Homeಅಂಕಣಗಳುಒಳಗೊಳ್ಳದ ಮಾದರಿಯ ಸರ್ಕಾರಕ್ಕೆ ವಿದೇಶದಿಂದ ಬಂದೊದಗಿದ ಘಾಸಿ

ಒಳಗೊಳ್ಳದ ಮಾದರಿಯ ಸರ್ಕಾರಕ್ಕೆ ವಿದೇಶದಿಂದ ಬಂದೊದಗಿದ ಘಾಸಿ

- Advertisement -
- Advertisement -

ಭಾರತದ ’ಎಬಿಸಿ’ ಪಕ್ಷದ ’ಅಆಇ ಈಉ’ ಎಂಬ ವ್ಯಕ್ತಿಯೊಬ್ಬ ತನ್ನದಲ್ಲದ ಧರ್ಮವೊಂದರ ಬಗ್ಗೆ ಅಥವಾ ಧರ್ಮವೊಂದರ ಪ್ರವಾದಿಯ ಬಗ್ಗೆ ಅವಹೇಳನಕಾರಿ ಮಾತನಾಡುತ್ತಾರೆ. ಅದೂ ಕೂಡ ಖಾಸಗಿ ನ್ಯೂಸ್ ಚಾನೆಲ್ ಒಂದರ ಲೈವ್ ಕಾರ್ಯಕ್ರಮದಲ್ಲಿ. ವಿಡಿಯೋ ತಿರುಚಲಾಗಿದೆ ಅಥವಾ ಡೀಪ್‌ಫೇಕ್ ಇತ್ಯಾದಿ ಕಾರಣಗಳನ್ನು ನೀಡುವುದಕ್ಕೆ ಸಾಧ್ಯ ಇಲ್ಲ; ಒಂದಷ್ಟು ದಿನ ಆ ಚಾನಲ್ ಆ ವಿಡಿಯೋವನ್ನು ಕಾಣದಂತೆ ಮರೆಮಾಚುತ್ತದೆ; ಆದರೂ ಅದು ಮತ್ತೆ ಸರ್ಫೇಸ್ ಆಗತ್ತೆ. ’ಅಆಇ ಈಉ’ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಕೂಗು ಎದ್ದರೂ ಸರ್ಕಾರ ಮೌನವಾಗಿ ಇರುತ್ತದೆ. 15-20 ದಿನಗಳ ತರುವಾಯ ಯಾವ ಧರ್ಮದ ಬಗ್ಗೆ ಯಾವ ಧರ್ಮದ ಪ್ರವಾದಿಯ ಬಗ್ಗೆ ಅವಮಾನ ಮಾಡಲಾಗಿರುತ್ತದೋ ಅಂತಹ ಧರ್ಮ ಬಹುಸಂಖ್ಯಾತವಾಗಿರುವ ಕೆಲವು ಮಿತ್ರರಾಷ್ಟ್ರಗಳು ಭಾರತದ ಮೇಲೆ ಆರ್ಥಿಕ ದಿಗ್ಭಂಧನದ ಬಗ್ಗೆ ಎಚ್ಚರಿಸಿದ ಕೂಡಲೇ, ’ಎಬಿಸಿ’ ಪಕ್ಷಕ್ಕೆ ಮತ ನಿರಪೇಕ್ಷತೆ ನೆನಪಾಗಿ ’ಅಆಇ ಈಉ’ ವಿರುದ್ಧ ಸರಳ ಕ್ರಮಕ್ಕೆ ಮುಂದಾಗುತ್ತದೆ. ಇಡೀ ದೇಶ ಒಡೆದ ಮನೆಯಾಗಿರುವಾಗ ’ಎಬಿಸಿ’ ಪಕ್ಷದ ವಿರುದ್ಧ ದೇಶವಾಸಿಗಳೇ ತಿರುಗಿಬೀಳುತ್ತಾರೆ!

