ದೇಶಭಕ್ತಿ ಅನ್ನುವುದು ಕಮ್ಯುನಿಸ್ಟರಿಗೆ ಸುಲಭವಾಗಿ ನುಂಗಿಕೊಳ್ಳಲಾಗದ ಮಾತು. ಶ್ರಮಜೀವಿ ವರ್ಗ ಅಂತಾರಾಷ್ಟ್ರೀಯತೆ (proletarian internationalism) ಬುನಾದಿಯಾಗಿರುವ ದೃಷ್ಟಿಕೋನಕ್ಕೆ ದೇಶಭಕ್ತಿ ಸಹಜವಾಗಿಯೇ ಸಂಕುಚಿತವಾಗಿ ಕಾಣಿಸುತ್ತೆ. ದೇಶವೆನ್ನುವುದು ಅವಿಭಕ್ತವಾದ ಏಕಶಿಲಾ ರಚನೆ (monolith) ಎಂಬ ಆಲೋಚನೆ ದೇಶಭಕ್ತಿ ಎಂಬ ಭಾವನೆಯಲ್ಲಿ ಅಂತರ್ಗತವಾಗಿದೆಯಾದ್ದರಿಂದ ಶ್ರಮಜೀವಿ ವರ್ಗ ಪಕ್ಷಪಾತವುಳ್ಳವರಿಗೆ ಅದು ಸಹಜವಾಗಿಯೇ ಶೋಷಕ ವರ್ಗಗಳ ಪಿತೂರಿಯಾಗಿ ಕಾಣಿಸುತ್ತದೆ. ಮೇಲಾಗಿ ’ಭಕ್ತಿ’ ಎಂಬುದು ಫ್ಯೂಡಲ್ ಮಾತು; ಅಷ್ಟೇ ಸಹಜವಾಗಿ ವೈಜ್ಞಾನಿಕ ದೃಷ್ಟಿಕೋನ ಇರುವ ಯಾರಿಗಾದರೂ ಆತಂಕ ಹುಟ್ಟಿಸುತ್ತದೆ. ’ಭಕ್ತಿ’ ಅಂದೊಡನೆಯೇ ಕುರುಡು ವಿಶ್ವಾಸ, ಮೂಢ ಆರಾಧನೆ ಸ್ಫುರಿಸುತ್ತವೆ.
ಆದರೆ, ಕಮ್ಯುನಿಸ್ಟರಿಗೆ ಇಷ್ಟವಿದ್ದರೂ ಇಲ್ಲದಿದ್ದರೂ ಅವರು ಈ ಮಾತನ್ನು ಪದೇಪದೇ ಎದುರುಗೊಳ್ಳದೆ ವಿಧಿಯಿಲ್ಲ. ವಸಾಹತು, ಅರೆವಸಾಹತು ದೇಶಗಳಲ್ಲಿ ರಾಷ್ಟ್ರೀಯ ತತ್ವ ಬಲಿಷ್ಠವಾಗಿರುತ್ತದೆ. ಆದ್ದರಿಂದ ಇಂತಹವರಿಗೆ ’ದೇಶಭಕ್ತಿ’ ಇಲ್ಲವೆನ್ನುವ ಆರೋಪ ತುಂಬಾ ತೀವ್ರತರವಾದದ್ದು. ತೃತೀಯ ಜಗತ್ತಿನ ದೇಶಗಳಲ್ಲಿ ಪ್ರತಿಗಾಮಿ ಶಕ್ತಿಗಳು ಕಮ್ಯುನಿಸ್ಟರ ಮೇಲೆ, ಇತರೆ ಆಧುನಿಕ ಮನೋಭಾವದ (ಉದಾಹರಣೆಗೆ ವಿಜ್ಞಾನಶಾಸ್ತ್ರದ) ಪ್ರತಿನಿಧಿಗಳ ಮೇಲೆ ಈ ಆರೋಪ ಹಾಕಿ ಜನರೊಳಗಿನ ರಾಷ್ಟ್ರೀಯ ತತ್ವವನ್ನು ತಮ್ಮ ಅನುಕೂಲಗಳಿಗಾಗಿ ಬಳಸಿಕೊಳ್ಳುವುದು ಸರ್ವಸಾಧಾರಣವಾಗಿ ನಡೆಯುತ್ತಿರುವ ವಿಷಯ.
ಇಂತಹ ವಾತಾವರಣದಲ್ಲಿ ’ಕಮ್ಯುನಿಸ್ಟರಿಗೆ ದೇಶಭಕ್ತಿ ಇಲ್ಲ’ ಎಂಬ ಆರೋಪವನ್ನು ಅವರು ಎದುರಿಸದೆ ವಿಧಿಯಿಲ್ಲ.
ಈ ಕಾರಣಕ್ಕಾಗಿ ಇಂತಹ ಆರೋಪವನ್ನು ಕಮ್ಯುನಿಸ್ಟರು ಎದುರಿಸುತ್ತಲೇ ಇದ್ದಾರೆ ಹೊರತು, ಮಾಮೂಲಾಗಿ ಅದಕ್ಕೆ ಉತ್ತರವಾಗಿ ಹೇಳುವ ಮಾತುಗಳು ತೃಪ್ತಿಕರವಾದವುಗಳಲ್ಲ. ದೇಶವೆಂದರೆ ಮಣ್ಣಲ್ಲ, ಅಕ್ಸಾಯಿಚಿನ್‌ನಲ್ಲಿರುವ ಬಂಡೆಗಲ್ಲಲ್ಲ, ದೇಶವೆಂದರೆ ಗುರುಜಾಡ ಹೇಳಿದ ವರ್ಗರಹಿತರಾದ ಮನುಷ್ಯರೂ ಅಲ್ಲ; ದೇಶವೆಂದರೆ ಪೀಡಿತ ಜನರು, ಆದ್ದರಿಂದ ದೇಶಭಕ್ತಿ ಅಂದರೆ ಪೀಡಿತ ಜನರ ಪಕ್ಷಪಾತ ಅನ್ನುವುದು ಸದಾ ಕೇಳಿಬರುವ ಉತ್ತರ. ಶ್ರಮಜೀವಿವರ್ಗ ಪಕ್ಷಪಾತವನ್ನೂ, ವೈಜ್ಞಾನಿಕ ವರ್ಗದೃಷ್ಟಿಕೋನವನ್ನೂ ಅಲ್ಲವೆನ್ನಲಾಗದೆ, ಎರಡಕ್ಕೂ ಹೇಗಾದರೂ ಸಮನ್ವಯ ಸಾಧಿಸಬೇಕೆನ್ನುವ ಮಧ್ಯಮ ವರ್ಗದ ತೀವ್ರಗಾಮಿತ್ವದಿಂದ (ಪೆಟಿ ಬೂರ್ಶ್ವಾ ರ್‍ಯಾಡಿಕಲಿಸಂ) ಹುಟ್ಟಿದ ತರ್ಕ ಇದು. ದೇಶ ವಸಾಹತಾಗಿ ಅರೆ-ವಸಾಹತಾಗಿ ಇದ್ದಷ್ಟು ಕಾಲ, ಪೆಟಿ ಬೂರ್ಶ್ವಾ ವರ್ಗಕ್ಕೆ ಸ್ವಲ್ಪ ಕ್ರಾಂತಿಕಾರಿ ಲಕ್ಷಣ ಇದ್ದಷ್ಟು ಕಾಲ ಈ ಪ್ರಯತ್ನ ಮುಂದುವರಿಯುತ್ತಲೇ ಇರುತ್ತದೆ. ಅದನ್ನು ಅಲ್ಲಗಳೆಯಬೇಕಾದ ಅಗತ್ಯವಿಲ್ಲವಾದರೂ, ವಿಷಯವನ್ನು ವೈಜ್ಞಾನಿಕವಾಗಿ (ಅಂದರೆ ಅದರ ಚಾರಿತ್ರಿಕ ಹಿನ್ನೆಲೆಯಲ್ಲಿ) ಅರ್ಥ ಮಾಡಿಕೊಳ್ಳುವುದು ಅಗತ್ಯ.
ಬೂರ್ಶ್ವಾ ರಾಷ್ಟ್ರೀಯವಾದ
ದೇಶಭಕ್ತಿ ಅನ್ನುವುದು ರಾಷ್ಟ್ರೀಯ ತತ್ವದ ಉಗ್ರರೂಪ; ಇಷ್ಟವಿದ್ದರೆ ಅತ್ಯುನ್ನತ ರೂಪ ಅನ್ನಬಹುದು. ಅತಿರೇಕ ರೂಪ ಅಂತಲೂ ಅನ್ನಬಹುದು. ರಾಷ್ಟ್ರಗಳು ಚರಿತ್ರೆಯಲ್ಲಿ ತುಂಬಾ ಪ್ರಾಚೀನವಾದವುಗಳು. ಆದರೆ ರಾಷ್ಟ್ರೀಯ ತತ್ವ ಯೂರೋಪಿನಲ್ಲಿ ಬೂರ್ಶ್ವಾ ಕ್ರಾಂತಿಗಳೊಂದಿಗೆ ಹುಟ್ಟಿತು. ಬಂಡವಾಳಿಗರಿಗೆ ಸುರಕ್ಷಿತವಾದ ಮಾರ್ಕೆಟ್‌ಗಳು ಬೇಕು. ಅವಕಾಶವಿದ್ದರೆ ಪ್ರಪಂಚವ್ಯಾಪಿಯಾಗಿಬೇಕು. ಆದರೆ ಅದು ಸಾಮ್ರಾಜ್ಯಶಾಹಿ ಯುಗ ಬರುವವರೆಗೆ ಸಾಧ್ಯವಿಲ್ಲವಾದ್ದರಿಂದ ಅಲ್ಲಿಯವರೆಗೆ ಕನಿಷ್ಠ ಒಂದು ರಾಷ್ಟ್ರೀಯತೆ ವಾಸಿಸುವ ಪ್ರಾಂತ್ಯದಲ್ಲಾದರೂ ಬೇಕು. ಅಂದರೆ ರಾಷ್ಟ್ರೀಯತೆ ಒಂದು ದೇಶವಾಗಿ ಏರ್ಪಟ್ಟು ಒಂದು ’ಪ್ರಭುತ್ವ’ದ (State) ಕೆಳಗಿರುತ್ತಾ ದೇಶವ್ಯಾಪಿಯಾದ ಒಂದು ಕಾನೂನಿಗೆ ಒಳಪಟ್ಟಿರಬೇಕು. ಆ ಶಾಸನ ಕೂಡ ದೈವದತ್ತವಾಗಿರದೆ ಮನುಷ್ಯರೇ ಮಾರ್ಪಡಿಸಿಕೊಳ್ಳಬಲ್ಲದ್ದು ಬೇಕು. ಅಂದರೆ ಲೌಕಿಕ (secular)ವಾಗಿರಬೇಕು. ಇಲ್ಲವಾದರೆ ನಿರಂತರವಾಗಿ ಬದಲಾಗುವ ಬಂಡವಾಳಿಗರ ಅಗತ್ಯಗಳಿಗೆ ಅನುಗುಣವಾಗಿ ಅದನ್ನು ಬದಲಾಯಿಸಲಿಕ್ಕೆ ಸಾಧ್ಯವಾಗುವುದಿಲ್ಲ.
