ದೇಶದಲ್ಲಿ ಆತಂಕ, ಕೋಲಾಹಲಕ್ಕೆ ಕಾರಣವಾಗಿರುವ ಪೆಗಾಸಸ್ ಸ್ಪೈವೇರ್ ಹಗರಣಕ್ಕೆ ಸಂಬಂಧ ಪಟ್ಟಂತೆ ಕರ್ನಾಟಕ ಕಾಂಗ್ರೆಸ್ ಅಮಿತ್ ಶಾ ವಿರುದ್ಧ ನೇರ ಆರೋಪ ಮಾಡಿದೆ. ಈ ಹಗರಣದಲ್ಲಿ ಗೃಹ ಸಚಿವ ಅಮಿತ್ ಶಾ ಅವರ ನೇರ ಕೈವಾಡವಿದೆ ಎಂದು ಆರೋಪಿಸಿದೆ.
ಮಂಗಳವಾರವಷ್ಟೇ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತ ಸಹಾಯಕರು ಮತ್ತು ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಮೇಲೆ ಪೆಗಾಸಸ್ ಕಣ್ಗಾವಲು ಇದ್ದದ್ದು ಬಹಿರಂಗವಾಗಿದೆ. 2019 ರ ಸಮ್ಮಿಶ್ರ ಸರ್ಕಾರ ಉರುಳಲು ಈ ಪೆಗಾಸಸ್ ಗೂಢಚರ್ಯೆ ಕಾರಣವಾಗಿದೆಯೇ ಎಂಬ ಅನುಮಾನಗಳಿಗೆ ಕಾರಣವಾಗಿದೆ.
“ಪೆಗಾಸಸ್ ಹಗರಣದಲ್ಲಿ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರ ನೇರ ಕೈವಾಡವಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿದ್ದಿದ್ದು ಸ್ಪಷ್ಟ. ಇಂತಹದ್ದೇ ಸ್ನೂಪ್ ಗೇಟ್ ಹಗರಣ ನಡೆಸಿದ ಇತಿಹಾಸ ಅವರಿಗಿದೆ. ಕೂಡಲೇ ಅಮಿತ್ ಶಾ ರಾಜೀನಾಮೆ ನೀಡಿ, ತನಿಖೆ ಎದುರಿಸಬೇಕು” ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮೂಲಕ ಆರೋಪಿಸಿದೆ.
ಇದನ್ನೂ ಓದಿ: ಫೋನ್ ಹ್ಯಾಕ್ ಮಾಡಿಯೂ ಬಿಜೆಪಿಗೆ ಚುನಾವಣೆ ಗೆಲ್ಲಲು ಸಾಧ್ಯವಾಗಲಿಲ್ಲ: ಟಿಎಂಸಿ
ಪೆಗಾಸಸ್ ಹಗರಣದಲ್ಲಿ ಕೇಂದ್ರ ಗೃಹಮಂತ್ರಿ @AmitShah ಅವರ ನೇರ ಕೈವಾಡವಿದೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿದ್ದಿದ್ದು ಸ್ಪಷ್ಟ.
ಇಂತಹದ್ದೇ ಸ್ನೂಪ್ ಗೇಟ್ ಹಗರಣ ನಡೆಸಿದ ಇತಿಹಾಸ ಅವರಿಗಿದೆ.
ಕೂಡಲೇ ಅಮಿತ್ ಶಾ ರಾಜೀನಾಮೆ ನೀಡಿ, ತನಿಖೆ ಎದುರಿಸಬೇಕು.#ModiGovtKillingDemocracy
— Karnataka Congress (@INCKarnataka) July 21, 2021
ಸೋರಿಕೆಯಾಗಿರುವ ದತ್ತಾಂಶದ ಪ್ರಕಾರ, ಆಗಿನ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆಪ್ತ ಸಹಾಯಕರಾಗಿದ್ದ ಸತೀಶ್ ಅವರಿಗೆ ಸಂಬಂಧಿಸಿದ ಎರಡು ಫೋನ್ ಸಂಖ್ಯೆಗಳನ್ನು ಪೆಗಾಸಸ್ ಟಾರ್ಗೆಟ್ ಮಾಡಲಾಗಿದೆ. ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕರಾಗಿದ್ದ ವೆಂಕಟೇಶ್ ಅವರ ದೂರವಾಣಿ ಸಂಖ್ಯೆಯನ್ನು ಸಹ ಇದೇ ಅವಧಿಯಲ್ಲಿ ಸೇರಿಸಲಾಗಿದೆ ಎಂದು ವರದಿ ಬಹಿರಂಗ ಪಡಿಸಿದೆ.
“ಪೋನ್ ಕದ್ದಾಲಿಕೆ ಬಗ್ಗೆ ಸುಳ್ಳನ್ನೇ ಮನೆ ದೇವರನ್ನಾಗಿ ಮಾಡಿಕೊಂಡಿರುವ ಬಿಜೆಪಿ ನಾಯಕರಿಗೆ ಇರುವ ಭಯ ನನಗಿಲ್ಲ. ನುಡಿದಂತೆ ನಡೆಯುವ ಸತ್ಯದ ಹಾದಿ ನನ್ನದು. ಆದರೆ ಪ್ರಜೆಗಳ ಖಾಸಗಿ ಬದುಕಿನೊಳಗೆ ಇಣುಕಿ ನೋಡುವ ಚಟ ಸಂವಿಧಾನ ವಿರೋಧಿ ಮಾತ್ರ ಅಲ್ಲ, ಸಭ್ಯತೆಯ ಸಂಸ್ಕೃತಿಯೂ ಅಲ್ಲ” ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.
ಇವರ ಜೊತೆಗೆ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಭದ್ರತಾ ಸಿಬ್ಬಂದಿಯಲ್ಲಿ ಒಬ್ಬರಾಗಿದ್ದ ಮಂಜುನಾಥ್ ಮುದ್ದೇಗೌಡ ಎಂಬ ಪೊಲೀಸ್ ಅಧಿಕಾರಿಯ ಪೋನ್ ನಂಬರ್ ಕೂಡ ಹ್ಯಾಕ್ ಮಾಡಲಾಗಿದೆ ಎಂಬುದು ಬಹಿರಂಗವಾಗಿದೆ.
ಇದನ್ನೂ ಓದಿ: ಸಮ್ಮಿಶ್ರ ಸರ್ಕಾರ ಉರುಳಲು ಪೆಗಾಸಸ್ ಕಾರಣ? HDK, ಸಿದ್ದು ಆಪ್ತ ಸಹಾಯಕರು, ಜಿ.ಪರಮೇಶ್ವರ್ ಫೋನ್ ಹ್ಯಾಕ್!


