Homeಕರ್ನಾಟಕನಮ್ಮ ಸಚಿವರಿವರು; ನೇರ ನಿಷ್ಠುರಿ, ಅಹಿಂದದ ಮುಂಚೂಣಿ ರಾಜಕಾರಣಿ ಕ್ಯಾತ್ಸಂದ್ರ ಎನ್. ರಾಜಣ್ಣ

ನಮ್ಮ ಸಚಿವರಿವರು; ನೇರ ನಿಷ್ಠುರಿ, ಅಹಿಂದದ ಮುಂಚೂಣಿ ರಾಜಕಾರಣಿ ಕ್ಯಾತ್ಸಂದ್ರ ಎನ್. ರಾಜಣ್ಣ

- Advertisement -
- Advertisement -

ರಾಜಕಾರಣದಲ್ಲಿ ವಿವಿಧ ವಿಚಾರಗಳಿಗೆ ಸದಾ ಸದ್ದು ಮಾಡುತ್ತಲೇ ಇರುವ ಮುಖಂಡ ಕೆ.ಎನ್.ರಾಜಣ್ಣ. ಒಕ್ಕಲಿಗ-ಲಿಂಗಾಯತ ಸಮುದಾಯಗಳ ರಾಜಕಾರಣದ ಅಖಾಡವಾಗಿರುವ ತುಮಕೂರು ಜಿಲ್ಲೆಯಲ್ಲಿ ಬೇರೆ ಸಮುದಾಯಗಳ ರಾಜಕಾರಣಿಗಳು ಯಶಸ್ವಿಯಾಗುವುದು ಅಷ್ಟು ಸುಲಭದ ಮಾತಲ್ಲ. ಕ್ಯಾತ್ಸಂದ್ರದ ಪರಿಶಿಷ್ಟ ಪಂಗಡ ನಾಯಕ ಸಮುದಾಯದ ನಂಜಪ್ಪ-ಲಕ್ಷ್ಮೀದೇವಮ್ಮ ದಂಪತಿಗೆ ಮಗನಾಗಿ ಜನಿಸಿದ ರಾಜಣ್ಣ ವಿವಿಧ ಹಂತಗಳಲ್ಲಿ ತಮ್ಮ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳುತ್ತಾ ಬಂದವರು. ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸದೆ ಸಾಮಾನ್ಯ ಕ್ಷೇತ್ರದಲ್ಲಿ ಗೆಲ್ಲುವುದನ್ನು ಸವಾಲಾಗಿ ಸ್ವೀಕರಿಸಿ ಮೂರನೇ ಬಾರಿ ಶಾಸಕರಾಗಿದ್ದಾರೆ. ತಳ ಸಮುದಾಯಕ್ಕೆ ಶೆರಿದ 76 ವರ್ಷದ ವಯಸ್ಸಿನ ರಾಜಣ್ಣನವರ ರಾಜಕೀಯ ಜೀವನ ಸಾಹಸಮಯವಾದದ್ದು. ಒಮ್ಮೆ ಸ್ವತಃ ರಾಜಣ್ಣನವರೇ ಒಂದು ಸಭೆಯಲ್ಲಿ ಈ ಕಥೆಯನ್ನು ಹೇಳಿದ್ದರು; ತಮ್ಮ ಚಿಕ್ಕ ವಯಸ್ಸಿನಲ್ಲಿ ಹತ್ತಿರದ ಸಿದ್ಧಗಂಗಾ ಮಠದಲ್ಲಿ ಇಂಗ್ಲಿಷ್ ಪ್ರಬಂಧ ಸ್ಫರ್ಧೆಯಲ್ಲಿ ಮಠದ ಹೊರಗಿನವರಾಗಿ ಭಾಗವಹಿಸಿ ಗೆದ್ದೆದ್ದರಂತೆ; ಇದನ್ನು ಕಂಡರಿತ ಮಠದ ಈ ಹಿಂದಿನ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳು, ಅವರ ತಂದೆಯನ್ನು ಕರೆಯಿಸಿ ಬಾಲಕ ರಾಜಣ್ಣರನ್ನು ಇಂಗ್ಲಿಷ್ ಪಾಠಕ್ಕೆ ಕಳುಹಿಸಿ ಎಂದರಂತೆ; 5-6 ತಿಂಗಳುಗಳ ಕಾಲ ಸ್ವಾಮೀಜಿಯವರೇ ಬೆಳಿಗ್ಗೆ 5 ಗಂಟೆಯಿಂದ ಒಂದು ಗಂಟೆ ಇಂಗ್ಲಿಷ್ ಪಾಠ ಮಾಡಿದ್ದಾರೆಂದು ನೆನಪಿಸಿಕೊಂಡಿದ್ದರು.