ಹೀಗೂ ಆಗಬಹುದಿತ್ತೇ? ಅವಹೇಳನಕಾರಿ ಮಾತು ಆಡಿ ಆಗಿದೆ. ಒಂದು ವೇಳೆ ಜವಾಬ್ದಾರಿಯುತ ಮತ್ತು ದೇಶದ ಸಮಸ್ತರನ್ನೂ ಜೊತೆಗೆ ಕೊಂಡೊಯ್ಯುವ ಸರ್ಕಾರ ಇಲ್ಲಿ ಇದ್ದಿದ್ದರೆ ಬೆಸ್ಟ್ ಕೇಸ್ ಸಿನ್ಯಾರಿಯೋ ಏನಾಗುತ್ತಿತ್ತು? ಯಾವುದೋ ’ಎಕ್ಸ್‌ವೈಜಡ್’ ರಾಷ್ಟ್ರ, ಭಾರತದ ಯಾರೋ ಒಬ್ಬ ಅಥವಾ ಒಬ್ಬಳ ಆಕ್ಷೇಪಾರ್ಹ ಹೇಳಿಕೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರೆ, ಅಥವಾ ಭಾರತದ ರಾಯಭಾರಿಯನ್ನು ಪ್ರಶ್ನಿಸಿ ಸಮನ್ಸ್ ನೀಡಿದ್ದರೆ, ಇಲ್ಲಿನ ಸರ್ಕಾರ ಮತ್ತು ವಿರೋಧ ಪಕ್ಷಗಳು ಒಟ್ಟಿಗೆ ನಿಂತು, ಇದು ದೇಶದ ಆಂತರಿಕ ವಿಚಾರ. ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನಮ್ಮಲ್ಲಿ ಒಳ್ಳೆಯ ವ್ಯವಸ್ಥೆ ಇದೆ. ನಮ್ಮ ಆಂತರಿಕ ವಿಚಾರಗಳಲ್ಲಿ ಬೇರೆದೇಶಗಳು ತಲೆಹಾಕುವುದನ್ನು ನಾವು ವಿರೋಧಿಸುತ್ತೇವೆಂದು ಒಕ್ಕೊರಲಿಂದ ಹೇಳಬಹುದಾಗಿತ್ತು. ಹಾಗಾಗುವುದಕ್ಕೆ ಅಂತಹ ವ್ಯವಸ್ಥೆಯನ್ನು ನಂಬಿ, ನಾಗರಿಕರ ನಂಬಿಕೆ ಉಳಿಸುವಂತೆ ಆಡಳಿತ ನಡೆಸುವ ಸರ್ಕಾರ ಇಲ್ಲಿ ಇರಬೇಕಿತ್ತು. ಆದರೆ ಆದದ್ದೇನು ಮತ್ತು ಆಗುತ್ತಿರುವುದೇನು?