ಈ ಅಗತ್ಯ ಒಂದೊಂದು ಪಾಶ್ಚಾತ್ಯ ದೇಶದಲ್ಲೂ ಒಂದೊಂದು ರೂಪವನ್ನು ಧರಿಸಿತು. ಅದಕ್ಕೇ ಎಲ್ಲಾ ಪಾಶ್ಚಾತ್ಯ ದೇಶಗಳಲ್ಲೂ ರಾಷ್ಟ್ರೀಯವಾದ ಒಂದೇ ತರನಾಗಿಲ್ಲ. ಆಯಾ ದೇಶಗಳ ಚಾರಿತ್ರಿಕ ಪರಿಸ್ಥಿತಿಗಳನ್ನು ಅನುಸರಿಸಿ ಬದಲಾಗುತ್ತದೆ. ಮುಖ್ಯವಾಗಿ ಎರಡು ವಿಧಗಳು ಕಂಡುಬರುತ್ತವೆ:
ಒಂದು ರಾಷ್ಟ್ರೀಯತೆ ಇಲ್ಲವೇ ದೇಶ ಒಂದೇ ಲೌಕಿಕವಾದ ಶಾಸನದಡಿ ಜೀವಿಸಬೇಕೆಂದರೆ ಪ್ರದೇಶಾತೀತ (extra territorial) ಮತಾಧಿಕಾರವಾಗಲಿ ಅಭಿಮಾನವಾಗಲಿ ಸಲ್ಲದು. ಅಂತಹದೊಂದು ಅಧಿಕಾರವಿದ್ದರೆ ಬೂರ್ಶ್ವಾ ವರ್ಗ ತನ್ನ ಅಗತ್ಯಗಳನ್ನು ಅನುಸರಿಸಿ ಶಾಸನಗಳನ್ನು, ಆಳ್ವಿಕೆಯ ಪದ್ಧತಿಗಳನ್ನು, ಮುಖ್ಯವಾಗಿ ವಿದೇಶಾಂಗ ನೀತಿಯನ್ನು ಮಾರ್ಪಡಿಸಿಕೊಳ್ಳಲಾರದು. ಮತಾಧಿಕಾರ ಕೂಡ ಕೇವಲ ಆಧ್ಯಾತ್ಮಿಕ ರಂಗಕ್ಕೆ ಪರಿಮಿತಗೊಳ್ಳಬೇಕು, ಮಿಕ್ಕ ರಂಗಗಳನ್ನು ಬೂರ್ಶ್ವಾ ವರ್ಗಕ್ಕೆ ಬಿಟ್ಟುಬಿಡಬೇಕು. ಅಂದರೆ ’ಲೌಕಿಕ’ ಆಗಬೇಕು. ಅದಕ್ಕೇ ಮೊಟ್ಟ ಮೊದಲ ಬಂಡವಾಳಿಗ ದೇಶವಾದ ಇಂಗ್ಲೆಂಡ್‌ನಲ್ಲಿ ರಾಷ್ಟ್ರೀಯವಾದವು 8ನೇ ಹೆನ್ರಿ ರಾಜನ ಕಾಲದಿಂದಲೂ ಕ್ಯಾಥೋಲಿಕ್ ಮತವನ್ನು ವಿರೋಧಿಸಿ ಆಂಗ್ಲ ರಾಷ್ಟ್ರೀಯತೆಗೆ ಪರಿಮಿತವಾದ ಆಂಗ್ಲಿಕನ್ ಚರ್ಚ್ (Anglican Church) ರೂಪವನ್ನು ತೆಗೆದುಕೊಂಡಿತು.
ಆದರೆ ದೇಶವ್ಯಾಪಿಯಾಗಿ ಅನ್ವಯವಾಗುವ ಒಂದೇ ಶಾಸನವಿರಬೇಕೆಂದರೆ ಪ್ರದೇಶಾತೀತ ಅಧಿಕಾರಕೇಂದ್ರಗಳಿಗೆ ಪೆಟ್ಟು ಕೊಟ್ಟರೆ ಸಾಲದು, ಅಂತರ್ಗತವಾದ ಸ್ಥಾನಿಕ ಅಧಿಕಾರಕೇಂದ್ರಗಳನ್ನು ಕೂಡಾ ಒಡೆದು ಹಾಕಬೇಕು. ಫ್ಯೂಡಲ್ ಸಮಾಜ ’ಭಗವಂತನ ಆದೇಶ’ಗಳಿಗೆ ಯಾವ ಪ್ರಮಾಣದಲ್ಲಿ ಒಳಪಟ್ಟಿರುತ್ತೋ ಪ್ರತಿ ಗ್ರಾಮದಲ್ಲೂ, ಇಲಾಖೆಯಲ್ಲೂ ಪ್ರಾದೇಶಿಕವಾದ ದೊರೆಗಳ ಅಧಿಕಾರಕ್ಕೆ ಅದೇ ಪ್ರಮಾಣದಲ್ಲಿ ಒಳಪಟ್ಟಿರುತ್ತದೆ. ಅದು ಬೈಬಲ್ ಭಾಷೆಯಲ್ಲಿ ’ಯೆಹೋವಾ ಸಾಮ್ರಾಜ್ಯ’ ಮಾತ್ರವೇ ಅಲ್ಲ, ಪ್ರತಿ ಚಿಲ್ಲರೆ ದೇವರ ಸಾಮ್ರಾಜ್ಯ ಕೂಡಾ. ಈ ಎರಡಕ್ಕೂ ಸಹ ಪೆಟ್ಟು ಕೊಡುತ್ತದೆ ಬೂರ್ಶ್ವಾ ರಾಷ್ಟ್ರೀಯವಾದ. ಒಂದು ಕಡೆ ತನಗೆ ಕೈಯಳತೆಯಲ್ಲಿರುವ ಪ್ರಾಂತ್ಯವನ್ನು ಮಿಕ್ಕ ಪ್ರಪಂಚದಿಂದ ಬೇರ್ಪಡಿಸಿ ಒಂದು ಸಾರ್ವಭೌಮ (Sovereign) ರಾಜ್ಯವನ್ನು ಏರ್ಪಡಿಸುತ್ತದೆ; ಅದೇ ಸಮಯದಲ್ಲಿ ಆ ಪ್ರಾಂತ್ಯಕ್ಕೆ ಅಂತರ್ಗತವಾದ ಸಂಸ್ಥಾನಗಳೆಲ್ಲವನ್ನೂ ಕೂಡ ಒಡೆದು ಹಾಕಿ ಒಂದೇ ಒಂದು ದೇಶವ್ಯಾಪಿಯಾದ ಶಾಸನ ಕೇಂದ್ರವನ್ನು ಏರ್ಪಡಿಸುತ್ತದೆ. ಶಾಸನ ವಿಕೇಂದ್ರೀಕರಣವನ್ನು ಬೂರ್ಶ್ವಾ ತತ್ವ ಎಂದೂ ಸಹಿಸುವುದಿಲ್ಲ.
ಈ ಎರಡನೆಯ ಅಗತ್ಯದಿಂದ ಹುಟ್ಟಿದ್ದು ಎರಡನೇ ವಿಧದ ರಾಷ್ಟ್ರೀಯವಾದ. ಇದು ನಮಗೆ ಇಟಲಿ, ಜರ್ಮನಿಯಲ್ಲೂ ಕಂಡುಬರುತ್ತದೆ. 19ನೇ ಶತಮಾನದ ಮೊದಲ ಹಂತದಲ್ಲಿ ಇವೆರಡು ದೇಶಗಳೂ 30-40 ಸಂಸ್ಥಾನಗಳ ಗುಂಪಾಗಿ ಇದ್ದವು. ಇಟಲಿ ಕುರಿತಾದರೆ ’ಅದು ಒಂದು ದೇಶವಲ್ಲ, ಭೌಗೋಳಿಕ ಹೊರ ತೋರಿಕೆ ಮಾತ್ರವೆ’ (Italy is not a Nation, but a geograpical expression) ಅನ್ನುವ ಮೂದಲಿಕೆಯಿತ್ತು. ಅಂತಹ ಫ್ಯೂಡಲ್ ಸಂಸ್ಥಾನಗಳನ್ನು ಜರ್ಮನಿ, ಇಟಲಿ ದೇಶಗಳಾಗಿ ನಿರ್ಮಿಸಿ ಶಾಸನ ವಿಕೇಂದ್ರೀಕರಣವನ್ನು ತೊಡೆದು ಒಂದೇ ಸಂವಿಧಾನವನ್ನು ರೂಪಗೊಳಿಸಿದ್ದು ಅಲ್ಲಿನ ಬೂರ್ಶ್ವಾ ಕ್ರಾಂತಿಗಳು. ಇಂತಹ ಕ್ರಾಂತಿಗಳಲ್ಲಿ ’ರಾಷ್ಟ್ರೀಯ ಐಕ್ಯತೆ’ (National Integration) ಎಂಬ ಭಾವನೆ ಬಲವಾಗಿ ಮುಂದಕ್ಕೆ ಬರುತ್ತದೆ.
ಈ ಎರಡನೆಯದು, ಅಂದರೆ ಅಂತರ್ಗತವಾದ ಕೇಂದ್ರಗಳನ್ನು ವಿರೋಧಿಸುವ ’ರಾಷ್ಟ್ರೀಯ ಐಕ್ಯತೆ’ ಎಂಬ ಭಾವನೆ ನಮ್ಮ ದೇಶದ ಬೂರ್ಶ್ವಾ ವರ್ಗಕ್ಕೆ ಬಹಳ ಉಪಯುಕ್ತವಾದುದಾಗಿ ಕಂಡು ಬಂದಿದೆ. ಇಟಲಿ, ಜರ್ಮನಿಯೊಳಗೆ ಇದ್ದ ಸಂಸ್ಥಾನಗಳಿಗಿಂತ ಎಷ್ಟೋ ದಶಪ್ರಮಾಣದಲ್ಲಿ ಹೆಚ್ಚಿಗೆ ನಮ್ಮ ದೇಶದಲ್ಲಿದ್ದವು. ಅದಕ್ಕಿಂತ ಮುಖ್ಯವಾಗಿ ಭಿನ್ನ ಜನಾಂಗಗಳು, ಭಾಷೆಗಳು, ಮತಗಳು ಇದ್ದವು, ಇವೆ. ಅವುಗಳೆಲ್ಲವನ್ನೂ ಐಕ್ಯಗೊಳಿಸುವ ಕರ್ತವ್ಯವನ್ನು ಭಾರತದ ದೊಡ್ಡ ಬಂಡವಾಳಿಗ ವರ್ಗ ಬಹಳ ಪ್ರಧಾನವಾಗಿ ತೆಗೆದುಕೊಂಡಿತು. ಅದಕ್ಕೇ ಗಾಂಧಿಯವರಿಗೆ ಯೂರೋಪ್‌ನಲ್ಲಿನ ಸಕಲ ರಾಷ್ಟ್ರೀಯ ನಾಯಕರಿಗಿಂತ ಇಟಲಿಯೊಳಗಿನ ಮಾಜಿನಿ, ಗಾರಿಬಾಲ್ಡಿಯವರು ಮೆಚ್ಚುಗೆಯಾದರೇ ವಿನಃ ಎಂಟನೆಯ ಹೆನ್ರಿಯಲ್ಲ. ಈ ’ರಾಷ್ಟ್ರೀಯ ಐಕ್ಯತೆ’ ತಳಹದಿಯಾಗುಳ್ಳ ರಾಷ್ಟ್ರೀಯವಾದಕ್ಕೆ ಬಹಳ ಬಲವಾದ ಅಭಿವ್ಯಕ್ತೀಕರಣ ರಾಷ್ಟ್ರೀಯ ಸ್ವಯಂ ಸೇವಕ ಸಂಘ (R.S.S). ಅದಕ್ಕೆ ಆರ್.ಎಸ್.ಎಸ್. ಮೊದಲಿನಿಂದಲೂ ಕೂಡ ಪಾಕಿಸ್ತಾನ ನಿರ್ಮಾಣವನ್ನೇ ಅಲ್ಲ, ಭಾಷಾವಾರು ರಾಜ್ಯಗಳನ್ನೂ, ಪ್ರಾಂತೀಯ ಭಾಷೆಗಳಲ್ಲಿ ವಿದ್ಯಾಭ್ಯಾಸವನ್ನೂ, ಸಂಯುಕ್ತ ಸಂವಿಧಾನವನ್ನೂ ತೀವ್ರವಾಗಿ ವಿರೋಧಿಸುತ್ತಾ ಬಂದಿತ್ತು. ಒಕ್ಕೂಟ ತತ್ವವನ್ನು- ಫೆಡರಲಿಸಂಅನ್ನು- ಗೋಲ್ವಾಲ್ಕರ್ ’ವಿಷಬೀಜ’ (Poisonous seed) ಎಂದು ಕರೆದ. ಆರ್.ಎಸ್.ಎಸ್ ಮನ್ನಣೆಯನ್ನು ಪಡೆದ ಏಕೈಕ ಚಳವಳಿ ಅಸ್ಸಾಂ ಚಳವಳಿ. ಅದಕ್ಕೆ ಕಾರಣ ಆ ಸಂಸ್ಥೆ ತನ್ನ ಚಾರಿತ್ರಿಕ ಪ್ರಭಾವವನ್ನು ಕೈಬಿಟ್ಟಿತೆಂದಲ್ಲ; ಅಸ್ಸಾಂ ಚಳವಳಿಯನ್ನು ಮುಸ್ಲಿಂ ವಿರೋಧಿ ಚಳವಳಿಯಾಗಿ ರೂಪಿಸಿ, ಬಹುಶಃ 1947ರಲ್ಲಿ ಕಳೆದುಹೋದ ’ರಾಷ್ಟ್ರೀಯ ಐಕ್ಯತೆ’ಯನ್ನು ಮತ್ತೆ ಪುನರುಜ್ಜೀವಗೊಳಿಸಬಹುದೆಂಬ ದುರಾಸೆ ಮಾತ್ರವೇ.
