಲಿ ಇದ್ದಾರೆ. ಕಾಲ್‌ ಯೂ ಬ್ಯಾಕ್‌ ಲೇಟರ್‌ ಎಂದು ಮೆಸೇಜ್‌ ಮಾಡಿದ್ದಾರೆ ನೋಡಪ್ಪ’ ಎಂದು ಇನ್‌ಸ್ಪೆಕ್ಟರ್‌, ದಂಪತಿಗೆ ಮೇಲಧಿಕಾರಿಯ ಮೆಸೇಜ್‌ ತೋರಿಸಿದ್ದಾರೆ. ‘ರಾತ್ರಿ ಒಂಬತ್ತು ಗಂಟೆಯಾದರೂ ಕಾಯುತ್ತೇವೆ’ ಎಂದು ಅರುಣಾ ಹೇಳಿದಾಗ, “ಹೆಣ್ಣು ಮಕ್ಕಳನ್ನು ಠಾಣೆಯಲ್ಲಿ ಉಳಿಸಿಕೊಳ್ಳುವಂತಿಲ್ಲ. ನೀವು ಹೊರಡಿ” ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿ ಮನೆಗೆ ವಾಪಸ್‌ ಆಗಿ ಅಂದು ರಾತ್ರಿ ವಿಶ್ರಾಂತಿ ಪಡೆದಿದ್ದಾರೆ.

ನ್ಯಾಯ ಪಂಚಾಯಿತಿ: ಸವರ್ಣೀಯರ ದಬ್ಬಾಳಿಕೆ

ಆಗಸ್ಟ್‌ 17ರಂದು ಬೆಳಿಗ್ಗೆಯಿಂದಲೇ ಮುನಿಆಂಜಿನಪ್ಪ ಅವರಿಗೆ ಕರೆಗಳು ಬರಲು ಆರಂಭವಾಗಿವೆ. “ಊರು ಎದುರು ಹಾಕಿಕೊಂಡು ಏನು ಮಾಡುತ್ತೀರಾ?” ಎಂದು ಟಾರ್ಚರ್‌ ಕೊಡಲು ಆರಂಭಿಸಿದ್ದಾರೆ. ಮಾತನಾಡಲು ಮುಖಂಡರು ಮೇಷ್ಟ್ರನ್ನು ಕರೆಸಿಕೊಳ್ಳುತ್ತಾರೆ. ದಂಪತಿ ಅಲ್ಲಿಗೆ ಹೋದಾಗ ಸುಮಾರು ಐವತ್ತರಿಂದ ಅರವತ್ತು ಮಂದಿ ಸೇರಿರುತ್ತಾರೆ. ಮೇಷ್ಟ್ರು ಪರವಾಗಿ ದಲಿತ ಕಾಲೋನಿಯ ಅನೇಕರು ಬಂದಿರುತ್ತಾರೆ. ಇತರರು ಮೇಷ್ಟ್ರ ಪರ ಬರಬಾರದು ಎಂದು ತಡೆಯಲು ಸವರ್ಣೀಯರು ಯತ್ನಿಸಿರುತ್ತಾರೆ. “ಅವರ ಮನೆ ವಿಚಾರಕ್ಕೆ ಎಲ್ಲರೂ ಯಾಕೆ ಬರುತ್ತೀರಾ” ಎಂದು ಪುಸಲಾಯಿಸಿ ಕೆಲವರನ್ನು ವಾಪಸ್‌ ಕಳುಹಿಸಿದ್ದಾರೆ. ಆದರೂ ವಿಚಾರವಂತರು, “ಇವತ್ತು ಮೇಷ್ಟ್ರಿಗಾಗಿದೆ ನಾಳೆ ನಮಗಾಗುತ್ತದೆ” ಎಂದು ಸಭೆಗೆ ಬಂದಿದ್ದಾರೆ.