ಕ್ಯಾತ್ಸಂದ್ರ ಎಂದರೆ ರೌಡಿಸಂ ಎನ್ನುವ ವಾತಾವರಣವಿರುವ ಕಾಲದಲ್ಲಿ ಇವರು ರಾಜಕಾರಣಿಯಾಗಿ ಹೆಸರು ಮಾಡಿದ ಕೆ.ಎನ್.ರಾಜಣ್ಣ ಸೋಲು-ಗೆಲುವುಗಳ ಏಳುಬೀಳಿನಲ್ಲಿಯೂ ಜನರ ನಡುವೆ ಇದ್ದುಕೊಂಡೇ ಬೆಳೆದವರು ಎಂದರೆ ತಪ್ಪಾಗಲಾರದು. ಮಧುಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರಲಿ ಬಿಡಲಿ, ಪ್ರತಿದಿನ ಬೆಳಿಗ್ಗೆ 6.30ರಿಂದ 8ರವರೆಗೆ ಕ್ಯಾತ್ಸಂದ್ರದ ತಮ್ಮ ಮನೆಗೆ ಕಷ್ಟ ಹೇಳಿಕೊಂಡ ಬಂದ ಜನರನ್ನು ಮಾತಾಡಿಸಿ, ಅಗತ್ಯ ಬಿದ್ದರೆ ಅಧಿಕಾರಿಗಳ ಹತ್ತಿರ ಕಳುಹಿಸಿ, ನಂತರ ಅಲ್ಲಿಂದ ಹೊರಟು ತಮ್ಮ ಕ್ಷೇತ್ರದ ಕಚೇರಿಗೆ ಬಂದು ಅಲ್ಲಿನ ಜನರ ಸಮಸ್ಯೆಗಳನ್ನು ಕೇಳುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ.

ರಾಜಣ್ಣನವರ ರಾಜಕೀಯ ಜೀವನವನ್ನು ಹೆಚ್ಚು ಪ್ರಭಾವಿಸಿದ್ದು ಸಹಕಾರ ಕ್ಷೇತ್ರ. ಸಹಕಾರ ರತ್ನ ಪ್ರಶಸ್ತಿ ದೊರಕಿರುವ ರಾಜಣ್ಣ ಪ್ರಸ್ತುತ ಸಹಕಾರ ಖಾತೆಯನ್ನೇ ವಹಿಸಿಕೊಂಡಿದ್ದಾರೆ. ಜಿಲ್ಲಾ ಡಿಸಿಸಿ ಬ್ಯಾಂಕ್‌ಗೆ ಸತತ ಐದು ಅವಧಿಗೆ ಅಧ್ಯಕ್ಷರಾಗಿರುವ ಇವರು, ರಾಜ್ಯ ಅಪೆಕ್ಸ್ ಬ್ಯಾಂಕ್‌ಗೆ 2001ರಲ್ಲಿ ಮತ್ತು 2015ರಲ್ಲಿ ಎರಡು ಬಾರಿ ಪೂರ್ಣ ಪ್ರಮಾಣದ ಅಧ್ಯಕ್ಷರಾಗಿದ್ದಾರೆ. ಮೂರು ಬಾರಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕರಾಗಿ, 10 ವರ್ಷಗಳ ಕಾಲ ತುಮಕೂರಿನ ತಾಲೂಕು ಕೃಷಿಉತ್ಪನ್ನ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಡಿ.ಎಂ.ನಂಜುಂಡಪ್ಪನವರ ವರದಿಯ ಪ್ರಕಾರ ಅತಿ ಹಿಂದುಳಿದ ತಾಲ್ಲೂಕುಗಳು ಇರುವ ತುಮಕೂರು ಜಿಲ್ಲೆಯಲ್ಲಿ ಸತತ ಬರಗಾಲಕ್ಕೆ ತುತ್ತಾದ ಜನಕ್ಕೆ ಬೇರೆ ಯಾವುದೇ ಆದಾಯದ ಮೂಲಗಳಿಲ್ಲದೆ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಗೆ ವಲಸೆ ಹೋಗುತ್ತಿದ್ದ ಸಮಯದಲ್ಲಿ, ಬಡವರ ತೀರ ಅಗತ್ಯತೆಗಳಿಗೆ ಸಾಲ ಕೊಡಿಸುವ ಮೂಲಕ ಆರ್ಥಿಕವಾಗಿ ನೆರವಾಗಿದ್ದಾರೆ; ಇದರಿಂದಲೇ ರಾಜಣ್ಣನವರು ಹೆಚ್ಚು ಜನಪ್ರಿಯರಾಗಿದ್ದಲ್ಲದೆ, ಡಿಸಿಸಿ ಬ್ಯಾಂಕ್ ಕೂಡ ಗ್ರಾಮೀಣ ಭಾಗದಲ್ಲಿ ಹೆಚ್ಚು ಜನಪ್ರಿಯವಾಯಿತೆನ್ನಬಹುದು.