ಆರ್.ಎಸ್.ಎಸ್
ಈ ಮಟ್ಟಿಗೆ ಆರ್.ಎಸ್.ಎಸ್‌ಗೂ ಕಾಂಗ್ರೆಸ್‌ಗೂ ದೊಡ್ಡ ವ್ಯತ್ಯಾಸವಿಲ್ಲವಾದರೂ ಆರ್.ಎಸ್.ಎಸ್‌ಗೆ ಇರುವ ಪ್ರತ್ಯೇಕತೆ ಏನೆಂದರೆ, ಹಿಂದುಳಿದ ದೇಶಗಳ ಬೂರ್ಶ್ವಾ ವರ್ಗಗಳಿಗೆ ಕೇವಲ ಶಾಸನ ಸಂಬಂಧಿಯಾದ ಐಕ್ಯತೆ ಸಾಲದೆಂಬುದನ್ನು ಗುರುತಿಸುವುದು. ರಾಷ್ಟ್ರೀಯ ಭಾವ ಜನರ ನರನರಗಳಲ್ಲೂ ’ಜೀರ್ಣವಾಗಿ ಹೋಗಿ’ ’ಶುದ್ಧ ರಾಷ್ಟ್ರೀಯವಾದ’ (ಇದು ’ನವ ಭಾರತಿ’ ಪರಿಭಾಷೆ, ನನ್ನದಲ್ಲ) ಅಧಿಕಾರ ತತ್ವವಾದರೇನೇ ಎರಡು ಶತಮಾನಗಳಷ್ಟು ತಡವಾಗಿ ಅಧಿಕಾರಕ್ಕೆ ಬಂದ ಟಾಟಾ, ಬಿರ್ಲಾಗಳು ರಾಕ್‌ಫೆಲ್ಲರ್, ಫೋರ್ಡ್‌ಗಳೊಂದಿಗೆ ಪೈಪೋಟಿ ನಡೆಸಬಲ್ಲರು ಎಂಬುದು ಅದರ ನಂಬಿಕೆ. ಬಂಡವಾಳಿಗರ ಸ್ಪರ್ಧೆಯಲ್ಲಿ ಮುಂದಿರುವವನು ಸ್ವಲ್ಪ ಉದಾರವಾಗಿರಬಲ್ಲ, ಕಾರ್ಮಿಕರು ’ರಾಷ್ಟ್ರ ಶ್ರೇಯಸ್ಸನ್ನು ಮರೆತುಹೋಗಿ ತಮ್ಮ ವರ್ಗ ಶ್ರೇಯಸ್ಸಿಗಾಗಿ ಹರತಾಳ ಮಾಡಿದರೆ ಒಂದು ಸಾರಿಯಲ್ಲದಿದ್ದರೆ ಒಂದು ಸಾರಿ ಸಹಿಸಬಲ್ಲ ಹೊರತು, ಹಿಂದುಳಿದ ಬೂರ್ಶ್ವಾ ವರ್ಗಕ್ಕೆ ಈ ಔದಾರ್ಯ ಸಾಧ್ಯವಿಲ್ಲ. ’ರಾಷ್ಟ್ರ’ದ ಹೆಸರಿನಲ್ಲಿ ಜನರ ಅಗತ್ಯಗಳನ್ನು ತನ್ನ ಅಗತ್ಯಗಳಿಗೆ ಅಳವಡಿಸಿಕೊಂಡ ಹೊರತು ತನಗಿಂತ ಮುಂದಿರುವ ಬಂಡವಾಳಿಗರೊಂದಿಗೆ ತಾನು ಸ್ಪರ್ಧೆಗಿಳಿಯಲಾಗದೆಂದು ಗುರ್ತಿಸುತ್ತದೆ. ಅದನ್ನೇ ಫ್ಯಾಸಿಸಂ ಅನ್ನುತ್ತೇವೆ. ಪ್ರಥಮ ಪ್ರಪಂಚ ಯುದ್ಧದಲ್ಲಿ ಪ್ರಚಂಡ ಸೋಲನುಭವಿಸಿದ ಜರ್ಮನಿಯ ಬೂರ್ಶ್ವಾ ವರ್ಗ ಮತ್ತೆ ಬಲವನ್ನು ಗಳಿಸಬೇಕೆಂದರೆ ಮೊದಲು ಕಾರ್ಮಿಕರನ್ನು ತುಳಿಯಬೇಕೆಂದು ಗುರುತಿಸಿ ಹಿಟ್ಲರ್ ’ಜರ್ಮನ್ ರಾಷ್ಟ್ರ’ದ ಹೆಸರಿನಲ್ಲಿ ಸೋಷಲಿಸ್ಟರನ್ನೂ, ಕಮ್ಯುನಿಸ್ಟರನ್ನೂ, ಕಾರ್ಮಿಕ ವರ್ಗ ಕಾರ್ಯಕರ್ತರನ್ನೂ ಫ್ಯಾಸಿಸ್ಟ್ ದಾಳಿಗೆ ಗುರಿಯಾಗಿಸಿದ. ’ಫ್ಯಾಸಿಸಂ’ ಯಾವಾಗಲೂ ರಾಷ್ಟ್ರದ ಹೆಸರಿನಲ್ಲಿ ಬೂರ್ಶ್ವಾ ವರ್ಗದ ಅಗತ್ಯಗಳನ್ನು ಸಂರಕ್ಷಿಸುತ್ತದೆ. ಈ ದೃಷ್ಟಿಯಿಂದ ಆರ್.ಎಸ್.ಎಸ್. ಸಿದ್ಧಾಂತಕರ್ತ ಗೋಲ್ವಾಲ್ಕರ್ ಆಲೋಚನೆಗಳನ್ನು ಪರಿಶೀಲಿಸಿದರೆ ಆ ಸಂಸ್ಥೆಯ ಸ್ವಭಾವವೇನೋ ಸ್ಪಷ್ಟವಾಗುತ್ತದೆ. ಆರ್.ಎಸ್.ಎಸ್. ಸಂಸ್ಥಾಪಕ ಹೆಡ್ಗೆವಾರ್ ಕುರಿತು ಹೇಳುತ್ತಾ ಗೋಲ್ವಾಲ್ಕರ್ ಈ ರೀತಿ ಹೇಳುತ್ತಾನೆ:

“ಡಾ. ಹೆಡ್ಗೆವಾರ್ ಚಿಕ್ಕಂದಿನಿಂದಲೂ ದೇಶಸೇವೆಗೆ ಅಂಕಿತವಾಗಿ ಮಾತೃಭೂಮಿಯ ವಿಮುಕ್ತಿಗಾಗಿ ಆಗ ನಡೆಯುತ್ತಿದ್ದ ವಿವಿಧ ಚಳವಳಿಗಳಲ್ಲಿ ಪಾಲ್ಗೊಂಡರು. ಕೆಲವು ಕಾಲ ಕ್ರಾಂತಿಕಾರಿ ಚಳವಳಿಯಲ್ಲಿ (ಇಲ್ಲಿ ಕ್ರಾಂತಿಕಾರಿ ಚಳವಳಿಯೆಂದರೆ ಆಗ ಬಂಗಾಲದಲ್ಲಿ ನಡೆದ ’ಟೆರಟರಿಸ್ಟ್’ ಚಳವಳಿಯಂತಹ ಸಶಸ್ತ್ರ ದಂಗೆ ಎಂದರ್ಥ) ಪಾಲ್ಗೊಂಡು ತರುವಾಯ ಕಾಂಗ್ರೆಸ್ ಪಾರ್ಟಿ ಚಳವಳಿಯೊಳಗೆ ವಿಧಾಯಕ ಕಾರ್ಯಕ್ರಮಗಳೊಳಕ್ಕೆ ಇಳಿದರು.
“ಆದರೆ ಈ ಚಳವಳಿಗಳೆಲ್ಲವೂ ಕೇವಲ ಬ್ರಿಟಿಷರನ್ನು ಹೊಡೆದೋಡಿಸುವುದನ್ನಷ್ಟೇ ತಮ್ಮ ಗುರಿಯಾಗಿ ಇಟ್ಟುಕೊಂಡಿದ್ದಾವೆಂದು, ಅದನ್ನೇ ರಾಷ್ಟ್ರೀಯ ಭಾವಕ್ಕೆ ಸಮವಾಗಿ ಪರಿಗಣಿಸುತ್ತಿವೆಯೆಂದು ಗುರುತಿಸಿದರು. ಆಗಿನ ನಾಯಕರನೇಕರ ದೃಷ್ಟಿಯಲ್ಲಿ ’ಬ್ರಿಟಿಷ್ ವಿರೋಧ’ ’ರಾಷ್ಟ್ರೀಯವಾದ’ ಎರಡೂ ಒಂದೇ, ಇಂತಹ ಮೇಲ್‌ಮೇಲಿನ ಆಲೋಚನೆ ನಮ್ಮ ಸಂಸ್ಥಾಪಕರಿಗೆ ಅಸಂತೃಪ್ತಿಯುಂಟುಮಾಡಿತು. ’ರಾಷ್ಟ್ರ’ ಎಂಬುದು ಸಕಾರಾತ್ಮಕ (positive) ಭಾವನೆ ಎಂದು, ಒಬ್ಬರನ್ನು ವಿರೋಧಿಸುವದರ ಮೇಲೆ ಆಧಾರಪಟ್ಟಿರುವುದಲ್ಲ ಎಂದು ನಮ್ಮ ರಾಷ್ಟ್ರ ಚರಿತ್ರೆಯೊಂದಿಗೆ ಅವರಿಗಿದ್ದ ಆಳವಾದ ಪರಿಚಯದಿಂದಾಗಿ ಅವರು ತಿಳಿದುಕೊಂಡರು. ಅಷ್ಟೇಅಲ್ಲದೆ ನಮ್ಮ ರಾಷ್ಟ್ರದ ಗುರಿಯಾಗಿ ಆದಿಯಿಂದಲೂ ಭಾವಿಸಲ್ಪಡುತ್ತಿರುವುದನ್ನು ಯಾವ ಮಾತ್ರಕ್ಕೆ ಸಡಿಲಿಸಿದರೂ ಉಪದ್ರವಕ್ಕೆ ದಾರಿಯಾಗುತ್ತದೆಂದು ಕೂಡಾ ಅವರಿಗೆ ಗೊತ್ತಿತ್ತು”
ಇದರಲ್ಲಿ ಕೊನೆಯ ವಾಕ್ಯ ತುಂಬಾ ಮುಖ್ಯವಾದುದು. ಅದರಲ್ಲಿ ಹೆಸರಿಸಿದ ಉಪದ್ರವವನ್ನು ನಿವಾರಿಸುವ ಪ್ರಯತ್ನ, ವ್ಯಾಖ್ಯಾನಗಳಿಂದ ಸಂಘಟನೆಯವರೆಗೂ ಸಾಗುತ್ತದೆ. ಗೋಲ್ವಾಲ್ಕರ್ ದೃಷ್ಟಿಯಲ್ಲಿ ಒಂದು ರಾಷ್ಟ್ರಕ್ಕೆ ಸೇರಿರುವುದೆಂದರೆ ಕೇವಲ ಒಂದೇ ಪ್ರಾಂತ್ಯದಲ್ಲಿ ನಿವಾರಿಸುವುದೋ, ಒಂದೇ ಭಾಷೆಯನ್ನು ಮಾತನಾಡುವುದೋ ಅಲ್ಲ. ಪ್ರಾದೇಶಿಕ ರಾಷ್ಟ್ರೀಯತಾವಾದವನ್ನು (territorial nationalism) ಆತ ಖಡಾಖಂಡಿತವಾಗಿ ವಿರೋಧಿಸುತ್ತಾನೆ. ಒಂದೇ ಪ್ರಾಂತ್ಯದಲ್ಲಿ ನಿವಾರಿಸಿದರೆ ಸಾಲದು, ಒಂದೇ ದೃಷ್ಟಿಕೋನವನ್ನು ಅನುಮೋದಿಸಬೇಕು, “ಒಂದೇ ಜೀವಿತಾಶಯ, ಸಂಸ್ಕೃತಿ, ಭಾವನೆಗಳು, ನಂಬಿಕೆಗಳು, ಸಂಪ್ರದಾಯಗಳು” ಹೊಂದಿರಬೇಕು. ಎಲ್ಲರಿಗೂ ಒಂದೇ ಮಿತ್ರಭಾವ-ಶತ್ರು ಭಾವ, ಒಂದೇ ಸಂಪ್ರದಾಯ, ಜೀವಿತಾಶಯಗಳಿದ್ದು