ಮೊಹಮದ್ ಜುಬೇರ್

ಟಿವಿ ಚಾನೆಲ್ ಒಂದರ ಚರ್ಚೆಯಲ್ಲಿ ಪ್ರವಾದಿ ಮಹಮದ್ದರ ವಿರುದ್ಧ ವಿಷವುಗುಳಿ, ಅವಹೇಳನ ಮಾಡಿದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಆಗಲೇ ಎಚ್ಚರಿಸುವುದಾಗಲೀ, ಅವರ ವಿದುದ್ಧ ಕ್ರಮ ತೆಗೆದುಕೊಳ್ಳುವುದನ್ನಾಗಲೀ ಸರ್ಕಾರ ಮಾಡಲಿಲ್ಲ. ಅತ್ತ ಬಿಜೆಪಿ ಪಕ್ಷವೂ ಯಾವುದೇ ಕಠಿಣ ಕ್ರಮಕ್ಕೆ ಮುಂದಾಗಲಿಲ್ಲ; ಕೊನೆಪಕ್ಷ ಆ ಹೇಳಿಕೆಯಿಂದ ದೂರಸರಿಯುವ ಬಗ್ಗೆ ಕೂಡ ಗಟ್ಟಿಯಾಗಿ ಮಾತಾಡಲಿಲ್ಲ. ಬದಲಿಗೆ, ಅವಹೇಳನ ಮಾಡಿದಾಕೆಯೇ ಸಂತ್ರಸ್ತಳೆಂದು ಬಿಂಬಿಸುತ್ತಾ, ಆಕೆಯ ವಿರುದ್ಧ ಪ್ರಶ್ನೆ ಎತ್ತಿದವರನ್ನು ’ದೇಶದ್ರೋಹಿ’ಗಳೆಂದು ಕರೆಯುತ್ತಾ ಅಭಿಯಾನ ನಡೆಸಿದವು. ಮುಚ್ಚಿಹಾಕಲಾಗಿದ್ದ ವಿಡಿಯೋವನ್ನು ಹುಡುಕಿ ಎತ್ತಿ ತೋರಿಸಿದ್ದಕ್ಕೆ ಪತ್ರಕರ್ತ, ಆಲ್ಟ್ ನ್ಯೂಸ್‌ನ ಸಹ ಸಂಸ್ಥಾಪಕ ಮೊಹಮದ್ ಜುಬೇರ್ ವಿರುದ್ಧ ಕೀಳುಮಟ್ಟದ ಅಭಿಯಾನ ನಡೆಸಲಾಯಿತು. ಈಗ ಕೆಲವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳು ಭಾರತದ ಮೂಲದ ವ್ಯವಹಾರಕ್ಕೆ ಧಕ್ಕೆಯಾಗುವ ಕ್ರಮ ತೆಗೆದುಕೊಳ್ಳುವ ಮಾತನಾಡಿದಾಗ ಎಚ್ಚೆತ್ತುಕೊಂಡ ಬಿಜೆಪಿ, ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್‌ರನ್ನು (ಇವರು ಅವಹೇಳನಕಾರಿ ಟ್ವೀಟ್ ಮಾಡಿದ್ದರು) ’ಫ್ರಿಂಜ್’ಗಳೆಂದು (ವ್ಯವಸ್ಥೆಯ ಅಂಚಿನಲ್ಲಿದ್ದುಕೊಂಡು ಪುಂಡಾಟಿಕೆ ನಡೆಸುವವರು) ಕರೆದು ಪಕ್ಷದಿಂದ ವಜಾಗೊಳಿಸಿದೆ! ಎಲ್ಲ ಧರ್ಮಗಳನ್ನೂ ಗೌರವಿಸುವುದಾಗಿ ಬಿಜೆಪಿ ಪಕ್ಷ ಮತ್ತು ಸರ್ಕಾರವೆರಡೂ ಈಗ ಹೇಳಿಕೊಳ್ಳುತ್ತಿವೆ. ಆದರೆ ಇವರುಗಳ ಉತ್ತೇಜನದಿಂದ ಸದಾ ದ್ವೇಷದ ಮಾತುಗಳನ್ನಾಡಿಕೊಂಡು ವಿಷವನ್ನುಗುಳುತ್ತಿದ್ದ ಇಂತಹುದೇ ಲಕ್ಷಾಂತರ ಫ್ರಿಂಜ್‌ಗಳನ್ನು ಈ ಕ್ರಮ ಕೋಪೋದ್ರಿಕ್ತಗೊಳಿಸಿದೆ. ಮೇಲಿನ ಅಧ್ಯಾಯದಿಂದ ಯಾವುದೇ ಪಾಠ ಕಲಿಯದೆ, ತಮ್ಮ ದ್ವೇಷದ ಅಭಿಯಾನವನ್ನು ಅವರು ಇನ್ನಷ್ಟು ಚುರುಕುಗೊಳಿಸಿ, ’ಅರೆಸ್ಟ್ ಜುಬೇರ್’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಕತಾರ್ ಏರ್‌ಲೈನ್ಸ್‌ಅನ್ನು ಬಾಯ್‌ಕಾಟ್ ಮಾಡುವುದರಿಂದ ಮೊದಲಾಗಿ ಗಲ್ಫ್ ದೇಶಗಳ ಸೇವೆ ಮತ್ತು ಉತ್ಪನ್ನಗಳನ್ನು ಬಳಸದಿರುವ ಅಭಿಯಾನಕ್ಕೆ ಕರೆಕೊಟ್ಟಿವೆ! ಬಿಜೆಪಿ-ಸಂಘ ಪರಿವಾರ ಹಾಕಿದ ದ್ವೇಷದ ಬೀಜ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಬಿಜೆಪಿ, ಸಂಘ ಪರಿವಾರ ಮತ್ತು ಮೋದಿ ಇನ್ನಾದರೂ ಆತ್ಮಾವಲೋಕನ ಮಾಡಿಕೊಳ್ಳುವರೇ?

