Homeಕರ್ನಾಟಕಹಿಜಾಬ್: ಸಮತೋಲನವನ್ನು ಸಾಧಿಸದ, ಸಹಾನುಭೂತಿ ತೋರದ ತೀರ್ಪು

ಹಿಜಾಬ್: ಸಮತೋಲನವನ್ನು ಸಾಧಿಸದ, ಸಹಾನುಭೂತಿ ತೋರದ ತೀರ್ಪು

- Advertisement -
- Advertisement -

ರೇಷಂ ವರ್ಸಸ್ ಸ್ಟೇಟ್ ಆಫ್ ಕರ್ನಾಟಕದ ಪ್ರಕರಣದಲ್ಲಿ ಕರ್ನಾಟಕದ ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಅನುಭೂತಿ/ಸಹಾನುಭೂತಿ ಎಂಬುದು ಕಾಣುತ್ತಿಲ್ಲ. ಕುಂದಾಪುರದ ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರು ಈ ಪ್ರಕರಣದಲ್ಲಿ ಪೆಟಿಷನರ್ ಆಗಿದ್ದರು. ಅವರನ್ನು ತಮ್ಮ ಕಾಲೇಜಿನ ಆವರಣದ ಒಳಗೆ ಬರದಂತೆ ಅವರ ಶಿಕ್ಷಕರೇ ತಡೆದಿದ್ದರು, ಇದರ ವಿಡಿಯೋ ಚಿತ್ರೀಕರಣವನ್ನು ವಿಶ್ವದೆಲ್ಲೆಡೆಯ ಜನರು ನೋಡಿದ್ದರು. ಆದರೆ ನ್ಯಾಯಾಲಯದ ತೀರ್ಪು ನಿರ್ಭಾವುಕ ಕಾನೂನುಪಾಲನೆಯ ಕ್ರೌರ್ಯದಂತಿದೆ. ಖಾಸಗಿತನ, ಘನತೆ, ಧಾರ್ಮಿಕ ಅಭಿವ್ಯಕ್ತಿ ಹಾಗೂ ಎಲ್ಲಕ್ಕೂ ಮೊದಲು ಶಿಕ್ಷಣದ ಹಕ್ಕು, ಆ ಹಕ್ಕುಗಳನ್ನು ಈ ಯುವಜನರಿಗೆ ನಿರಾಕರಿಸಿರುವುದರಿಂದ ಆಗಿರುವ ಸಂಕಷ್ಟಕ್ಕೆ ಈ ತೀರ್ಪಿನಲ್ಲಿ ಯಾವುದೇ ಸಹಾನುಭೂತಿ ತೋರಿಲ್ಲ.

ಹಿಜಾಬ್ ಎಂಬುದು ಇಸ್ಲಾಂನ ಅತ್ಯಗತ್ಯ ಭಾಗ ಅಲ್ಲವೆಂದೂ, ಅದರೊಂದಿಗೆ ಕಾಲೇಜಿನ ಅಭಿವೃದ್ಧಿ ಮಂಡಳಿಗಳಿಗೆ ಸಮವಸ್ತ್ರವನ್ನು ನಿಧರಿಸಲು ಅನುವು ಮಾಡಿದ ರಾಜ್ಯ ಸರಕಾರದ ಅಧಿಸೂಚನೆಯ ಸಂವಿಧಾನಾತ್ಮಕತೆಯನ್ನು ಈ ತೀರ್ಪು ಎತ್ತಿಹಿಡಿದಿದೆ. ಯಾವ ಕಾಲೇಜುಗಳಲ್ಲಿ ಸಮವಸ್ತ್ರವನ್ನು ನಿಗದಿಪಡಿಸಿಲ್ಲವೋ, ಅಲ್ಲಿ ಧರಿಸಲಾಗುವ ಉಡುಪುಗಳು ’ಐಕ್ಯತೆ, ಸಮಾನತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಹಿತಾಸಕ್ತಿ’ಯಲ್ಲಿ ಇರಬೇಕು ಎಂದು ಸರಕಾರದ ಅಧಿಸೂಚನೆ ಹೇಳುತ್ತದೆ. ಈ ತೀರ್ಪು, ಸರಕಾರದ ಮತ್ತು ಕಾಲೇಜು ಅಭಿವೃದ್ಧಿ ಮಂಡಳಿಗಳು ಹೇರುವ ಹಿಜಾಬ್ ನಿರ್ಬಂಧವನ್ನು ನ್ಯಾಯಸಮ್ಮತಗೊಳಿಸಿದೆ. ಸ್ವಾಭಾವಿಕವಾಗಿಯೇ, ಈ ತೀರ್ಪಿನ ನಂತರ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾಲೇಜುಗಳಲ್ಲಿ ಹಿಜಾಬ್‌ಅನ್ನು ನಿರ್ಬಂಧಿಸುವ ಪ್ರಕ್ರಿಯೆ ಹೆಚ್ಚಬಹುದಾಗಿದೆ.