ಎಲ್ಲರ ಆಸೆಗಳು ಅಗತ್ಯಗಳು ಒಂದೇ ಅವಿಭಾಜ್ಯವಾದ ಮೊತ್ತವಾಗಿ ರೂಪುಗೊಂಡಿದ್ದರೆ ಆಗಲೇ ಅದೊಂದು “ರಾಷ್ಟ್ರ”ವಾಗುತ್ತದೆ. ಅಂತಹ ಒಂದು ರಾಷ್ಟ್ರ ಹಿಂದೂ ರಾಷ್ಟ್ರ, ಅದೇ ಗೋಲ್ವಾಲ್ಕರ್ ದೃಷ್ಟಿಯಲ್ಲಿ ಭಾರತೀಯತೆ. ಆ ಭಾರತೀಯತೆಗೆ ಮುಸ್ಲಿಮರೂ ಕ್ರಿಶ್ಚಿಯನ್ನರೂ ಸೇರಬಯಸಿದರೆ ಅವರು ಇಲ್ಲಿನ ನಿವಾಸಿಗಳಾದರೆ ಸಾಲದು, ಅವರ ಪೂರ್ವಿಕರು ಆದಿಯಿಂದಲೂ ಸಹ ಇಲ್ಲಿನ ನಿವಾಸಿಗಳಾಗಿದ್ದರೂ ಸಾಲದು, ಅವರು ಹಿಂದೂ ಸಂಪ್ರದಾಯಗಳನ್ನು, ದೃಷ್ಟಿಕೋನಗಳನ್ನು, ಆಶಯಗಳನ್ನು ಅಂಗೀಕರಿಸಬೇಕು. ರಾಮನನ್ನು, ಕೃಷ್ಣನನ್ನು, ವೇದಾಂತವನ್ನು ಅನುಮೋದಿಸಬೇಕು. ಹಿಂದೂಗಳೆಲ್ಲರ ಜೀವಿತಾಶಯವಾಗಿ ವೇದಾಂತಿಗಳು (ಏಕಪಕ್ಷೀಯವಾಗೇ ಆಗಿರಲಿ) ತೀರ್ಮಾನಿಸಿದ ಮೋಕ್ಷವನ್ನು ಇಲ್ಲವೆ ಬ್ರಹ್ಮ ಜ್ಞಾನವನ್ನು ತಮ್ಮ ಜೀವಿತಾಶಯವಾಗಿ ಅಂಗೀಕರಿಸಬೇಕು. ಅವರು ಅಲ್ಲಾನನ್ನು, ಮರಿಯಮ್ಮನನ್ನು ಆರಾಧಿಸಿದರೆ ಪರವಾಗಿಲ್ಲ, ಆದರೆ ಅದು ಶಿವನಿಗೆ ವಿಷ್ಣುವಿಗೆ, ಕಾಳಮ್ಮನಿಗೂ ಮಾರಮ್ಮನಿಗೂ ಜೊತೆಯಲ್ಲೇ ಮತ್ತಿಬ್ಬರು ದೇವತೆಗಳಾಗಿ; ಆದರೆ ತಮ್ಮದು ಬೇರೆ ಮತವೆಂದೂ, ಬೇರೆ ಪ್ರಾಪಂಚಿಕ ದೃಷ್ಟಿಕೋನವೆಂದೂ ಹೇಳುವುದಕ್ಕೆ ಅವಕಾಶವಿಲ್ಲ.
ಇದೆಲ್ಲಾ ಯಾತಕ್ಕೋಸ್ಕರ? ಒಂದು ಬಲವಾದ ರಾಷ್ಟ್ರವಾಗಿ ರೂಪುಗೊಳ್ಳುವುದಕ್ಕೆ! ಬಲಹೀನರನ್ನು ಈ ಪ್ರಪಂಚದಲ್ಲಿ ಯಾರೂ ಗೌರವಿಸುವುದಿಲ್ಲ. ಬಲಿಷ್ಠರನ್ನೆ ಗೌರವಿಸುತ್ತಾರೆ. “ಅಪ್ರತಿಹತವಾದ ರಾಷ್ಟ್ರೀಯ ಶಕ್ತಿ” (Invincible National Strength) ರಾಷ್ಟ್ರಜೀವನಕ್ಕೆ ಬುನಾದಿಯಾಗಬೇಕು. ವೇದಾಂತಿಗಳು ಹೇಳಿದ ಬ್ರಹ್ಮಜ್ಞಾನವೇ ನಿಜವಾಗಿ ರಾಷ್ಟ್ರದ ಲಕ್ಷ್ಯವಾದರೆ ಇಷ್ಟು ಗಟ್ಟಿ ಬುನಾದಿ ಅನಗತ್ಯ. ಆದ್ದರಿಂದ ಅಪ್ರತಿಹತವಾದ ರಾಷ್ಟ್ರೀಯ ಶಕ್ತಿ ನಿಜವಾದ ಲಕ್ಷ್ಯ ಎಂದುಕೊಳ್ಳಬೇಕು. ಆ ಫ್ಯಾಸಿಸ್ಟ್ ಸಿದ್ಧಾಂತಗಳನ್ನು ರೂಪಗೊಳಿಸುವವರು ಮತೋನ್ಮಾದದಿಂದ ಮಾಡಬಹುದು, ಇಲ್ಲವೇ ಮೂರ್ಖತ್ವದಿಂದ ಮಾಡಬಹುದು. ಅಂದರೆ ಆರ್.ಎಸ್.ಎಸ್. ರೂಪ ಮಾತ್ರದಿಂದಲೆ ಮತೋನ್ಮಾದಿ ಸಂಸ್ಥೆ, ಸಾರಾಂಶದಲ್ಲಿ ಫ್ಯಾಸಿಸಂ ಅದರ ತತ್ವ.
ಧರ್ಮವೆನ್ನುವ ಭಾವನೆ ಹಿಂದೂಗಳಲ್ಲಿ ತುಂಬಾ ಪ್ರಾಚೀನವಾದುದೇ ಆದರೂ ಗೋಲ್ವಾಲ್ಕರ್ ಪ್ರಯೋಗಿಸಿದ ಅರ್ಥದಲ್ಲಿ ಅದು ಫ್ಯೂಡಲ್ ಯುಗಕ್ಕೆ ಸೇರಿದ್ದು. ಅಂದರೆ ಭಗವದ್ಗೀತೆಯೊಳಗೋ ಮನುಧರ್ಮ ಶಾಸ್ತ್ರದೊಳಗೊ ಹೇಳಲ್ಪಟ್ಟಿದ್ದು. ಅದನ್ನು ಆಧುನಿಕ ಭಾಷೆಯಲ್ಲಿ ಗೋಲ್ವಾಲ್ಕರ್‌ನಂತಹ ಕೊನೆಗಾಲದ ಬ್ರಾಹ್ಮಣರು ವಿವರಿಸುವ ರೀತಿ ಇದು:
“ಪ್ರತಿ ವ್ಯಕ್ತಿಗೂ ತನ್ನ ಪೂರ್ವಜನ್ಮ ಕರ್ಮಗಳನ್ನು ಅನುಸರಿಸಿ ಸಮಾಜದಲ್ಲಿ ಒಂದು ಸ್ಥಾನವಿರುತ್ತದೆ. ಆ ಸ್ಥಾನವನ್ನೆ ಶ್ರೀಕೃಷ್ಣ ಪರಮಾತ್ಮ ಮತ್ತು ಮನು ವರ್ಣ ಅಂದರು. ನಂತರದ ಕಾಲದಲ್ಲಿ ಜಾತಿ ಅಂದರು. (ಆ ಮಾತುಗಳನ್ನು ಗಟ್ಟಿಯಾಗಿ ಹೇಳುವ ಧೈರ್ಯ ಗೋಲ್ವಾಲ್ಕರ್‌ಗೆ ಇಲ್ಲವಾದರೂ ಭಾವ ಮಾತ್ರ ಅದೇ). ಆ ಸ್ಥಾನಕ್ಕೆ ತಳಹದಿ ಆಯಾ ವ್ಯಕ್ತಿಗಳ ಪ್ರಾವೀಣ್ಯತೆ ಇಲ್ಲವೆ ಪ್ರಜ್ಞೆ. ಈ ಪ್ರಾವೀಣ್ಯವನ್ನು ಜನ್ಮಜನ್ಮಗಳ ಕರ್ಮಗಳು ನಿರ್ಣಯಿಸುತ್ತವೆ. ಕೆಲವರಿಗೆ ಭೂಮಾಲೀಕತ್ವದಲ್ಲಿ ಪ್ರಾವೀಣ್ಯತೆ ಇರುತ್ತದೆ, ಕೆಲವರಿಗೆ ಜೀತವಿರುವದರಲ್ಲಿ ಪ್ರಾವೀಣ್ಯತೆ ಇರುತ್ತದೆ. ಕೆಲವರಿಗೆ ಹೌಸಿಂಗ್ ಸೊಸೈಟಿಗಳ ಹೆಸರಲ್ಲಿ ಮನೆ-ನಿವೇಶನಗಳ ವ್ಯಾಪಾರ ಮಾಡುವುದರಲ್ಲಿ ಅರಿವು ಇರುತ್ತದೆ. ಕೆಲವರ ಕರ್ಮ ಅವರಿಗೆ ಮನೆ ಕಟ್ಟುವದರಲ್ಲಿ ಬಾಂಡಲಿ ಹೊರುವ ಪ್ರಜ್ಞೆಯನ್ನು ಮಾತ್ರ ಕೊಡುತ್ತದೆ. ಆ ಪ್ರಾವೀಣ್ಯತೆಯನ್ನು ಅನುಸರಿಸಿ ಆ ವ್ಯಕ್ತಿಗೆ ಸಮಾಜದಲ್ಲಿ ಸ್ಥಾನ ಒದಗಿಸಲ್ಪಡುತ್ತದೆ. ಭೂಮಾಲೀಕತ್ವದಲ್ಲಿ ಪ್ರಾವೀಣ್ಯತೆ ಇದ್ದವರಿಗೆ ಭೂಮಿ ಕೊಡಲಾಗುತ್ತದೆ. ರಿಕ್ಷಾ ತುಳಿಯುವುದರಲ್ಲಿ ಪ್ರಾವೀಣ್ಯತೆ ಹೊಂದಿದವನಿಗೆ ರಿಕ್ಷಾ ತುಳಿಯಲು ಅನುಮತಿ ಕೊಡಲಾಗುತ್ತದೆ. ಇದರಲ್ಲಿ ಹೆಚ್ಚು ಕಮ್ಮಿಗಳ ಪ್ರಸಕ್ತಿಯಿಲ್ಲ, ಎಲ್ಲರೂ ಕೂಡ ರಾಷ್ಟ್ರ ಎನ್ನುವ ’ವಿರಾಟ್ ಪುರುಷನ’ ಶರೀರದಲ್ಲಿ ಭಾಗಗಳು ಮಾತ್ರವೇ. ಶರೀರ ಭಾಗಗಳಲ್ಲಿ ಒಂದು ಹೆಚ್ಚು ಒಂದು ಕಡಿಮೆ ಅಲ್ಲ. ಆ ವಿರಾಟ್ ಪುರುಷನೊಳಗೆ ಒಂದು ಅಂಗವಾಗಿಯೇ ಪ್ರತಿಯೊಬ್ಬನೂ ತನ್ನ ಜನ್ಮ ಜನ್ಮಗಳ ಸಹಜ ಪರಿಣಾಮವನ್ನು ಸಾಧಿಸುತ್ತಾನೆ. ನಮ್ಮ ಧರ್ಮ ಕಮ್ಮುನಿಸ್ಟರು ಹೇಳುವ ಸಮಾನತ್ವ (Equality) ಅಲ್ಲ, ಸಾಮರಸ್ಯ (Harmony). ಪ್ರತಿಯೊಬ್ಬನೂ ತನ್ನ ಸ್ವಧರ್ಮವನ್ನು (ಅದು ಬಾಂಡಲಿ ಹೊರುವುದಾಗಲೀ, ಕಾರಿನಲ್ಲಿ ಕುಳಿತು ತಿರುಗುವುದಾಗಲೀ) ನಿರ್ವಹಿಸುತ್ತಾ ಹೋದರೆ ಎಲ್ಲವೂ ಪ್ರಶಾಂತವಾಗಿ ಸಾಮರಸ್ಯದಿಂದ ಇರುತ್ತದೆ.”