ಅಂತಹ ಯಾವುದೇ ಲಕ್ಷಣಗಳು ಸದ್ಯಕ್ಕಂತೂ ಗೋಚರಿಸುತ್ತಿಲ್ಲ; ಕರ್ನಾಟಕದಲ್ಲಿಯೇ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಇದು ಸ್ಪಷ್ಟವಾದೀತು! ಪಠ್ಯಪುಸ್ತಕ ಪರಿಷ್ಕರಣೆಯ ಸಂಬಂಧವಾಗಿ, ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಿಕೊಂಡು ಕಾಲ ಕಳೆಯುತ್ತಿದ್ದ ವ್ಯಕ್ತಿಯೊಬ್ಬನ ಅಧ್ಯಕ್ಷತೆಯಲ್ಲಿ ನಡೆದಿರುವ ಪ್ರಹಸನವನ್ನು ಸಾವಿರಾರು ಚಿಂತಕರು, ಬರಹಗಾರರು ಮತ್ತು ಸಾಮಾನ್ಯ ಜನರು ವಿರೋಧಿಸುತ್ತಿದ್ದಾರೆ. ಪಠ್ಯಪುಸ್ತಕಗಳಲ್ಲಿ ನುಸುಳಿರುವ ತಪ್ಪುಗಳು ಮತ್ತು ಅವೈದಿಕ ಸಮುದಾಯಗಳನ್ನು ನಿಂದಿಸುವ ಬರಹಗಳನ್ನು ಕೈಬಿಟ್ಟು ಚಿಂತಕ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ಪರಿಷ್ಕರಣೆಗೊಂಡಿದ್ದ ಹಳೆಯ ಪಠ್ಯಗಳನ್ನು ಮುಂದುವರೆಸುವಂತೆ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಸರ್ಕಾರದ ಮತ್ತು ಅವರೇ ಈಗ ಹೇಳುತ್ತಿರುವ ಈ ’ಫ್ರಿಂಜ್’ಗಳು ಪ್ರಶ್ನಿಸಿದ ಲೇಖಕರನ್ನು ಬರಗೂರು ಗ್ಯಾಂಗ್ ಎಂದೋ ಕಾಂಗ್ರೆಸ್‌ನ ಚೇಲಾಗಳು ಎಂದೋ ನಿಂದಿಸುವ ಕೆಲಸಕ್ಕೆ ಮುಂದಾಗಿರುವುದು ಕರ್ನಾಟಕದ ದುರಂತ. ಇಂತಹುದೇ ದ್ವೇಷದ ಅಭಿಯಾನ ಮುಂದೊಂದು ದಿನ ’ನೂಪುರ್ ಶರ್ಮಾ ಅಧ್ಯಾಯ’ದಂತಹ ಮತ್ತೊಂದು ಮಗದೊಂದು ದುರಂತಮಯ ವಿದ್ಯಮಾನಕ್ಕೆ ಎಡೆಮಾಡಿಕೊಡುತ್ತದೆಂಬುದು ಅವರಿಗಿನ್ನೂ ಅರ್ಥವಾಗುತ್ತಿಲ್ಲವೇಕೇ?

ಚೀನಾದ ಪುರಾತನ ತತ್ವ ಶಾಸ್ತ್ರಜ್ಞ ಲಾವೋತ್ಸೆಯ ’ದಾವ್ ದ ಜಿಂಗ್’ನ ಸರಳ ಸಾಲುಗಳ ಚಿಂತನಾರ್ಹ ಬರಹಗಳನ್ನು ಇಂದಿಗೂ ಜಗತ್ತಿನಾದ್ಯಂತ ರೆಫರ್ ಮಾಡಲಾಗುತ್ತದೆ. ’ದಾವ್ ದ ಜಿಂಗ್’ನ 58ನೆಯ ಅಧ್ಯಾಯದ ಮೊದಲ ಕೆಲವು ಸಾಲುಗಳು ಇಂತಿವೆ.

“ಸರ್ಕಾರ ತಟಸ್ಥವಾಗಿದ್ದರೆ ಮತ್ತು ನೇರವಾಗಿದ್ದರೆ
ಜನರು ಪ್ರಾಮಾಣಿಕವಾಗಿರುತ್ತಾರೆ ಮತ್ತು ಸರಳವಾಗಿ ತೃಪ್ತರಾಗಿರುತ್ತಾರೆ.
ಸರ್ಕಾರ ತಾರತಮ್ಯವೆಸಗಿ ಎಲ್ಲದರಲ್ಲೂ ಮೂಗು ತೂರಿಸಿದರೆ
ಜನರು ತಂತ್ರಗಾರಿಕೆಯಲ್ಲಿ ಮುಳುಗಿ ಪ್ರಕ್ಷುಬ್ಧರಾಗುತ್ತಾರೆ”

