ಸರ್ಕಾರಿ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ತೆಗೆಯಬಾರದು ಮತ್ತು ವಿಡಿಯೋ ಮಾಡಬಾರದು ಎಂದು ಆದೇಶ ಹೊರಡಿಸಿದ್ದ ಸರ್ಕಾರ ರಾತ್ರೋರಾತ್ರಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.
ನಿರ್ಬಂಧ ಆದೇಶವನ್ನು ಜುಲೈ 15ರ ತಡರಾತ್ರಿ ವಾಪಸ್ ಪಡೆಯಲಾಗಿದೆ. ರಾತ್ರಿ 2 ಗಂಟೆ ವೇಳೆಗೆ ಮುಖ್ಯಮಂತ್ರಿಯವರ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಈ ಮಾಹಿತಿ ರವಾನೆಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಕಾರ್ಯನಿರ್ವಹಣೆ ವೇಳೆಯಲ್ಲಿ ಸಾರ್ವಜನಿಕರು ಅನುಮತಿ ಇಲ್ಲದೆ ಫೋಟೊ ತೆಗೆಯಬಾರದು, ವಿಡಿಯೊ ಚಿತ್ರೀಕರಣ ಮಾಡಬಾರದು ಎಂದು ನಿಷೇಧಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶುಕ್ರವಾರ ಆದೇಶ ಹೊರಡಿಸಿತ್ತು.
‘ಶೇ 40ರ ಲಂಚದ ಆಪಾದನೆಗೆ ಗುರಿಯಾಗಿರುವ ಸರ್ಕಾರ, ಭ್ರಷ್ಟಾಚಾರವನ್ನು ಎಗ್ಗಿಲ್ಲದೆ ನಡೆಸಲು ಅನುಕೂಲವಾಗುವಂತೆ ನಿರ್ಬಂಧ ಹೇರಿದೆ. ಇದೇ 40% ಕಮಿಷನ್ ಸರ್ಕಾರದ ಪಾರದರ್ಶಕತೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಸಚಿವಾಲಯದ ಕಚೇರಿಗಳನ್ನು ಬಿಟ್ಟು ಉಳಿದೆಲ್ಲ ಕಚೇರಿಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿತ್ತು. ಕಚೇರಿಯ ಮುಖ್ಯಸ್ಥರು ತಮ್ಮ ವ್ಯಾಪ್ತಿಯ ಕೊಠಡಿಗಳ ಚಲನವಲನಗಳನ್ನು ವೀಕ್ಷಿಸಲು ಕೇಂದ್ರೀಕೃತ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಅದನ್ನು ಇನ್ನಷ್ಟು ಸುಧಾರಣೆ ಮಾಡಬೇಕು ಎಂಬ ಆಗ್ರಹ ಇರುವಾಗಲೇ, ಫೋಟೊ, ವಿಡಿಯೊ ಚಿತ್ರೀಕರಣನ್ನೂ ನಿಷೇಧ ಹೇರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ವಿಧಾನಸೌಧ ಮತ್ತು ವಿಕಾಸಸೌಧದಲ್ಲಿನ ಸಚಿವರು ಮತ್ತು ಅಧಿಕಾರಿಗಳ ಕಚೇರಿಗೆ ಮಾಧ್ಯಮ ಪ್ರತಿನಿಧಿಗಳು ಭೇಟಿ ನೀಡುವುದನ್ನು ನಿರ್ಬಂಧಿಸಿ 2021ರ ಜುಲೈ ತಿಂಗಳಲ್ಲಿ ಆದೇಶ ಹೊರಡಿಸಲಾಗಿತ್ತು. ತೀವ್ರ ವಿರೋಧ ವ್ಯಕ್ತವಾದ ಬಳಿಕ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆದೇಶ ಹಿಂಪಡೆದಿದ್ದರು. ಈಗ ಬೊಮ್ಮಾಯಿಯವರ ಅವಧಿಯಲ್ಲೂ ಇಂತಹದ್ದೇ ಪ್ರಕರಣ ಮರುಕಳಿಸಿದೆ.
ಇದನ್ನೂ ಓದಿರಿ: ಒಂದೇ ಖಾತೆಗೆ ಐದು ಪ್ರೊಫೈಲ್: ಫೇಸ್‌ಬುಕ್‌ನಿಂದ ಹೊಸ ಪ್ರಯೋಗ
ಹೊಸ ಆದೇಶವನ್ನು ತೀವ್ರವಾಗಿ ವಿರೋಧಿಸಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ರಾಜ್ಯ ಸರ್ಕಾರವು ಸರ್ಕಾರಿ ನೌಕರರ ಹಿತರಕ್ಷಣೆಗಾಗಿ ಈ ಆದೇಶ ಹೊರಡಿಸಿಲ್ಲ. ಸರ್ಕಾರದಲ್ಲಿನ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಈ ಕ್ರಮ ಕೈಗೊಂಡಿದೆ’ ಎಂದು ಆರೋಪಿಸಿದ್ದರು.
ಡಿಜಿಟಲ್ ಸುದ್ದಿ ಮಾಧ್ಯಮಗಳ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ?
ಡಿಜಿಟಲ್ ಸುದ್ದಿ ಮಾಧ್ಯಮವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಅದಕ್ಕಾಗಿ ಪತ್ರಿಕೆ ಮತ್ತು ನಿಯತಕಾಲಿಕ ನೋಂದಣಿ ಮಸೂದೆಯನ್ನು ಮಂಡಿಸಲು ಮುಂದಾಗಿದೆ. ಈಗ ‘ಪತ್ರಿಕೆ ಮತ್ತು ಪುಸ್ತಕಗಳ ನೋಂದಣಿ ಕಾಯ್ದೆ 1867’ ಜಾರಿಯಲ್ಲಿದ್ದು, ಇದು ಪತ್ರಿಕೆಗಳ ನಿಯಂತ್ರಣಕ್ಕೆ ಬಳಕೆಯಾಗುತ್ತಿದೆ.
ಡಿಜಿಟಲ್ ಸುದ್ದಿ ಪೋರ್ಟಲ್‌ಗಳನ್ನು ಕೂಡ ಪತ್ರಿಕೆಗಳ ರೀತಿಯಲ್ಲಿಯೇ ನಿಯಂತ್ರಿಸುವುದಕ್ಕೆ ಹೊಸ ಕಾಯ್ದೆಯನ್ನು ಜಾರಿಗೊಳಿಸಲು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮುಂದಾಗಿದೆ. ಸಚಿವ ಸಂಪುಟದ ಮುಂದೆ ಶೀಘ್ರದಲ್ಲೇ ಮಸೂದೆ ಬರಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.


