Homeಮುಖಪುಟಬೆಳದಿಂಗಳು ಕತ್ತಲೆಗೆ ಜಾರಿದಾಗ : ಕ್ರಾಂತಿಕಾರಿ ಕವಿ ವರವರ ರಾವ್ ಜೀವನ ಚಿತ್ರಣ

ಬೆಳದಿಂಗಳು ಕತ್ತಲೆಗೆ ಜಾರಿದಾಗ : ಕ್ರಾಂತಿಕಾರಿ ಕವಿ ವರವರ ರಾವ್ ಜೀವನ ಚಿತ್ರಣ

ಸರ್ಕಾರಗಳು ಅವರ ಮೇಲೆ 25 ಪ್ರಕರಣಗಳಲ್ಲಿ ಬೇರೆಬೇರೆ ಆರೋಪಗಳನ್ನು ಹೊರಿಸಿ ದೂರು ದಾಖಲಿಸಿಕೊಂಡಿವೆ. ವಿಪರ್ಯಾಸವೆಂದರೆ, ಇದುವರೆಗೆ ಇವುಗಳ ಪೈಕಿ ಒಂದೇ ಒಂದು ಪ್ರಕರಣದಲ್ಲೂ ಒಂದೇ ಒಂದು ಆರೋಪವನ್ನೂ ನ್ಯಾಯಾಲಯದ ಮುಂದೆ ಸಾಬೀತು ಮಾಡಲು ಪ್ರಭುತ್ವಕ್ಕೆ ಸಾಧ್ಯವಾಗಿಲ್ಲ.

- Advertisement -

ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ವಿಚಾರಾಣಾಧೀನ ಸೆರೆವಾಸಿಯಾಗಿರುವ ಎಂಬತ್ತು ವರ್ಷದ ತೆಲುಗು ಕ್ರಾಂತಿಕಾರಿ ಕವಿ ವರವರ ರಾವ್ ಅವರು ಪ್ರಸ್ತುತ ನಾನಾವತಿ ಆಸ್ಪತ್ರೆಯಲ್ಲಿ ವಯೋಸಹಜ ಅನಾರೋಗ್ಯಗಳಿಂದ ನರಳುತ್ತಿದ್ದಾರೆ. ಒಬ್ಬ ಜನಕವಿಯಾಗಿ, ಜನ ಚಳುವಳಿಗಳ ಇತಿಹಾಸ ಪ್ರಜ್ಞೆಯಾಗಿ, ಪ್ರಜಾತಾಂತ್ರಿಕ ಮೌಲ್ಯಗಳ ಪ್ರತಿಪಾದಕನಾಗಿ, ಶಿಕ್ಷಕನಾಗಿ, ವಾಗ್ಮಿಯಾಗಿ ನಮ್ಮ ನಡುವಿನ ಚೇತನದಂತಿರುವ ಅವರನ್ನು ಈ ದುರ್ದಿನಗಳ ಅಟ್ಟಹಾಸಕ್ಕೆ ಆಹುತಿಯಾಗಿಸುವುದು ಯಾವ ನಿಟ್ಟಿನಿಂದಲೂ ಸಮಂಜಸವಾದುದಲ್ಲ. ಅವರ ಬಂಧನದ ವಿರುದ್ಧ ಕಳೆದ ಹತ್ತು ದಿನಗಳಲ್ಲಿ ಪ್ರಪಂಚಾದ್ಯಂತ ಪ್ರತಿಭಟನೆಗಳ ರೂಪದಲ್ಲಿ ಪುಟಿದೇಳುತ್ತಿರುವ ಪ್ರತಿರೋಧವೇ ಅವರ ಖ್ಯಾತಿಗೆ ಸಾಕ್ಷಿ.