ರಾಜಣ್ಣ 1996ರಲ್ಲಿ ಕ್ಯಾತ್ಸಂದ್ರ ಪಟ್ಟಣ ಪಂಚಾಯಿತಿಯಿಂದ ಆಯ್ಕೆಯಾದರು. 1998ರಲ್ಲಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಗೆದ್ದು ವಿಧಾನಪರಿಷತ್ ಸದಸ್ಯರಾದರು. ಕಾಂಗ್ರೆಸ್‌ನ ಕೆಲ ನಾಯಕರ ಮೇಲಿನ ಅಸಮಾಧಾನದಿಂದ ಜೆಡಿಎಸ್ ಸೇರಿ ಆಗಿನ ಬೆಳ್ಳಾವಿ ಕ್ಷೇತ್ರದಿಂದ 2004ರಲ್ಲಿ ವಿಧಾನಸಭೆ ಪ್ರವೇಶಿಸಿದರು. ಕ್ಷೇತ್ರ ವಿಭಜನೆಯ ಕಾರಣ ಬೆಳ್ಳಾವಿ ಕ್ಷೇತ್ರವೇ ಇಲ್ಲದಂತಾಯಿತು. ನಂತರ 2008ರಲ್ಲಿ ಮಧುಗಿರಿಯ ಕಡೆಗೆ ಬಂದರು. ಆಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತರು; ನಂತರ ಆಪರೇಷನ್ ಕಮಲಕ್ಕೆ ಸಿಕ್ಕಿದ್ದ ಗೌರಿಶಂಕರ್ ರಾಜಿನಾಮೆ ನೀಡಿದ್ದರಿಂದ ಉಪಚುನಾಚಣೆ ಎದುರಾಯಿತು. 2009ರಲ್ಲಿ ಮತ್ತೆ ಚುನಾವಣೆ ನಡೆದಾಗ ಅನಿತಾ ಕುಮಾರಸ್ವಾಮಿ ಅವರ ವಿರುದ್ಧ ನಿಂತು ಸೋತರಾದರೂ ಸಹ ಕ್ಷೇತ್ರ ಬಿಡದೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದರು. 2013ರಲ್ಲಿ ಮಧುಗಿರಿ ಶಾಸಕರಾಗಿ ಆಯ್ಕೆಯಾದ ರಾಜಣ್ಣ ಕ್ಷೇತ್ರದ ಚಿತ್ರಣವನ್ನು ಬದಲಾಯಿಸುವಲ್ಲಿ ಶ್ರಮಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ಹೆಚ್ಚಿನ ಅನುದಾನವನ್ನು ತಂದು ಮಧುಗಿರಿಯಲ್ಲಿ ವಿವಿಧ ಕಾಮಗಾರಿಗಳನ್ನು ಮಾಡಿಸುವ ಮೂಲಕ ಜನಮನ್ನಣೆ ಗಳಿಸಿದರು.

ಇದನ್ನೂ ಓದಿ: ದೇವೇಗೌಡರ ರಾಜಕೀಯ ತಂತ್ರಗಳ ಎದುರು ಗೆದ್ದ ಶ್ರೇಯ: ಕೃಷಿ ಸಚಿವ ಚಲುವರಾಯಸ್ವಾಮಿಯವರ ಹಾದಿ

ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ಮಧುಗಿರಿ ಮತ್ತು ಪಾವಗಡವನ್ನು ತುಮಕೂರಿನ ಅಧಿಕಾರ ಕೇಂದ್ರ ನಿರ್ಲಕ್ಷಿಸುವುದನ್ನು ಗಮನಿಸಿ ಜಿಲ್ಲಾ ಮಟ್ಟದ ಕಚೇರಿಗಳನ್ನು ಮಧುಗಿರಿಗೆ ತರಲು ಶ್ರಮಿಸಿದರು. ಇವರ ಒತ್ತಾಸೆಯಿಂದ ಆರ್.ಟಿ.ಒ, ಪಿ.ಯು, ಡಿಡಿಪಿಯು ಕಚೇರಿಗಳು ಬಂದವು. ಹೊಸ ನ್ಯಾಯಾಲಯದ ಕಟ್ಟಡವನ್ನು ನಿರ್ಮಿಸಿದರು. ನಾನು ಗೆದ್ದರೆ ಯಾವುದೇ ಕಾರಣಕ್ಕೂ ಇಲ್ಲಿ ಮರಳನ್ನು ತೆಗೆಸುವುದಿಲ್ಲ ಎಂದು ಹೇಳಿದ್ದ ರಾಜಣ್ಣನವರು ಶಾಸಕರಾಗಿದ್ದ ಐದು ವರ್ಷಗಳ ಕಾಲ ನುಡಿದಂತೆ ನಡೆದುಕೊಂಡರು. ಇದೇ ಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ಅಕ್ರಮ ಮರಳು ದಂಧೆಕೋರರು, ಇಸ್ಪೀಟ್ ದಂಧೆ ನಡೆಸುವವರು, ಅಕ್ರಮ ಸಾರಾಯಿ ಮಾರಾಟಗಾರರು ಗುಂಪು ಕಟ್ಟಿಕೊಂಡು ರಾಜಣ್ಣರನ್ನು ಸೋಲಿಸಲು ಶ್ರಮಿಸಿದರು ಎನ್ನುವ ಮಾತು ಸಹ ಇದೆ. 2018ರಲ್ಲಿ ಜೆಡಿಎಸ್‌ನ ವೀರಭದ್ರಯ್ಯನವರ ಜೊತೆಗಿನ ಹಣಾಹಣಿಯಲ್ಲಿ ಸೋತರು. ಸೋತರೂ, ಮಧುಗಿರಿಯಲ್ಲಿಯೇ ಮನೆ ಮಾಡಿ ದಿನನಿತ್ಯ ಜನರ ವಿವಿಧ ಕೆಲಸಗಳಲ್ಲಿ ಭಾಗಿಯಾಗುವುದರ ಮೂಲಕ ಮತ್ತೆ ಜನಪ್ರಿಯ ನಾಯಕರಾಗಿ ಹೊರಹೊಮ್ಮಿ, 2023ರ ಚುನಾವಣೆಯಲ್ಲಿ 35ಸಾವಿರ ಮತಗಳ ಅಂತರದಿಂದ ಗೆದ್ದುಬಂದರು.

ತುಮಕೂರ ಭಾಗದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರೂ ತಮ್ಮ ಗೆಲುವಿಗೆ ರಾಜಣ್ಣನವರ ಬೆಂಬಲದ ಮೊರೆಹೋಗುತ್ತಾರೆಂಬ ಮಾತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ ದೇವೇಗೌಡ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ತುಮಕೂರಿನಿಂದ ಸ್ಫರ್ಧಿಸಿ ಸೋತಿದ್ದರು. ಈ ಸೋಲಿಗೆ ಕೆ.ಎನ್.ಆರ್ ಕಾರಣ ಎಂಬ ಆರೋಪವು ದಟ್ಟವಾಗಿತ್ತು. ಆದರೆ ಮಧುಗಿರಿಯ ಶಾಸಕರಾಗಿದ್ದ ವೀರಭದ್ರಯ್ಯನವರ ನಿರ್ಲಕ್ಷ್ಯವೇ ಇದಕ್ಕೆ ಪ್ರಮುಖ ಕಾರಣವೆಂದು ಇವರ ಅಭಿಮಾನಿಗಳು ಆರೋಪಿಸಿದರು. ಹೀಗೆಯೇ ಬಿಜೆಪಿ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ನನ್ನ ಗೆಲುವಿಗೆ ಕೆ.ಎನ್.ಆರ್ ಕಾರಣ ಎಂದು ಈ ಹಿಂದೆ ಹೇಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ಗಾಬರಿ ಹುಟ್ಟಿಸಿದ್ದರು.