ಈ ವಿವಾದ ನ್ಯಾಯಾಲಯ ನಾವು ಅರ್ಥೈಸಿಕೊಳ್ಳಬೇಕು ಎಂದು ಬಯಸಿದಂತೆ, ಇದು ಒಂದು ಸಮುದಾಯದ ಹಕ್ಕುಗಳ ಮೇಲೆ ಒಬ್ಬ ವ್ಯಕ್ತಿಯ ಹಕ್ಕುಗಳ ಅಥವಾ ಅಂತಸ್ಸಾಕ್ಷಿಯ ಮತ್ತು ಧಾರ್ಮಿಕ ಹಕ್ಕುಗಳ ನಡುವೆ ಸಮತೋಲನ ಮಾಡುವ ವಿವಾದ ಆಗಿರಲಿಲ್ಲ. ಹಿಜಾಬ್ ಇಲ್ಲದೆಯೇ ಕಾಲೇಜಿಗೆ ಹಾಜರಾಗಲು ಬಯಸುವುದಾಗಿ ಹಾಗೂ ಹಾಗೆ ಮಾಡಲು ನಿರ್ಬಂಧಿಸಲಾಗಿದೆ ಎಂದು ಯಾವ ಮುಸ್ಲಿಂ ಯುವತಿಯೂ ನ್ಯಾಯಾಲಯದ ಮುಂದೆ ಪ್ರತಿಪಾದಿಸಿದ್ದಿಲ್ಲ. ಅದಕ್ಕೆ ತದ್ವಿರುದ್ಧವಾಗಿ, ನ್ಯಾಯಾಲಯದ ಮುಂದೆ ತಾವು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತೇವೆ ಎಂದು ಹೇಳಿದ ಯುವತಿಯರಿದ್ದರು. ಹಿಜಾಬ್ ಧರಿಸುವ ವಿಷಯದಲ್ಲಿ ಒಂದು ಸಮುದಾಯದ ಪದ್ಧತಿಯ ವಿರುದ್ಧ ಒಬ್ಬ ವ್ಯಕ್ತಿಯ ಅಭಿವ್ಯಕ್ತಿಯ ಹಕ್ಕಿನ ಯಾವುದೇ ವಿವಾದ ಇಲ್ಲದೇ ಇರುವಾಗ ಬಂದ ಕರ್ನಾಟಕ ಸರಕಾರದ ಈ ಮೋಸದ ಮತ್ತು ಪುರುಷಪ್ರಧಾನ ಕ್ರಮವು, ಹಿಜಾಬ್ ಧರಿಸಲು
ಬಯಸದ ಮುಸ್ಲಿಂ ಮಹಿಳೆಯರ ಕಾಳಜಿಗಳನ್ನು ಪ್ರತಿನಿಧಿಸುತ್ತದೆ ಎನ್ನುತ್ತಿದೆ. ಹಾಗೂ ನ್ಯಾಯಾಲಯವು, ಆಧಾರವಿಲ್ಲದ ಈ ಪ್ರತಿಪಾದನೆಯನ್ನು ಎತ್ತಿಹಿಡಿಯುತ್ತದೆ.