1940ರಲ್ಲಿ ಜನಿಸಿದ, ವರವರ ರಾವ್ ಅವರು ತಮ್ಮ ಶೈಕ್ಷಣಿಕ ಜೀವನದುದ್ದಕ್ಕೂ ಅದ್ಭುತ ಚುರುಕಿನ ವಿದ್ಯಾರ್ಥಿ ಎಂದೇ ಹೆಸರಾದವರು. ಅವರು ತಮ್ಮ ಮೊದಲ ಕವನ ರಚಿಸಿದ್ದು ಹದಿನೇಳನೇ ವಯಸ್ಸಿನಲ್ಲಿ. 1957ರಲ್ಲಿ ತಮ್ಮ ಕವನಕ್ಕೆ ಅಂದಿನ ಪ್ರತಿಷ್ಠಿತ `ಆಂಧ್ರ ಅಭ್ಯುದಯೋತ್ಸವಲು’ ಪ್ರಶಸ್ತಿಯನ್ನೂ ಪಡೆದರು. ಅವರ ಪದವಿ ವ್ಯಾಸಂಗದ ಎರಡನೇ ವರ್ಷದಲ್ಲಿದ್ದಾಗಲೆ ವಾರಂಗಲ್‌ನಲ್ಲಿ ಆಯೋಜನೆಯಾಗುತ್ತಿದ್ದ ಸಾಪ್ತಾಹಿಕ ಸಾಹಿತ್ಯ ಕೂಟ `ಮಿತ್ರ ಮಂಡಳಿ’ಯ ಸಂಚಾಲಕರೂ ಆಗಿದ್ದರು. ತೆಲುಗು ಭಾಷೆ ಮತ್ತು ಸಾಹಿತ್ಯದಲ್ಲಿ ತಮ್ಮ ಸ್ನಾತಕೋತ್ತರ ಪದವಿ ಪೂರೈಸಿದ ಅವರು, 1962ರಲ್ಲಿ ಪಿ.ಎಚ್.ಡಿ ವ್ಯಾಸಂಗಕ್ಕೆ ಸೇರಿಕೊಂಡರಾದರು, ಕುಟುಂಬದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಪಿ.ಎಚ್.ಡಿ ಪೂರ್ಣಗೊಳಿಸಲಾಗದೆ ಅರ್ಧಕ್ಕೇ ಬಿಟ್ಟು, 1964 ರಲ್ಲಿ ಬೋಧಕ ಹುದ್ದೆ ಸೇರಿಕೊಂಡರು. ಪದವಿ ಕಾಲೇಜೊಂದರಲ್ಲಿ ಒಂದು ವರ್ಷಕಾಲ ಲೆಕ್ಚರರ್ ಆಗಿದ್ದ ವರವರ ರಾವ್ ಅವರಿಗೆ 1965ರಲ್ಲಿ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ದೃಶ್ರವಣ ಪ್ರಚಾರ ನಿರ್ದೇಶನಾಲಯದಲ್ಲಿ ಪ್ರಕಾಶನ ಸಹಾಯಕ ಹುದ್ದೆ ಒಲಿದು ಬಂತು. ಆದರೂ ಅವರಿಗೆ ಬೋಧಕ ವೃತ್ತಿ ಮೇಲಿನ ಪ್ರೀತಿಯೇ ಹೆಚ್ಚಿದ್ದರಿಂದ 1966ರಲ್ಲಿ ಮಹಬೂಬನಗರದ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಸೇರಿಕೊಂಡು ಎರಡು ವರ್ಷ ಸೇವೆ ಸಲ್ಲಿಸಿದರು. 1968ರಲ್ಲಿ ಅವರ ಸ್ವಂತ ಊರು ವಾರಂಗಲ್‌ನಲ್ಲೇ ಜನೋಪಕಾರಿ ನಾಯಕರೊಬ್ಬರು ಪದವಿ ಕಾಲೇಜು ಶುರು ಮಾಡಿದಾಗ, ಅಲ್ಲಿಗೆ ಬೋಧಕರಾಗಿ ಸೇರಿಕೊಂಡ ಮೊದಲಿಗರಲ್ಲಿ ವರವರ ರಾವ್ ಅವರು ಒಬ್ಬರು. 1998ರಲ್ಲಿ ಅವರು ಅದೇ ಕಾಲೇಜಿನಿಂದ ನಿವೃತ್ತರಾದರು. ತಮ್ಮ ವೃತ್ತಿ ಬದುಕಿನ ಈ ಅವಧಿಯಲ್ಲಿ ಅವರು ಪ್ರಾಂಶಪಾಲ, ಪರೀಕ್ಷಾ ನಿಯಂತ್ರಕರು ಮತ್ತು ಅಧ್ಯಯನ ಮಂಡಳಿಗಳ ಮುಖ್ಯಸ್ಥ ಹೀಗೆ ನಾನಾ ಹುದ್ದೆಗಳಲ್ಲಿ ತಮ್ಮ ಸೇವೆಯನ್ನು ಧಾರೆ ಎರೆದಿದ್ದಾರೆ. ಸಮಾಜ ಮತ್ತು ಸಾಹಿತ್ಯಗಳ ನಡುವಿನ ಕೊಡುಕೊಳ್ಳುವಿಕೆಯ ಕುರಿತ ಅವರ ಪ್ರಬಂಧ, ತೆಲುಗು ಸಾಹಿತ್ಯ ವಿಮರ್ಶಾ ವಲಯದಲ್ಲಿ ಒಂದು ಹೊಸ ಅಲೆಯನ್ನೇ ಹುಟ್ಟುಹಾಕಿತು.