ಗೋಲ್ವಾಲ್ಕರ್ ಮಾತಿನಲ್ಲಿ: “ಬ್ರಾಹ್ಮಣನು ವಿದ್ಯೆ ನೀಡುವ ಮೂಲಕ ದೊಡ್ಡವನಾದರೆ, ಕ್ಷತ್ರಿಯನನ್ನು ಶತ್ರುಗಳನ್ನು ನಾಶ ಮಾಡಿದ್ದಕ್ಕಾಗಿ ಕೊಂಡಾಡಲ್ಪಟ್ಟ. ವ್ಯವಸಾಯದ ಮೂಲಕ, ವ್ಯಾಪಾರದ ಮೂಲಕ ಸಮಾಜವನ್ನು ಪೋಷಿಸಿದ ವೈಶ್ಯರಾಗಲೀ ತಮ್ಮ ವೃತ್ತಿ ಕೆಲಸಗಳ ಮೂಲಕ ಸಮಾಜಕ್ಕೆ ಸೇವೆ ಮಾಡಿದ ಶೂದ್ರರಾಗಲಿ ತಮ್ಮನ್ನು ಬ್ರಾಹ್ಮಣ ಕ್ಷತ್ರಿಯರಿಗಿಂತ ಕಡಿಮೆಯೆಂದು ತಿಳಿಯಬೇಕಾಗಿಲ್ಲ.”
ಆದರೆ ಬ್ರಾಹ್ಮಣರು ವಿದ್ಯೆ ಕೊಟ್ಟಿದ್ದು ಎರಡು ಅಗ್ರವರ್ಣಗಳಿಗೆ ಮಾತ್ರವೇ; ಆ ವಿದ್ಯೆ ಕೂಡಾ ತಮಗೆ ಉನ್ನತ ಸ್ಥಾನವನ್ನು ನೀಡಿದ ವರ್ಣಧರ್ಮವನ್ನು ಸಮರ್ಥಿಸುವುದಕ್ಕಾಗಿಯೇ. ಕ್ಷತ್ರಿಯರು “ಶತ್ರುಗಳನ್ನು” ನಾಶ ಮಾಡಿದ್ದು ತಮ್ಮ ಖಜಾನೆಗಳನ್ನು ತುಂಬುವುದಕ್ಕಾಗಿ, ತಮ್ಮ ರಾಜ್ಯಗಳನ್ನು ವಿಸ್ತರಿಸಿಕೊಳ್ಳುವುದಕ್ಕಾಗಿ ಮಾತ್ರವೇ. ಶ್ರಮಜೀವಿ ವರ್ಗ(ರ್ಣ)ಗಳದ್ದು ಆ ಯುದ್ಧಗಳಲ್ಲಿ ಮದ್ದು ಗುಂಡಿನ ಪಾತ್ರ. ವ್ಯವಸಾಯ, ವೃತ್ತಿಕಸುಬುಗಳನ್ನು ಮಾಡಿದವರು ಮಾತ್ರವೇ ತಮಗೋಸ್ಕರ ಮಾತ್ರವಲ್ಲದೆ ಇತರರಿಗೋಸ್ಕರವಾಗಿಯೂ ಶ್ರಮಿಸಿದ್ದಾರೆ. ದೋಚುವುದು, ದೋಚಲ್ಪಡುವುದು ಎರಡೂ ಕೂಡ ಅವರವರ ಸ್ವಧರ್ಮವನ್ನನುಸರಿಸಿ ಭಗವಂತನನ್ನು ಆರಾಧಿಸುವುದಕ್ಕೆ ಎರಡು ಭಿನ್ನ ರೂಪಗಳೇ ಎಂದು ಘೋಷಿಸಿದರೆ ಅದರೊಳಗಿನ ಅಂತರಾರ್ಥ ಸ್ಪಷ್ಟವಿದೆ.
ಗೋಲ್ವಾಲ್ಕರ್ ವರ್ಣ ಧರ್ಮವನ್ನು ಕುರಿತು ಮಾತನಾಡುತ್ತಾ “ಧರ್ಮವೆಂದರೆ ಸಮಾಜದಲ್ಲಿ ಪ್ರತಿ ವ್ಯಕ್ತಿ ಮಿಕ್ಕ ಎಲ್ಲ ವ್ಯಕ್ತಿಗಳೊಂದಿಗೂ ಏಕತೆಯನ್ನೂ ಸಾಧಿಸಿ ಇತರರ ಭೌತಿಕ ಜೀವನವನ್ನು ಸುಸಂಪನ್ನಗೊಳಿಸುವುದಕ್ಕಾಗಿ ಅಗತ್ಯವಾದ ತ್ಯಾಗ ಗುಣ ಹೊಂದಿರುವುದು” ಎನ್ನುತ್ತಾನೆ. ಇದು ಬಹಳ ಮುಚ್ಚುಮರೆಯಿಲ್ಲದೆ ಘೋಷಣೆ. ಭೂಮಾಲೀಕ, ಬೂರ್ಶ್ವಾ ವರ್ಗಗಳು ಮತ್ತೊಬ್ಬರಿಗಾಗಿ ತ್ಯಾಗ ಮಾಡುವುದು ಇರುವುದಿಲ್ಲವಾದ್ದರಿಂದ, ಶ್ರಮಜೀವಿ ಜನರು ಲೂಟಿಕೋರ ವರ್ಗಗಳ ಭೌತಿಕ ಜೀವನಗಳನ್ನು ಸುಸಂಪನ್ನಗೊಳಿಸುವುದಕ್ಕಾಗಿ ತಮ್ಮ ಶ್ರಮವನ್ನು ತ್ಯಾಗ ಮಾಡುವುದೇ ’ಧರ್ಮ’ ಎಂದು ಇದರರ್ಥ. ಮಾಡಿದರೆ ಏನು ಬರುತ್ತೆ ಅಂದರೆ ಬಹುಶಃ ಬರುವ ಜನ್ಮದಲ್ಲಿ ಭೂಮಾಲೀಕರಾಗಿ ಹುಟ್ಟುತ್ತಾರೊ, ಇಲ್ಲದೇ ಹೋದರೇ ಬ್ರಹ್ಮಜ್ಞಾನ ಸಾಧಿಸಿ ಪರಮಾತ್ಮನಲ್ಲಿ ಲೀನವಾಗುತ್ತಾರೋ ತಿಳಿಯದು. ವಾಸ್ತವವಾಗಿ ಈ ’ಆಧ್ಯಾತ್ಮಿಕ ಪ್ರಯೋಜನ’ಗಳು, ಗೋಲ್ವಾಲ್ಕರ್ ಪೋಸು ಮಾತ್ರವೆ. ಆತನ ಸಿದ್ಧಾಂತ ’ಆಧ್ಯಾತ್ಮಿಕ’ ಆಗಿರಬಹುದಾದರೂ ಲಕ್ಷ್ಯ ಮಾತ್ರ ತುಂಬಾ ಲೌಕಿಕ. ಆ ಲೌಕಿಕ ಪ್ರಯೋಜನವೇನೆಂದರೆ “ನಮ್ಮೆಲ್ಲರ ತಾಯಿಯಾಗಿ ನಾವು ಪರಿಗಣಿಸುವ ಈ ಸಮಾಜ ತುಂಬಾ ಮಹತ್ತಮವಾದುದಾಗಿಯೂ, ಶಕ್ತಿವಂತವಾದುದಾಗಿಯೂ ತಯಾರಾಗುವುದನ್ನು ನೋಡುವುದು”. ಇದು ನಮ್ಮೆಲ್ಲರ ’ಧರ್ಮ’ ಎಂಬ ಹೊಚ್ಚ ಹೊಸ ಆಲೋಚನೆಯನ್ನು ಕೂಡ ಪ್ರವೇಶ ಮಾಡಿಸುತ್ತಾನೆ. ಅದು ಮನುಧರ್ಮ ಶಾಸ್ತ್ರದಲ್ಲಾಗಲೀ ಭಗವದ್ಗೀತೆಯಲ್ಲಾಗಲೀ ಇಲ್ಲ. ಇರುವುದಕ್ಕೆ ಸಾಧ್ಯವೂ ಇಲ್ಲ.
ಬ್ರಹ್ಮಜ್ಞಾನವನ್ನು ಸಂಪಾದಿಸುವುದಕ್ಕೆ ರಾಷ್ಟ್ರೀಯ ಶಕ್ತಿ ಅಪ್ರತಿಹತವಾಗಬೇಕಾದ ಅಗತ್ಯವಿಲ್ಲ. ವಾಸ್ತವವಾಗಿ ರಾಷ್ಟ್ರೀಯ ಶಕ್ತಿ ಎಂಬ ಆಲೋಚನೆಯೇ ಧರ್ಮಶಾಸ್ತ್ರಗಳು ಹುಟ್ಟಿದ ಭೂಸ್ವಾಮ್ಯ ಯುಗಕ್ಕೆ ಸಲ್ಲುವುದಿಲ್ಲ. ಅದು ಆಧುನಿಕ ಬೂರ್ಶ್ವಾ ರಾಷ್ಟ್ರೀಯವಾದದಲ್ಲೆ ಹುಟ್ಟಿತು. ಅದು ಅಪ್ರತಿಹತವಾಗುವುದೆಂದರೆ ಭಾರತದ ಆಳುವ ವರ್ಗಗಳು ಪ್ರಪಂಚದ ಲೂಟಿಕೋರ ವರ್ಗಗಳ ಅಗ್ರ ಶ್ರೇಣಿಯಲ್ಲಿ ಸೇರುವುದು ಎಂದರ್ಥ. ಅದಕ್ಕೋಸ್ಕರ ಎಲ್ಲರೂ ತಮ್ಮ ಸಹಜ ಕರ್ಮವನ್ನು ಅನುಸರಿಸಿ ಗೊಡ್ಡು ಚಾಕರಿ ಮಾಡಬೇಕು. ಗೋಲ್ವಾಲ್ಕರ್ ಕೈಯಲ್ಲಿ ಹಿಂದೂ ಧರ್ಮ ತೆಗೆದುಕೊಂಡ ಬೂರ್ಶ್ವ ರೂಪ ಇದು. ಯಾವ ಧರ್ಮವನ್ನು ಶ್ರೀ ಕೃಷ್ಣ ಹಾಗೂ ಮನು, ’ಮೋಕ್ಷ’ವನ್ನು ಗಾಳದ ಹುಳುವಾಗಿ ತೋರಿಸಿ ಭೂಸ್ವಾಮ್ಯ ಸಮಾಜದಲ್ಲಿ ವರ್ಗ ಸಾಮರಸ್ಯವನ್ನು ಸಾಧಿಸಲು ಉಪಯೋಗಿಸಿದರೋ, ಆ ಧರ್ಮವನ್ನೇ ಆ ಹಳೆಯ ಎರೆಹುಳುಗಳ ಜೊತೆಗೆ ’ರಾಷ್ಟ್ರ’ದ ಔನ್ನತ್ಯ ಎಂಬ ಹೊಸ ಲೋಭವನ್ನು ಸೇರಿಸುತ್ತಾ ಬಂಡವಾಳಿಗ ವರ್ಗಕ್ಕೆ ಅಗತ್ಯವಾದ ವರ್ಗ ಸಾಮರಸ್ಯವನ್ನು ಸಾಧಿಸುವುದಕ್ಕೆ ಗೋಲ್ವಾಲ್ಕರ್ ಉಪಯೋಗಿಸಿದ್ದಾನೆ.
ಇದನ್ನೂ ಓದಿ: ನೇತಾಜಿ ಸುಭಾಷ್ ಚಂದ್ರ ಬೋಸ್ ನೆನಪು: ಆರ್‌ಎಸ್‌ಎಸ್ ಬಚ್ಚಿಡುವ ಸತ್ಯಗಳಿವು
ವರ್ಗಗಳ ಮಾತುಗಳೆಂದರೇನೆ ಇಂಥವರಿಗೆ ಉರಿ ಹತ್ತುತ್ತದೆ. ವರ್ಗ ಸಿದ್ಧಾಂತ ಭಾರತೀಯರದ್ದಲ್ಲ ಅನ್ನುತ್ತಾರೆ. ಅಲ್ಲದಿದ್ದರೇನು ಎಂದು ಉತ್ತರ ಕೊಟ್ಟರೆ ವಾಸ್ತವವಾಗಿ ವರ್ಗಗಳೇ ಇಲ್ಲವೆನ್ನುತ್ತಾರೆ. ವೈಜ್ಞಾನಿಕವೋ, ಅವೈಜ್ಞಾನಿಕವೋ ಯಾವ ವಿಧವಾದ ವರ್ಗ ವಿಭಜನೆಯನ್ನೂ ಆರ್.ಎಸ್.ಎಸ್. ತತ್ವ ಸಹಿಸುವುದಿಲ್ಲ. ಪ್ರಪಂಚದಲ್ಲಿ ಇರುವವು ಕೇವಲ ರಾಷ್ಟ್ರಗಳೆ. ಪ್ರತಿ ರಾಷ್ಟ್ರಕ್ಕೂ ತನ್ನ ಸಂಪ್ರದಾಯಗಳು ಇತ್ಯಾದಿ ಇರುತ್ತವೆ. ರಾಷ್ಟ್ರದೊಳಗಡೆ ಯಾವ ವಿಧವಾದ ವರ್ಗ ಹೋರಾಟವನ್ನೂ ಸಹಿಸದಿರುವಂತೆಯೇ ರಾಷ್ಟ್ರಗಳ ನಡುವೆ ಯಾವ ವಿಧವಾದ ಸಾಮರಸ್ಯವನ್ನೂ ಗೋಲ್ವಾಲ್ಕರ್ ಸಹಿಸುವುದಿಲ್ಲ. ಹಿಂದೂ ಸಂಸ್ಕೃತಿಯೇ ಎಲ್ಲದಕ್ಕಿಂತ ಉನ್ನತವಾದದು; ಆ ಸಂಸ್ಕೃತಿಯನ್ನು ಪ್ರಪಂಚಕ್ಕೆಲ್ಲಾ ಹಂಚಿಡುವುದು (ಅಂದರೆ ಪ್ರಪಂಚವನ್ನು ಜಯಿಸಿ ತನಗೆ ಅಧೀನಗೊಳಿಸಿಕೊಳ್ಳುವುದು) ಹಿಂದೂ ರಾಷ್ಟ್ರದ ’ಪವಿತ್ರ ಕರ್ತವ್ಯ. ದೇಶದೊಳಗಡೆ ಧರ್ಮ ರಾಜ್ಯವಾಳಿದರೇನೇ, ಅಂದರೆ ಎಲ್ಲರೂ ಕೂಡ ಕಿಮಕ್ ಎನ್ನದೆ ತಮ್ಮ ಸಹಜ ಕರ್ಮಗಳನ್ನು ನಿರ್ವಹಿಸುತ್ತಾ ಹೋದರೇನೇ ಈ ’ಪವಿತ್ರ ಕರ್ತವ್ಯ’ವನ್ನು ದೇಶದ ಆಳುವ ವರ್ಗಗಳು ನಿರ್ವಹಿಸಬಲ್ಲವಾಗುತ್ತವೆ.
ಗೋಲ್ವಾಲ್ಕರ್ ತುಂಬಾ ಸ್ಥೂಲವಾಗಿ ವಿವರಿಸಿದ ಈ ಸಿದ್ಧಾಂತವನ್ನು ವಿವಿಧ ರಂಗಗಳಿಗೆ ಅನ್ವಯಿಸಿ ನಿರ್ದಿಷ್ಟ ರೂಪವನ್ನಿತ್ತಿದ್ದಾರೆ, ಆತನ ಅನುಚರರು, ಶ್ರಮ ಮಾಡುವುದು ಶ್ರಮಿಕರ ಸ್ವಧರ್ಮವಾದ್ದರಿಂದ ಮುಷ್ಕರ ಹರತಾಳದಂತಹವು ಧರ್ಮ ವಿರುದ್ಧ. ಸಮಾಜದಲ್ಲಿ ಸಾಮರಸ್ಯವೇ ಹೊರತು ವೈರುಧ್ಯಗಳಲ್ಲವೆಂದು ಗೋಲ್ವಾಲ್ಕರ್ ತನ್ನ ಬ್ರಾಹ್ಮಣ ಪೂರ್ವಿಕರ ಧರ್ಮಶಾಸ್ತ್ರಗಳನ್ನು ಪುನರುಜ್ಜೀವನಗೊಳಿಸಿ ಉಪನ್ಯಾಸ ನೀಡಬಹುದೇನೋ ಸರಿ, ಆದರೆ ಭಾರತೀಯ ಮಜ್ದೂರ್ ಸಂಘ ಅದನ್ನು ಪಾಲಿಸಿದರೆ ಒಂದೇ ಒಂದು ದಿನ ಸಹ ಕಾರ್ಮಿಕ ರಂಗದಲ್ಲಿ ನಿಲ್ಲಲಾರದು. ಶ್ರಮ ಮಾಡುವುದು ಶ್ರಮಿಕರ ಸ್ವಧರ್ಮವೆಂದು ಭಗವದ್ಗೀತೆಯಲ್ಲೂ ಧರ್ಮಶಾಸ್ತ್ರಗಳಲ್ಲೂ ಬಹಳ ಜಾಣತನದಿಂದ ಸಿದ್ಧಾಂತವನ್ನು ಮಾಡಿದ್ದಾರಾದರೂ ಅದನ್ನು ಎಂದಾದರೂ ಶ್ರಮಿಕರಲ್ಲಿ ಎಷ್ಟು ಮಂದಿ ಅನುಮೋದಿಸಿದ್ದಾರೋ ಅನುಮಾನವೆ.
ಆದರೂ ಆರ್.ಎಸ್.ಎಸ್.ನ ಸಮೂಹ ಸಂಘಟನೆಗಳಿರುವುದು ಕೇವಲ ತಮ್ಮ ವರ್ಗ ಸಾಮರಸ್ಯ ಸಿದ್ಧಾಂತವನ್ನು ಪ್ರಚಾರ ಮಾಡುವುದಕ್ಕಾಗಿಯಲ್ಲ, ತಾವು ಆಶಿಸುವ ’ರಾಷ್ಟ್ರೀಯ ಐಕ್ಯತೆ’ಗೆ ಪ್ರಧಾನ ಶತ್ರುವಾಗಿ ಕಂಡು ಬರುವ ಮುಸ್ಲಿಮರನ್ನೂ ಕಮ್ಯುನಿಸ್ಟರನ್ನೂ ದಮನಿಸುವುದಕ್ಕಾಗಿ. ಆರ್.ಎಸ್.ಎಸ್ ಅನ್ನು ಕೇವಲ ಮತೋನ್ಮಾದಿ ಸಂಘಟನೆಯಾಗಿ ಪ್ರಚಾರ ಮಾಡಿದ್ದರಿಂದಾಗಿ ಅದರ ಮುಸ್ಲಿಂ ವಿರೋಧಿತನ ಪ್ರಚಾರಕ್ಕೆ ಬಂದಿತೇ ಹೊರತು ಅದರ ಫ್ಯೂಡಲ್ ಹಿಂದೂ ತತ್ವವಲ್ಲ. ಅದನ್ನು ಫ್ಯಾಸಿಸ್ಟ್ ಹಿಂದೂ ರಾಷ್ಟ್ರೀಯವಾದವೆಂದು ಗುರುತಿಸಿದರೆ ಅದು ಅನ್ಯಮತೀಯರಾದ ಮುಸ್ಲಿಮರಿಗೆ ಯಾವ ಮಟ್ಟದ ಶತ್ರುವೋ, ಅಂತಾರಾಷ್ಟ್ರೀಯವಾದಿಗಳು- ಅದಕ್ಕಿಂತ ಮುಖ್ಯವಾಗಿ ವರ್ಗ ಹೋರಾಟ ಸಿದ್ಧಾಂತವನ್ನು ಅನುಮೋದಿಸುವವರಾದ ಕಮ್ಯುನಿಸ್ಟರಿಗೂ ಕೂಡ ಅಷ್ಟೇ ಪ್ರಮಾಣದ ಶತ್ರುವೆಂಬುದು ಸ್ಪಷ್ಟವಾಗುತ್ತದೆ. ಮುಸ್ಲಿಮರ ಬಗ್ಗೆ ಆರೆಸ್ಸೆಸ್ ಅಭಿಪ್ರಾಯಗಳನ್ನು ಇಲ್ಲಿ ಹೊಸದಾಗಿ ವಿವರಿಸುವ ಅಗತ್ಯವಿಲ್ಲ.
ಈ ಮುಸ್ಲಿಂ ದ್ವೇಷಕ್ಕೆ ಸಮವಾಗಿ ಅರೆಸ್ಸೆಸ್ ನಿರ್ಲಜ್ಜವಾಗಿ ಪ್ರದರ್ಶಿಸಿಕೊಂಡಿರುವುದು ಸೋಷಲಿಸಂ ದ್ವೇಷ. “ಸೋಷಲಿಸಂ ಈ ಖಂಡದಲ್ಲಿ ಹುಟ್ಟಿದ್ದಲ್ಲ, ಅದು ನಮ್ಮ ರಕ್ತದಲ್ಲಾಗಲೀ, ಸಂಪ್ರದಾಯದಲ್ಲಾಗಲೀ ಇಲ್ಲ. ಇಲ್ಲಿರುವ ಕೋಟ್ಯಾಂತರ ಜನರ ಆಲೋಚನೆಗಳಿಗೆ ಅದು ಪೂರ್ತಿಯಾಗಿ ಭಿನ್ನವಾದುದು. ಆದ್ದರಿಂದ ನಮ್ಮ ಹೃದಯಗಳನ್ನು ಕದಲಿಸುವ ಶಕ್ತಿಯಾಗಲಿ, ಮಗ್ನತೆಯಿಂದ ಕೆಲಸ ಮಾಡುವಂತಹ ಉತ್ತೇಜನ ಕೊಡುವ ಶಕ್ತಿಯಾಗಲಿ ಅದಕ್ಕಿಲ್ಲ” ಬೇಕಾಗಿರುವುದು ಸೋಷಲಿಸಂ ಅಲ್ಲ, ಶ್ರಮವನ್ನು ಗೌರವವಾಗಿ ಕಾಣುವುದು (dignity of labour). ಶ್ರಮಪಡುವುದನ್ನು ಕಡಿಮೆಯೆಂದು ಭಾವಿಸಿದರೆ ತಾನೆ, ಮಾಡದವರನ್ನು ನೋಡಿ ಈರ್ಷ್ಯೆ ಪಡುವುದಾಗಲೀ, ದ್ವೇಷಿಸುವುದಾಗಲೀ ನಡೆಯುವುದು? ಶ್ರಮವನ್ನು ಗೌರವಿಸುವುದು ಕಲಿತುಕೊಂಡರೆ ಕೂತು ತಿನ್ನುವುದೇ ಅಲ್ಲ, ಶ್ರಮಪಡುವುದು ಕೂಡ (ಅವರವರ ಸ್ಪಧರ್ಮಗಳನ್ನನುಸರಿಸಿ) ಭಗವಂತನನ್ನು ಭಿನ್ನರೂಪಗಳಲ್ಲಿ ಆರಾಧಿಸುವುದೇ ಎಂದು ಗುರುತಿಸಿದರೆ, ಇನ್ನು ಸೋಷಲಿಸಂ ಯಾತಕ್ಕೆ?