ಈ ತೀರ್ಪಿನ ಹೃದಯಹೀನತೆ ಕಾಣುವುದೆಲ್ಲಿ ಎಂದರೆ, ನ್ಯಾಯಾಲಯವು ಸಮವಸ್ತ್ರವನ್ನು ನಿಗದಿಪಡಿಸಿದ ಸರಕಾರದ ಹಿತಾಸಕ್ತಿ ಮತ್ತು ತಮ್ಮ ಬಟ್ಟೆಯ ಮೂಲಕ ತಮ್ಮ ಅಸ್ಮಿತೆ ಅಥವಾ ನಂಬಿಕೆಯನ್ನು ಪ್ರತಿಪಾದಿಸುವ ವ್ಯಕ್ತಿಗಳ ಹಿತಾಸಕ್ತಿಗಳ ನಡುವೆ ಯಾವದೇ ಮಧ್ಯಮಾರ್ಗವನ್ನು ಪರಿಗಣಿಸದೇ ತಳ್ಳಿಹಾಕಿದ್ದು. ’ನ್ಯಾಯಸಮ್ಮತವಾದ ಒಳಗೊಳ್ಳುವಿಕೆಯ ತತ್ವದ ಆಧಾರದ ಮೇಲೆ ಒಂದು ಮಧ್ಯಮಾರ್ಗದ ಪರಿಹಾರ ಹುಡುಕಿ ಹಾಗೂ ’ನಿಗದಿಪಡಿಸಿದ ಸಮವಸ್ತ್ರ’ದ ಬಣ್ಣದಲ್ಲಿಯೇ ಇರುವ ಹಿಜಾಬ್‌ಅನ್ನು ಸಮವಸ್ತ್ರದ ಜೊತೆಗೆ ಧರಿಸಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡಬಹುದಾಗಿತ್ತು. ಆದರೆ ನ್ಯಾಯಾಲಯವು, ಇಂತಹ ಒಳಗೊಳ್ಳುವಿಕೆಯಿಂದ ’ಸಾಮಾಜಿಕ-ಪ್ರತ್ಯೇಕತೆಯ ಪ್ರಜ್ಞೆಯನ್ನು ಸ್ಥಾಪಿಸುತ್ತದೆ’ ಹಾಗೂ ’ತಮ್ಮ ಧರ್ಮ ಮತ್ತು ಶ್ರದ್ಧೆಯ ಹೊರತಾಗಿಯೂ ಸಮವಸ್ತ್ರದಿಂದ ಬರುವ ಒಂದು ರೀತಿಯ ಸಮಾನತೆಯ ಭಾವನೆಗೆ ಧಕ್ಕೆ ಆಗಲಿದೆ’ ಎಂದು ವಾದಿಸಿದೆ.

ಕರ್ನಾಟಕ ಉಚ್ಚ ನ್ಯಾಯಾಲಯವು ಕೇಂದ್ರೀಯ ವಿದ್ಯಾಲಯಗಳಲ್ಲಿ ಇರುವ ಸಮವಸ್ತ್ರದ ಬಗ್ಗೆ ಮತ್ತು ಅಲ್ಲಿ ನಿಗದಿಪಡಿಸದ ಬಣ್ಣದ ಸ್ಕಾರ್ಫ್ ಮತ್ತು ಟರ್ಬನ್‌ಗೆ ಅನುಮತಿ ನೀಡುವುದರ ಬಗ್ಗೆ, ಅದನ್ನು ಬ್ಯಾಲೆನ್ಸ್ ಮಾಡುವುದರ ಬಗ್ಗೆ ಉದಾಹರಣೆ ನೀಡುತ್ತದೆ ಆದರೆ ಅದು ಶಾಲಾ ಸಮವಸ್ತ್ರದ ಇಡೀ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ತಳ್ಳಿಹಾಕಲೆಂದೇ ಉದಾಹರಣೆ ನೀಡುತ್ತದೆ. ಹಾಗಾಗಿ, ಮಧ್ಯಮಾರ್ಗದ ಪರಿಹಾರವು ತಾನಾಗಿಯೇ ಕಾರ್ಯಸಾಧುವಲ್ಲ ಎಂದು ಹೇಳುತ್ತದೆ. ’ನ್ಯಾಯಸಮ್ಮತವಾದ ಒಳಗೊಳ್ಳುವಿಕೆಯ ತತ್ವದ ಈ ನಿರಾಕರಣೆಯು, ತದ್ವಿರುದ್ಧ ವಾದಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ವಿವಿಧ ಪಕ್ಷಗಳ ಹಕ್ಕುಗಳನ್ನು ಸಮತೋಲನಗೊಳಿಸಲು ತಾರ್ಕಿಕ ಕಾರಣ ಹುಡುಕುವ ಕಾನೂನಾತ್ಮಕ ವಿಶ್ಲೇಷಣೆಯ ಮೂಲಭೂತ ಚೌಕಟ್ಟಿನ ನಿರಾಕರಣೆಯಾಗಿದೆ.