1957ರಿಂದ ಕಾವ್ಯ ರಚನೆಯಲ್ಲಿ ತೊಡಗಿಕೊಂಡ ಅವರು, ಸ್ವಾತಂತ್ಯ್ರತ್ತರದ ಮೊದಲ ದಶಕದ ಅಸ್ಪಷ್ಟ ನೆಹರೂಮಯ ಸಮಾಜವಾದದೊಳಗಿಂದ ವಿಕಸಗೊಳ್ಳುತ್ತಾ, ಮುಂದಿನ ದಶಕಗಳಲ್ಲಿ ಭಾರತ ಕಂಡುಂಡ ವಿದ್ರೋಹಗಳ ಹಿಂದಿನ ಮರ್ಮಗಳನ್ನೆಲ್ಲ ಅರ್ಥಮಾಡಿಕೊಂಡು, ಭಾರತದ ಭವಿತಕ್ಕೆ ಜನಜನ್ಯ ಸೃಷ್ಟಿಶೀಲತೆ ಮತ್ತು ಚಳುವಳಿಗಳೇ ಮದ್ದು ಎಂಬ ದೃಢ ನಿಲುವಿಗೆ ತಮ್ಮ ಕಾವ್ಯಕೃಷಿಯನ್ನು ತಂದುನಿಲ್ಲಿಸಿಕೊಂಡರು. ಆಂಧ್ರದ ನೆಲದಲ್ಲಿ `ವಿರಸಂ’ ಎಂಬ ಹೆಸರಿನಿಂದಲೇ ಪ್ರಖ್ಯಾತವಾದ ಕ್ರಾಂತಿಕಾರಿ ಬರಹಗಾರರ ಸಂಘಟನೆಯ ಸ್ಥಾಪಕ ಸದಸ್ಯರಲ್ಲಿ ರಾವ್ ಕೂಡಾ ಒಬ್ಬರು. ತಮ್ಮ ಹದಿನೈದು ಕವನ ಸಂಕಲನಗಳ ಜೊತೆಗೆ, ಸಾಮಾಜಿಕ-ರಾಜಕೀಯ, ಸಾಹಿತ್ಯಿಕ ವಿಮರ್ಶೆ-ವಿಶ್ಲೇಷಣೆ, ವಿದ್ವತ್‌ಪೂರ್ಣ ಸಾರ್ವಜನಿಕ ಭಾಷಣಗಳ ಮೂಲಕ ಸಮಾಜಪ್ರಜ್ಞೆಯನ್ನು ಉದ್ದೀಪಿಸುವಲ್ಲಿ ಕಳೆದ ಐದು ದಶಕಗಳಲ್ಲಿ ತಮ್ಮದೇ ಕೊಡುಗೆ ನೀಡಿ ಪ್ರಖ್ಯಾತಿಗಳಿಸಿದ್ದಾರೆ.

