ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮುಂಬೈನ ವಿಖ್ರೋಲಿಯ ನಿವಾಸಿ ಚೇತನ್ ಅಹಿರೆ ಎಂಬವರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರನ ಪರ ಡಾ.ಬಿಆರ್ ಅಂಬೇಡ್ಕರ್ ಅವರ ಮೊಮ್ಮಗ, ವಕೀಲ ಪ್ರಕಾಶ್ ಅಂಬೇಡ್ಕರ್ ವಾದ ಮಂಡಿಸಿದ್ದಾರೆ.
ಸೋಮವಾರ (ಫೆ.3) ಸ್ವಲ್ಪ ಹೊತ್ತು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಸ್. ಗಡ್ಕರಿ ಮತ್ತು ಕಮಲ್ ಖಾಟಾ ಅವರ ಹೈಕೋರ್ಟ್ ಪೀಠ ಭಾರತೀಯ ಚುನಾವಣಾ ಆಯೋಗ (ಇಸಿಐ) ಮತ್ತು ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿಗೆ ನೋಟಿಸ್ ಜಾರಿ ಮಾಡಿದೆ.
ನವೆಂಬರ್ 20, 2024ರಂದು ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ, ಸಂಜೆ 6 ಗಂಟೆಯ ನಂತರ ಭಾರೀ ಪ್ರಮಾಣದಲ್ಲಿ ಮತದಾನ ನಡೆದಿದೆ. ಹಾಗಾಗಿ, ಪ್ರತಿ ಮತಗಟ್ಟೆಯಲ್ಲಿ ಪ್ರತಿ ಮತದಾರರಿಗೆ ವಿತರಿಸಲಾದ ಟೋಕನ್‌ಗಳ ಸಂಖ್ಯೆ ಮತ್ತು ಎಲ್ಲಾ ವಿಧಾನಸಭಾ ಕ್ಷೇತ್ರಗಳ ವಿಭಾಗಗಳಲ್ಲಿ ವಿತರಿಸಲಾದ ಒಟ್ಟು ಟೋಕನ್‌ಗಳನ್ನು ಬಹಿರಂಗಪಡಿಸಲು ರಾಜ್ಯ ಮತ್ತು ಚುನಾವಣಾ ಆಯೋಗಕ್ಕೆ ಸೂಚಿಸಬೇಕು. ಒಂದು ವೇಳೆ ಟೋಕನ್‌ಗಳ ಮಾಹಿತಿ ನೀಡಲು ಆಯೋಗ ವಿಫಲವಾದರೆ ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ಅನೂರ್ಜಿತ ಮತ್ತು ಕಾನೂನುಬಾಹಿರವೆಂದು ಘೋಷಿಸಬೇಕು ಎಂದು ಅರ್ಜಿದಾರನ ಪರ ವಕೀಲ ಪ್ರಕಾಶ್ ಅಂಬೇಡ್ಕರ್ ನ್ಯಾಯಾಲಯವನ್ನು ಕೋರಿದ್ದಾರೆ.
https://twitter.com/INCKarnataka/status/1886633779684352373
ಮತದಾನದ ಅವಧಿಯ ಕೊನೆಯಲ್ಲಿ ಮತ್ತು ನಂತರ ಸರಿ ಸುಮಾರು 75 ಲಕ್ಷಕ್ಕೂ ಹೆಚ್ಚು ಮತಗಳು ಚಲಾವಣೆಯಾಗಿವೆ. ಆದರೆ, ಈ ಮತಗಳ ದೃಢೀಕರಣವನ್ನು ದಾಖಲಿಸುವ ಅಥವಾ ಪರಿಶೀಲಿಸುವ ಯಾವುದೇ ಪಾರದರ್ಶಕ ವ್ಯವಸ್ಥೆಯನ್ನು ಒದಗಿಸಲಾಗಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಮತದಾನದ ಅವಧಿಯ ಅಂತಿಮ ನಿಮಿಷಗಳಲ್ಲಿ ಮತ್ತು ಮತದಾನದ ಅಧಿಕೃತ ಸಮಯ ಮುಕ್ತಾಯದ ನಂತರವೂ ಹೆಚ್ಚಿನ ಶೇಕಡಾವಾರು ಮತಗಳು ಚಲಾವಣೆಯಾಗಿರುವುದು ಈ ಚುನಾವಣೆಯ ಬಗ್ಗೆ ಗಂಭೀರ ಕಳವಳವನ್ನು ಉಂಟು ಮಾಡಿದೆ ಎಂದು ಹೇಳಲಾಗಿದೆ.