ಹಿಜಾಬ್ ಎಂಬುದು ಇಸ್ಲಾಂಗೆ ಅತ್ಯಗತ್ಯವಾದ ಪದ್ಧತಿ ಅಲ್ಲ ಹಾಗೂ ಅದನ್ನು ಧರಿಸುವ ಹಕ್ಕನ್ನು ಅರ್ಟಿಕಲ್ 25ರ ಅಡಿಯಲ್ಲಿ ರಕ್ಷಿಸಲಾಗಿಲ್ಲ ಎಂದು ಹೇಳಿ ನ್ಯಾಯಾಲಯವು, ಹಿಜಾಬ್ ಧರಿಸುವ ಹಕ್ಕು ಹೆಚ್ಚೆಂದರೆ ಒಂದು ’ಡೆರಿವೇಟಿವ್ ಹಕ್ಕು’ (ಇತರ ಹಕ್ಕಿನ ಮೇಲೆ ಅವಲಂಬಿತವಾಗಿರುವ ಹಕ್ಕು) ಆಗಿರಬಹುದು, ಅದನ್ನು ಶಾಲೆಗಳು, ನ್ಯಾಯಾಲಯಗಳು, ವಾರ್‌ರೂಂಗಳು, ಭದ್ರತಾ ಕ್ಯಾಂಪ್‌ಗಳು ಮುಂತಾದ ನಿರ್ಬಂಧನೆಯುಳ್ಳ (ಕ್ವಾಲಿಫೈಡ್) ಸಾರ್ವಜನಿಕ ಸ್ಥಳಗಳಲ್ಲಿ ’ಶಿಸ್ತು ಮತ್ತು ಶಿಷ್ಟಾಚಾರದೊಂದಿಗೆ ಅನುಗುಣವಾಗಿ’ ಬದಲಾಯಿಸಬಹುದು ಅಥವಾ ಕಡಿತಗೊಳಿಸಬಹು ಎನ್ನುತ್ತದೆ.