ಸುಮಾರು ಒಂದೂವರೆ ಗಂಟೆಗಳ ಕಾಲ ಮೇಷ್ಟ್ರನ್ನೇ ವಿಚಾರಣೆ ಮಾಡಿದರೆ ಹೊರತು, ತಪ್ಪು ಮಾಡಿದವನನ್ನು ಸಭೆಗೆ ಕರೆಸಲಿಲ್ಲ. “ದೂರು ವಾಪಸ್‌ ತೆಗೆದುಕೊಳ್ಳಲೇಬೇಕು” ಎಂದು ಪಟ್ಟು ಹಿಡಿದಿದ್ದಾರೆ. ಅದಕ್ಕೆ ಅರುಣಾ, “ನೀವು ಅವರನ್ನು ಕರೆಸಿ ಮಾತನಾಡಿ. ಅವರಿಗೆ ಏನು ಶಿಕ್ಷೆ ಕೊಡುತ್ತೀರೋ ಕೊಡಿ. ನಮಗೆ ಸಮಾಧಾನ ಆದ್ರೆ ಒಪ್ಪಿಕೊಳ್ತೀವಿ. ಇಲ್ಲವಾದರೆ ದೂರು ಕೊಡುತ್ತೇವೆ” ಎಂದಿದ್ದಾರೆ. “ನೀವು ವಾಪಸ್‌ ತೆಗೆದುಕೊಳ್ತೀವಿ ಅಂತ ಮೊದಲು ಹೇಳಿದರೆ ಅವರನ್ನು ಕರೆಸುತ್ತೇವೆ” ಎಂದು ಸವರ್ಣೀಯ ಮುಖಂಡರು ಹೇಳಿದ್ದಾರೆ. “ಅವರನ್ನೂ ಕರೆಸಿ ಮಾತನಾಡದಿದ್ದರೆ ನಾವು ಒಪ್ಪಲ್ಲ” ಎಂದು ಮೇಷ್ಟ್ರು ಹೇಳಿದಾಗ, “ನಿಮಗೆ ಊರಲ್ಲಿ ಏನಾದರೂ ತೊಂದರೆಯಾಗಿದೆಯಾ” ಅಂತ ಕೇಳಿದ್ದಾರೆ. ಆಗ ಮತ್ತೊಂದು ವಿಷಯ ಪ್ರಸ್ತಾಪವಾಗಿದೆ. ಮೇಷ್ಟ್ರು ತಮ್ಮ ಹೊಲಕ್ಕೆ ಹೋಗಲು ದಾರಿ ಇಲ್ಲದೆ ಅನುಭವಿಸುತ್ತಿರುವ ಕಿರುಕುಳ ಚರ್ಚೆಯಾಗಿದೆ.

“ನಾವು ಗೊಬ್ಬರ ತುಂಬಿಸಿಕೊಂಡು ಹೊಲಕ್ಕೆ ಹೋಗಬೇಕೆಂದರೆ ಸವರ್ಣೀಯ ಜಾತಿಗೆ ಸೇರಿದವರು ಬಿಡಲ್ಲ. ನಾವು ನಮ್ಮ ಜಮೀನಿಗೆ ಹೋಗಬೇಕಾದರೆ ಇವರ ಜಾಗದ ಮೂಲಕವೇ ಹೋಗುವುದು ಅನಿವಾರ್ಯವಾಗಿದೆ. ಸುಮಾರು 300 ಮೀಟರ್‌ ದೂರವಿರುವ ಹೊಲಕ್ಕೆ ಮೂರು ಕಿ.ಮೀ. ಸುತ್ತಾಡಿಕೊಂಡು ಬಂದು ಹೋಗಬೇಕಾಗಿದೆ. ನಾವು ತಿರುಗಾಡಲು ಜಾಗ ಬಿಡಲ್ಲ. ಹೊಲವನ್ನು ಒತ್ತುವರಿ ಮಾಡಿಕೊಂಡಿದ್ದಾರೆ” ಎಂದದ್ದಷ್ಟೇ ಮೇಷ್ಟ್ರ ಮೇಲೆ ಮುಗಿಬಿದ್ದಿದ್ದಾರೆ.

ಇದನ್ನೂ ಓದಿರಿ: ದಲಿತ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ದೆಹಲಿ ಪೊಲೀಸರ ಚಾರ್ಜ್‌ಶೀಟ್‌‌ ಹೇಳುವುದೇನು?