ಈ ಸಾಲುಗಳು ಸದರಿ ಬಿಜೆಪಿ ಕೇಂದ್ರ ಸರ್ಕಾರಕ್ಕೆ, ಕರ್ನಾಟಕ ಸರ್ಕಾರಕ್ಕೆ ಎಷ್ಟು ಚೆನ್ನಾಗಿ ಅನ್ವಯಿಸುತ್ತವೆ ಅನ್ನಿಸದೆ ಇರದು. 2014ರಲ್ಲಿ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಲಿಂದಲೂ ಅದರ ’ಹೆಚ್ಚಿನ ಆಡಳಿತ, ಕಡಿಮೆ ಸರಕಾರ/ಅಧಿಕಾರ’ ಎಂಬ ಘೋಷಣೆ ಘೋಷಣೆಯಾಗಿಯೇ ಉಳಿಯಿತೇ ಹೊರತು ಕಾರ್ಯರೂಪಕ್ಕೆ ಬಂದದ್ದಿಲ್ಲ! ಅದಕ್ಕೂ ಒಂದು ಹಂತ ಮುಂದೆ ಹೋಗಿ ಅಧಿಕಾರದ/ಸರಕಾರದ ದುರುಪಯೋಗ ಕಣ್ಣಿಗೆ ರಾಚಿತು ಮತ್ತು ಮೈಮನಸ್ಸಿಗೆ ಭಾಸವಾಯಿತು. ಸರ್ಕಾರ ತನ್ನದಲ್ಲದ ಕಾರ್ಯವ್ಯಾಪ್ತಿಯಲ್ಲಿಯೂ ಮೂಗುತೂರಿಸುವುದು, ದಬ್ಬಾಳಿಕೆ ನಡೆಸುವುದು ಸರ್ವೇಸಾಮಾನ್ಯವಾಗಿ ಹೋಯಿತು. ಅದರಲ್ಲೂ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಮಾಡಿದ ಹಸ್ತಕ್ಷೇಪ, ಮತ್ತು ಅದರ ಸುತ್ತ ’ಫ್ರಿಂಜ್’ ಎಲಿಮೆಂಟ್‌ಗಳು ನಡೆಸಿದ ದಾಳಿಗಳು ಮುಖ್ಯವಾಹಿನಿಯ ಚರ್ಚೆಗಳಾಗಿ ಹೋದವು. ಅದು ಜೆಎನ್‌ಯು ಮತ್ತಿತರ ವಿಶ್ವವಿದ್ಯಾಲಯದಲ್ಲಿ ಸೃಷ್ಟಿಸಿದ ಅಶಾಂತಿಯಿರಲಿ, ಒಂದು ಧರ್ಮದವರನ್ನು ಗುರಿಯಾಗಿಸಿಕೊಂಡು ಜಾರಿ ಮಾಡಲು ಪ್ರಯತ್ನಿಸಿದ ಸಿಎಎ-ಎನ್‌ಆರ್‌ಸಿ ಮಸೂದೆಗಳಾಗಲೀ, ದೆಹಲಿಯಲ್ಲಿ ನಡೆಸಿದ ಗಲಭೆಗಳಾಗಲೀ, ರಾಜ್ಯ ಪಟ್ಟಿಯಲ್ಲಿ ಬರುವ ಕೃಷಿ ವಿಷಯದಲ್ಲಿ ರೂಪಿಸಿ ಜನವಿರೋಧಿ ಕಾಯ್ದೆಗಳಾಗಲೀ – ಇವ್ಯಾವುವೂ ಜನಸಮಾನ್ಯರು ಬಯಸಿದ್ದ ಅಥವಾ ಎಲ್ಲ ವರ್ಗ-ಸಮುದಾಯಗಳನ್ನು ಪರಿಗಣನೆಗೆ ತೆಗೆದುಕೊಂಡು, ಒಳಗೊಳ್ಳುವ ಕ್ರಮಗಳಾಗಿರಲಿಲ್ಲ. ಈ ಎಲ್ಲ ಸಮಯದಲ್ಲಿ ’ಫ್ರಿಂಜ್’ಗಳು ಹೊಸಹೊಸ ನುಡಿಗಟ್ಟುಗಳನ್ನು ಸೃಷ್ಟಿಸಿ ತಮ್ಮದೇ ದೇಶದ ನಾಗರಿಕರ ಮೇಲೆ ಮುಗಿಬಿದ್ದರು: ಆದು ’ಅರ್ಬನ್ ನಕ್ಸಲ್’ ಎಂದು ದಾಳಿ ಮಾಡಿದ್ದಾಗಲೀ, ’ಗೋಲಿ ಮಾರೋ ಸಾಲೋಂಕೋ’ (ಗುಂಡು ಹೊಡೆದು ಕೊಲ್ಲಿ) ಎಂದು ಗಲಭೆ ಎಬ್ಬಿಸಿದ್ದಾಗಲೀ, ’ಆಂದೋಲನ್ ಜೀವಿಗಳು’ ಎಂದು ಟ್ರೋಲ್ ಮಾಡಿದ್ದಾಗಲೀ, ಇವೆಲ್ಲವಕ್ಕೂ ಅಡೆತಡೆಯೇ ಇಲ್ಲದಂತಾಯಿತು. ಕೆಲವೊಮ್ಮೆ ಸರ್ಕಾರ ಮೂಕ ಪ್ರೇಕ್ಷಕನಾದರೆ, ಇನ್ನೂ ಕೆಲವೊಮ್ಮೆ ಭಾಗಿದಾರನೂ ಆಯಿತು. ಇಂತಹ ಪುಂಡಾಟಿಕೆಯನ್ನು ತಡೆಯುವ, ಅಶಾಂತಿಯನ್ನು ಕೊನೆಗಾಣಿಸುವ, ಇವಕ್ಕೆ ಕುಮ್ಮಕ್ಕು ಕೊಡುವವರ ವಿರುದ್ಧ ಕ್ರಮತೆಗೆದುಕೊಳ್ಳುವ ಯಾವ ಪ್ರಯತ್ನಗಳನ್ನೂ ಅದು ಮಾಡಲಿಲ್ಲ.