ಡೆರಿವೇಟಿವ್ ಅಥವಾ ಪರಾವಲಂಬಿನ ಹಕ್ಕಿನ ಈ ಒಂದು ಪರಿಕಲ್ಪನೆಗೆ ಸಂವಿಧಾನಾತ್ಮಕವಾಗಿ ಯಾವುದೇ ಸಮ್ಮತಿ ಇಲ್ಲ ಹಾಗೂ ಅದೇ ರೀತಿ ಅಧಿಕೃತ (ಕ್ವಾಲಿಫೈಡ್) ಸಾರ್ವಜನಿಕ ಸ್ಥಳ ಎಂಬುದಕ್ಕೂ ಇಲ್ಲ. ಇವೆರಡೂ ಪರಿಕಲ್ಪನೆಗಳು ಧಾರ್ಮಿಕ ಹಕ್ಕಿನ, ಅಭಿವ್ಯಕ್ತಿ ಸ್ವಾತಂತ್ರದ ಹಾಗೂ ಘನತೆಯ ಹಕ್ಕಿನ ಮೂಲಭೂತ ಸ್ವಾತಂತ್ರವನ್ನು ದುರ್ಬಲಗೊಳಿಸುವ ಉದ್ದೇಶವನ್ನು ಹೊಂದಿವೆ. ಮಾನವ ಹಕ್ಕುಗಳು ’ಸಾರ್ವತ್ರಿಕ, ಅವಿಭಾಜ್ಯ ಮತ್ತು ಪರಸ್ಪರ ಅವಲಂಬನೆ ಮತ್ತು ಸಂಬಂಧ ಹೊಂದಿರುವಂತವು’ ಎಂದು ವಿಯೆನ್ನಾ ಘೋಷಣೆ ಹೇಳುತ್ತದೆ. ಮಾನವ ಹಕ್ಕುಗಳ ಕಾನೂನಿನಲ್ಲಿ ಒಂದು ಹಕ್ಕಿಗೆ ಇನ್ನೊಂದು ಹಕ್ಕಿಗಿಂತ ಕೆಳಗಿನ ಅಥವಾ ಮೇಲಿನ ಸ್ಥಾನಮಾನ ಇರುವುದಿಲ್ಲ ಹಾಗೂ ಖಂಡಿತವಾಗಿಯೂ ಅದನ್ನು ಎಲ್ಲಿ ಅನ್ವಯಿಸಲಾಗುತ್ತಿದೆ ಎಂಬುದರ ಆಧಾರದ
ಮೇಲೆ ಒಂದು ಹಕ್ಕು ದುರ್ಬಲಗೊಳ್ಳುವ ಪರಿಕಲ್ಪನೆಯಂತೂ ಇಲ್ಲವೇ ಇಲ್ಲ. ಶಾಲೆಗಳು, ನ್ಯಾಯಾಲಯಗಳು, ವಾರ್‌ರೂಂಗಳು ಮತ್ತು ಭದ್ರತಾ ಕ್ಯಾಂಪ್‌ಗಳು ಯಾವುದೋ ಒಂದು ರೀತಿಯಲ್ಲಿ ಸಮಾನ ಸ್ವರೂಪದ್ದಾಗಿವೆ ಹಾಗೂ ಈ ಸ್ಥಳಗಳಿಗೆ ಬಂದಕೂಡಲೇ ಹಕ್ಕುಗಳು ಕರಗಿಹೋಗುತ್ತವೆ ಎಂಬುದಕ್ಕೂ ಸಂವಿಧಾನಾತ್ಮಕವಾಗಿ ಯಾವುದೇ ಸಮ್ಮತಿಯಿಲ್ಲ. ಕರ್ನಾಟಕದ ಉಚ್ಚ ನ್ಯಾಯಾಲಯ ಹೀಗೆ ಹೇಳಿ ಹೊಸ ನ್ಯಾಯಶಾಸ್ತ್ರ (ಜ್ಯೂರಿಸ್‌ಪ್ರುಡನ್ಸ್) ರಚಿಸುವಾಗ, ಸುರೇಶ್ ಕುಮಾರ್ ಕೌಶಲ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಸಮಲೈಂಗಿಕ ಸಂಬಂಧಗಳನ್ನು (ಸೇಮ್ ಸೆಕ್ಸ್) ಮರುಅಪರಾಧೀಕರಣ ಮಾಡಿ ನೀಡಿದ ತೀರ್ಪಿನ ಕಡೆಗೆ ಹೆಜ್ಜೆಗಳನ್ನು ಇಟ್ಟಿದೆ, ಅಲ್ಲಿ ನ್ಯಾಯಾಲಯವು ಎಲ್‌ಜಿಬಿಟಿ (ಲೈಂಗಿಕ ಅಲ್ಪಸಂಖ್ಯಾತರು) ವ್ಯಕ್ತಿಗಳು ’ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತರು’ ಅವರಿಗೆ ’ಸೋ ಕಾಲ್ಡ್ ಹಕ್ಕುಗಳಿವೆ’ ಎಂದು ಹೇಳಿತ್ತು.