“ನೀನು ರೋಡಲ್ಲಿ ತಿರುಗಾಡುತ್ತೀಯಾ, ಧೈರ್ಯ ಇದೆಯಾ, ಕಂಬಾಲಪಲ್ಲಿ ಘಟನೆ ಗೊತ್ತೈತಾ?” ಎಂದು ಬೆದರಿಸಲು ಆರಂಭಿಸಿದ್ದಾರೆ. “ಅವರು ಹೀಗೆಲ್ಲ ಮಾತನಾಡಲು ಆರಂಭಿಸಿದಾಗ ನಮಗೆ ಭಯವಾಗಲು ಶುರುವಾಯಿತು. ಇದನ್ನೆಲ್ಲ ಯಾಕ್‌ ಕಾಂಪ್ಲಿಕೇಟ್‌ ಮಾಡಿಕೊಳ್ಳೋದು? ನಾವು ದೂರು ನೀಡೋಣ ಎಂದು ಎದ್ದು ಹೊರಟೆವು. ಎಲ್ಲರೂ ಸುತ್ತುವರಿದು, ‘ನೀವು ಹೊಲಕ್ಕೆ ಟ್ರಾಕ್ಟರ್‌‌ಅನ್ನು ಅದೇ ದಾರಿಯಲ್ಲಿ ತಂದರೆ ಬೆಂಕಿ ಹಾಕುತ್ತೇವೆ, ನಿಮ್ಮನ್ನು ಕತ್ತರಿಸಿ ಹಾಕುತ್ತೇವೆ’ ಎಂದು ಒಬ್ಬಾತ ಕೂಗಿ ಕೂಗಿ ಬೆದರಿಕೆ ಹಾಕಿದ. ನಮಗೆ ಭಯವಾಯ್ತು. ಊರಿನ ಮುಖಂಡರೊಬ್ಬರು ಅಲ್ಲಿಗೆ ಬಂದು, ಅವರಿಗೆ ನ್ಯಾಯ ಸಿಗದಿದ್ದರೆ ಕಾನೂನು ಪ್ರಕಾರ ಅವರು ಹೋಗಲಿ ಬಿಡ್ರಿ, ಅವರಿಗೆ ಹೊಡೆಯಬೇಡಿ ಎಂದರು. ನಾವು ಹೋಗಬೇಕಾದರೆ ಒಬ್ಬ ಕೂಗಿ ಹೇಳ್ತಾನೆ: ನಿಮ್ಮನ್ನು ಊರು ಬಿಡುಸುತ್ತೇವೆ, ಅದು ಹೇಗೆ ಊರನ್ನು ಎದುರು ಹಾಕಿಕೊಂಡು ಬಾಳ್ತೀರಾ ನೋಡ್ತೀವಿ. ನಿಮಗೆ ಬೆಂಕಿ ಇಡ್ತೇವೆ ಎಂದ. ನಾವು ಗಾಡಿಯಲ್ಲಿ ಹೊರಟಾಗ ನಮ್ಮನ್ನು ಫಾಲೋ ಮಾಡಿಕೊಂಡು ಇಬ್ಬರು ಬಂದರು. ನಾವು ಪೊದೆಯಲ್ಲಿ ಅವಿತು ಕುಳಿತಿದ್ದೆವು. ಎಸ್‌ಐ ಸಾಹೇಬರಿಗೆ ಫೋನ್‌ ಮಾಡಿ ವಿಷಯ ತಿಳಿಸಿದೆವು. ಸ್ಟೇಷನ್‌ನಲ್ಲೇ  ಉಳಿಯಲು ಸೂಚಿಸಿದರು. ಯಲಹಂಕಕ್ಕೆ ಹೋಗಿದ್ದ ಸಾಹೇಬರು ಸಂಜೆ 4.30ರ ವೇಳೆಗೆ ಬಂದು ಎಫ್‌ಐಆರ್‌ ದಾಖಲಿಸಿದರು. ನಮ್ಮ ಜೊತೆಗೆ ನಿಂತಿದ್ದ ಗೆಳೆಯರಿಗೆ ಸವರ್ಣೀಯರು ಬೆದರಿಸಿದ್ದರಿಂದ ಅವರೂ ನಮ್ಮ ಜೊತೆ ನಿಲ್ಲಲಿಲ್ಲ. ಆಗ ನಾವಿಬ್ಬರೇ ಆಗಿದ್ದೆವು. ರಕ್ಷಣೆಗಾಗಿ ಕೋರಿದಾಗ, ಇಬ್ಬರು ಪೊಲೀಸರನ್ನು ಜೊತೆಗೆ ಕಳುಹಿಸಿ, ಊರಿಗೆ ಬಿಡಿಸಿದರು. ಪೊಲೀಸಿನವರು ಊರಿನಲ್ಲಿ ಒಂದಿಷ್ಟು ಹೊತ್ತು ಇದ್ದು ಹೊರಟರು. ಬರುವಾಗ ತಂದಿದ್ದ ಬ್ರೆಡ್‌ ತಿದ್ದು ಮಲಗಿದ್ದೆವು. ಬಾಗಿಲು ತೆಗೀಲಿ, ಹೊಡೆದು ಹಾಕೋಣ ಎಂದು ಹೊರಗಡೆ ಮಾತನಾಡಿಕೊಳ್ಳುತ್ತಿದ್ದದ್ದು ಕೇಳಿಸುತ್ತಿತ್ತು. ಅವರು ಹೊರಗಡೆ ಓಡಾಡೋದು ಕಾಣಿಸೋದು. ಮಕ್ಕಳನ್ನೆಲ್ಲ ಒಳಗೆ ಕೂರಿಸಿಕೊಂಡು ಮನೆಯೊಳಗೆಯೇ ಮಕ್ಕಳಿಗೆ ಮೂತ್ರ ವಿಸರ್ಜನೆ ಮಾಡಿಸಿದೆವು. ಬಾಗಿಲು ತೆಗೆಯಲೇ ಇಲ್ಲ. ನಮ್ಮ ಮನೆಯಲ್ಲಿನ ರೂಮಿನಲ್ಲಿ ಮಕ್ಕಳನ್ನು ತಬ್ಬಿಕೊಂಡು ಕೂತಿದ್ದೆ. ಎರಡು ದಿನ ಅಂತಹ ಸ್ಥಿತಿಯಲ್ಲೇ ಬದುಕಿದ್ದೇವೆ” ಎಂದು ಕಣ್ಣೀರು ಹಾಕುತ್ತಾರೆ ಮೇಷ್ಟ್ರು.