ಇನ್ನು ಧರ್ಮದ ವಿಷಯದಲ್ಲಿ, ಸ್ಪಷ್ಟವಾಗಿರುವ Places Of Worship Act-1991 ಹೊರತಾಗಿಯೂ ದೇಶದ ಹತ್ತು ಹಲವು ಮಸೀದಿಗಳಲ್ಲಿ ಎಬ್ಬಿಸುತ್ತಿರುವ ರಾಡಿ, ಮತಾಂತರ ವಿಷಯದಲ್ಲಿ ನಾಗರಿಕ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲು ಮಾಡಿದ ಮಸೂದೆಗಳು, ಹಿಜಾಬ್-ಹಲಾಲ್ ಹೆಸರಿನಲ್ಲಿ ಎಬ್ಬಿಸಿದ ಗಲಭೆ, ಕೊರೊನಾ ವೈರಸ್ ಸಮಯದಲ್ಲಿ ಒಂದು ಕೋಮಿನ ವಿರುದ್ಧವಾಗಿ ನಡೆಸಿದ ಅಪಪ್ರಚಾರ ಹೀಗೆ ಪಟ್ಟಿ ಕೊನೆಯಿಲ್ಲದೆ ಬೆಳೆಯುತ್ತಾ ಹೋಗುತ್ತದೆ. ಇದನ್ನೆಲ್ಲಾ ವಿರೋಧಿಸಿದ ಪ್ರಜ್ಞಾವಂತ ಸಮುದಾಯವನ್ನೇ ಅಪರಾಧೀ ಸ್ಥಾನದಲ್ಲಿ ಕೂರಿಸಲು ಪ್ರಭುತ್ವ ತೆಗೆದುಕೊಂಡ ಕ್ರಮಗಳನ್ನು ಬಳಸಿ, ಅದರಿಂದ ಉತ್ತೇಜನಗೊಂಡು, ಇಂದು ಅವರೇ ಹೆಸರು ಕೊಟ್ಟಿರುವ ಫ್ರಿಂಜ್‌ಗಳು ಇನ್ನೂ ವಿನಾಶಕಾರಿ ಹಾದಿ ಹಿಡಿದವು. ವಿನಾಶವನ್ನೇ ಕೇಕೆ ಹಾಕಿ ಸಂಭ್ರಮಿಸಿದವು. ಇವೆಲ್ಲವುಗಳ ಬದಲಾಗಿ ತಮ್ಮ ನಡೆಗಳನ್ನು ವಿರೋಧಿಸುತ್ತಿದ್ದ ಪ್ರಜ್ಞಾವಂತ ಜನರ-ಸಮುದಾಯಗಳ ಜೊತೆಗೆ ಈ ಸರ್ಕಾರ ಸಂವಾದದಲ್ಲಿ ತೊಡಗಿಸಿಕೊಂಡಿದ್ದರೆ ಪರಿಸ್ಥಿತಿ ಇಂತಹ ವಿನಾಶದ ಹಂತಕ್ಕೆ ಬೆಳೆಯುವುದರಿಂದ ತಪ್ಪಿಸಿಕೊಳ್ಳಬಹುದಿತ್ತೇನೋ!