ಅದರೊಂದಿಗೆ ಸರಕಾರವು ಹಿಜಾಬ್ ಬಗ್ಗೆಯ ಅಧಿಸೂಚನೆಯನ್ನು ಹೊರಡಿಸುವ ಕ್ರಮವು ಅದರ ಅಧಿಕಾರದ ಸಮಂಜಸವಾದ ಬಳಕೆಯಾಗಿದೆ ಎಂಬುದನ್ನು ತೋರ್ಪಡಿಸಬೇಕು ಎಂಬ ಸಂವಿಧಾನಾತ್ಮಕ ಷರತ್ತನ್ನೂ ನ್ಯಾಯಾಲಯವು ದುರ್ಬಲಗೊಳಿಸಿದೆ. ಅದೇ ಸಮಯದಲ್ಲಿ ಸರಕಾರದ ಅಧಿಸೂಚನೆಯು ’ತರಾತುರಿಯಲ್ಲಿ ಹೊರಡಿಸಲಾಗಿದೆ’ ಎಂದು ಒಪ್ಪಿಕೊಂಡರೂ, ಈ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಕಾಣುವ ಬೇಕಾಬಿಟ್ಟಿಯಾದ ಕ್ರಮವನ್ನು ನ್ಯಾಯಾಲಯವು ’ದುರ್ಬಲ ಆಧಾರ’ ಎಂದು ಸಹಜವಾಗಿ ತಳ್ಳಿಹಾಕಿದೆ.