ಎಚ್.ಡಿ. ದೇವೇಗೌಡ

ರಾಜಣ್ಣ ತಮ್ಮ ಮಾತುಗಳಿಂದ ಒಮ್ಮೊಮ್ಮೆ ಮನೆಮಾತಾದರೆ ಮತ್ತೆ ಕೆಲವರ ಸಿಟ್ಟಿಗೂ ಕಾರಣರಾಗುತ್ತಾರೆ. ಇವರ ನೇರ ನಿಷ್ಠುರ ಮಾತುಗಳು ಇವರ ಮೇಲೆ ಮುಗಿಬೀಳುವಂತೆ ಮಾಡಿವೆ. ಶಿರಾ ಶಾಸಕ ಟಿ.ಬಿ.ಜಯಚಂದ್ರರ ವಿರುದ್ಧ ಮಾತನಾಡಿದರೆಂದು ಒಮ್ಮೆ ಒಂದು ಬೃಹತ್ ಪ್ರತಿಭಟನೆ ನಡೆಯುತ್ತಿತ್ತು; ಅದೇ ದಿನ, ರಾಜಣ್ಣನವರಿಂದ ಆಗಬೇಕಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಅನಾವರಣದ ಕಾರ್ಯಕ್ರಮದ ಪೂರ್ವಭಾವಿ ಸಭೆಯೂ ನಡೆಯುತ್ತಿತ್ತು; ಹೀಗೆ ಅವರು ರಾಜಕೀಯವಾಗಿ ಮುನ್ನುಗ್ಗುವ ರೂಪಕ ಅಲ್ಲಿ ಕಾಣಿಸುತ್ತಿತ್ತು. ದೇವೇಗೌಡರನ್ನು ನಾಲ್ಕು ಜನ ಹೊತ್ತುಕೊಂಡು ಹೋಗಬೇಕು ಎಂದು ಹೇಳಿ ಒಕ್ಕಲಿಗ ಸಮುದಾಯದ ಸಿಟ್ಟಿಗೆ ಕಾರಣರಾಗಿದ್ದ ರಾಜಣ್ಣ ನಂತರ ಕ್ಷಮೆ ಕೇಳಿದರು. ಆದರೆ ಕೆಲ ಸಮುದಾಯಗಳಿಗೆ ಮೀಸಲಾತಿ ಒದಗಿಬರಲು ಮತ್ತು ತುಂಬಾ ದೂರದೃಷ್ಟಿ ಇದ್ದ ನಾಯಕ ಎಚ್.ಡಿ. ದೇವೇಗೌಡ ಎಂದು ಕೆಲವು ಸಭೆಗಳಲ್ಲಿ ಕೊಂಡಾಡಿದ್ದರು ಕೂಡ. ಸಮಯ ಸಂದರ್ಭ ನೋಡದೆ ನೇರವಾಗಿ ತಮ್ಮ ವಿರೋಧಿಗಳ ಬಗ್ಗೆ ಮಾತನಾಡುವ ರಾಜಣ್ಣ, ವಿರೋಧಿಗಳಷ್ಟೇ ಅಲ್ಲ ಅವರ ಅಭಿಮಾನಿಗಳು-ಆಪ್ತರು ಸಹ ಇವರು ಏನು ಮಾತಾಡುತ್ತಾರೋ ಎಂಬ ಆತಂಕದಲ್ಲಿರುವಂತಹ ಸ್ಥಿತಿಯನ್ನು ನಿರ್ಮಾಣ ಮಾಡುವಲ್ಲಿ ನಿಷ್ಣಾತರು.

