ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರವು ಕರೆದಿದ್ದ ಸರ್ವಪಕ್ಷ ಸಭೆಯಿಂದ ತಮ್ಮ ಪಕ್ಷವನ್ನು ಹೊರಗಿಡಲಾಗುವ ಬಗ್ಗೆ ಗುರುವಾರ AIMIM ನಾಯಕ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಸಂಸತ್ತಿನಲ್ಲಿ ಹೆಚ್ಚಿನ ಸದಸ್ಯರು ಇರುವ ಪಕ್ಷಗಳನ್ನು ಮಾತ್ರ ಸರ್ಕಾರವು ಈ ಸಭೆಯಗೆ ಆಹ್ವಾನಿಸಿದೆ ಎಂದು ಓವೈಸಿ ಆರೋಪಿಸಿದ್ದಾರೆ. ಪಹಲ್ಗಾಮ್ ದಾಳಿ
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರೊಂದಿಗಿನ ಸಂಭಾಷಣೆಯನ್ನು ನೆನಪಿಸಿಕೊಂಡ ಅವರು, ಸಭೆಯನ್ನು “ಹೆಚ್ಚು ದೀರ್ಘವಾಗಿ ನಡೆಸದಂತೆ” ಕನಿಷ್ಠ ಐದರಿಂದ 10 ಸಂಸದರನ್ನು ಹೊಂದಿರುವ ಪಕ್ಷಗಳನ್ನು ಮಾತ್ರ ಸಭೆಗೆ ಆಹ್ವಾನಿಸಲಾಗಿದೆ ಎಂದು ಹೇಳಿದ್ದಾಗಿ ಓವೈಸಿ ಹೇಳಿದ್ದಾರೆ.
“ಕಡಿಮೆ ಸಂಸದರನ್ನು ಹೊಂದಿರುವ ಪಕ್ಷಗಳನ್ನು ಏಕೆ ಆಹ್ವಾನಿಸಬಾರದು ಎಂದು ನಾನು ಕೇಳಿದಾಗ, ಸಭೆ ತುಂಬಾ ದೀರ್ಘವಾಗುತ್ತದೆ ಎಂದು ಅವರು ಹೇಳಿದರು. ಈ ವೇಳೆ ನಾನು ‘ನಮ್ಮಂತಹ ಸಣ್ಣ ಪಕ್ಷಗಳ ಬಗ್ಗೆ ಏನು ಅಭಿಪ್ರಾಯ?’ ಎಂದು ಕೇಳಿದಾಗ ಅವರು ನನ್ನ ಧ್ವನಿ ತುಂಬಾ ಜೋರಾಗಿದೆ ಎಂದು ತಮಾಷೆ ಮಾಡಿದರು.” ಎಂದು ಓವೈಸಿ ಹೇಳಿದ್ದಾರೆ.
ಇಂತಹ ಗಂಭೀರ ಸಭೆಯು ಎಲ್ಲರನ್ನೂ ಒಳಗೊಳ್ಳುವಂತಿರಬೇಕು ಎಂದು ಓವೈಸಿ ಒತ್ತಿ ಹೇಳಿದ್ದಾರೆ. “ಇದು ಬಿಜೆಪಿ ಅಥವಾ ಇನ್ನೊಂದು ಪಕ್ಷದ ಆಂತರಿಕ ಸಭೆಯಲ್ಲ. ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುವ ದೇಶಗಳ ವಿರುದ್ಧ ಬಲವಾದ ಮತ್ತು ಒಗ್ಗಟ್ಟಿನ ಸಂದೇಶವನ್ನು ಕಳುಹಿಸಲು ಇರುವ ಸರ್ವಪಕ್ಷ ಸಭೆಯಾಗಿದೆ. ಎಲ್ಲಾ ಪಕ್ಷಗಳ ಕಳವಳಗಳನ್ನು ಕೇಳಲು ಪ್ರಧಾನಿ ನರೇಂದ್ರ ಮೋದಿ ಹೆಚ್ಚುವರಿಯಾಗಿ ಒಂದಿಷ್ಟು ಗಂಟೆ ಕಳೆಯಲು ಸಾಧ್ಯವಿಲ್ಲವೇ?” ಎಂದು ಅವರು ಕೇಳಿದ್ದಾರೆ.
Regarding the Pahalgam All Party Meeting, I spoke to @KirenRijiju last night. He said they’re thinking of inviting only parties with “5 or 10 MPs.” When I asked why not parties with fewer MPs, he said that the meeting would get “too long.” When I asked “What about us, the smaller…
— Asaduddin Owaisi (@asadowaisi) April 24, 2025
ಯಾವುದೇ ಪಕ್ಷವು ಪ್ರಸ್ತುತ ಸಂಪೂರ್ಣ ಬಹುಮತವನ್ನು ಹೊಂದಿಲ್ಲ ಮತ್ತು ಪಕ್ಷದ ಗಾತ್ರವನ್ನು ಲೆಕ್ಕಿಸದೆ ಎಲ್ಲಾ ಸಂಸದರನ್ನು ಜನರು ಆಯ್ಕೆ ಮಾಡಿದ್ದಾರೆ ಎಂದು ಓವೈಸಿ ಹೇಳಿದ್ದಾರೆ.