ತಮ್ಮ ಖ್ಯಾತಿ, ಕೆಚ್ಚುಗಳನ್ನೆಲ್ಲ ಅವರು ಜನಪರ ಹೋರಾಟಗಳಿಗೆ, ಅದು ಸಣ್ಣದಿರಲಿ-ದೊಡ್ಡದಿರಲಿ, ಮೀಸಲಿಡುತ್ತಾ ಬಂದಿರೋದು ವಿಶೇಷ. ಅದಕ್ಕಾಗಿ ಅಧಿಕಾರಗಳನ್ನು ಧಿಕ್ಕರಿಸುವುದಕ್ಕೂ ಅವರು ಹಿಂಜರಿದವರಲ್ಲ. ಈ ಹಾದಿಯಲ್ಲಿ ಅವರು ಸಂಪಾದಿಸಿದ್ದು ಎಲ್ಲಾ ಶ್ರೇಣಿಯ ಅಧಿಕಾರಶಾಹಿ, ಪ್ರಭುತ್ವಶಾಹಿಗಳ ಕಡುಕೋಪಕ್ಕೆ ಗುರಿಯಾಗುವ ವರವನ್ನು ಮಾತ್ರ! ರಾವ್ ಅವರು ಮೊದಲ ಬಾರಿ ಬಂಧನಕ್ಕೆ ಒಳಗಾದದ್ದು 1973ರಲ್ಲಿ, ಆಂತರಿಕ ಭದ್ರತಾ ನಿಯಂತ್ರಣ ಕಾಯ್ದೆ (ಎಂ.ಐ.ಎಸ್.ಎ) ಅಡಿಯಲ್ಲಿ. ಅಂದಿನ ತುರ್ತು ಪರಿಸ್ಥಿತಿಯ ದಿನಗಳಲ್ಲಿ ಅವರನ್ನು ಬಂಧಿಸಿ ಕಠಿಣ ನಿಗಾವಣೆಯಡಿ ಇಡಲಾಗಿತ್ತು. ತುರ್ತು ಪರಿಸ್ಥಿತಿ ನಂತರದ ದಿನಗಳಲ್ಲಿ ನಡೆದ ಹಲವಾರು ದಾಳಿಗಳಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದುದುಂಟು. 1985ರಲ್ಲಿ ಆಂಧ್ರಪ್ರದೇಶ ಸರ್ಕಾರವನ್ನು ಪತನಗೊಳಿಸಲು ಸಂಚು ನಡೆಸಲಾಗಿತ್ತು ಎಂದು ಆರೋಪಿಸಲಾದ ಸಿಕಂದರಾಬಾದ್ ಪಿತೂರಿ ಪ್ರಕರಣದಲ್ಲಿ ಆಂಧ್ರ ಪೊಲೀಸರು ಬಂಧಿಸಿದ್ದ 46 ಆಪಾದಿತರಲ್ಲಿ ರಾವ್ ಕೂಡಾ ಒಬ್ಬರು. ರಾಮ್‌ನಗರ ಪಿತೂರಿ ಪ್ರಕರಣದಲ್ಲೂ ರಾವ್ ಅವರನ್ನು ಆರೋಪಿ ಮಾಡಲಾಗಿತ್ತು. ಆಂಧ್ರ ಪೊಲೀಸ್ ಕಾನ್‌ಸ್ಟೇಬಲ್ ಸಾಂಬಯ್ಯ ಮತ್ತು ಇನ್ಸ್ಪೆಕ್ಟರ್ ಯಾದಗಿರಿ ರೆಡ್ಡಿಯವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾದ ಗುಪ್ತ ಸಭೆಯಲ್ಲಿ ರಾವ್ ಅವರೂ ಭಾಗಿಯಾಗಿದ್ದರು ಎಂಬುದು ಆ ಪ್ರಕರಣದಲ್ಲಿ ಅವರ ಮೇಲಿದ್ದ ಆರೋಪ. ಹದಿನೇಳು ವರ್ಷಗಳ ಸುದೀರ್ಘ ವಿಚಾರಣೆಯ ನಂತರ 2003ರಲ್ಲಿ ನ್ಯಾಯಾಲಯ ವರವರ ರಾವ್ ಅವರನ್ನು ಈ ಆರೋಪಗಳಿಂದ ದೋಷಮುಕ್ತಗೊಳಿಸಿತು.

1970ರ ದಶಕದಿಂದ 2018ರವರೆಗೆ ಪ್ರಭುತ್ವಗಳು ಅವರ ಮೇಲೆ 25 ಪ್ರಕರಣಗಳಲ್ಲಿ ಬೇರೆಬೇರೆ ಆರೋಪಗಳನ್ನು ಹೊರಿಸಿ ದೂರು ದಾಖಲಿಸಿಕೊಂಡಿವೆ. ವಿಪರ್ಯಾಸವೆಂದರೆ, ಇದುವರೆಗೆ ಇವುಗಳ ಪೈಕಿ ಒಂದೇ ಒಂದು ಪ್ರಕರಣದಲ್ಲೂ ಒಂದೇ ಒಂದು ಆರೋಪವನ್ನೂ ನ್ಯಾಯಾಲಯದ ಮುಂದೆ ಸಾಬೀತು ಮಾಡಲು ಪ್ರಭುತ್ವಕ್ಕೆ ಸಾಧ್ಯವಾಗಿಲ್ಲ. ಈ ಎಲ್ಲಾ 25ಪ್ರಕರಣಗಳ ನ್ಯಾಯಾಂಗ ವಿಚಾರಣೆಗಳನ್ನೂ ಅವರು ತಕರಾರಿಲ್ಲದೆ ನಿಷ್ಟೆಯಿಂದ ಎದುರಿಸುತ್ತಾ ಬಂದಿದ್ದಾರೆ.

