ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರರ ದಾಳಿಯು ಗಂಭೀರ ಗುಪ್ತಚರ ಮತ್ತು ಭದ್ರತಾ ವೈಫಲ್ಯ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಘಟನೆಗೆ ಕೆಲವು ದಿನಗಳ ಮೊದಲೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ನೆಲೆಸಿರುವ ಭಯೋತ್ಪಾದಕನೊಬ್ಬ ದಾಳಿಯ ಬಗ್ಗೆ ಸುಳಿವು ನೀಡಿದ್ದನು ಎಂದು ಮೂಲಗಳು ಹೇಳಿದ್ದು, ಆದರೆ ಗುಪ್ತಚರ ಸಂಸ್ಥೆಗಳು ಮತ್ತು ಭದ್ರತಾ ಪಡೆಗಳು ಅದರ ಮೇಲೆ ಕ್ರಮ ಕೈಗೊಳ್ಳಲು ವಿಫಲವಾಗಿದ್ದು, ಇದು ಭೀಕರ ದುರಂತಕ್ಕೆ ಕಾರಣವಾಯಿತು ಎಂದು ವರದಿಯಾಗಿದೆ. ಪಹಲ್ಗಾಮ್ ದಾಳಿ
ಪಿಒಕೆ ಮತ್ತು ಪಾಕಿಸ್ತಾನದಲ್ಲಿ ನೆಲೆಗೊಂಡಿದ್ದ ಅಂತರರಾಷ್ಟ್ರೀಯ ನಿರ್ವಾಹಕರು ಕಾಲ ಕಾಲಕ್ಕೆ ಉಗ್ರರಿಗೆ ನಿರ್ದೇಶನಗಳನ್ನು ನೀಡುತ್ತಿದ್ದರು ಎಂದು ವರದಿಯಾಗಿದೆ. ದಾಳಿಯಲ್ಲಿ ಭಾಗಿಯಾಗಿರುವ ಉಗ್ರರು ಶಸ್ತ್ರಾಸ್ತ್ರಗಳನ್ನು ಬಳಸುವಲ್ಲಿ ಉತ್ತಮ ತರಬೇತಿ ಪಡೆದಿದ್ದರು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಜನಪ್ರಿಯ ಪ್ರವಾಸಿ ತಾಣಗಳಾಗಿದ್ದರೂ ಭದ್ರತಾ ಪಡೆಗಳ ನಿಯೋಜನೆ ಕಡಿಮೆ ಇರುವ ಪ್ರದೇಶಗಳ ವಿವರವಾದ ವರದಿಗಳನ್ನು ಒದಗಿಸಿದ್ದರು ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ದಾಳಿಕೋರರು ಹೆಲ್ಮೆಟ್ ಅಳವಡಿಸಿದ ಕ್ಯಾಮೆರಾಗಳನ್ನು ಹೊಂದಿದ್ದರು ಎಂದು ವರದಿಯು ಉಲ್ಲೇಖಸಿದ್ದು, ಇದು ಪ್ರವಾಸಿಗರ ಹತ್ಯಾಕಾಂಡವನ್ನು ರೆಕಾರ್ಡ್ ಮಾಡಲು ಮತ್ತು ದೃಶ್ಯಗಳನ್ನು ಅವರ ಭಯೋತ್ಪಾದಕ ಅಂಗಸಂಸ್ಥೆಗಳಿಗೆ ರವಾನಿಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಬುಧವಾರ ಭದ್ರತಾ ಸಂಸ್ಥೆಗಳು ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಲಾಗಿರುವ ಮೂವರು ವ್ಯಕ್ತಿಗಳ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದೆ. ಆರೋಪಿಗಳನ್ನು ಆಸಿಫ್ ಫೌಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಎಂದು ಗುರುತಿಸಲಾಗಿದ್ದು ಅವರು ಮೂಸಾ, ಯೂನಸ್ ಮತ್ತು ಆಸಿಫ್ ಎಂಬ ಸಂಕೇತನಾಮಗಳನ್ನು ಹೊಂದಿದ್ದಾರೆ ಎನ್ನಲಾಗಿದೆ. ಅವರು ಪೂಂಚ್‌ನಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಘಟನೆಗಳಲ್ಲಿಯೂ ಭಾಗಿಯಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಎ-ತೈಬಾ ಭಯೋತ್ಪಾದಕ ಗುಂಪಿನ ಸಂಘಟನೆಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಮಂಗಳವಾರ ಮಧ್ಯಾಹ್ನ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು. ಲಷ್ಕರ್-ಎ-ತೈಬಾ (ಎಲ್‌ಇಟಿ)ದ ಹಿರಿಯ ಕಮಾಂಡರ್ ಅಲಿಯಾಸ್ ಖಾಲಿದ್ ಎಂದೂ ಕರೆಯಲ್ಪಡುವ ಸೈಫುಲ್ಲಾ ಕಸೂರಿಯನ್ನು ಹತ್ಯಾಕಾಂಡದ ಹಿಂದಿನ ಮಾಸ್ಟರ್ ಮೈಂಡ್ ಎಂದು ಗುಪ್ತಚರ ಸಂಸ್ಥೆಗಳು ಗುರುತಿಸಿವೆ.
ಸೈಫುಲ್ಲಾ ಖಾಲಿದ್ ಪಾಕಿಸ್ತಾನದ ಗುಜ್ರಾನ್‌ವಾಲಾ ನಗರದಿಂದ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ನಡೆದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಇದರಲ್ಲಿ ಲೆಫ್ಟಿನೆಂಟ್ ಗವರ್ನರ್ ಕೂಡ ಭಾಗವಹಿಸಿದ್ದರು. ದೇಶವು ಭಯೋತ್ಪಾದನೆಗೆ ಮಣಿಯುವುದಿಲ್ಲ ಮತ್ತು ಪ್ರವಾಸಿಗರ ಹತ್ಯೆಗೆ ಕಾರಣರಾದವರನ್ನು ಬಿಡಲಾಗುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಮೂಲಗಳ ಪ್ರಕಾರ, ಕೇಂದ್ರವು ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಮತ್ತು ಸರ್ವಪಕ್ಷ ಸಭೆಯನ್ನು ಕರೆದಿದ್ದು, ಈ ಸಂದರ್ಭದಲ್ಲಿ ಸರ್ಕಾರವು ಅಂತರರಾಷ್ಟ್ರೀಯ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಗುರಿಯನ್ನು ಹೊಂದಿದೆ. ಪಹಲ್ಗಾಮ್ ದಾಳಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಗುಪ್ತಚರ ಎಲ್ಲಿದೆ? ಕಣ್ಗಾವಲು ಎಲ್ಲಿದೆ? ಜೇಮ್ಸ್ ಬಾಂಡ್ ದೋವಲ್ ಎಲ್ಲಿದ್ದಾರೆ?: ಪ್ರಿಯಾಂಕ್ ಪ್ರಶ್ನೆ
ಗುಪ್ತಚರ ಎಲ್ಲಿದೆ? ಕಣ್ಗಾವಲು ಎಲ್ಲಿದೆ? ಜೇಮ್ಸ್ ಬಾಂಡ್ ದೋವಲ್ ಎಲ್ಲಿದ್ದಾರೆ?: ಪ್ರಿಯಾಂಕ್ ಪ್ರಶ್ನೆ