ಈ ವಿನಾಶಕಾರಿ ಅಭಿಯಾನಗಳು ಇಂದು ಯಾವ ಮಟ್ಟ ಮುಟ್ಟಿವೆ ಅಂದರೆ ’ಫ್ರಿಂಜ್’ ಎಲಿಮೆಂಟ್‌ಗಳನ್ನು ವಜಾ ಮಾಡುವ ಕ್ರಮಗಳು ಮತ್ತಷ್ಟು ಬ್ಯಾಕ್‌ಕ್ಲಾಷ್‌ನ್ನು ಹುಟ್ಟಿಹಾಕುತ್ತಿವೆ. ಇದರ ಭಾಗವಾಗಿವೇ ನೂಪುರ್ ಶರ್ಮಾ ಅಮಾನತ್ತಿನ ನಂತರ ಮೋದಿಯವರ ಫೋಟೋವನ್ನೇ ತಿರುಚಿ, ಅವರನ್ನೇ ವಿರೋಧಿಗಳಂತೆ ಕಂಡು, ಫ್ರಿಂಜ್‌ಗಳು ಟ್ವಿಟ್ಟರ್ ಅಭಿಯಾನವನ್ನು ನಡೆಸುವ ಹಂತಕ್ಕೆ ಇವರ ದ್ವೇಷ ಬೆಳೆದಿದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಈ ’ಫ್ರಿಂಜ್’ಗಳನ್ನು (ರಯ್ತಾಸ್), ಕೈಲಾಗದವರು, ಇವರಿಂದ ’ಹಿಂದೂ ರಾಷ್ಟ್ರ ಕಟ್ಟಲು’ ಸಾಧ್ಯವಿಲ್ಲ ಎಂದು ನಿಂದಿಸುವ ಮತ್ತೊಂದು ಸೆಕ್ಟ್ ಇದೆ. ಅವರು ತಮ್ಮನ್ನು ಟ್ರ್ಯಾಡ್ಸ್ ಎಂದು ಕರೆದುಕೊಳ್ಳುತ್ತಾರೆ. ಈಗ ಇರುವುದನ್ನು ನಾಶಪಡಿಸಿ ಶುದ್ಧ ಮನುಧರ್ಮ ಶಾಸ್ತ್ರದ ಆಧಾರದ ಮೇಲೆ ದೇಶ ಕಟ್ಟುವುದನ್ನು ಪ್ರತಿಪಾದಿಸುವ ಇವರಿಗೆ ರಯ್ತಾಸ್‌ಗಳು ತಂತ್ರ ಗಾರಿಕೆಯಾಗಿ ಅಪ್ಪಿತಪ್ಪಿ ಪ್ರತಿಪಾದಿಸುವ ಮೇಲ್ಮಾತಿನ ಸಮಾನತೆಯೂ ಅಪದ್ಧ! ಇಂತಹ ಸ್ವವಿನಾಶದ ಹಾದಿಗೆ ಹೊರಳಿರುವವರನ್ನು ಒಂದೆರಡು ಅಮಾನತುಗಳು ಎಚ್ಚರಗೊಳಿಸೀತೇ?

ಅಥಾರಿಟೇರಿಯನ್ ದೇಶಗಳಿಂದ ಪಾಠ ಹೇಳಿಸಿಕೊಳ್ಳಬೇಕಾಗಿ ಬಂದ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ

ಇಂದು ಭಾರತಕ್ಕೆ ಪಾಠ ಹೇಳಿದ ಈ ಮುಸ್ಲಿಂ ಬಹುಸಂಖ್ಯಾತವಾದಿ ರಾಷ್ಟ್ರಗಳು ತಮ್ಮ ದೇಶಗಳಲ್ಲಿ ಸರ್ವಾಧಿಕಾರವನ್ನು ಹೊಂದಿರುವಂತಹವು. ಸೌದಿ ಅರೇಬಿಯಾ ’ರಾಜ’ಸರ್ಕಾರ ತನ್ನ ಟೀಕಾಕಾರನಾದ ಪತ್ರಕರ್ತ ಜಮಲ್ ಖಶೋಗ್ಗಿಯವರನ್ನು ಟರ್ಕಿ ರಾಯಭಾರ ಕಚೇರಿಯಲ್ಲಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿದೆ. ತನ್ನ ನಾಗರಿಕರ ಮೇಲೆ ಪೆಗಸಸ್ ಎಂಬ ಮ್ಯಾಲ್‌ವೇರ್ ಪ್ರಯೋಗ ಮಾಡಿದ ಆರೋಪವನ್ನು ಕೂಡ. ಉಳಿದ ರಾಷ್ಟ್ರಗಳು ಕೂಡ ಮಾನವ ಹಕ್ಕುಗಳ ಬಗ್ಗೆ ಸಚ್ಚಾರಿತ್ರ್ಯ ಹೊಂದಿರುವಂತವೇನಲ್ಲ.