ಕ್ರಾಂತಿಕಾರಿ ರಾಷ್ಟ್ರೀಯವಾದ
ಬ್ರಿಟಿಷ್ ಸಾಮ್ರಾಜ್ಯವಾದಕ್ಕೆ ವಿರುದ್ಧವಾಗಿ ನಡೆದ ರಾಷ್ಟ್ರೀಯ ಚಳವಳಿಯಲ್ಲಿ ಬೂರ್ಶ್ವಾ ರಾಷ್ಟ್ರೀಯವಾದ ಮಾತ್ರವಲ್ಲದೆ ಕ್ರಾಂತಿಕಾರಿ ರಾಷ್ಟ್ರೀಯವಾದ ಕೂಡಾ ಇದೆ. ಬ್ರಿಟಿಷ್ ಸಾಮ್ರಾಜ್ಯಶಾಹಿಯ ಪ್ರತ್ಯಕ್ಷ ಆಳ್ವಿಕೆಯನ್ನು ತೊಲಗಿಸಿ ದೊಡ್ಡ ಬೂರ್ಶ್ವಾ ವರ್ಗದ ಕೈಯಲ್ಲಿ ಆಳ್ವಿಕೆಯನ್ನು ಇಡುವುದು ಬೂರ್ಶ್ವಾ ರಾಷ್ಟ್ರೀಯವಾದವಾದರೆ, ಸ್ಥಾನಿಕ ಲೂಟಿಗೆ ವಿರುದ್ಧವಾಗಿ ಸಿಡಿದೆದ್ದ ಜನರೇ ಸಾಮ್ರಾಜ್ಯವಾದವನ್ನು ಸಹಿತ ತೊಲಗಿಸಬಲ್ಲರೆಂದು ಕ್ರಾಂತಿಕಾರಿ ರಾಷ್ಟ್ರೀಯವಾದ. ’ದೇಶಭಕ್ತಿ’ ಹೆಸರಿನಲ್ಲಿ ವರ್ಗ ಭೇದಗಳನ್ನು, ವೈಷಮ್ಯಗಳನ್ನು ಮರೆಮಾಚಿ ಬಲವಂತದ ’ರಾಷ್ಟ್ರೀಯ ಐಕ್ಯತೆ’ಯನ್ನು ಸಾಧಿಸುವುದು ಬೂರ್ಶ್ವಾ ರಾಷ್ಟ್ರೀಯವಾದವಾದರೆ, ರಾಷ್ಟ್ರದಲ್ಲಿ ಶ್ರಮ ದರೋಡೆ ಅಂತ್ಯವಾದ ನಂತರವೇ ರಾಷ್ಟ್ರೀಯ ಐಕ್ಯತೆಯಾಗಲೀ ದೇಶಭಕ್ತಿಯಾಗಲೀ ಸಾಧ್ಯವೆನ್ನುವುದು ಕ್ರಾಂತಿಕಾರಿ ರಾಷ್ಟ್ರೀಯವಾದ. ಭೂಮಾಲೀಕರೂ ನಮ್ಮ ಸ್ವ-ರಾಷ್ಟ್ರೀಯರೇ ಆದ್ದರಿಂದ ಅವರನ್ನು ವಿರೋಧಿಸಬಾರದೆನ್ನುವುದು ಬೂರ್ಶ್ವಾ ರಾಷ್ಟ್ರೀಯವಾದ; ಭೂಮಾಲೀಕ ವಿರೋಧಿ ಹೋರಾಟ ನಡೆಸದ ಈ ರಾಷ್ಟ್ರಕ್ಕೆ ಗುಲಾಮೀ ಸಂಕೋಲೆ ತೊಲಗದೆಂದು ಗುರುತಿಸಿದ್ದು ಕ್ರಾಂತಿಕಾರಿ ರಾಷ್ಟ್ರೀಯವಾದ.
ಸಾಮ್ರಾಜ್ಯಶಾಹಿ ವಿರೋಧಿ ಹೋರಾಟ, ಶ್ರಮ ದರೋಡೆಯನ್ನು ಅಂತ್ಯಗೊಳಿಸುವ ಹೋರಾಟದಲ್ಲಿ ಒಂದು ಭಾಗ ಮಾತ್ರ. ಇದು ಕ್ರಾಂತಿಕಾರಿ ರಾಷ್ಟ್ರೀಯವಾದದ ಸಾರಾಂಶ. ತದ್ವಿರುದ್ಧವಾಗಿ, ವಿದೇಶೀ ಆಳ್ವಿಕೆಯನ್ನು ಅಂತ್ಯಗೊಳಿಸಿ ಕಪ್ಪು ದೊರೆಗಳನ್ನು ಪೀಠಕ್ಕೆ ಹತ್ತಿಸಿದ್ದು ಬೂರ್ಶ್ವಾ ರಾಷ್ಟ್ರೀಯವಾದ.
ಬೂರ್ಶ್ವಾ ರಾಷ್ಟ್ರೀಯವಾದಕ್ಕೆ ಕಾಂಗ್ರೆಸ್‌ನಿಂದ ಹಿಡಿದು ಆರ್.ಎಸ್.ಎಸ್.ವರೆಗೆ ಎಲ್ಲ ಸಂಸ್ಥೆಗಳೂ ಪ್ರಾತಿನಿಧ್ಯ ವಹಿಸಿದವು. ಇದರಲ್ಲಿ ಕಾಂಗ್ರೆಸ್‌ಗೂ ಆರ್.ಎಸ್.ಎಸ್.ಗೂ ವ್ಯತ್ಯಾಸ ಅತ್ಯಲ್ಪ.
1946ರಲ್ಲಿ ನೌಕಾಪಡೆಯ ಸಿಬ್ಬಂದಿ ಬೊಂಬಾಯಿಯಲ್ಲಿ ದಂಗೆಯೆದ್ದಾಗ ಕಾಂಗ್ರೆಸ್ ನಾಯಕ ಮೌಲಾನಾ ಆಜಾದ್, “ಇದು ಹರತಾಳಗಳಿಗೂ ದಂಗೆಗಳಿಗೂ ಸಮಯವಲ್ಲ ಎಂದರು. ಅಧಿಕಾರ ಸ್ವಲ್ಪ ಆಗಲೇ ಕೈಗೆ ಬಂದು, ಇನ್ನೂ ಹೆಚ್ಚಿನದು ಅನತಿಕಾಲದಲ್ಲೇ ಬರಲಿದ್ದ ಭಾರತದ ಬೂರ್ಶ್ವಾ ವರ್ಗಕ್ಕೆ ಅದು ಹರತಾಳಗಳಿಗೂ ದಂಗೆಗಳಿಗೂ ಸಮಯವಲ್ಲ”, ’ದೇಶಭಕ್ತಿ’ಗೆ ಮಾತ್ರ ಸಮಯ. ಬ್ರಿಟಿಷ್ ಪ್ರಭುತ್ವ ವಿಧಿಸಿದ ತೆರಿಗೆಗಳನ್ನು ಕಟ್ಟಬಾರದೆಂದು ಅರೆಮನಸ್ಸಿನ ಘೋಷಣೆಯನ್ನು ಕಾಂಗ್ರೆಸ್ ರೈತರಿಗೆ ನೀಡಿತಾದರೂ ಭೂಮಾಲೀಕರಿಗೆ ಗೇಣಿ ಸಲ್ಲಿಸಬಾರದೆಂದೋ, ಬಿಟ್ಟಿ ಚಾಕರಿ ಮಾಡಬೇಡವೆಂದೋ ಎಂದೂ ಕರೆ ಕೊಡಲಿಲ್ಲ.
1936ರವರೆಗೂ ಕಾಂಗ್ರೆಸ್ ಪಾರ್ಟಿ ತನ್ನ ನಿರ್ಣಯಗಳಲ್ಲಿ ಗೇಣಿ ಕಡಿಮೆಗೊಳಿಸುವ ವಿಷಯವಾಗಿ ಕೂಡ ಎಂದೂ ಮಾತನಾಡಿಲ್ಲ. ಬ್ರಿಟಿಷ್ ಪ್ರಾಂತ್ಯವಲ್ಲದ ’ಭಾರತೀಯ’ ರಾಜಸಂಸ್ಥಾನಗಳ ಜನರಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಜಾಗೃತಿಯನ್ನು ಮೂಡಿಸುವುದರಲ್ಲಿ ತುಂಬಾ ಉದಾಸೀನ ಮಾಡಿತು- ಯಾತಕ್ಕೆಂದರೆ ಮೈಸೂರು ಮಹಾರಾಜನೂ, ಭೂಪಾಲ್‌ನ ನವಾಬನೂ ’ನಮ್ಮವರೇ’ ಆದ್ದರಿಂದ.
ಪೂರ್ವ ಬಂಗಾಳದಲ್ಲಿ 1831ರ ’ವಹಾಬ್ಬಿ’ ಬಂಡಾಯದಲ್ಲಿ ಪಾಲ್ಗೊಂಡ ಮುಸ್ಲಿಂ ರೈತಾಪಿ ಜನ ಜಮೀನ್ದಾರರಿಗೂ ಬ್ರಿಟಿಷ್ ಪ್ರಭುತ್ವಕ್ಕೂ ವ್ಯತ್ಯಾಸ ತೋರಿಸಲಿಲ್ಲ. ಜಮೀನ್ದಾರರು ’ಭಾರತೀಯರೇ ತಾನೆ’ ಎಂದು ಬಿಟ್ಟುಬಿಡಲಿಲ್ಲ. ಆ ಜಮೀನ್ದಾರರ ಉಳಿಯುವಿಕೆಗೂ ಬ್ರಿಟಿಷ್ ಸಾಮ್ರಾಜ್ಯಶಾಹಿಗೂ ಇದ್ದ ಸಂಬಂಧವನ್ನು ಮರೆತು ಬಿಡಲಿಲ್ಲ. ವಿಪರೀತವಾದ ಕಂದಾಯ ವಸೂಲು ಮಾಡುವುದೇ ಅಲ್ಲದೆ ಹಿಂದೂ ಹಬ್ಬಗಳಿಗೂ ಮುಸ್ಲಿಂ ರೈತರಿಂದ ಬಲವಂತವಾಗಿ ಕಾಣಿಕೆಗಳನ್ನು ವಸೂಲು ಮಾಡುವುದು ಅಭ್ಯಾಸ ಮಾಡಿಕೊಂಡಿದ್ದ ಜಮೀನ್ದಾರರ ಮೇಲೆ ತಿರುಗಿಬಿದ್ದರು. ಆ ಬಂಡಾಯದ ಮುಂದುವರಿಕೆಯಾಗಿ ಕೆಲವರು ಬ್ರಿಟಿಷ್ ನೀಲಿಮದ್ದು ಎಸ್ಟೇಟ್ ಯಜಮಾನರ ಕಾರ್ಖಾನೆಗಳನ್ನು ಆಕ್ರಮಿಸಿಕೊಂಡಿದ್ದು ಮಾತ್ರವಲ್ಲದೆ, ನಾರ್ಕೆಲ್ ಬಾರ್‍ಯಾವನ್ನು ಕೇಂದ್ರವಾಗಿಸಿ ಒಂದು ವಿಮುಕ್ತ ಪ್ರಾಂತ್ಯವನ್ನು (ತುಂಬಾ ತಾತ್ಕಾಲಿಕವಾದದ್ದೇ ಆದರೂ) ರಚಿಸಿಕೊಂಡರು. ಆ ಅರ್ಥದಲ್ಲಿ ’ವಹಾಬ್ಬಿ’ ದಂಗೆ ಭಾರತ ದೇಶದ ಕ್ರಾಂತಿಕಾರಿ ರಾಷ್ಟ್ರೀಯ ಚಳವಳಿಯಲ್ಲಿ ಮೊದಲ ಮೆಟ್ಟಲಿನಂತಹುದು ಎನ್ನಬಹುದು. ಆ ನಂತರ ನಡೆದ ರೈತಾಪಿ ಗಿರಿಜನ ಕಾರ್ಮಿಕ ಚಳವಳಿಗಳೆಲ್ಲದರಲ್ಲೂ ಈ ವೈಖರಿ ಯಾವುದೋ ಒಂದು ಪ್ರಮಾಣಕ್ಕೆ ಕಂಡುಬರುತ್ತದೆ.
