ಬಿಹಾರದಲ್ಲಿ ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರಿಗೆ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೋಟಾಗಳನ್ನು 50ರಿಂದ 65%ಕ್ಕೆ ಹೆಚ್ಚಿಸಿ ಜಾರಿಗೆ ತಂದ ಮೀಸಲಾತಿ ಹೆಚ್ಚಳವನ್ನು ಪಾಟ್ನಾ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ನೇತೃತ್ವದ ವಿಭಾಗೀಯ ಪೀಠವು ನವೆಂಬರ್ 2023ರಲ್ಲಿ ನಿತೀಶ್ ಕುಮಾರ್ ಸರ್ಕಾರ ತಂದ ಮೀಸಲಾತಿ ಹೆಚ್ಚಳದ ಕುರಿತ ಅರ್ಜಿ ವಿಚಾರಣೆ ನಡೆಸಿದೆ. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರಾದ ರಿತಿಕಾ ರಾಣಿ, ಮೀಸಲಾತಿ ಹೆಚ್ಚಳಕ್ಕೆ ಕಾನೂನು ತಿದ್ದುಪಡಿಗಳು ಸಂವಿಧಾನದ ಉಲ್ಲಂಘನೆ ಎಂದು ಕೋರ್ಟ್‌ನಲ್ಲಿ ವಾದಿಸಿದ್ದಾರೆ.
ಎರಡೂ ಕಡೆಯ ಅರ್ಜಿಗಳ ವಿಚಾರಣೆಯ ನಂತರ ನ್ಯಾಯಾಲಯವು ತನ್ನ ತೀರ್ಪನ್ನು ಮಾರ್ಚ್‌ನಲ್ಲಿ ಕಾಯ್ದಿರಿಸಿತ್ತು. ಇಂದು ಅಂತಿಮ ಆದೇಶ ಹೊರ ಬಂದಿದೆ ಮತ್ತು ಅರ್ಜಿದಾರರ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿದೆ.
ನಿತೀಶ್ ಕುಮಾರ್ ಸರ್ಕಾರ ಕಳೆದ ವರ್ಷ ನವೆಂಬರ್ 21ರಂದು ರಾಜ್ಯ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಂಚಿತ ಜಾತಿಗಳಾದ ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರಿಗೆ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು 50ರಿಂದ 65%ಕ್ಕೆ ಹೆಚ್ಚಿಸುವ ಗೆಜೆಟ್ ಅಧಿಸೂಚನೆಗಳನ್ನು ಹೊರಡಿಸಿತ್ತು.
ಬಿಹಾರದಲ್ಲಿ ದೇಶದಲ್ಲೇ ಮೊದಲ ಬಾರಿಗೆ ನಿತೀಶ್ ಕುಮಾರ್ ಸರಕಾರವು ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಹೆಚ್ಚು ಹಿಂದುಳಿದ ವರ್ಗದ ಜನರು(ಇಬಿಸಿ), ಹಿಂದುಳಿದ ವರ್ಗದ ಜನರು (ಒಬಿಸಿಗಳು) ಮತ್ತು ಪರಿಶಿಷ್ಟ ಜಾತಿಗಳು (ಎಸ್‌ಸಿ) ಜನರು ಒಟ್ಟು ಬಿಹಾರದ ಜನಸಂಖ್ಯೆಯ 84 ಪ್ರತಿಶತದಷ್ಟು ಇದ್ದಾರೆ ಎಂದು ವರದಿ ತಿಳಿಸಿದೆ. ಈ ವರದಿಯು ಸ್ವಾತಂತ್ರ್ಯಾ ನಂತರ ಬಿಡುಗಡೆಯಾದ ಮೊದಲ ಜಾತಿಗಣತಿ ವರದಿಯಾಗಿದೆ.
ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನು 50% ರಿಂದ 65%ಕ್ಕೆ ಹೆಚ್ಚಿಸುವ ಮಸೂದೆಯನ್ನು ಆ ಬಳಿಕ ಬಿಹಾರ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು.
ಇದನ್ನು ಓದಿ: ಹಿಮಾಚಲ ಪ್ರದೇಶ: ಪ್ರಾಣಿ ವಧೆ ಆರೋಪದಲ್ಲಿ ಮುಸ್ಲಿಂ ವ್ಯಕ್ತಿಯ ಅಂಗಡಿ ಧ್ವಂಸಗೊಳಿಸಿದ ಹಿಂದುತ್ವವಾದಿಗಳು