“ನಮ್ಮನ್ನು ಕಂಡರೆ ಮಾನವೀಯತೆ ಇಲ್ಲ ಇವರಿಗೆ. ನಮ್ಮನ್ನು ಬಹಳ ನಿಕೃಷ್ಟವಾಗಿ ಕಾಣುತ್ತಾರೆ. ನಮ್ಮ ಜಾತಿಯವರನ್ನು ಕಂಡರೆ ಅವರಿಗೆ ಒಂದಿಷ್ಟು ಕನಿಕರವಿಲ್ಲ. ನೆನೆಸಿಕೊಂಡರೆ ನಾವು ಯಾವ ಸಮಾಜದಲ್ಲಿ ಇದ್ದೇವೆ ಅಂತ ನೋವಾಗುತ್ತೆ” ಎಂದು ಅಳುತ್ತಾ ಹೇಳುವ ಮೇಷ್ಟ್ರು, “ಬೇರೆಯವರಾಗಿದ್ದರೆ ಇಷ್ಟು ವೇಳೆಗೆ ಸೂಸೈಡ್‌ ಮಾಡಿಕೊಳ್ಳುತ್ತಿದ್ದರು. ನಾವು ವಿಚಾರವಂತರು, ನಾಲ್ಕು ಜನಕ್ಕೆ ವಿದ್ಯೆ ಹೇಳೋರು. ನಾವು ಹೆದರದೆ ಹೋರಾಟ ಮಾಡಬೇಕು ಎಂದು ನಾನು ನನ್ನ ಹೆಂಡತಿ ನಿರ್ಧಾರ ಮಾಡಿಬಿಟ್ಟೆವು” ಎಂದರು.

