Homeಅಂಕಣಗಳುಪ್ರಜಾಪ್ರಭುತ್ವ ವಿರೋಧಿ ಬ್ರೆಜಿಲ್ ಗಲಭೆಗಳಿಗೆ ಕಾರಣವಾದ ತೀವ್ರ ಧ್ರುವೀಕರಣ; ಜಗತ್ತಿಗೆ ಎಚ್ಚರಿಕೆಯ ಗಂಟೆ!

ಪ್ರಜಾಪ್ರಭುತ್ವ ವಿರೋಧಿ ಬ್ರೆಜಿಲ್ ಗಲಭೆಗಳಿಗೆ ಕಾರಣವಾದ ತೀವ್ರ ಧ್ರುವೀಕರಣ; ಜಗತ್ತಿಗೆ ಎಚ್ಚರಿಕೆಯ ಗಂಟೆ!

- Advertisement -
- Advertisement -

ಯುಎಸ್‌ಎನಲ್ಲಿ ಅಧ್ಯಕ್ಷೀಯ ಚುನಾವಣೆ ಸೋತ ತೀವ್ರ ಬಲಪಂಥೀಯ ಮುಖಂಡ-ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಫಲಿತಾಂಶವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದ. ಇದು ಆತನ ಬೆಂಬಲಿಗ ಬಹುಸಂಖ್ಯಾತರನ್ನು ಎಷ್ಟು ಪ್ರಭಾವಿಸಿತ್ತೆಂದರೆ, ಇಡೀ ಚುನಾವಣೆಯನ್ನು ಟ್ರಂಪ್‌ನಿಂದ ಕಸಿಯಲಾಗಿದೆ ಎಂಬ ವಾದವನ್ನು ಸ್ವಲ್ಪವೂ ವಿವೇಚನೆಯಿಲ್ಲದೆ ಒಪ್ಪಿಕೊಂಡುಬಿಟ್ಟಿದ್ದರು. ಇದರ ಪರಿಣಾಮ ಜನವರಿ 6, 2021ರಂದು ಮತ ಎಣಿಕೆ ಪ್ರಕ್ರಿಯೆಯನ್ನು ಅಡ್ಡಿಪಡಿಸಲು ವಾಶಿಂಗ್ಟನ್‌ನ ಕ್ಯಾಪಿಟೊಲ್ ಭವನದ ಮೇಲೆ ನಡೆಸಿದ ದಾಳಿ. ಮಾರಕಾಸ್ತ್ರಗಳನ್ನು ಹಿಡಿದು ನಡೆಸಿದ ದಾಳಿ ಕೆಲ ಸಮಯದ ಮಟ್ಟಿಗೆ ಭಯಭೀತಿಯನ್ನು ಸೃಷ್ಟಿಸಿತ್ತು. ನಾಲ್ಕಾರು ಜನ ಮೃತಪಟ್ಟರೆ ನೂರಾರು ಜನ ಗಾಯಗೊಂಡರು. ಆ ಗಲಭೆಯನ್ನು ಶಮನ ಮಾಡಲಾಯಿತಾದರೂ, ಪ್ರಜಾಪ್ರಭುತ್ವದ ಬಗೆಗಿನ ನಂಬಿಕೆಯನ್ನು ಬುಡಮೇಲು ಮಾಡಲು ಬಿತ್ತಿರುವ ಸುಳ್ಳಿನ ನರೆಟಿವ್‌ಗೆ ಉಪಶಮನವೇನು? ಇದು ಈಗ ಬ್ರೆಜಿಲ್‌ನಲ್ಲಿ ಮರುಕಳಿಸಿದ್ದು, ಜಗತ್ತಿನಾದ್ಯಂತ ಸುಳ್ಳುಗಳ ಅಡಿಪಾಯದ ಮೇಲೆ ನಡೆದಿರುವ ಧ್ರುವೀಕರಣದ ದುರಂತವನ್ನು ಸೂಚಿಸುತ್ತಿದೆ. ನಾಗರಿಕ ಕದನ ಯಾವ ಸಮಯದಲ್ಲಾದರೂ ಸ್ಫೋಟಿಸಬಹುದಾದ ಅಪಾಯವನ್ನು ಜಗತ್ತಿನ ಹಲವು ದೇಶಗಳು ತಮ್ಮ ಒಡಲಲ್ಲಿ ಇಟ್ಟುಕೊಂಡು ಬೇಯುತ್ತಿವೆ!

