ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಉತ್ಪಾದಿಸುತ್ತಿರುವ ಇಂಗ್ಲೆಂಡ್ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ಔಷಧ ತಯಾರಿಕಾ ಕಂಪನಿ ತಮ್ಮ ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಶೇಕಡಾ 70.4 ರಷ್ಟು ಪರಿಣಾಮಕಾರಿ ಎಂದು ಸೋಮವಾರ ಹೇಳಿವೆ.
ಬ್ರಿಟನ್ ಮತ್ತು ಬ್ರೆಜಿಲ್‌ನಲ್ಲಿ ನಡೆದ ಕೊನೆಯ ಹಂತದ ಲಸಿಕೆ ಪ್ರಯೋಗಗಳ ಮಾಹಿತಿಯ ಪ್ರಕಾರ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದ ಲಸಿಕೆಯನ್ನು ಒಂದು ತಿಂಗಳ ಅಂತರದಲ್ಲಿ ಎರಡು ಪೂರ್ಣ ಡೋಸ್ ನೀಡಿದಾಗ ಅದು ಶೇಕಡಾ 90 ಪರಿಣಾಮಕಾರಿಯಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
“ಈ ಲಸಿಕೆಯ ಸಾಮರ್ಥ್ಯ ಮತ್ತು ಸುರಕ್ಷತೆಯು COVID-19 ವಿರುದ್ಧದ ಹೋರಾಟದಲ್ಲಿ ಹೆಚ್ಚು ಪರಿಣಾಮಕಾರಿಯಾಗಲಿದೆ. ಜೊತೆಗೆ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯಲ್ಲಿ ತಕ್ಷಣದ ಪರಿಣಾಮ ಬೀರುತ್ತದೆ” ಎಂದು ಅಸ್ಟ್ರಾಜೆನೆಕಾದ ಮುಖ್ಯ ಕಾರ್ಯನಿರ್ವಾಹಕ ಪ್ಯಾಸ್ಕಲ್ ಸೊರಿಯೊಟ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: 2021 ಏಪ್ರಿಲ್ ವೇಳೆಗೆ ಭಾರತದಲ್ಲಿ ಎಲ್ಲರಿಗೂ ಕೊರೊನಾ ಲಸಿಕೆ- ಆದರ್ ಪೂನವಾಲ್ಲಾ
Today marks an important milestone in the fight against #COVID19. Interim data show the #OxfordVaccine is 70.4% effective, & tests on two dose regimens show that it could be 90%, moving us one step closer to supplying it at low cost around the world>> https://t.co/fnHnKSqftT pic.twitter.com/2KYXPxFNz1
— University of Oxford (@UniofOxford) November 23, 2020
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಅಸ್ಟ್ರಾಜೆನೆಕಾ, ಗೇಟ್ಸ್ ಫೌಂಡೇಶನ್ ಮತ್ತು ಗೇವಿ ವಾಕೆನ್ಸಿ ಅಲಯನ್ಸ್ ಕಂಪನಿಗಳು ಪತ್ಯೇಕವಾಗಿ ವಿಶ್ವದಾದ್ಯಂತ ಲಸಿಕೆ ಪೂರೈಕೆಗಾಗಿ ಒಂದು ಬಿಲಿಯನ್ ಕೊರೊನಾ ಲಸಿಕೆಯನ್ನು ಉತ್ಪಾದಿಸುತ್ತಿವೆ.
ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ “ಆಕ್ಸ್‌ಫರ್ಡ್ ಲಸಿಕೆ ಪ್ರಯೋಗಗಳಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿದೆ” ಎಂದು ಹೇಳಿದ್ದಾರೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮಾಡಿರುವ ಮತ್ತೊಂದು ಟ್ವೀಟ್‌ನಲ್ಲಿ ’ಅಸ್ಟ್ರಾಜೆನೆಕಾ ಸಹಭಾಗಿತ್ವದಲ್ಲಿ ಮುಂದಿನ ವರ್ಷದ (2021) ಅಂತ್ಯದ ವೇಳೆಗೆ 3 ಬಿಲಿಯನ್ ಡೋಸ್ ಲಸಿಕೆಯನ್ನು ವಿಶ್ವದಾದ್ಯಂತ ಜನರಿಗೆ ಲಭ್ಯವಾಗುವಂತೆ ಮಾಡುವ ವಿಶ್ವಾಸ ಹೊಂದಿದ್ದೇವೆ. ಆಕ್ಸ್‌ಫರ್ಡ್ ವ್ಯಾಕ್ಸಿನ್ ಅನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಬಹುದು’ ಎಂದು ತಿಳಿಸಿದೆ.
ಇದನ್ನೂ ಓದಿ: ಅಸ್ಟ್ರಾಜೆನೆಕಾ ಕೊರೊನಾ ಲಸಿಕೆ ಸಂಶೋಧನೆಯಲ್ಲಿ ಪ್ರಗತಿ; ಮನುಷ್ಯರ ಮೇಲೆ ಪ್ರಯೋಗ
ಕೊರೊನಾ ಲಸಿಕೆ ತಯಾರಕ ಮತ್ತೊಂದು ಕಂಪನಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನವಾಲ್ಲಾ ಭಾರತದಲ್ಲಿ ಜನಸಾಮಾನ್ಯರಿಗೆ ಮುಂದಿನ ವರ್ಷದ ಏಪ್ರಿಲ್ ವೇಳೆಗೆ ಕೊರೊನಾ ಲಸಿಕೆಯ ವಿತರಣೆ ಮಾಡಲಾಗುತ್ತದೆ ಎಂದಿದ್ದರು.
ಆರೋಗ್ಯ ಕಾರ್ಯಕರ್ತರು ಮತ್ತು ವೃದ್ಧರಿಗೆ ಫೆಬ್ರವರಿ 2021ರ ವೇಳೆಗೆ, ಜನಸಾಮಾನ್ಯರಿಗೆ ಏಪ್ರಿಲ್ ವೇಳೆಗೆ ಲಸಿಕೆ ಸಿಗಲಿದೆ. ಈ ಲಸಿಕೆಯ ಎರಡು ಡೋಸ್ಗಳಿಗೆ ಗರಿಷ್ಠ ಬೆಲೆ 1 ಸಾವಿರ ರೂಪಾಯಿ ಇರಲಿದೆ. ಇದು ಕೊರೊನಾ ಲಸಿಕೆಯ ಅಂತಿಮ ಪ್ರಯೋಗ ಫಲಿತಾಂಶಗಳು ಮತ್ತು ಲಸಿಕೆಗೆ ಅನುಮತಿ ಮೇಲೆ ಅವಲಂಬಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಸಮ್ಮಿಟ್- 2020 ಕಾರ್ಯಕ್ರಮದಲ್ಲಿ ತಿಳಿಸಿದ್ದರು.
ಇನ್ನು ಅಮೆರಿಕಾ ಮೂಲದ ಮಾಡರ್ನಾ ಇಂಕ್ ತನ್ನ ಪ್ರಾಯೋಗಿಕ ಲಸಿಕೆಯ ಪ್ರಾಥಮಿಕ ದತ್ತಾಂಶ ವಿಶ್ಲೇಷಣೆಯ ಆಧಾರದ ಮೇಲೆ 94.5% ಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ನವೆಂಬರ್ 16 ರಂದು ಹೇಳಿದೆ.