ಶ್ರಮಶೋಷಣೆಯನ್ನು ಸಂರಕ್ಷಿಸುವುದನ್ನೇ ತನ್ನ ಮುಖ್ಯ ಕರ್ತವ್ಯವಾಗುಳ್ಳ ಬೂರ್ಶ್ವಾ ರಾಷ್ಟ್ರೀಯವಾದವು, ರಾಷ್ಟ್ರ ವಿಮುಕ್ತಿಯನ್ನೂ ಶ್ರಮಶೋಷಣೆಯಿಂದ ವಿಮುಕ್ತಿಯನ್ನೂ ಬೇರ್ಪಡಿಸಲು ನಿರಾಕರಿಸುವ ಕ್ರಾಂತಿಕಾರಿ ರಾಷ್ಟ್ರೀಯವಾದವನ್ನು ಸಹಿಸಲಾರದು. ಆಶ್ಚರ್ಯಕರವಾದ ವಿಷಯ ಯಾವುದೆಂದರೆ, ಈ ಅಸಹನೆ ಎಲ್ಲಾ ದೇಶಗಳಲ್ಲೂ ಸರ್ವೆಸಾಮಾನ್ಯವಾಗಿರುವುದು. ಎಲ್ಲೆಡೆಯೂ ಬೂರ್ಶ್ವಾ ರಾಷ್ಟ್ರೀಯವಾದ ಕ್ರಾಂತಿಕಾರಿ ರಾಷ್ಟ್ರೀಯವಾದವನ್ನು, ಸೋಷಲಿಸಂ ಅನ್ನು ದೇಶದ್ರೋಹವೆಂದೇ ದೂಷಿಸಿದೆ. ಗೋಲ್ವಾಲ್ಕರ್‌ಗೂ ಆಯತುಲ್ಲಾ ಖೊಮೇನಿಗೂ ಬೇರೆ ಯಾವ ವಿಷಯದಲ್ಲೂ ಹೊಂದಿಕೆ ಏರ್ಪಡಲಾರದಾದರೂ ಇಬ್ಬರೂ ಸಹ ತಮ್ಮ ದೇಶದಲ್ಲಿನ ಎಡ ಪಂಥೀಯ ಧೋರಣೆಗಳುಳ್ಳವರನ್ನು ’ವಿದೇಶಿ ತೊತ್ತು’ಗಳೆಂದು ’ದೇಶದ್ರೋಹಿ’ಗಳೆಂದು, ಎಡಪಂಥೀಯ ಧೋರಣೆಗಳನ್ನು ’ಅನ್ಯ ರಾಷ್ಟ್ರೀಯ ಭಾವ’ಗಳೆಂದು ’ವಿದೇಶೀಯರ ಪಿತೂರಿ’ ಎಂದು ದೂಷಿಸಿದ್ದಾರೆ. ಅಮೆರಿಕದಲ್ಲಿ ಸಹ ಎಡಪಂಥೀಯ ಚಟುವಟಿಕೆಗಳನ್ನು ಅಮೆರಿಕನೇತರ ಚಟುವಟಿಕೆಗಳ ಅಡಿಯಲ್ಲಿ (Un-American activities) ನಿಷೇಧಿಸಿದ್ದಾರೆ. ಭಾರತ ದೇಶದಿಂದ ಇರಾನ್‌ವರೆಗೆ, ಇರಾನ್‌ನಿಂದ ಅಮೆರಿಕವರೆಗೆ, ಮತ್ತೊಂದು ವಿಧದಲ್ಲಿ ಹೇಳಬೇಕೆಂದರೆ ಬ್ರಾಹ್ಮಣ ಗೋಲ್ವಾಲ್ಕರ್‌ನಿಂದ ಷಿಯಾ ಮತಾಧಿಕಾರಿ ಖೊಮೇನಿವರೆಗೆ, ಮತಾಧಿಕಾರಿ ಖೊಮೇನಿಯಿಂದ ’ಪ್ರಜಾತಾಂತ್ರಿಕವಾದಿ’ ಮೆಕಾರ್ಥಿಯವರೆಗೆ, ಎಲ್ಲರಿಗೂ ಎಡಪಂಥೀಯ ಧೋರಣೆಗಳು ’ಲಾಲ್ ಗುಲಾಮಿ’ಯಾಗಿಯೇ ಕಂಡು ಬಂದಿವೆಯೆಂದರೆ ಅದು ಕಾಕತಾಳೀಯವಲ್ಲ, ಬೂರ್ಶ್ವಾ ರಾಷ್ಟ್ರೀಯವಾದಕ್ಕೆ ಕ್ರಾಂತಿಕಾರಿ ರಾಷ್ಟ್ರೀಯವಾದವನ್ನು, ಸೋಷಲಿಸಂಅನ್ನು ವಿರೋಧಿಸುವುದಕ್ಕೆ ಇದನ್ನು ಮೀರಿದ ಆಯುಧ ಮತ್ತೊಂದಿಲ್ಲ.
ಈ ಆರೋಪಕ್ಕೆ ಕ್ರಾಂತಿಕಾರಿ ರಾಷ್ಟ್ರೀಯವಾದ ಕೊಡುವ ಉತ್ತರ ಎನ್.ಕೆ. ಕವಿತೆ. ಇದರಲ್ಲಿ ಶ್ರಮಜೀವಿ ಅಂತಾರಾಷ್ಟ್ರೀಯತೆ ಇಲ್ಲವೇ ಅಂದರೆ, ಇದೆ. ಆದರೆ ಅದು Alter-thought ಆಗಿ ಅಲ್ಲದೆ second thought ಆಗಿ ಬಂದು ಸೇರಿದೆ. ಎನ್.ಕೆ. ಕವಿತೆಗೆ ನಿಜವಾದ ಪ್ರೇರಣೆ ಕ್ರಾಂತಿಕಾರಿ ರಾಷ್ಟ್ರೀಯವಾದದಿಂದಲೇ ಬಂದಿದೆ. ಇಲ್ಲವಾದಲ್ಲಿ ’ವಂದೇ ಮಾತರಂ’ ಎಂಬ ಮಾತನ್ನು ಪ್ರಯೋಗಿಸುತ್ತಿರಲಿಲ್ಲ.
ತನ್ನ ತಾಯಿಯಾಗಿ ತಾನು ಭಾವಿಸುವ ಭಾರತ ದೇಶವನ್ನು ತಾನು ಪ್ರೀತಿಸುವುದು ಸಹಜ. ರಾಷ್ಟ್ರವನ್ನು ಎರಡಾಗಿ ಸೀಳಿದವರು ಆ ಪ್ರೇಮವನ್ನು ಅಸಾಧ್ಯಗೊಳಿಸುತ್ತಿದ್ದಾರೆ. ತನ್ನ ತಾಯಿ ರತ್ನ ಗರ್ಭೆ ಎಂದು, ಸಸ್ಯ ಶ್ಯಾಮಲವೆಂದು, ಮಲಯಜ ಶೀತಲವೆಂದು ನಂಬುವುದು ತನಗೆ ಸಹಜ. ಆದರೆ ಆ ಗರ್ಭವನ್ನು ರತ್ನಗಳಿಗಾಗಿ ಸೀಳಿ, ಆ ರತ್ನಗಳನ್ನು ರಫ್ತು ಮಾಡಿ, ಆ ತಾಯಿಯ ಅಂಗಾಂಗಗಳನ್ನು ಅಡವಿಟ್ಟುಬಿಟ್ಟವರು ಆ ನಂಬಿಕೆಯನ್ನೇ ಅಸಾಧ್ಯಗೊಳಿಸುತ್ತಿದ್ದಾರೆ. ಇಲ್ಲಿ ನ್ಯಾಯ ರಾಜ್ಯಭಾರ ಮಾಡುತ್ತಿದೆಯೆಂದು, ಮನಸ್ಸುಗಳಲ್ಲಿ ಸ್ವಚ್ಛತೆ, ತುಟಿಗಳ ಮೇಲೆ ಸತ್ಯ ಇರುತ್ತವೆಂದು ಹೆಮ್ಮೆ ಪಡುವುದು ತನಗೆ ಸಹಜ. ಆದರೆ ತಮ್ಮ ಸ್ವಾರ್ಥದಿಂದ ಈ ದೇಶದ ಸಂಸ್ಕೃತಿಯನ್ನು ಕಲುಷಿತಗೊಳಿಸಿದವರು ಹಾಗೆಂದು ನಂಬುವುದಕ್ಕೆ ಬಿಡುತ್ತಿಲ್ಲ. ಹೆಮ್ಮೆ ಪಡಲು ಬಿಡುತ್ತಿಲ್ಲ. ಇಲ್ಲಿ ಗೋಲ್ವಾಲ್ಕರ್ ಹೇಳಿದಂತೆ- ಸ್ತ್ರೀಯನ್ನು ಮಾತೃಮೂರ್ತಿಯಾಗಿ ಆರಾಧಿಸುತ್ತಾರೆಂದು ನಂಬುವುದು ತನಗೆ ಸಹಜ. ಆದರೆ ಮನುಷ್ಯ ಮಾಂಸವನ್ನು ಸಹಿತ ವ್ಯಾಪಾರ ಮಾಡುವ ಬಂಡವಾಳಿಗೆ ಮಾರುಕಟ್ಟೆಯಲ್ಲಿ ಸಿಕ್ಕಿಕೊಂಡ ಕಮಲದಂತಹ ಸ್ತ್ರೀಯರು ತನ್ನನ್ನು ಹಾಗೆ ನಂಬಗೊಡುತ್ತಿಲ್ಲ. ತಾನು ಮತ್ತೆ ಈ ದೇಶವನ್ನು ಪ್ರೇಮಿಸಬೇಕೆಂದರೆ, ಈ ಅಕ್ರಮಗಳು ನಡೆದಾಗ ’ದೇಶಭಕ್ತರು’ ಕೇಳದ ಪ್ರಶ್ನೆಗಳಿಗೆ ಉತ್ತರ ಲಭಿಸಬೇಕೆಂದು, ಆಗಲೇ ನಮ್ಮ ಗುಲಾಮಿ ತೊಲಗಿ ತಾನು ’ವಂದೇ ಮಾತರಂ’ ಎನ್ನಬಲ್ಲವರಾಗುತ್ತೇನೆಂಬುದು ಎನ್.ಕೆ. ವಿಶ್ವಾಸ. ಆ ವಿಶ್ವಾಸ ಫ್ಯಾಸಿಸ್ಟ್ ರಾಷ್ಟ್ರೀಯವಾದಕ್ಕೆ ಇನ್ನೂ ಏನೇನು ಉತ್ತರಗಳನ್ನು ನೀಡುತ್ತದೆಯೋ ನಾನು ವಿವರಿಸುವ ಅಗತ್ಯವಿಲ್ಲ. ನೀವೇ ಓದಿಕೊಳ್ಳಿ.
ಕನ್ನಡಕ್ಕೆ: ಡಾ. ಬಂಜಗೆರೆ ಜಯಪ್ರಕಾಶ್

ಡಾ. ಕೆ.ಬಾಲಗೋಪಾಲ್
(ತೆಲುಗು ಕವಿ ಎನ್.ಕೆ ಅವರ ’ಲಾಲ್ ಬನೋ ಗುಲಾಮೀ ಛೋಡೋ ಬೋಲೋ ವಂದೇಮಾತರಂ’ ಎಂಬ ನೀಳ್ಗವಿತೆಗೆ ಚಿಂತಕ ಬಾಲಗೋಪಾಲ್ ಅವರು ಬರೆದಿರುವ ಪರಿಚಯಾತ್ಮಕ ಮಾತುಗಳಿವು. 76ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶಭಕ್ತಿಯ ಹೆಸರಿನಲ್ಲಿ ಹಿಂಸೆ-ದೌರ್ಜನ್ಯಗಳು ಹೆಚ್ಚಿರುವ ಈ ಸಮಯದಲ್ಲಿ 1991ರಲ್ಲಿ ಕನ್ನಡದಲ್ಲಿ ಪ್ರಕಟವಾದ ಈ ಪ್ರಬಂಧ ನಮ್ಮನ್ನು ದೇಶಭಕ್ತಿಯ ಬಗ್ಗೆ ಮರುಚಿಂತನೆ ನಡೆಸುವುದಕ್ಕೆ ಆಹ್ವಾನ ನೀಡಬಲ್ಲದು. ಈ ಕಿರು ಹೊತ್ತಿಗೆ ಕೂಡ ಶೀಘ್ರದಲ್ಲಿಯೇ ಮರುಪ್ರಕಟವಾಗಲಿದೆ.)