ಸಿದ್ದರಾಮಯ್ಯನವರ ಆಪ್ತರಾಗಿರುವ ರಾಜಣ್ಣ ಜೆಡಿಎಸ್‌ನಿಂದ ಹೊರಬಂದ ಎಂ.ಪಿ.ಪ್ರಕಾಶ್, ಸತೀಶ್ ಜಾರಕಿಹೊಳಿ ತಂಡದಲ್ಲಿ ಒಬ್ಬರಾಗಿದ್ದವರು. ಜನಸಾಮಾನ್ಯರ ಪರವಾಗಿ ಸದಾ ಹೊಸತನದಲ್ಲಿ ಯೋಚಿಸುವ ಇವರು. ಒಂದು ಸಂದರ್ಭದಲ್ಲಿ ಬಡಮಕ್ಕಳು ಚಪ್ಪಲಿ ಇಲ್ಲದೆ ಶಾಲೆಗೆ ಹೋಗುತ್ತಿರುವುದನ್ನು ನೋಡಿದ ರಾಜಣ್ಣನವರು, ಸಿದ್ದರಾಮಯ್ಯನವರ ಬಳಿ ಚರ್ಚೆ ಮಾಡಿ ಶೂಭಾಗ್ಯ ಯೋಜನೆ ಜಾರಿ ಮಾಡಿಸಿದರು. ರಾಜ್ಯದಲ್ಲಿ ಈ ಯೋಜನೆ ಜಾರಿಗೆ ಬರುವ ಮುಂಚೆಯೇ ಪ್ರಾಯೋಗಿಕವಾಗಿ ತಾಲೂಕು ಆಡಳಿತದೊಂದಿಗೆ ಮಾತನಾಡಿ ಎಲ್ಲಾ ಶಾಲೆಗಳಿಗೂ ಶೂ ವಿತರಿಸುವಂತೆ ಮಾಡಿದ್ದರು. ಇಂತಹ ಹಲವು ಹೊಸ ಪತ್ರಗಳನ್ನು ರಾಜಣ್ಣ ನನಗೆ ಕೊಡುತ್ತಾರೆ; ಅವುಗಳಲ್ಲಿ ಹಲವನ್ನು ಜಾರಿ ಮಾಡಿದ್ದೇನೆ ಎಂದು ಮಧುಗಿರಿಗೆ ಬಂದಾಗಲೆಲ್ಲಾ ಸಿದ್ದರಾಮಯ್ಯನವರು ಹೇಳಿದ್ದಾರೆ. 2023ರ ಚುನಾವಣಾ ಪೂರ್ವದಲ್ಲಿ ಸಿದ್ದರಾಮಯ್ಯನವರ 75ನೇ ವರ್ಷದ ಜನುಮದಿನ ಸಲುವಾಗಿ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದ ಸಂಘಟನಾ ಸಮಿತಿಯ ಅಧ್ಯಕ್ಷರಾಗಿ ಯಶಸ್ವಿ ಕೆಲಸ ಮಾಡಿದರು.

ರಾಜಣ್ಣ ಈಗ ಕೇವಲ ಮಧುಗಿರಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ; ರಾಜ್ಯದ ಸಾಕಷ್ಟು ಕಡೆ ಇವರ ಅಭಿಮಾನಿ ಬಳಗವಿದೆ. ಮಧ್ಯ ಕರ್ನಾಟಕದ ಭಾಗದಲ್ಲಿ ಪ್ರಭಾವಿ ಅಹಿಂದ ನಾಯಕರಾಗಿ ರೂಪುಗೊಳ್ಳುತ್ತಿದ್ದಾರೆ. ರೈತರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಡಿಸಿಸಿ ಬ್ಯಾಂಕಿನಿಂದ ರೂಪಿಸಿದ್ದಾರೆ. ಈ ಭಾಗದ ಎಲ್ಲಾ ಜಾತಿ ಧರ್ಮಗಳ ಜನರ ಶ್ರೇಯೋಭಿವೃದ್ಧಿಗೆ ಮತ್ತು ಮುಖ್ಯವಾಗಿ ಹಿಂದುಳಿದವರ ಪರವಾಗಿ ರಾಜಣ್ಣ ಕೆಲಸ ಮಾಡುತ್ತಾ ಬಂದಿದ್ದಾರೆ. ಈಗ ಮಧುಗಿರಿಯನ್ನು ಜಿಲ್ಲೆ ಮಾಡುವ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳನ್ನು ತರುವ ಬಗ್ಗೆ ಹೆಚ್ಚಿನ ನಿರೀಕ್ಷೆಗಳು ಕ್ಷೇತ್ರದ ಜನರಿಗಿವೆ. ಸಚಿವರಾಗಿ ಕ್ಷೇತ್ರಕ್ಕೆ ವಾಪಸ್ ಬಂದ ನಂತರ, ತಳಸಮುದಾಯಗಳ ರಾಜಕಾರಣ ಬಹಳ ಸವಾಲಿನದ್ದು ಎಂದು ರಾಜಣ್ಣನವರು ಹೇಳಿದ್ದಾರೆ. ಹಾಗೂ ದನಿಯಿಲ್ಲದ ಸಮುದಾಯಗಳ ಜನರ ಪ್ರತಿನಿಧಿಯಾಗಿ ಇಂದು ನನ್ನ ಸಚಿವರನ್ನಾಗಿಸಿದ್ದಾರೆ ಎನ್ನುವ ಮಾತುಗಳನ್ನಾಡುವ ಮೂಲಕ, ಅಹಿಂದ ಸಮುದಾಯಗಳ ಪರವಾಗಿ ಕೆಲಸ ಮಾಡಬೇಕಾದ ತಮ್ಮ ಬದ್ಧತೆ ಮತ್ತು ಜವಾಬ್ದಾರಿಯನ್ನು ಸ್ಮರಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...