ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮುಂಚಿತವಾಗಿ, ರಾಜಕೀಯದಲ್ಲಿ ಭಾರಿ ಪ್ರಭಾವ ಹೊಂದಿರುವ ಲಿಂಗಾಯತ ಸಮುದಾಯವನ್ನು ಮೆಚ್ಚಿಸಲು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ನಡೆಯುತ್ತಿದೆ.
ಹಠಾತ್ ಬೆಳವಣಿಗೆಯಲ್ಲಿ, ರಾಜ್ಯ ಕಾಂಗ್ರೆಸ್ ನಾಯಕರ ಸಲಹೆಯಂತೆ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗುರುವಾರದಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಶಿವಕುಮಾರ ಸ್ವಾಮಿಯವರ 115ನೇ ಜಯಂತಿಯ ಭಾಗವಾಗಿ ಶುಕ್ರವಾರದಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿ ನಿಗದಿಯಾಗಿದೆ. ಇದಕ್ಕಿಂತಲೂ ಒಂದು ದಿನ ಮುಂಚಿತವಾಗಿ ರಾಹುಲ್ ಗಾಂಧಿ ಮಠಕ್ಕೆ ಭೇಟಿ ನೀಡಲಿದ್ದಾರೆ.
ಇದನ್ನೂ ಓದಿ: ಜಾತಿಗೊಂದು ನಿಗಮ ಮಾಡಿದರೆ ಮಿತಿಯೇ ಇರುವುದಿಲ್ಲ – ಸಿದ್ದಲಿಂಗ ಸ್ವಾಮೀಜಿ
ಗುರುವಾರ ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿಗೆ ಆಗಮಿಸಲಿರುವ ರಾಹುಲ್ ಗಾಂಧಿಯವರು, ಅಲ್ಲಿಂದ ಮಠಕ್ಕೆ ಪ್ರಯಾಣಿಸುವ ನಿರೀಕ್ಷೆಯಿದೆ. ಅಲ್ಲಿ ಅವರು ಸ್ವಾಮಿಯ ಸಮಾಧಿಗೆ ಭೇಟಿ ನೀಡಲಿದ್ದು, ನಂತರ ಮಠದಲ್ಲಿ ಊಟ ಮಾಡುವ ಸಾಧ್ಯತೆಯಿದೆ ಎಂದು ರಾಜ್ಯ ಕಾಂಗ್ರೆಸ್ ಮೂಲಗಳನ್ನು ಉಲ್ಲೇಖಿಸಿ TNIE ವರದಿ ಮಾಡಿದೆ.
“ಮಠ-ಮಾನ್ಯಗಳೊಂದಿಗೆ ಗಾಂಧಿ ಕುಟುಂಬದ ನಡುವಿನ ಸಂಬಂಧವು ಭಕ್ತ ಮತ್ತು ದೇವರ ಸಂಬಂಧವಾಗಿದೆ. ಇಂದಿರಾಗಾಂಧಿ ಶೃಂಗೇರಿ ಶಾರದಾ ಮಠಕ್ಕೆ ಭೇಟಿ ನೀಡಿ ಸಲಹೆ ಪಡೆಯುತ್ತಿದ್ದರು. ರಾಜೀವ್ ಗಾಂಧಿ ಅಲ್ಲಿನ ಸಪ್ತಾಹದ ಧಾರ್ಮಿಕ ಕ್ರಿಯೆಗಳಲ್ಲಿ ಭಾಗವಹಿಸುತ್ತಿದ್ದರು” ಎಂದು ಕಾಂಗ್ರೆಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
2012ರಲ್ಲಿ ಶಿವಕುಮಾರ್ ಸ್ವಾಮಿಯ 105ನೇ ಜನ್ಮದಿನಾಚರಣೆ ಸಮಾರಂಭಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆಗೆ ಬಿಜೆಪಿ ಜೊತೆಗಿನ ಸಂಬಂಧ ಕಡಿದುಕೊಂಡು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೆಜೆಪಿ ಸ್ಥಾಪಿಸಿದ್ದರು.
ಇದನ್ನೂ ಓದಿ: ಸಿದ್ದಗಂಗಾ ಮಠಕ್ಕೆ ಸಚಿವೆ ಜೊಲ್ಲೆ ಭೇಟಿ : ಡ್ಯಾಮೇಜ್ ಕಂಟ್ರೋಲ್ ಮಾಡಲು ಯತ್ನ
ಶಿವಕುಮಾರ ಸ್ವಾಮಿಯ ಜನ್ಮದಿನಾಚರಣೆಗೆ 2 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಲಿದ್ದಾರೆ ಎಂದು ವರದಿಯಾಗಿದ್ದು, ಈ ಕಾರ್ಯಕ್ರಮದಲ್ಲಿ ಅಮಿತ್ ಶಾ ಅವರು ಭಾಗವಹಿಸಲಿದ್ದಾರೆ. ಕಾಂಗ್ರೆಸ್ ನಾಯಕತ್ವವೂ ಪಕ್ಷ ಮಠಗಳಿಂದ ವಿಮುಖವಾಗಿಲ್ಲ ಎಂದು ತನ್ನ ನಿಷ್ಠೆಯನ್ನು ಪ್ರದರ್ಶಿಸಲು ಬಯಸಿದೆ. ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಅವರು ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ.
ಭಾರತರತ್ನ ವಿವಾದ
ಶಿವಕುಮಾರ ಸ್ವಾಮಿಯವರಿಗೆ ಮರಣೋತ್ತರ ಭಾರತರತ್ನ ನೀಡುವ ವಿಚಾರ ಅಮಿತ್ ಶಾ ಅವರು ಭೇಟಿ ನೀಡುವ ಮುನ್ನ ಮತ್ತೆ ಚರ್ಚೆಗೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಮಗ ಬಿ.ವೈ. ವಿಜಯೇಂದ್ರ ಅವರು ಶಿವಕುಮಾರ ಸ್ವಾಮಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ಆದರೆ ಮಠದ ಈಗಿನ ಪೀಠಾಧಿಪತಿ ಸಿದ್ದಲಿಂಗ ಸ್ವಾಮಿ ಅವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಶಸ್ತಿಗಾಗಿ ಮಠ ಎಂದಿಗೂ ಒತ್ತಾಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಶಸ್ತಿ ಸ್ವಾಭಾವಿಕವಾಗಿ ಬಂದರೆ ಅದು ಅಮೃತ, ಒತ್ತಡದ ಮೂಲಕ ಪಡೆದ ಅದು ವಿಷವಾಗಿದೆ ಎಂದು ಅವರು ಹೇಳಿದ್ದಾರೆ.