SSLC ಪರೀಕ್ಷೆ: ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಒಪ್ಪಿಗೆ

ಒಂದು ಶಾಸನ ಅಥವಾ ಅಧಿಸೂಚನೆಯನ್ನು ’ಸ್ಪಷ್ಟವಾಗಿ ಬೇಕಾಬಿಟ್ಟಿ’ಯಾಗಿದೆಯೇ ಎಂಬುದನ್ನು ಪರೀಕ್ಷಿಸಲು, ಶಾಯಿರಾ ಬಾನೊ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಳಿದಂತೆ, ಅದಕ್ಕೆ, ಆ ನಿಯಂತ್ರಣಕ್ಕೆ ಒಂದು ’ನಿರ್ಧಾರಕ ತತ್ವ ಇದೆಯೇ ಎಂದು ತೋರಿಸುವ ಅವಶ್ಯಕತೆ ಇರುತ್ತದೆ ಹಾಗೂ ಆ ನಿಯಂತ್ರಣವು ’ಪ್ರಚೋದನೆಯಿಲ್ಲದೆ ತರಾತುರಿಯಲ್ಲಿ’ ಅಥವಾ ’ಅತಿಯಾಗಿ ಅಥವಾ ಮೀತಿಮೀರಿ’ ಆ ನಿಯಂತ್ರಣಗಳನ್ನು ತರಬಾರದು ಎಂತಿದೆ. ಇಂಗ್ಲೆಂಡಿನ ಸರ್ವೋಚ್ಚ ನ್ಯಾಯಾಲಯದ ಎದುರು, ಒಂದು ಶಾಲೆಯು ಜಿಲ್ಬಾಬ್‌ಗೆ (ಮುಸ್ಲಿಂ ಮಹಿಳೆಯರು ಧರಿಸುವ ಉದ್ದದ ಕೋಟು ತರದ ವಸ್ತ್ರ) ನಿರ್ಬಂಧ ಹೇರುವುದಕ್ಕೆ ಅನುಮತಿ ಇದೆಯೇ (ಆ ಶಾಲೆಯಲ್ಲಿ ಹಿಜಾಬ್ ಧರಿಸಲು ಅನುಮತಿ ಇತ್ತು.) ಎಂಬ ಪ್ರಕರಣ ಬಂದಾಗ, ನ್ಯಾಯಾಲಯವು ಶಾಲೆಯ ನಿರ್ಣಯವನ್ನು ಎತ್ತಿಹಿಡಿದು, ಆ ಶಾಲೆಯು ವಿದ್ಯಾರ್ಥಿಗಳಿಗೆ ಶಾಲೆಯು ನಿಗದಿಪಡಿಸಿದ ಬಣ್ಣದಲ್ಲಿ ’ಸ್ಕರ್ಟ್, ಪ್ಯಾಂಟ್‌ಗಳು, ಸಲ್ವಾರ್ ಕಮೀಜ್‌ಗಳು ಮತ್ತು ಹಿಜಾಬ್‌ಗಳನ್ನು ಧರಿಸಲು ಅನುವು ಮಾಡಿರುವುದರಿಂದ ಜಿಲ್ಬಾಬ್ ಅನ್ನು ಧರಿಸುವುದಕ್ಕೆ ನಿರ್ಬಂಧ ಹೇರಿದ್ದು, ಆ ವಿದ್ಯಾರ್ಥಿಗಳ ಹಕ್ಕುಗಳನ್ನು ಸಮತೋಲನಗೊಳಿಸುತ್ತದೆ ಎಂದು ಹೇಳಿತು. ಕರ್ನಾಟಕ ಸರ್ಕಾರ ಹೊರಡಿಸಿದ ಸೂಚನೆಯು ’ಮಿತಿಮೀರಿದ್ದಲ್ಲ’ ಅಥವಾ ’ಬೇಕಾಬಿಟ್ಟಿಯಾದದ್ದಲ್ಲ’ ಎಂದು ತೋರಿಸಲು ಕರ್ನಾಟಕ ಹೈಕೋರ್ಟ್ ಈ ತೀರ್ಪನ್ನು ಉಲ್ಲೇಖಿಸುತ್ತದೆ. ಆದರೆ, ಈ ಪ್ರಕರಣದ ಅಂಶಗಳು ಸೂಚಿಸುವುದೇನೆಂದರೆ, ಈ ಸಮವಸ್ತ್ರದ ಸಂಹಿತೆಯನ್ನು ನಿಗದಿಪಡಿಸುವುದಕ್ಕೆ ಮುನ್ನ, ಪೋಷಕರು ಮತ್ತು ಶಿಕ್ಷಕರೊಂದಿಗೆ ದೀರ್ಘವಾದ ಚರ್ಚೆ ನಡೆಸಲಾಗಿತ್ತು ಹಾಗೂ ಹಿಜಾಬ್ ಅನುವು ಮಾಡುವುದಕ್ಕೂ (ಜಿಲ್ಬಾಬ್ ಅಲ್ಲ) ಮುನ್ನ ಮುಸ್ಲಿಂ ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿತ್ತು ಎಂಬುದು. ಪರಿಸ್ಥಿತಿಯ ಸಂಕೀರ್ಣತೆಗಳನ್ನು ಬಗೆಹರಿಸುವ ಒಂದು ವಿವೇಚನೆಯುಳ್ಳ ಮತ್ತು ಪ್ರಮಾಣಕ್ಕೆ ಅನುಗುಣವಾಗದ ಪ್ರತಿಕ್ರಿಯೆ ಆಗಿದೆ ಎಂದು ಯುಕೆ ಕೋರ್ಟ್ ಹೇಳಿತ್ತು. ಕರ್ನಾಟಕದ ಉಚ್ಚ ನ್ಯಾಯಾಲಯದ ತೀರ್ಪು ತೋರಿಸುವುದೇನೆಂದರೆ, ನ್ಯಾಯ ಕೇಳಲು ಬಾಗಿಲು ತಟ್ಟಿದವರ ಸಲುವಾಗಿ ಅದಕ್ಕೆ ಯಾವ ಸಹಾನುಭೂತಿಯೂ ಇಲ್ಲ ಹಾಗೂ ಒಂದು ಪ್ರಮಾಣಕ್ಕನುಗುಣವಾದ ಪ್ರತಿಕ್ರಿಯೆ ಏನಿರಬೇಕು ಎಂಬುದರ ಬಗ್ಗೆ ಯಾವ ತಿಳಿವಳಿಕೆಯೂ ಇಲ್ಲ.