ಅಧಿಕೃತ ಮತದಾನ ಅವಧಿ ಮುಕ್ತಾಯದ ನಂತರ ಹಾಜರಿದ್ದ ಮತದಾರರಿಗೆ ವಿತರಿಸಲಾದ ಪೂರ್ವ-ಸಂಖ್ಯೆಯ ಟೋಕನ್‌ಗಳನ್ನು ಬಹಿರಂಗಪಡಿಸಿಲ್ಲ. ಚುನಾವಣಾ ಆಯೋಗವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಕುರಿತು ವಿವರವಾದ ಡೇಟಾ ಬಿಡುಗಡೆ ಮಾಡುವಲ್ಲಿ ವಿಫಲವಾಗಿದೆ. ಈ ಕುರಿತ ಡೇಟಾ ನಮ್ಮಲ್ಲಿ ಇಲ್ಲ ಎಂಬ ಚುನಾವಣಾ ಆಯೋಗದ ಲಿಖಿತ ಉತ್ತರವು ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು (ಇವಿಎಂ) ಬಳಸಿಕೊಂಡು ನಡೆಸುವ ಚುನಾವಣಾ ಪ್ರಕ್ರಿಯೆಯ ಸುರಕ್ಷತೆ, ನಿಖರತೆ, ವಿಶ್ವಾಸಾರ್ಹತೆ ಮತ್ತು ಪರಿಶೀಲನೆಯ ಬಗ್ಗೆ ಗಮನಾರ್ಹ ಅನುಮಾನಗಳನ್ನು ಹುಟ್ಟು ಹಾಕುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
288 ಕ್ಷೇತ್ರಗಳ ಪೈಕಿ ಸುಮಾರು 19 ಕ್ಷೇತ್ರಗಳಲ್ಲಿ ಇವಿಎಂಗಳಲ್ಲಿ ಎಣಿಕೆಯಾದ ಮತಗಳು ದಾಖಲಾದ ಮತಗಳ ಸಂಖ್ಯೆಯನ್ನು ಮೀರಿದೆ. ಇನ್ನು 76 ಕ್ಷೇತ್ರಗಳಲ್ಲಿ ಇವಿಎಂಗಳಲ್ಲಿ ಎಣಿಕೆಯಾದ ಮತಗಳು ಪೋಲಾದ ಮತಗಳಿಗಿಂತ ಕಡಿಮೆ ಇರುವುದು ಕಂಡು ಬಂದಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಪ್ರತಿ ಮತಗಟ್ಟೆಯಲ್ಲಿ ಅಧಿಕೃತ ಮತದಾನದ ಅವಧಿ ಮುಕ್ತಾಯ ನಂತರ (ಅಂದರೆ, ಸಂಜೆ 6 ಗಂಟೆಯ ನಂತರ) ಮತದಾರರಿಗೆ ವಿತರಿಸಲಾದ ನಿಖರವಾದ ಸಂಖ್ಯೆಯ ಟೋಕನ್‌ಗಳ ಬಗ್ಗೆ ಮತ್ತು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವಿಭಾಗಗಳಲ್ಲಿ ವಿತರಿಸಲಾದ ಒಟ್ಟು ಟೋಕನ್‌ಗಳ ಬಗ್ಗೆ ವಿವರವಾದ ಬಹಿರಂಗಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ನವೆಂಬರ್ 20, 2024ರಂದು ಸಂಜೆ 5 ರಿಂದ 6 ಗಂಟೆಯವರೆಗೆ ಮಹಾರಾಷ್ಟ್ರದ ಪ್ರತಿ ಕ್ಷೇತ್ರದಲ್ಲಿ ಚಲಾಯಿಸಲಾದ ಮತ್ತು ಮತದಾನವಾದ ಒಟ್ಟು ಮತಗಳ ಸಂಖ್ಯೆ. ಸಂಜೆ 6 ಗಂಟೆಯ ನಂತರ ಮತದಾನದ ಅಂತಿಮ ಮುಕ್ತಾಯದ ಸಮಯದವರೆಗೆ ಪ್ರತಿ ಕ್ಷೇತ್ರದಲ್ಲಿ ಚಲಾಯಿಸಲಾದ ಮತ್ತು ಮತದಾನವಾದ ಒಟ್ಟು ಮತಗಳ ಸಂಖ್ಯೆಯನ್ನು ಬಹಿರಂಗಪಡಿಸುವಂತೆಯೂ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಈ ಎಲ್ಲಾ ಮಾಹಿತಿಗಳನ್ನು ನೀಡುವಂತೆ ಆರ್‌ಟಿಐ ಮೂಲಕ ಚುನಾವಣಾ ಆಯೋಗವನ್ನು ಕೋರಿದ್ದೆವು. ಆದರೆ, ಆಯೋಗ ತಮ್ಮಲ್ಲಿ ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದೆ. ಚುನಾವಣಾ ಅಧಿಕಾರಿಗಳು ಈ ಮಾಹಿತಿಯನ್ನು ಬಹಿರಂಗಪಡಿಸಲು ವಿಫಲವಾದರೆ ಅದು ಜನತಾ ಪ್ರಾತಿನಿಧ್ಯ ಕಾಯ್ದೆಯ ನಿಬಂಧನೆಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದಂತೆ ಆಗುತ್ತದೆ ಮತ್ತು ಇದರಿಂದಾಗಿ ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆ ಹಾಳಾಗುತ್ತದೆ ಎಂದು ಅರ್ಜಿದಾರ ಚೇತನ್ ಅಹಿರೆ ಪರ ವಕೀಲ ಅಂಬೇಡ್ಕರ್ ಹೇಳಿದ್ದಾರೆ.
ಚುನಾವಣೆಯಲ್ಲಿ ಬಳಸಲಾದ ಇವಿಎಂಗಳು ಮತ್ತು ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರೇಲ್ಸ್ (ವಿವಿಪ್ಯಾಟ್) ಗಳ ಸಮಗ್ರ ಮತ್ತು ಸ್ವತಂತ್ರ ಲೆಕ್ಕಪರಿಶೋಧನೆಯನ್ನು ಸಹ ಅರ್ಜಿಯಲ್ಲಿ ಕೋರಲಾಗಿದೆ. ಎರಡು ವಾರಗಳ ನಂತರ ಪೀಠವು ಈ ವಿಷಯವನ್ನು ಮತ್ತೆ ವಿಚಾರಣೆ ನಡೆಸಲಿದೆ.
ಸೋನಿಯಾ ಗಾಂಧಿ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಿದ ಬಿಜೆಪಿ ಸಂಸದರು
electo