ಬಲಪಂಥೀಯ ರಾಜಕಾರಣದ ಹುನ್ನಾರಕ್ಕೆ ಗುರಿಯಾಗಿ, ಜೈಲುವಾಸ ಅನುಭವಿಸಿ, ಆರೋಪಮುಕ್ತನಾಗಿ ಹೊರಬಂದಿದ್ದ ಯೂನಿಯನ್ ಲೀಡರ್ ಮತ್ತು ಎಡ ಪಕ್ಷವಾದ ವರ್ಕರ್ಸ್ ಪಾರ್ಟಿಯ ’ಲುಲಾ’ ಡಿ ಸಿಲ್ವಾ ಬ್ರೆಜಿಲ್‌ನಲ್ಲಿ ಅಕ್ಟೋಬರ್ 30ರಂದು ನಡೆದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಗೆಲುವು ಸಾಧಿಸಿದರು. ಆದರೆ ತೀವ್ರ ಬಲಪಂಥೀಯ ನಾಯಕ ಮತ್ತು ಟ್ರಂಪ್ ಗೆಳೆಯ ಅಂದು ಅಧ್ಯಕ್ಷನಾಗಿದ್ದ ಬೊಲ್ಸೊನಾರೊ ಚುನಾವಣೆಯನ್ನು ಫಿಕ್ಸ್ ಮಾಡಲಾಗಿದೆ ಮತ್ತು ಲೂಲಾ ಗೆದ್ದರೆ ಆ ಗೆಲುವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಪುನರುಚ್ಚರಿಸುತ್ತಲೇ ಚುನಾವಣೆಯುದ್ದಕ್ಕೂ ಪ್ರಚಾರ ಮಾಡಿಕೊಂಡುಬಂದಿದ್ದರು. ಸೋತ ನಂತರ ಪ್ರಭುತ್ವದ ಉಳಿದ ಸಂಸ್ಥೆಗಳು ತಮ್ಮ ಬೆಂಬಲಕ್ಕೆ ನಿಲ್ಲಲು ನಿರಾಕರಿಸಿದ ಕಾರಣ ತಮ್ಮ ವರಸೆಯನ್ನು ಸ್ವಲ್ಪಸ್ವಲ್ಪ ಬದಲಾಯಿಸುತ್ತಾ ಬಂದರು. ಆದರೆ ತನ್ನ ಬೆಂಬಲಿಗರಲ್ಲಿ ಬಿತ್ತಿದ್ದ ಪ್ರಜಾಪ್ರಭುತ್ವ ವಿರೋಧಿ ಫ್ಯಾಸಿಸ್ಟ್ ಚಿಂತನೆಗಳು ದೊಡ್ಡಮಟ್ಟದಲ್ಲಿ ಪಸರಿಸಿಯಾಗಿತ್ತು. ಲೂಲಾ ಅಧ್ಯಕ್ಷ ಪದವಿ ಸ್ವೀಕರಿಸುವುದಕ್ಕೆ ಮುಂಚಿತವಾಗಲೇ ಬೊಲ್ಸೊನಾರೊ ಯುಎಸ್‌ಎಗೆ ತೆರಳಿದ್ದರು. ಜನವರಿ 1, 2023ರಂದು ಲೂಲಾ ಪ್ರಮಾಣ ವಚನ ಸ್ವೀಕರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಸಂಪುಟಕ್ಕೆ ಸೇರಿಸಿಕೊಂಡದ್ದು ಸೇರಿದಂತೆ, ಅಮೆಜಾನ್ ಕಾಡಿನ ಉಳಿವಿಗೆ ಹೋರಾಡಿದ್ದ ಕಾರ್ಯಕರ್ತೆಯನ್ನೂ ಸಂಪುಟಕ್ಕೆ ಸೇರಿಸಿಕೊಂಡಿದ್ದು ಧನಾತ್ಮಕ ಚರ್ಚೆಗೆ ಕಾರಣವಾಗಿತ್ತು. ಬೊಲ್ಸೊನಾರೊ ತಮ್ಮ ನಡುವೆ ಇರದಿದ್ದರೂ ಆತ ಬಿತ್ತಿದ ವಿಷಚಿಂತನೆ ಮಾತ್ರ ಬೆಂಬಲಿಗರ ತಲೆಯಿಂದ ಪರಾರಿಯಾಗಿರಲಿಲ್ಲ. ಜನವರಿ 8ನೇ ತಾರೀಕು ಬ್ರೆಜಿಲ್ ಪ್ರಜಾಪ್ರಭುತ್ವದ ಆಧಾರಸ್ಥಂಭಗಳೆಂದು ಕರೆಯಲಾಗುವ ರಾಜಧಾನಿ ಬ್ರೆಸಿಲಿಯಾದ ಕಾಂಗ್ರೆಸ್, ಸುಪ್ರೀಂ ಕೋರ್ಟ್ ಮತ್ತು ಅಧ್ಯಕ್ಷರ ಪ್ಯಾಲೆಸ್ ಮೇಲೆ ಬೊಲ್ಸೊನಾರೊ ಬೆಂಬಲಿಗರು ದಾಳಿ ನಡೆಸಿದರು. ನಂತರ ಈ ಗಲಭೆ ಅಥವಾ ದಂಗೆಯ ಪ್ರಯತ್ನವನ್ನು ತಹಬದಿಗೆ ತರಲಾಯಿತು. ಈಗ ಕಾಂಗ್ರೆಸ್ ಭವನದಲ್ಲಿ ಗ್ರೆನೇಡ್ ಮತ್ತಿತರ ಮಾರಾಕಾಸ್ತ್ರಗಳು ಸಿಕ್ಕಿರುವ ವರದಿಗಳಿವೆ. ಸುಮಾರು 1500ಕ್ಕೂ ಹಚ್ಚು ಜನರನ್ನು ಡೀಟೇನ್ ಮಾಡಲಾಗಿದ್ದು, ಸಾವಿರಾರು ಜನರ ಮೇಲೆ ಆರೋಪ ಹೊರಿಸುವ ಸಾಧ್ಯತೆಯಿದೆ. ಇಷ್ಟಾಗಿಯೂ ಜನರಲ್ಲಿ ಬಿತ್ತಲಾಗಿರುವ ಫ್ಯಾಸಿಸ್ಟ್ ವಿಷವನ್ನು ನಿವಾರಿಸದಂತೇನೂ ಆಗುವುದಿಲ್ಲ. ಅದು ಮುಂದೊಂದು ದಿನ ಬೇರೊಂದು ರೂಪದಲ್ಲಿ ಆಸ್ಫೋಟಿಸಲು ಕಾಯುತ್ತಲೇ ಇರುತ್ತದೆ.

ಅಮೆರಿಕ ಮತ್ತು ಬ್ರೆಜಿಲ್‌ನಲ್ಲಿ ನಡೆದ ಘಟನೆಗಳು ಭಾರತದಲ್ಲಿ ಘಟಿಸಲು ಸಾಧ್ಯವಿಲ್ಲ ಎನ್ನುವಂತಿಲ್ಲ. 2014ರ ನಂತರ ನಿರಂತರವಾಗಿ ನಡೆಯುತ್ತಿರುವ ಪೋಲರೈಸೇಷನ್ ಪ್ರಾಜೆಕ್ಟ್ ಭಾರತೀಯರನ್ನು ಧಾರ್ಮಿಕ ನೆಲೆಯಲ್ಲಿ ಒಡೆಯಲು ಪ್ರಯತ್ನಿಸುತ್ತಲೇ ಇದೆ. ಇಂದು ಸಂಘ ಪರಿವಾರ ಬಿತ್ತುತ್ತಿರುವ ವಿಷ ಬೀಜಗಳು ಟ್ರಂಪ್ ಮತ್ತು ಬೊಲ್ಸೊನಾರೊ ತಮ್ಮ ಬೆಂಬಲಿಗರಲ್ಲಿ ಬಿತ್ತಿದ ವಿಷಕ್ಕಿಂತಲೂ ಭಿನ್ನವಾಗೇನೂ ಇಲ್ಲ. ಇದು ತನ್ನ ರಾಜಕೀಯಕ್ಕೆ ಹಲವು ಬಾರಿ ಸಹಾಯ ಮಾಡಿರುವ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಇದನ್ನು ಉತ್ತೇಜಿಸುತ್ತಿದೆ. ಹಿಂದೆ ಹತ್ತುಹಲವು ಬಾರಿ ಇದರ ಬಗ್ಗೆ ಬರೆದಿದ್ದರೂ, ಹಿಂದೆಂದೂ ಕಾಣದಂತಹ ಗೋಡ್ಸೆ ಭಜನೆ, ಆತನ ದ್ವೇಷದ ಸಿದ್ಧಾಂತ ದಿನೇದಿನೇ ಪಸರಿಸುತ್ತಲೇ ಇದೆ. ಇದನ್ನು ಮುಸ್ಲಿಂ ದ್ವೇಷವಾಗಿ ಸಾಕಾರ ಮಾಡಿ ಬಲಪಂಥೀಯ ಪಕ್ಷಗಳು ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತಿವೆ. ಇಂತಹ ದ್ವೇಷದ ಸಿದ್ಧಾಂತವನ್ನು ಒಡೆಯಲು ಪ್ರಜ್ಞಾವಂತ ನಾಗರಿಕರು ಸಂವಿಧಾನ, ಅಂಬೇಡ್ಕರ್, ಪೆರಿಯಾರ್, ಕುವೆಂಪುರವರಂತಹ ವಿಚಾರಧಾರೆಗಳನ್ನು ಮುಂದುಮಾಡುತ್ತಿದ್ದಾರೆ.

