ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಪೀಪಲ್ಸ್ ಕಾನ್ಫರೆನ್ಸ್, ಪೀಪಲ್ಸ್ ಮೂವ್‌ಮೆಂಟ್ ಹಾಗೂ ಸಿಪಿಐಎಂ ಸೇರಿದಂತೆ ಜಮ್ಮು ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಕಾಶ್ಮೀರದಲ್ಲಿ ಮತ್ತೇ 370 ರ ವಿಧಿ ಮರುಸ್ಥಾಪನೆ ಬೇಕಾಗಿ ಒಂದಾಗಿದ್ದಾರೆ. ಅಲ್ಲದೆ ತಮ್ಮ ಮೈತ್ರಿ ಕೂಟಕ್ಕೆ ’ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್’ ಎಂದು ಹೆಸರಿಟ್ಟಿದ್ದಾರೆ.
ನಿನ್ನೆ ಸಂಜೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ನಿವಾಸದಲ್ಲಿ ಸಭೆ ನಡೆದಿದ್ದು, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಸಜಾದ್ ಲೋನ್, ಪೀಪಲ್ಸ್ ಮೂವ್ಮೆಂಟ್ ನಾಯಕ ಜಾವೈದ್ ಮಿರ್ ಮತ್ತು ಸಿಪಿಐಎಂ ಮುಖಂಡ ಮೊಹಮ್ಮದ್ ಯೂಸುಫ್ ತರಿಗಾಮಿ ಸಭೆಯಲ್ಲಿ ಹಾಜರಿದ್ದರು. ಮೆಹಬೂಬಾ ಮುಫ್ತಿಯನ್ನು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಿತ್ತು ಹಾಕಿದ ಬೆನ್ನಿಗೆ ಬಂಧಿಸಲಾಗಿತ್ತು, ಮಂಗಳವಾರ ಬಿಡುಗಡೆಗೊಳಿಸಲಾಗಿದೆ. ಫಾರೂಕ್ ಅಬ್ದುಲ್ಲಾ ಅವರನ್ನು ಮಾರ್ಚ್‌ನಲ್ಲಿ ಬಿಡುಗಡೆಗೊಳಿಸಲಾಗಿತ್ತು.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಯಾರನ್ನೂ ಗೃಹಬಂಧನದಲ್ಲಿಟ್ಟಿಲ್ಲ ಎಂದು ಅಮಿತ್ ಶಾ ಸುಳ್ಳು ಹೇಳಿದ್ದಾರೆ: ಪ್ರೊ.ಸೈಫುದ್ದೀನ್ ಸೋಜ್
“ನಮ್ಮದು ಸಾಂವಿಧಾನಿಕ ಹೋರಾಟವಾಗಿದ್ದು, 2019 ರ ಆಗಸ್ಟ್ 5 ಕ್ಕೆ ಮುನ್ನ ರಾಜ್ಯದ ಜನರು ಹೊಂದಿದ್ದ ಹಕ್ಕುಗಳನ್ನು ಸರಕಾರವು ಮರಳಿಸಬೇಕು” ಎಂದು ಅವರು ಫಾರೂಕ್ ಅಬ್ದುಲ್ಲಾ ಸ್ಪಷ್ಟಪಡಿಸಿದ್ದಾರೆ.
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರಕ್ಷಿಸಲು ಮತ್ತು ಅದನ್ನು ದುರ್ಬಲಗೊಳಿಸುವ ಯಾವುದೇ ಹೆಜ್ಜೆಯ ವಿರುದ್ಧ ಹೋರಾಡಲು ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳು ಸೇರಿ ”ಗುಪ್ಕರ್ ಡಿಕ್ಲರೇಷನ್” ಅನ್ನು ಅಂಗೀಕರಿಸಿದ್ದವು. 2019 ಆಗಸ್ಟ್ 4 ರಂದು ಫಾರೂಕ್ ಅಬ್ದುಲ್ಲಾ ಅವರ ಗುಪ್ಕರ್ ರೋಡ್ ನಿವಾಸದಲ್ಲಿ ”ಗುಪ್ಕರ್ ಘೋಷಣೆ’’ಗೆ ಸಹಿ ಹಾಕಲಾಗಿತ್ತು.
ಇದನ್ನೂ ಓದಿ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಒಂದುಗೂಡಿದ ಆರು ಪಕ್ಷಗಳು