“ನಿಮ್ಮ ಸ್ವಂತ ಪಕ್ಷಕ್ಕೆ ಬಹುಮತವಿಲ್ಲ. ಒಬ್ಬ ಸಂಸದರನ್ನು ಹೊಂದಿರುವ ಪಕ್ಷವಾಗಲಿ ಅಥವಾ 100 ಸಂಸದರನ್ನು ಹೊಂದಿರುವ ಪಕ್ಷವಾಗಲಿ, ಎಲ್ಲರೂ ಭಾರತೀಯರಿಂದ ಆಯ್ಕೆಯಾಗಿದ್ದಾರೆ. ಆದ್ದರಿಂದ ಇಂತಹ ಗಂಭೀರ ವಿಷಯದಲ್ಲಿ ಎಲ್ಲರ ಮಾತು ಕೂಡಾ ಕೇಳಬೇಕಿದೆ. ಇದು ರಾಜಕೀಯ ವಿಚಾರವಲ್ಲ, ರಾಷ್ಟ್ರೀಯ ವಿಷಯವಾಗಿದೆ. ಎಲ್ಲರ ಅಭಿಪ್ರಾಯವನ್ನೂ ಕೇಳಬೇಕು.,” ಅವರು ಒತ್ತಿ ಹೇಳಿದ್ದಾರೆ.
ಸಂಸತ್ತಿನಲ್ಲಿ ಪ್ರತಿನಿಧಿಸುವ ಎಲ್ಲಾ ಪಕ್ಷಗಳನ್ನು ಚರ್ಚೆಗಳಲ್ಲಿ ಸೇರಿಸಿಕೊಳ್ಳುವಂತೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ. “ಇದನ್ನು ನಿಜವಾದ ಸರ್ವಪಕ್ಷ ಸಭೆಯನ್ನಾಗಿ ಮಾಡಲು ನಾನು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸುತ್ತೇನೆ. ಸಂಸತ್ತಿನಲ್ಲಿ ಸಂಸದರನ್ನು ಹೊಂದಿರುವ ಪ್ರತಿಯೊಂದು ಪಕ್ಷವನ್ನು ಆಹ್ವಾನಿಸಬೇಕು.” ಎಂದು ಅವರು ಆಗ್ರಹಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಭೆಯಲ್ಲಿ ನಾಯಕರಿಗೆ ಮಾಹಿತಿ ನೀಡುವ ನಿರೀಕ್ಷೆಯಿದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಗಳು ತಿಳಿಸಿವೆ. ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ಸರ್ಕಾರ ಹಲವಾರು ಕ್ರಮಗಳನ್ನು ಘೋಷಿಸುವುದರೊಂದಿಗೆ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೂಡ ಸಭೆಯಲ್ಲಿ ಮಾತನಾಡಲಿದ್ದಾರೆ ಎಂದು ವರದಿಯಾಗಿದೆ.
ಬುಧವಾರ ಸರ್ವಪಕ್ಷ ಸಭೆ ಕರೆಯುವ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ವಿವಿಧ ಪಕ್ಷಗಳನ್ನು ಸಂಪರ್ಕಿಸಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಕ್ರಮವಾಗಿ ಗುರುವಾರ ಸಂಜೆ ನಡೆಯುವ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಸರ್ವಪಕ್ಷ ಸಭೆಯ ಅಧ್ಯಕ್ಷತೆ ವಹಿಸಿ ಎಲ್ಲಾ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಮೂಹಿಕ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಗುರುವಾರ ತಿಳಿಸಿದೆ.
“ವಿಷಯದ ಗಂಭೀರತೆ ಮತ್ತು ದೇಶದ ಮನಸ್ಥಿತಿಯನ್ನು ಪರಿಗಣಿಸಿ, ಇಂದು ಸಂಜೆ 6 ಗಂಟೆಗೆ ನಡೆಯಲಿರುವ ಸರ್ವಪಕ್ಷ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ವಹಿಸಲಿದ್ದಾರೆ ಮತ್ತು ಎಲ್ಲಾ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಮೂಹಿಕ ಸಂಕಲ್ಪವನ್ನು ಕೈಗೊಳ್ಳುತ್ತಾರೆ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿರೀಕ್ಷಿಸುತ್ತದೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಹೇಳಿದ್ದಾರೆ. ಪಹಲ್ಗಾಮ್ ದಾಳಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಪಹಲ್ಗಾಮ್ ಭಯೋತ್ಪಾದಕ ದಾಳಿ: ತುರ್ತು ಕಾರ್ಯಕಾರಿಣಿ ಸಭೆ ನಡೆಸಿದ ಕಾಂಗ್ರೆಸ್
ಪಹಲ್ಗಾಮ್ ಭಯೋತ್ಪಾದಕ ದಾಳಿ: ತುರ್ತು ಕಾರ್ಯಕಾರಿಣಿ ಸಭೆ ನಡೆಸಿದ ಕಾಂಗ್ರೆಸ್

