ಭಾರತೀಯ ನ್ಯಾಯ ಸಂಹಿತೆಯ(ಬಿಎನ್‌ಎಸ್) ಸೆಕ್ಷನ್ 152ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ (ಆ.8) ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ ಎಂದು ಲೈವ್ ಲಾ ವರದಿ ಮಾಡಿದೆ.
ಕ್ರಿಮಿನಲ್ ಕಾನೂನು ಬಿಎನ್ಎಸ್‌ನ ಸೆಕ್ಷನ್ 152 ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳ ವಿರುದ್ದ ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿದೆ. ‘ಉದ್ದೇಶಪೂರ್ವಕವಾಗಿ ಪ್ರತ್ಯೇಕತೆ, ದಂಗೆ ಅಥವಾ ವಿಧ್ವಂಸಕ ಚಟುವಟಿಕೆಗಳನ್ನು ಪ್ರಚೋದಿಸುವ ಅಥವಾ ಪ್ರಚೋದಿಸಲು ಪ್ರಯತ್ನಿಸುವುದರ ವಿರುದ್ದದ ಇದರಡಿ ಕ್ರಮ ಜರುಗಿಸಲಾಗುತ್ತದೆ.
‘ದೇಶದ್ರೋಹ ಕಾನೂನು’ ಎಂದು ಸುಲಭವಾಗಿ ಹೇಳುವ ಈ ವಸಾಹತುಶಾಹಿ ಕಾನೂನು, ಈ ಹಿಂದಿನ ಭಾರತೀಯ ದಂಡ ಸಂಹಿತೆಯ(ಐಪಿಸಿ) ಸೆಕ್ಷನ್ 124A ಯನ್ನು ಮತ್ತೊಮ್ಮೆ ಪರಿಚಯಿಸಿದಂತಿದೆ. ಕೇವಲ ಸಂಖ್ಯೆ ಬದಲಾಗಿದೆಯೇ ಹೊರತು, ನಿಬಂಧನೆಗಳು ಬದಲಾಗಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.
ಭಾರತೀಯ ಸೇನೆಯ ನಿವೃತ್ತ ಮೇಜರ್ ಜನರಲ್ ಎಸ್.ಜಿ. ವೊಂಬತ್ಕೆರೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು, ಅದೇ ನಿಬಂಧನೆಯನ್ನು ಪ್ರಶ್ನಿಸಿ ಬಾಕಿ ಇರುವ ಮತ್ತೊಂದು ಪ್ರಕರಣದೊಂದಿಗೆ ನೋಟಿಸ್ ಜಾರಿ ಮಾಡಿದೆ.
ವೊಂಬತ್ಕೆರೆ ತಮ್ಮ ಅರ್ಜಿಯಲ್ಲಿ, ಈ ಹಿಂದಿನ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124A ಅಡಿಯಲ್ಲಿ ದೇಶದ್ರೋಹದ ವಿಚಾರಣೆಗಳು ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ಸ್ಥಗಿತಗೊಳಿಸಲು ನ್ಯಾಯಾಲಯವು ಮೇ 2022 ರಲ್ಲಿ ಆದೇಶಿಸಿದೆ ಎಂದು ಹೇಳಿರುವುದಾಗಿ ದಿ ಹಿಂದೂ ವರದಿ ಮಾಡಿದೆ.
ಆದಾಗ್ಯೂ, ಜುಲೈ 2024ರಲ್ಲಿ ಭಾರತೀಯ ನ್ಯಾಯ ಸಂಹಿತೆಯನ್ನು ಭಾರತೀಯ ದಂಡ ಸಂಹಿತೆ ಬದಲಾಯಿಸಿದಾಗ ಸೆಕ್ಷನ್ 124A ಅನ್ನು ಸೆಕ್ಷನ್ 152 ರ ರೂಪದಲ್ಲಿ ಮತ್ತೆ ಕಾನೂನಿನೊಳಗೆ ಸೇರಿಸಲಾಯಿತು ಎಂದು ಅರ್ಜಿದಾರರು ವಾದಿಸಿದ್ದಾರೆ.
ಹೊಸ ಸೆಕ್ಷನ್ 1860ರ ಐಪಿಸಿಯ ದೇಶದ್ರೋಹದ ಸೆಕ್ಷನ್ 124Aಯ ಹೊಸ ರೂಪವಲ್ಲದೆ ಮತ್ತೇನಲ್ಲ. ಹೊಸ ಸೆಕ್ಷನ್ ಪರಿಚಯಿಸಿದ ರೀತಿ ಬದಲಾಗಿರಬಹುದು. ಆದರೆ, ಅದರ ಅರ್ಥ ಹಳೆಯದ್ದೆ ಎಂದು ಅರ್ಜಿದಾರರು ಹೇಳಿದ್ದಾರೆ ಎಂದು ವರದಿಯಾಗಿದೆ.
ಬಿಎನ್‌ಎಸ್ ಸೆಕ್ಷನ್ 152 ಸಂವಿಧಾನದ ವಿಧಿ 14, 19(1)(ಎ) ಮತ್ತು 21ರ ಅಡಿಯಲ್ಲಿ ನೀಡಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಸಂವಿಧಾನದ ವಿಧಿ 14 ಸಮಾನತೆ, 19(1)(ಎ) ವಾಕ್ ಸ್ವಾತಂತ್ರ್ಯ ಮತ್ತು 21 ಬದುಕುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ.
2020ರ ದೆಹಲಿ ಗಲಭೆ ಪ್ರಕರಣ: ಸಿಎಎ ವಿರೋಧಿ ಹೋರಾಟಗಾರ ಖಾಲಿದ್ ಸೈಫಿಗೆ 10 ದಿನಗಳ ಮಧ್ಯಂತರ ಜಾಮೀನು