“ಸ್ವಲ್ಪ ಹೊತ್ತಾದ ಮೇಲೆ ದನಿ ನಿಂತು ಹೋಯಿತು. ಬೆಳಿಗ್ಗೆ ಎದ್ದ ತಕ್ಷಣವೇ ಡಿವೈಎಸ್‌ಪಿ ಆಫೀಸ್‌ಗೆ ಹೋದೆವು. ಸಾಹೇಬರು ಇರಲಿಲ್ಲ. ಅಲ್ಲಿನ ಪೊಲೀಸರಿಗೆ ತಿಳಿಸಿ, ನಾವು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋದೆವು. ಊರಿನವರೆಲ್ಲ ಗಮನಿಸುತ್ತಾರೆಂದು ಕಣ್ಣುತಪ್ಪಿಸಲೆಂದು ಸಂಜೆ ವೇಳೆಗೆ ಮನೆಗೆ ಹಿಂತಿರುಗಿದೆವು” ಎಂದರು ಮೇಷ್ಟ್ರು.

ಯಾರೂ ಸಹಾಯ ಮಾಡದಂತೆ ಬೆದರಿಕೆ

“ನಾವು ಹೊರಗಡೆ ಇದ್ದಾಗ ನಮ್ಮ ಮಕ್ಕಳಿಗೆ ಯಾರೋ ಪಕ್ಕದ ಮನೆಯವರು ಮಕ್ಕಳಿಗೆ ಒಂದಿಷ್ಟು ಊಟ ಕೊಟ್ಟಿದ್ದರು. ನೀವು ಅವರಿಗೆ ಸಪೋರ್ಟ್‌ ಮಾಡ್ತೀರಾ, ಎರಡು ದಿನ ಹೊರಗೆ ಬಾರದಂತೆ ಅವರಿಗೆ ಹೊಡೆದಿದ್ದೇವೆ. ನಿಮಗೂ ಅದೇ ಗತಿ, ನಿಮಗೂ ಬಹಿಷ್ಕಾರ ಹಾಕುತ್ತೇವೆ- ಎಂದು ಹೆದರಿಸಿದ್ದಾರೆ. ನಾವು ಮನೆಗೆ ಹೋದಾಗ, ಮಕ್ಕಳು ಊಟ ಊಟ ಎಂದು ಅಳುತ್ತಿದ್ದರು. ನಾವು ಯಾವ ಕಾಲದಲ್ಲಿ ಬದುಕುತ್ತಿದ್ದೇವೆ?” ಎಂದು ಕಣ್ಣೀರು ಹಾಕುತ್ತಾರೆ ಮುನಿಆಂಜಿನಪ್ಪ.

ಮಾರನೇ ದಿನ ಪೊಲೀಸರು ಸ್ಟೇಟ್‌ಮೆಂಟ್ ಪಡೆದರು. ಡಿವೈಎಸ್‌ಪಿ ರಂಗಪ್ಪ ಅವರು ಬಂದು ಮಹಜರು ಮಾಡಿಕೊಂಡರು. ಪೊಲೀಸ್‌ ಪ್ರೊಟೆಕ್ಷನ್‌ ಕೊಟ್ಟರು. ತಾಲ್ಲೂಕು ಮಟ್ಟದ ದಲಿತ ಮುಖಂಡರು ನೀಡಿದ ಬೆಂಬಲದಿಂದಾಗಿ ದಂಪತಿ ಪತ್ರಿಕಾಗೋಷ್ಠಿಯನ್ನೂ ನಡೆಸಿ ನೋವು ತೋಡಿಕೊಂಡಿದ್ದಾರೆ. ದಂಪತಿಗಳಿಬ್ಬರು ಕೆಲಸದ ಕಡೆಗೆ ಗಮನ ಕೊಟ್ಟಿದ್ದಾರೆ. ಕಿಶೋರ ಗೌಡ, ಮಂಜುನಾಥ, ವೆಂಕಟೇಗೌಡ ಅವರನ್ನು ಬಂಧಿಸಲಾಗಿದೆ. ಆದರೂ ಘಟನೆಯಾಗಿ ಒಂದು ತಿಂಗಳಾದರೂ ಕಿರುಕುಳ ನಿಂತಿಲ್ಲ ಎನ್ನುತ್ತಾರೆ ಮುನಿಆಂಜಿನಪ್ಪ.