ಜನರ ನಡುವೆ ಇವರಿಗಿದ್ದ ಖ್ಯಾತಿ ಎಂತದ್ದೆಂದರೆ, 2002 ಮತ್ತು 2004ರಲ್ಲಿ ಆಂಧ್ರಪ್ರದೇಶದಲ್ಲಿ ಅಸ್ತಿತ್ವದಲ್ಲಿದ್ದ ಸರ್ಕಾರಗಳು, `ತಮ್ಮ ಮತ್ತು ನಕ್ಸಲೀಯರ ನಡುವೆ ಮಾತುಕತೆ ನಡೆಸಲು ಮಧ್ಯಸ್ಥಿಕೆ ವಹಿಸಿ’ ಎಂದು ವರವರ ರಾವ್ ಅವರನ್ನು ಮನವಿ ಮಾಡಿಕೊಂಡಿದ್ದವು. ಕೇಂದ್ರದಲ್ಲಿದ್ದ ಯುಪಿಎ ಸರ್ಕಾರವೂ ಸೇರಿದಂತೆ, ಛತ್ತೀಸ್‌ಗಡ, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳು ಇದೇ ಬಗೆಯ ಪರಿಸ್ಥಿತಿಯನ್ನು ನಿಭಾಯಿಸಲು ವರವರ ರಾವ್ ಅವರ ನೆರವು ಕೇಳಿಕೊಂಡಿದ್ದುಂಟು. ಪೊಲೀಸ್ ಮತ್ತು ಅಧಿಕಾರಶಾಹಿಗಳ ದೌರ್ಜನ್ಯಗಳ ಹಲವಾರು ಪ್ರಕರಣಗಳಲ್ಲಿ, ಸಾಂವಿಧಾನಿಕ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯುವ ಸಲುವಾಗಿ, ಯಾವ ಮುಲಾಜಿಗೂ ಒಳಗಾಗದೆ, ನ್ಯಾಯಾಂಗ ಮಧ್ಯಪ್ರವೇಶಕ್ಕಾಗಿ ಆಗ್ರಹಿಸಿ ನ್ಯಾಯಾಲಯಗಳ ಮುಂದೆ ಅರ್ಜಿ ಹಾಕಿಕೊಂಡ ಅವರ ಹೋರಾಟಗಳ ಮೂಲಕ, ಕಾನೂನಿನ ಬಗ್ಗೆ ಅವರಿಗಿರುವ ಗೌರವ ಎದ್ದು ಕಾಣುತ್ತದೆ. ಈ ಎಲ್ಲಾ ಪ್ರಕರಣಗಳಲ್ಲಿ, ಸಂತ್ರಸ್ತರು ಅಥವಾ ಅವರ ಕುಟುಂಬಸ್ಥರ ರಕ್ಷಣೆಗೆ ನ್ಯಾಯಾಲಯಗಳೇ ಧಾವಿಸುವಂತೆ ಮಾಡಿದುದರಲ್ಲಿ ವರವರ ರಾವ್ ಅವರ ಪಾತ್ರ ದೊಡ್ಡದು.

