ಸಂಸತ್ತಿನ ಭದ್ರತಾ ಲೋಪಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ನೀತಿಯಿಂದಾಗಿ ಉದ್ಭವಿಸಿದ ನಿರುದ್ಯೋಗವೇ ಕಾರಣ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದು, ಮೋದಿ ಮತ್ತು ಬಿಜೆಪಿ ಸರಕಾರದ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದಾರೆ.
ಭಾರತೀಯರು ಪ್ರಸ್ತುತ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ನಿರುದ್ಯೋಗ. ಪ್ರಧಾನಿ ನರೇಂದ್ರ ಮೋದಿಯವರ ನೀತಿಯಿಂದಾಗಿ ದೇಶದ ನಾಗರಿಕರಿಗೆ ಉದ್ಯೋಗ ಸಿಗುತ್ತಿಲ್ಲ. ನಿರುದ್ಯೋಗವೇ ಭದ್ರತಾ ಲೋಪ ಸಂಭವಿಸಲು ಕಾರಣ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಭದ್ರತಾ ಉಲ್ಲಂಘನೆಯು ನಿಜವಾಗಿಯೂ ಸಂಭವಿಸಿದೆ. ಆದರೆ ಇದು ಏಕೆ ಸಂಭವಿಸಿತು? ಮುಖ್ಯ ವಿಷಯವೆಂದರೆ ನಿರುದ್ಯೋಗ. ಮೋದಿ ಜಿ ಅವರ ನೀತಿಗಳಿಂದಾಗಿ ಭಾರತದ ಜನರಿಗೆ ಉದ್ಯೋಗ ಸಿಗುತ್ತಿಲ್ಲ. ಪ್ರಧಾನಿಯವರ ನೀತಿಗಳಿಂದಾಗಿ ನಿರುದ್ಯೋಗ ಮತ್ತು ಹಣದುಬ್ಬರವು ಸಂಸತ್ತಿನ ಭದ್ರತಾ ಉಲ್ಲಂಘನೆಗೆ ಕಾರಣ ಎಂದು ರಾಹುಲ್ ಗಾಂಧಿ ಹೇಳಿದರು.
ಲೋಕಸಭೆಯ ಚಳಿಗಾಲದ ಅಧಿವೇಶನದ ವೇಳೆ ಇಬ್ಬರು ಅಪರಿಚಿತರು ವೀಕ್ಷಕರ ಗ್ಯಾಲರಿಯಿಂದ ಹಠಾತ್ ಆಗಿ ಸಂಸದರು ಕುಳಿತುಕೊಳ್ಳುವ ಆಸನದ ಕಡೆಗೆ ನುಗ್ಗಿ ಘೋಷಣೆಗಳನ್ನು ಕೂಗುತ್ತಾ ಹಳದಿ ಬಣ್ಣದ ಗ್ಯಾಸ್ ಸ್ಪ್ರೇ ಹರಡಿದ್ದಾರೆ. 2001ರ ಸಂಸತ್ ದಾಳಿಯ 22ನೇ ವಾರ್ಷಿಕದ ದಿನದಂದೇ ಈ ಭದ್ರತಾ ಲೋಪ ಸಂಭವಿಸಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಭದ್ರತೆಯನ್ನು ಉಲ್ಲಂಘಿಸಿದ ಇಬ್ಬರು ವ್ಯಕ್ತಿಗಳಿಗೆ ಸದನದೊಳಗೆ ಪ್ರವೇಶಿಸಲು ಸಂದರ್ಶಕರ ಪಾಸ್‌ಗಳನ್ನು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ನೀಡಿದ್ದರು ಎನ್ನುವುದು ಬಯಲಾಗಿದೆ.
ಘಟನೆಗೆ ಸಂಬಂಧಿಸಿ ಲೋಕಸಭೆಯೊಳಗೆ ಸಾಗರ್ ಶರ್ಮಾ ಮತ್ತು ಡಿ ಮನೋರಂಜನ್, ಸಂಸತ್ತಿನ ಹೊರಗೆ ನೀಲಂ ದೇವಿ ಮತ್ತು ಅಮೋಲ್ ಶಿಂಧೆ ಅವರನ್ನು ಬಂಧಿಸಲಾಗಿತ್ತು. ಆ ಬಳಿಕ ಸಂಸತ್ತಿನ ಭದ್ರತಾ ವ್ಯವಸ್ಥೆಯನ್ನು ಭೇದಿಸುವ ಸಂಚು ರೂಪಿಸಿದ್ದ ಪ್ರಮುಖ ಆರೋಪಿ ಲಲಿತ್ ಝಾನನ್ನು ಬಂಧಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಇಂಟೆಲಿಜೆನ್ಸ್ ತಂಡವು ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ದಾಖಲಿಸಲು ಮುಂದಾಗಿದೆ. ಶುಕ್ರವಾರ ತಡರಾತ್ರಿ ತನಿಖಾಧಿಕಾರಿಗಳು ಆರೋಪಿಗಳನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದು ಉಲ್ಲಂಘನೆಗೆ ಸಂಚು ರೂಪಿಸಿರುವ ಬಗ್ಗೆ ತನಿಖೆಯನ್ನು ನಡೆಸಿದ್ದಾರೆ.
ಇದಲ್ಲದೆ ಲಲಿತ್ ಝಾಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಮಹೇಶ್ ಕುಮ್ವತ್ ಮತ್ತು ಕೈಲಾಶ್ ಅವರಿಗೆ ತನಿಖಾಧಿಕಾರಿಗಳು ಕ್ಲೀನ್ ಚಿಟ್ ನೀಡಿಲ್ಲ. ಅವರ ಸಹಭಾಗಿತ್ವದ ಬಗ್ಗೆ ಕೂಡ ತನಿಖೆ ನಡೆಸುತ್ತಿದ್ದಾರೆ. ಬಂಧಿತ ಐವರು ಆರೋಪಿಗಳನ್ನು 7 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಇದನ್ನು ಓದಿ: ಶುಕ್ರವಾರದ ನಮಾಝ್‌ಗೆ ನಿರಂತರ ಅವಕಾಶ ನಿರಾಕರಣೆ; ಕಣಿವೆ ರಾಜ್ಯದಲ್ಲಿ ಧಾರ್ಮಿಕ ಹಕ್ಕಿನ ಉಲ್ಲಂಘನೆ