ಹೊಲಕ್ಕೆ ಟ್ರಾಕ್ಟರ್‌ನಲ್ಲಿ ಹೋದಾಗ ಅಡ್ಡ ಹಾಕಿದ್ದಾರೆ. ಮೊನ್ನೆಯೂ ತಡ ಹಾಕಿದ್ದರು. “ಮೇಷ್ಟ್ರು ಚಿಕ್ಕಬಳ್ಳಾಪುರಕ್ಕೆ ಹೋಗ್ತಾನೆ, ಅಲ್ಲಿ ಲಾರಿ ಹತ್ತಿಸಿ ಸಾಯುಸುತ್ತೇವೆ” ಎಂದು ಆರೋಪಿಗಳ ಕಡೆಯವರು ಮಾತನಾಡಿಕೊಳ್ಳುತ್ತಿದ್ದಾರೆ ಊರಿನಲ್ಲಿ ಹಬ್ಬಿರುವ ಮಾತುಗಳಿಂದಾಗಿ ಮುನಿಆಂಜಿನಪ್ಪ ಅವರ ಕುಟುಂಬ ಆತಂಕಿತವಾಗಿದೆ.

ದೊಡ್ಡಬಳ್ಳಾಪುರದಲ್ಲಿ ನಡೆದ ಕುಂದುಕೊರತೆ ಸಭೆ ನಡೆದಾಗಲೂ ಡಿವೈಎಸ್‌ಪಿ ರಂಗಪ್ಪ ಅವರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವುದು ಒಂದಿಷ್ಟು ನಿಟ್ಟುಸಿರು ಬಿಡಲು ಕಾರಣವಾಗಿದೆ. ಆದರೆ ಪ್ರಕರಣ ದಾಖಲಾದ ಮೇಲೂ ಸವರ್ಣಿಯರು ಕಿರುಕುಳ ನೀಡುವುದು ನಿಂತಿಲ್ಲ.

ಸೆ.26ರಂದು ರಸ್ತೆಗೆ ಅಡ್ಡಲಾಗಿ ಟ್ರಾಕ್ಟರ್‌‌ ನಿಲ್ಲಿಸಿ ಕಿರುಕುಳ

ಸೆಪ್ಟೆಂಬರ್‌ 26ರಂದು ದಾರಿಗೆ ಅಡ್ಡಲಾಗಿ ಟ್ರಾಕ್ಟರ್‌ ನಿಲ್ಲಿಸಿ, ಮುನಿಆಂಜಿನಪ್ಪ ಅವರ ಪತ್ನಿ ಅರುಣಾ ಅವರು ದ್ವಿಚಕ್ರ ವಾಹನದಲ್ಲಿ ಹೋಗದಂತೆ ತಡೆದಿರುವುದು. ಸಂಜೆ ಏಳು ಗಂಟೆಯಾದರೂ ಟ್ರಾಕ್ಟರ್‌ ದಾರಿಗೆ ಅಡ್ಡಲಾಗಿರುವುದನ್ನು ಕಾಣಬಹುದು.

