ಯುವ ಕಾಂಗ್ರೆಸ್ ಕಾರ್ಯಕರ್ತರ ಕೊಲೆ ಪ್ರಕರಣದಲ್ಲಿ ಮಾಜಿ ಶಾಸಕ ಹಾಗೂ ಸಿಪಿಐ (ಎಂ) ನಾಯಕ ಕೆ.ವಿ ಕುಂಞಿರಾಮನ್ ಮತ್ತು ಇತರರಿಗೆ ಎರ್ನಾಕುಲಂ ಸಿಬಿಐ ವಿಶೇಷ ನ್ಯಾಯಾಲಯ ವಿಧಿಸಿದ್ದ ಐದು ವರ್ಷಗಳ ಜೈಲು ಶಿಕ್ಷೆಗೆ ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ ಇಂದು (ಜ.8) ತಡೆ ನೀಡಿದೆ.
ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಶರತ್ ಲಾಲ್ ಪಿ.ಕೆ ಮತ್ತು ಕೃಪೇಶ್ ಅವರನ್ನು ಕಾಸಗೋಡಿನ ಪೆರಿಯದಲ್ಲಿ 2019 ಫೆಬ್ರವರಿ 17ರ ರಾತ್ರಿ ಕೊಲೆ ಮಾಡಲಾಗಿತ್ತು. ಪೆರಿಯ ಅವಳಿ ಕೊಲೆ ಎಂದೇ ಈ ಪ್ರಕರಣ ಪ್ರಸಿದ್ದಿಯಾಗಿದೆ.
ಸಿಬಿಐ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಅಪರಾಧಿಗಳು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಾಧೀಶ ಪಿ.ಬಿ ಸುರೇಶ್ ಅವರು ಶಿಕ್ಷೆಗೆ ತಡೆ ನೀಡಿ ಆದೇಶಿಸಿದ್ದಾರೆ.
ಕಾಸರಗೋಡಿನ ಉದಮಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಸಿಪಿಐ(ಎಂ) ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕುಂಞಿರಾಮನ್, ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಮಣಿಕಂಠನ್, ಸಿಪಿಐ(ಎಂ) ಪಕ್ಕಂ ವಲಯದ ಮಾಜಿ ಕಾರ್ಯದರ್ಶಿ ರಾಘವನ್ ವೆಳುತ್ತೊಳಿ ಅಲಿಯಾಸ್ ರಾಘವನ್ ನಾಯರ್ ಮತ್ತು ಸಿಪಿಐ(ಎಂ) ನಿಯಂತ್ರಿತ ಪನಾಯಲ್ ಸರ್ವೀಸ್ ಕೋ ಆಪರೇಟಿವ್ ಬ್ಯಾಂಕ್‌ನ ಮಾಜಿ ಕಾರ್ಯದರ್ಶಿ ಕೆ.ವಿ. ಭಾಸ್ಕರನ್ ಅವರಿಗೆ ಐದು ವರ್ಷಗಳ ಸಾಮಾನ್ಯ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
ಕೊಲೆ ನಡೆದ ಬಳಿಕ ಅಪರಾಧಿ ಸಾಜಿ ಜಾರ್ಜ್ ಅವರನ್ನು ಪೊಲೀಸ್ ವಾಹನದಿಂದ ಕರೆದೊಯ್ದ ಅಪರಾಧಕ್ಕಾಗಿ
ಐಪಿಸಿ ಸೆಕ್ಷನ್ 225ರ ಅಡಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಪ್ರಕರಣದ ಬಗ್ಗೆ ಸ್ಥಳೀಯ ಪೊಲೀಸರು, ರಾಜ್ಯ ಅಪರಾಧ ವಿಭಾಗ ಹಾಗೂ ಸಿಬಿಐ ತನಿಖೆ ನಡೆಸಿತ್ತು. ಒಟ್ಟು 24 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪೈಕಿ 10 ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು.
ಇದನ್ನೂ ಓದಿ : ಪೋಕ್ಸೋ ಪ್ರಕರಣದ ಆರೋಪಿಗೆ ರಕ್ಷಣೆ : ಮಹಿಳಾ ಇನ್‌ಸ್ಪೆಕ್ಟರ್, ಎಡಿಎಂಕೆ ಕಾರ್ಯಕರ್ತನ ಬಂಧನ