ಒಂದು ಸಂವಿಧಾನಾತ್ಮಕ ನ್ಯಾಯಾಲಯದಿಂದ ಇರುವ ನಿರೀಕ್ಷೆಯೇನೆಂದರೆ, ಅದು ವೈವಿಧ್ಯತೆಯನ್ನು ಗೌರವಿಸುವುದರ ಆಧಾರದ ಮೇಲೆ ಒಂದು ಬಹುತ್ವದ ಸಮಾಜದ ಅಡಿಪಾಯವಾಗಿರುವ ಸ್ವಾತಂತ್ರ ಮತ್ತು ಭ್ರಾತೃತ್ವದ ಸಂವಿಧಾನಾತ್ಮಕ ಮೌಲ್ಯಗಳನ್ನು ಗಟ್ಟಿಗೊಳಿಸುತ್ತದೆ ಎಂದು. ದುರದೃಷ್ಟವಶಾತ್, ಅದು ಮಹಿಳೆಯರ ಧಾರ್ಮಿಕ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಯ ಹಕ್ಕುಗಳನ್ನು ಕೇವಲ ಡೆರಿವೇಟಿವ್ ಹಕ್ಕುಗಳು ಅಥವಾ ಇತರ ಹಕ್ಕುಗಳ ಮೇಲೆ ಅವಲಂಬಿತವಾಗಿರುವ ಹಕ್ಕುಗಳು ಎಂದು ತಳ್ಳಿಹಾಕಲಾಗಿದೆ. ಹೀಗೆ ಮಾಡುವುದರಿಂದ ನ್ಯಾಯಾಲಯವು, ಸಂವಿಧಾನದ ಮೌಲ್ಯಗಳನ್ನು ಭಕ್ತಿಯಿಂದ ಪಠಿಸುತ್ತಲೇ ಆ ಮೌಲ್ಯಗಳಿಗೆ ದ್ರೋಹ ಬಗೆದಿದೆ.

ಈ ತೀರ್ಪು ಭಾರತದಲ್ಲಿ ಸಂವಿಧಾನಿಕ ನ್ಯಾಯಶಾಸ್ತ್ರದ ಇತಿಹಾಸದಲ್ಲಿ ಮಹಿಳೆಯರ ಹಕ್ಕುಗಳನ್ನು ನಿರಾಕರಿಸಿದ ಇತರ ನಾಚಿಕೆಗೇಡಿನ ತೀರ್ಪುಗಳಲ್ಲಿ ಒಂದಾಗಿದೆ. ಹಾಗೂ ಇದು ಶಬರಿಮಲೈನಂತಹ ತೀರ್ಪುಗಳನ್ನು ತಪ್ಪಾಗಿ ಅನ್ವಯಿಸುವುದು ಮತ್ತು ಮಹಿಳೆಯರಿಗೆ ಅವರ ಹಕ್ಕುಗಳನ್ನು ನಿರಾಕರಿಸಲು, ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದವರ ಬಾಬಾಸಾಹೇಬ್ ಅಂಬೇಡ್ಕರ್ ಅಂತಹವರ ಮಾತುಗಳನ್ನು ತಿರುಚಿ ಬಳಸಿಕೊಂಡಿರುವುದು ಗಾಯಕ್ಕೆ ಉಪ್ಪು ಸವರಿದಂತಾಗಿದೆ.

ಈಗ ಈ ಸಂವಿಧಾನಾತ್ಮಕ ತಪ್ಪನ್ನು ಸರಿಪಡಿಸುವ ಜವಾಬ್ದಾರಿ ಸರ್ವೋಚ್ಚ ನ್ಯಾಯಾಲಯದ ಮೇಲಿದೆ.

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪಿಯುಸಿಎಲ್-ಕೆ ನ ರಾಜ್ಯಾಧ್ಯಕ್ಷರು. ಇತ್ತೀಚಿಗೆ ’ಇಂಡಿಯಾಸ್ ಅನ್‌ಡಿಕ್ಲೇರ್‍ಡ್ ಎಮರ್ಜೆನ್ಸಿ’ ಎಂಬ ಪುಸ್ತಕ ಬರೆದಿದ್ದಾರೆ.


ಇದನ್ನೂ ಓದಿ: ಹಿಜಾಬ್‌ ನಿಷೇಧ ಕುರಿತು ಹಿರೇಮಗಳೂರು ಕಣ್ಣನ್‌ ಆಕ್ಷೇಪಾರ್ಹ ಹೇಳಿಕೆ; ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Great
    It’s how how you give respect to our law and our constitution.

    I think you ppl dont deserve to live in India and you ppl like thinno manege droha bageyavaru

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...