ಹೊಲದಲ್ಲಿ ಬೆಳೆದಿರುವ ಹುಲ್ಲನ್ನು ಕೊಯ್ಯಲೆಂದು ಇಬ್ಬರು ಆಳುಗಳೊಂದಿಗೆ ಅರುಣಾ ಅವರು ತಮ್ಮ ಹೊಲಕ್ಕೆ ಹೋಗಿದ್ದಾರೆ. ದ್ವಿಚಕ್ರ ವಾಹನದಲ್ಲಿ ಮರಳಿ ಬರುವಾಗ ಸವರ್ಣೀಯರು ಉದ್ದೇಶಪೂರ್ವಕವಾಗಿ ಟ್ರಾಕ್ಟರ್‌ ಅಡ್ಡ ನಿಲ್ಲಿಸಿದ್ದಾರೆ. ಪತ್ನಿ ವಾಪಸ್‌ ಬರದಿದ್ದಾಗ ಹೊಲದತ್ತ ಮೇಷ್ಟ್ರು ಹೋದಾಗ, ಟ್ರಾಕ್ಟರ್ ಅಡ್ಡಲಾಗಿ ನಿಲ್ಲಿಸಿರುವುದನ್ನು ನೋಡಿ ವಿಚಾರಿಸಿದ್ದಾರೆ. ಟ್ರಾಕ್ಟರ್‌ನಲ್ಲಿ ಡೀಸೆಲ್‌ ಇಲ್ಲ ಎಂದು ಸಬೂಬು ನೀಡಿದ್ದಾರೆ. ಎಷ್ಟು ಹೊತ್ತಾದರೂ ಗಾಡಿ ತೆಗೆಯದಿದ್ದಾಗ ಪೊಲೀಸರಿಗೆ ಕರೆ ಮಾಡಿ ದಂಪತಿ ವಿಚಾರ ತಿಳಿಸಿದ್ದಾರೆ. ಊರಿಗೆ ಧಾವಿಸಿದ ಇನ್‌ಸ್ಪೆಕ್ಟರ್‌ ಸವರ್ಣೀಯರ ದಬ್ಬಾಳಿಕೆಯನ್ನು ಕಂಡು ಎಚ್ಚರಿಕೆ ನೀಡಿದ್ದಾರೆ. ಟ್ರಾಕ್ಟರ್‌‌ನಲ್ಲಿ ಡೀಸೆಲ್‌ ಇರುವುದನ್ನು ಗಮನಿಸಿ, ಸುಳ್ಳು ಹೇಳಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಹೀಗೆ ತಮ್ಮದಲ್ಲದ ತಪ್ಪಿಗೆ ದಲಿತ ದಂಪತಿ ಪ್ರತಿದಿನ ಕಿರುಕುಳ ಅನುಭವಿಸಬೇಕಾಗಿದೆ. ನೋವು, ಭಯ, ಆತಂಕದಲ್ಲಿಯೇ ಬದುಕಬೇಕಿದೆ. ಸರ್ಕಾರಿ ಹುದ್ದೆಯಲ್ಲಿರುವ ಮುನಿಆಂಜಿನಪ್ಪ, ಆಶಾ ಕಾರ್ಯಕರ್ತೆಯಾಗಿ ಸೇವೆ ಒದಗಿಸುತ್ತಿರುವ ಅರುಣಾರವರಿಗೆ ಈ ಪರಿಸ್ಥಿತಿಯಾದರೆ ಉಳಿದ ಅಶಕ್ತರ ಕತೆಯೇನು? ಇಲ್ಲಿನ ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಬುದ್ದಿ ಕಲಿಸಬೇಕಿದೆ. ದಲಿತ ಕುಟುಂಬಗಳಿಗೆ ರಕ್ಷಣೆ ನೀಡಬೇಕಿದೆ.


ಇದನ್ನೂ ಓದಿರಿ: ಉತ್ತರ ಪ್ರದೇಶ: ದಲಿತ ಮಕ್ಕಳಿಗೆ ಪ್ರತ್ಯೇಕ ತಟ್ಟೆ; ಮುಖ್ಯಶಿಕ್ಷಕಿ ಅಮಾನತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮನುವಾದಿಗಳ ಆಡಳಿತದಲ್ಲಿ ದಲಿತರ ಮೇಲಿನ ದಬ್ಬಾಳಿಕೆ ಹೆಚ್ಚಾಗುತ್ತಿದೆ. ಹಲವು ಹೋಳುಗಳಾಗಿರುವ ದಲಿತ ಸಂಗರ್ಶ ಸಮಿತಿ ಸಂಘಟನೆ ಮತ್ತು ಹೋರಾಟವನ್ನು ಮರೆತಿರುವುದು ಇಂತಹ ದುರಂತಕ್ಕೆ ಕಾರಣ. ಇನ್ನಾದರೂ ಡಿ.ಎಸ್‌. ಎಸ್‌. ಎಚ್ಚೆತ್ತುಕೊಳ್ಳಬೇಕು

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...