ನೀಟ್-ಯುಜಿ ಪತ್ರಿಕೆ ಸೋರಿಕೆ ವಿವಾದ ದೆಶದಾದ್ಯಂತ ತೀವ್ರಗೊಳ್ಳುತ್ತಿದ್ದು, ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಮತ್ತೆ ನಡೆಸುವಂತೆ ಒತ್ತಾಯಿಸಿ ನೀಟ್ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಜಂತರ್ ಮಂತರ್‌ನಲ್ಲಿ ಭಾನುವಾರ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ಜಂತರ್ ಮಂತರ್‌ನಿಂದ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದವರೆಗೆ ಮೆರವಣಿಗೆ ನಡೆಸಿದರು. ಆದರೆ, ಪೊಲೀಸರು ಅವರನ್ನು ಮಾರ್ಗ ಮಧ್ಯದಲ್ಲೇ ತಡೆದರು.
ಪ್ರತಿಭಟನಾಕಾರರು ಪ್ರಧಾನಿ ಭೇಟಿಗೆ ಒತ್ತಾಯಿಸಿದ್ದು, ಪೊಲೀಸರು ಅನುಮತಿ ನಿರಾಕರಿಸಿದರು. ಮನವಿ ಪತ್ರ ಬರೆಯುವಂತೆ ಪ್ರತಿಭಟನಾಕಾರರನ್ನು ಕೇಳಿದರು. ನಂತರ ಪ್ರತಿಭಟನಾಕಾರರು ಪೊಲೀಸರಿಗೆ ಮನವಿ ಪತ್ರ ನೀಡಿ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು. ತಮ್ಮ ಜ್ಞಾಪಕ ಪತ್ರದಲ್ಲಿ, ವಿದ್ಯಾರ್ಥಿಗಳು ಸೋರಿಕೆಯನ್ನು ಬಿಹಾರ ಪೊಲೀಸರ ಇಒಯು ತನಿಖೆಯಿಂದ ಕಂಡುಕೊಳ್ಳಲಾಗಿದೆ, ಆದ್ದರಿಂದ ಕೌನ್ಸೆಲಿಂಗ್ ಅನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಿ ಹೇಳಿದರು. “ದಯವಿಟ್ಟು ನ್ಯಾಯ ಒದಗಿಸಿ, ನೀವು ನಮ್ಮ ಕೊನೆಯ ಭರವಸೆ” ಎಂದು ವಿದ್ಯಾರ್ಥಿಗಳು ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.
ವಿಶೇಷವೆಂದರೆ, ಮೇ 5 ರಂದು ಪರೀಕ್ಷೆ ನಡೆದಿದ್ದು, ಸುಮಾರು 24 ಲಕ್ಷ ಅಭ್ಯರ್ಥಿಗಳು ಭಾಗವಹಿಸಿದ್ದರು. ಜೂನ್ 4 ರಂದು ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಆದರೆ, ಅದರ ನಂತರ ಬಿಹಾರದಂತಹ ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಇತರ ಅಕ್ರಮಗಳ ಆರೋಪಗಳು ಕೇಳಿಬಂದವು. ನಂತರ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ನಿಲ್ಲಿಸಿ ಮರು ಪರೀಕ್ಷೆ ನಡೆಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಪರೀಕ್ಷೆ ಸುಧಾರಣೆಗಾಗಿ ಸಮಿತಿ ರಚನೆ
ಭಾರೀ ಸಾರ್ವಜನಿಕ ಪ್ರತಿಭಟನೆಯ ನಂತರ, ಶಿಕ್ಷಣ ಸಚಿವಾಲಯವು ಪರೀಕ್ಷಾ ಪ್ರಕ್ರಿಯೆಯ ಕಾರ್ಯವಿಧಾನದಲ್ಲಿ ಸುಧಾರಣೆ, ಡೇಟಾ ಭದ್ರತಾ ಪ್ರೋಟೋಕಾಲ್‌ಗಳಲ್ಲಿ ಸುಧಾರಣೆ ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಕಾರ್ಯನಿರ್ವಹಣೆಯ ಕುರಿತು ಶಿಫಾರಸುಗಳನ್ನು ಮಾಡಲು ತಜ್ಞರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತು. ಇಸ್ರೋ ಮಾಜಿ ಅಧ್ಯಕ್ಷ ಡಾ ಕೆ ರಾಧಾಕೃಷ್ಣನ್ ನೇತೃತ್ವದ 7 ಸದಸ್ಯರ ಸಮಿತಿಯು ಇನ್ನೆರಡು ತಿಂಗಳಲ್ಲಿ ತನ್ನ ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಲಿದೆ.
ನೀಟ್ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸಿತು. ಈ ಮಧ್ಯೆ, ಪೇಪರ್ ಸೋರಿಕೆಯ ವರದಿಗಳು ಹೊರಹೊಮ್ಮಿದ ನಂತರ ಯುಜಿಸಿ ನೆಟ್ ಪರೀಕ್ಷೆಯನ್ನು ಸಹ ರದ್ದುಗೊಳಿಸಲಾಯಿತು, ಇದು ಪರೀಕ್ಷಾ ಪ್ರಕ್ರಿಯೆಯ ಪಾವಿತ್ರ್ಯತೆಯ ಮೇಲಿನ ಕಳವಳವನ್ನು ಇನ್ನಷ್ಟು ಉಲ್ಬಣಗೊಳಿಸಿತು. ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದ್ದು, ಇಂದು ನಡೆಯಬೇಕಿದ್ದ ನೀಟ್ ಪಿಜಿ ಪರೀಕ್ಷೆಯನ್ನು ಜೂನ್ 22ರ ರಾತ್ರಿ ರದ್ದುಗೊಳಿಸಲಾಗಿದೆ.
ಇದನ್ನೂ ಓದಿ; ನೀಟ್-ಪಿಜಿ ಪರೀಕ್ಷೆ ಮುಂದೂಡಿದ ಎನ್‌ಟಿಎ; ಸರ್ಕಾರದ ನಡೆಗೆ ಆಕಾಂಕ್ಷಿಗಳ ಅಸಮಾಧಾನ