ಈ ವಿದ್ಯಮಾನಕ್ಕೆ ಒಂದು ಮಟ್ಟದಲ್ಲಿ ಕನ್ನಡಿ ಹಿಡಿದಂತಹ ಒಂದು ಅನುಭವವನ್ನು ಹಂಚಿಕೊಳ್ಳುತ್ತೇನೆ. ಜನವರಿ 6ರಿಂದ 8ರ ನಡುವೆ ನಡೆದ ಹಾವೇರಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮುಖ್ಯ ಆಕರ್ಷಣೆಯಾದ ಪುಸ್ತಕ ಮೇಳದಲ್ಲಿ ಈ ಬಾರಿ ಹಿಂದಿನ ಸಮ್ಮೇಳನಗಳಿಗಿಂತಲೂ, ಟೆರರಿಸ್ಟ್ ಗೋಡ್ಸೆ, ಹಿಂದೂ ಸುಪ್ರಿಮಿಸ್ಟ್‌ಗಳಾದ ಸಾವರ್ಕರ್, ಗೋಳ್ವಲ್ಕರ್ ಪುಸ್ತಕಗಳನ್ನು ಕೇಳಿಕೊಂಡು ಬರುವ ಮಂದಿ ಅತಿ ಹೆಚ್ಚಿದ್ದರು. ಹಿಂದೆಲ್ಲಾ ಗೋಡ್ಸೆಯನ್ನು ಆರಾಧಿಸುವ ಅಥವಾ ಗಾಂಧಿ ಕೊಲೆಯನ್ನು ಸಮರ್ಥಿಸುವ ಪುಸ್ತಕಗಳನ್ನು ಕೇಳುವಾಗ ಒಂದು ರೀತಿಯ ಅಂಜಿಕೆಯಿರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆತನನ್ನು ಸಮರ್ಥಿಸುವುದನ್ನೇ ಧ್ಯೇಯವನ್ನಾಗಿಸುವತ್ತ ಹಲವು ಯುವಕ-ಯುವತಿಯರನ್ನು ಸಂಘ ಪರಿವಾರ ಪ್ರಭಾವಿಸುತ್ತಿರುವುದು ತಿಳಿಯದ ವಿಷಯವೇನಲ್ಲ. ಅದು ಇಂದಿನ ರಾಜಕೀಯ ವಾತಾವರಣದಲ್ಲಿ ಮುಸ್ಲಿಂ ಸಮುದಾಯದ ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧದ ದ್ವೇಷವಾಗಿ ಹಾಗೂ ಬ್ರಾಹ್ಮಣ್ಯದ ಶ್ರೇಷ್ಠತೆಯಾಗಿ ಆಕಾರ ಪಡೆದುಕೊಳ್ಳುತ್ತಿದೆ. ಇಂತಹ ದ್ವೇಷವನ್ನು ಕೌಂಟರ್ ಮಾಡಲು, ವಿಚಾರವಾದವನ್ನು ಬಿತ್ತುವ ಅಂಬೇಡ್ಕರ್, ಕುವೆಂಪು, ಪೆರಿಯಾರ್, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಅಂತಹವರ ಚಿಂತನೆಗಳ ಪುಸ್ತಕಗಳಿಗೂ ಪುಸ್ತಕ ಮೇಳದಲ್ಲಿ ಅಪಾರ ಬೇಡಿಕೆಯಿತ್ತು. ನಡುವೆ ಸುಳಿವ ಶುದ್ಧ ಸಾಹಿತ್ಯದ ಪ್ರತಿಪಾದಕರ ಪುಸ್ತಕಗಳ ಬಗ್ಗೆ ಒಂದು ರೀತಿಯ ತಿರಸ್ಕಾರ ಮೂಡಿರುವಂತೆ ಭಾಸವಾಯಿತು. ವಿಚಾರಹೀನತೆ-ಸುಳ್ಳು-ಜೀವವಿರೋಧಿ ಹಾಗೂ ವಿಚಾರವಾದ-ಸತ್ಯ-ಜೀವಪರತೆಯ ಚಿಂತನೆಯುಳ್ಳ ಪುಸ್ತಕಗಳ ನಡುವೆ ಸ್ಪರ್ಧೆ ಏರ್ಪಟ್ಟಿರುವುದು ಆ ಮೂರು ದಿನಗಳ ಪುಸ್ತಕ ವ್ಯಾಪಾರದ ಅನುಭವ ಸೂಚಿಸಿತು. (ಇದು ತೀರ ವೈಯಕ್ತಿಕವಾದದ್ದಾದರೂ, ಹಲವು ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರು ಸಹಮತವನ್ನು ವ್ಯಕ್ತಪಡಿಸಿದರು.) ಇದು ಈ ದೇಶದಲ್ಲಿಯೂ ವಿಚಾರಹೀನತೆ ಮತ್ತು ವಿಚಾರವಾದದ ನಡುವೆ ತೀವ್ರ ಮಟ್ಟದಲ್ಲಿ ಆಗಿರುವ-ಆಗುತ್ತಿರುವ ಧ್ರುವೀಕರಣವನ್ನು ಸೂಚಿಸುತ್ತದೆ. ಆದರೆ ಭಾರತದ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ವಿಚಾರಹೀನತೆಗೇ ಹೆಚ್ಚು ಸ್ಪೇಸ್ ದೊರಕುವುದರಿಂದ ಅದು ಹೆಚ್ಚು ಮಿಂಚುತ್ತಿರುವಂತೆ ಮತ್ತು ಬೆಳೆಯುತ್ತಿರುವಂತೆ ಕಾಣಿಸಿಕೊಳ್ಳುತ್ತದೆ. ಪ್ರಭುತ್ವದ ಬೆಂಬಲ ಅದಕ್ಕಿರುವುದರಿಂದ ಅದು ತನ್ನ ಉಗ್ರತ್ವವನ್ನು ಎಗ್ಗಿಲ್ಲದೆ ಪ್ರತಿಪಾದಿಸುತ್ತದೆ. ವಿಚಾರಹೀನತೆಯನ್ನು, ದ್ವೇಷವನ್ನು ತೀವ್ರತೆಗೆ ತೆಗೆದುಕೊಂಡು ಹೋದಷ್ಟೂ, ಯುಎಸ್‌ಎನ ಕ್ಯಾಪಿಟೊಲ್ ಭವನ ಅಥವಾ ಬ್ರೆಜಿಲ್‌ನ ಸಂಸತ್ ಕಟ್ಟಡದಲ್ಲಿ ಆದಂತಹ ಗಲಭೆಗಳ ಸಂಭವನೀಯತೆ ಹೆಚ್ಚುತ್ತಾ ಹೋಗುತ್ತದೆ.

ಈ ನಿಟ್ಟಿನಲ್ಲಿ ವಿಚಾರಹೀನತೆಯ-ಪ್ರಗತಿಹೀನತೆಯ ಕಡೆಗೆ ಎಳೆಯಲಾಗಿರುವವರನ್ನು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸುವ, ಮಾನವೀಯತೆಯನ್ನು ತುಡಿಯುವ, ಬಹುತ್ವವನ್ನು ಗೌರವಿಸುವ ವಿಚಾರಗಳತ್ತ ಕರೆತರುವುದೊಂದೇ ಈಗ ಉಳಿದಿರುವ ದಾರಿ. ಅಂತಹ ದಾರಿಗಳನ್ನು ಒರೆಗೆ ಹಚ್ಚುತ್ತಾ, ಅಗತ್ಯ ಬಿದ್ದಲ್ಲಿ ಕಾರ್ಯಶೈಲಿಯನ್ನು ಬದಲಾಯಿಸಿಕೊಳ್ಳುತ್ತಾ ಮತ್ತೆಮತ್ತೆ ಹೊಸದಾಗಿ ಶೋಧಿಸಿಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...