ಈಗ ಭಾರತ ಕೂಡ ತಾನು ಪ್ರಜಾಪ್ರಭುತ್ವ ರಾಷ್ಟ್ರ ಎಂಬುದನ್ನೇ ಮರೆತಿರುವಂತೆ ಈ ರಾಷ್ಟ್ರಗಳ ಹಾದಿಯನ್ನೇ ತುಳಿಯುತ್ತಿರುವುದು ಕಳೆದ 8 ವರ್ಷಗಳ ಬೆಳವಣಿಗೆ. ಇಲ್ಲಿಯೂ ಪೆಗಸಸ್ ಅಸ್ತ್ರ ಬಳಕೆ, ರಾಜಕೀಯ ವಿರೋಧಿಗಳ ದಮನ, ಮಾನವ ಹಕ್ಕುಗಳ ಹರಣ ಸಾಮಾನ್ಯವಾಗುತ್ತಾ ಬಂದು ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರಿ ಧೋರಣೆಯ ಅಧಿಕಾರಕ್ಕೆ ಹೊರಳಿರುವುದು ಇಂದು ಅಥಾರಿಟೇರಿಯನ್ ದೇಶಗಳಿಂದ ಪಾಠ ಕೇಳಿಸಿಕೊಳ್ಳಬೇಕಾಗಿ ಬಂದಿರುವುದಕ್ಕೆ ಕಾರಣವಾಗಿದೆ. ಇಂದು ಪ್ರಜಾಪ್ರಭುತ್ವವನ್ನು ಅದರ ನಿಜಾರ್ಥದಲ್ಲಿ
ರಕ್ಷಿಸಿಕೊಳ್ಳುವ, ಸರ್ವಾಧಿಕಾರಿ ದೇಶಗಳಲ್ಲಿ ಪ್ರಜಾಪ್ರಭುತ್ವವನ್ನು ಪ್ರತಿಷ್ಠಾಪಿಸುವ ಕೆಲಸ ಜನಗಳಿಂದಲೇ ಆಗಬೇಕಿದೆ.

ಕರ್ನಾಟಕದಲ್ಲಿ ’ಫ್ರಿಂಜ್’ಗಳು ಕೊನೆಯಾಗುವುದೆಂತು?

ಕರ್ನಾಟಕ ಹಿಂದಿನಿಂದಲೂ ಇದ್ದುದರಲ್ಲಿ ಹೆಚ್ಚಿನ ವಿವೇಕ ಉಳಿಸಿಕೊಂಡಿದ್ದ ರಾಜ್ಯ. ಆದರೆ ಅದಿಂದು ಫ್ರಿಂಜ್‌ಗಳ ಹಾವಳಿಗೆ ಬೆದರಿದೆ. ಫ್ರಿಂಜ್‌ಗಳು ಪಠ್ಯಪುಸ್ತಕ ಪರಿಷ್ಕರಣೆ ಅಧ್ಯಕ್ಷರಾಗಿದ್ದಾರೆ. ಬಸವ ಕಲ್ಯಾಣದಿಂದ ಶ್ರೀರಂಗಪಟ್ಟಣದವರೆಗೆ ಮಸೀದಿ ಮತ್ತು ಮುಸ್ಲಿಂ ಸ್ಮಾರಕಗಳನ್ನು ಗುರಿಯಾಗಿಸಿ ಫ್ರಿಂಜ್‌ಗಳ ಸಕ್ರಿಯರಾಗಿದ್ದಾರೆ. ಹಲಾಲ್-ಹಿಜಾಬ್ ವಿವಾದವನ್ನು ಎಬ್ಬಿಸುವಲ್ಲಿ, ಮುಸ್ಲಿಮರನ್ನು ಜಾತ್ರೆಗಳಿಂದ ನಿರ್ಬಂಧಿಸುವುದರಲ್ಲಿ ಕರ್ನಾಟಕದಲ್ಲಿ ಹಿಂದೆಂದೂ ಕಾಣದ ಕೆಡುಕು ಜಾಗೃತಗೊಂಡಿದೆ. ಯಾವುದೋ ವಿದೇಶಿ ಶಕ್ತಿ ಇವೆಲ್ಲವುಗಳ ಬಗ್ಗೆ ಗಮನ ಹರಿಸಿ ತಾಕೀತು ಮಾಡುತ್ತದೆ ಎಂದು ಕಾಯುವುದಕ್ಕಾಗದ ಪರಿಸ್ಥಿತಿಯಲ್ಲಿ ನಾವಿರುವಾಗ ಕೆಡುಕಿನ ಜಾಗದಲ್ಲಿ ವಿವೇಕವನ್ನು ಜಾಗೃತಗೊಳಿಸುವುದು ಪ್ರಜ್ಞಾವಂತ ನಾಗರಿಕರ ಕೆಲಸವಾಗಿಯೇ ಉಳಿಯುತ್ತದೆ.


ಇದನ್ನೂ ಓದಿ: ಚರಂಡಿಯಲ್ಲಿ ಇರಬೇಕಾದವನನ್ನು ಬಿಸಿ ನಾಗೇಶ್‌ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ಮಾಡಿದ್ದಾರೆ: ಬಿಕೆ ಹರಿಪ್ರಸಾದ್ ವಾಗ್ದಾಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...