ಇಂಥಾ ವರವರ ರಾವ್ ಅವರನ್ನು, ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಆರೋಪಿಯಾಗಿಸಿ, ಇತರ 11 ಹೋರಾಟಗಾರರ ಜೊತೆ ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿ ಕೊಳೆಸಲಾಗುತ್ತಿದೆ. ಈ ಎರಡು ವರ್ಷಗಳಲ್ಲಿ, ಸೂಕ್ತ ವೈದ್ಯಕೀಯ ಉಪಚಾರವಿಲ್ಲದೆ ಹಾಗೂ ಪೊಲೀಸರು ಮತ್ತು ಜೈಲು ಆಡಳಿತಗಾರರು ನಿರ್ಲಕ್ಷ್ಯೆದಿಂದ, ಜೊತೆಗೆ, ಅನಗತ್ಯ ಸೆರೆವಾಸದ ಒತ್ತಡವೂ  ಸೇರಿಕೊಂಡು ಅವರ ವಯೋವೃದ್ಧ ಆರೋಗ್ಯ ತುಂಬಾ ಕ್ಷೀಣಿಸಿದೆ. ಮುಖ್ಯವಾಗಿ, ದೇಹದಲ್ಲಿ ಸೋಡಿಯಂ, ಪೊಟ್ಯಾಶಿಯಂ ಲವಣಸಾರಗಳ ಅಸಮತೋಲನದಿಂದಾಗಿ ಸ್ಮರಣಶಕ್ತಿಯ ನಷ್ಟ, ಗೊಂದಲ, ಅಸಂಬದ್ಧ ಮಾತುಕತೆೆಯಂತಹ ಸಮಸ್ಯೆಗೆ ಈಡಾಗಿದ್ದಾರೆ. ನಿರರ್ಗಳ ಮಾತುಗಾರ ಮತ್ತು ಗಜಗಾತ್ರದ ಸ್ಮರಣಕೋಶ ಹೊಂದಿದ್ದ ಅತ್ಯದ್ಭುತ ವಾಗ್ಮಿಯೊಬ್ಬರನ್ನು ಇಂದು ಮಾತನಾಡಲು ಪದಗಳಿಗೆ ತಡಕಾಡುವ, ಅಸಂಬದ್ಧ ಮಾತುಕತೆಂಯ ಕೂಪಕ್ಕೆ ನಮ್ಮ ಸಮಾಜ ತಳ್ಳಿರುವುದು ನೋವಿನ ಸಂಗತಿ.

ನ್ಯಾಯಾಂಗ ವಿಚಾರಣಾಧೀನ ಆಪಾದಿತನಾಗಿರುವ ಅವರ ಪ್ರಾಣ ಮತ್ತು ಸುಸ್ಥಿರ ಆರೋಗ್ಯವನ್ನು ಕಾಪಾಡಬೇಕಾದದ್ದು ನಮ್ಮ ನ್ಯಾಯಾಂಗ ವ್ಯವಸ್ಥೆಯ ಹೊಣೆ. ಜೆ.ಜೆ. ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಡಿಸ್‌ಚಾರ್ಜ್ ಆಗಿಬಂದ ನಾಲ್ಕು ವಾರಗಳಲ್ಲೇ ಅವರಿಗೆ ಮತ್ತೆ ಅದೇ ಆರೋಗ್ಯ ಸಮಸ್ಯೆಗಳು ಮರುಕಳಿಸಿರುವುದು, ಜೈಲು ಅಧಿಕಾರಿಗಳಿಂದ ಅವರಿಗೆ ಸೂಕ್ತ ಉಪಚಾರ ಮತ್ತು ರಕ್ಷಣೆ ಸಿಗಲೊಲ್ಲದು ಎಂಬುದನ್ನು ಸಾಬೀತು ಮಾಡಿರುವುದರಿಂದ ಈಗ ಅವರಿಗೆ ಕುಟುಂಬದ ಮತ್ತು ಆತ್ಮೀಯರ ಸಾನಿಧ್ಯದಲ್ಲಿ ವೈದ್ಯಕೀಯ ಆರೈಕೆಯ ಅಗತ್ಯವಿದೆ ಎಂಬುದನ್ನು ಒತ್ತಿಹೇಳುತ್ತಿದೆ.

ಕೆ ಸತ್ಯನಾರಾಯಣ,
ಹೈದರಾಬಾದ್ ಮೂಲದ ಜಾತಿ ವಿರೋಧಿ ಕಾರ್ಯಕರ್ತ, ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಸಂಪಾದಕ. ದಲಿತ ಅಧ್ಯಯನದಲ್ಲಿ ವಿಶೇಷ ಪರಿಣಿತಿ ಹೊಂದಿರುವ ಸತ್ಯನಾರಾಯಣ ಅವರು ದಲಿತ ಸಾಹಿತ್ಯ ಮತ್ತು ಅಧ್ಯಯನದಲ್ಲಿ ಹಲವು ಪುಸ್ತಕಗಳನ್ನು ಸಂಗ್ರಹಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ.


ಇದನ್ನೂ ಓದಿ: ಜಾತಿಪದ್ಧತಿಯ ಕಡುವಿರೋಧಿ, ಹೋರಾಟಗಾರ ಸುಧೀರ್ ಧಾವ್ಳೆ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ ಮಹಿಳೆ | Naanu Gauri

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ...

0
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆಯಲ್ಲೇ ಆರು ತಿಂಗಳ ಶಿಶುವಿಗೆ ಜನ್ಮ ನೀಡಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಕಲ್ಲೋ ಬಾಯಿಯನ್ನು...
Wordpress Social Share Plugin powered by Ultimatelysocial