ಅಶ್ಲೀಲ ಚಿತ್ರ ನಿರ್ಮಾಣ ಹಗರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಅವರನ್ನು ಬಂಧಿಸಿರುವ ಮುಂಬೈ ಅಪರಾಧ ವಿಭಾಗವು, ಈಗ ಅವರ ಸಹಚರರು ಮತ್ತು ನಟಿ ಗೆಹನಾ ವಸಿಷ್ಠ ವಿರುದ್ಧ ಹೊಸ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿದೆ.
ಇಬ್ಬರು ನಟಿಯರು ಸಲ್ಲಿಸಿದ ಪೊಲೀಸ್ ದೂರುಗಳ ಹಿನ್ನೆಲೆಯಲ್ಲಿ ಹೊಸ ಪ್ರಕರಣ ದಾಖಲಾಗಿದ್ದು, ಇದರಲ್ಲಿ ನಟಿ ಗೆಹನಾ ವಸಿಷ್ಠ, ರೋಮಾ ಖಾನ್ ಮತ್ತು ತನ್ವೀರ್ ಹಶ್ಮಿ ಅವರು ಅಶ್ಲೀಲ ಚಿತ್ರಗಳಲ್ಲಿ ನಟಿಸಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಅಶ್ಲೀಲ ಚಲನಚಿತ್ರಗಳು ಮತ್ತು ವೀಡಿಯೊಗಳನ್ನು ನಿರ್ಮಾಣ ಮಾಡಿದ ನಂತರ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅಥವಾ ಅವರ ಸಹವರ್ತಿಗಳ ಒಡೆತನದ ಅಪ್ಲಿಕೇಶನ್‌ಗಳಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಆರೋಪಿಗಳ ವಿರುದ್ಧ 420 (ಮೋಸ), 392 (ದರೋಡೆಗೆ ಶಿಕ್ಷೆ), 393 (ದರೋಡೆಗೆ ಯತ್ನ) ಸೇರಿದಂತೆ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಮಾಲ್ವಾನಿ ಪೊಲೀಸ್ ಠಾಣೆಯಲ್ಲಿರುವ ಅಪರಾಧ ವಿಭಾಗದ ವಿಶೇಷ ತಂಡದಿಂದ ಈ ಪ್ರಕರಣವನ್ನು ದಾಖಲಿಸಲಾಗಿದೆ.
ಇದನ್ನೂ ಓದಿ: ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳಿಂದ ಪ್ರತಿದಿನ 6 ರಿಂದ 8 ಲಕ್ಷ ಗಳಿಸುತ್ತಿದ್ದರು: ಪೊಲೀಸರು
ಫೆಬ್ರವರಿ 2021 ರಲ್ಲಿ ಕೆಲವು ಸಂತ್ರಸ್ತರು ಮಾಲ್ವಾನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಮುಂಬೈ ಅಪರಾಧ ವಿಭಾಗವು ಈ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದೆ. ಈ ವರ್ಷದ ಫೆಬ್ರವರಿಯಲ್ಲಿ ನಟಿ ಗೆಹನಾ ವಸಿಷ್ಠ ಬಂಧನಕ್ಕೊಳಗಾಗಿ, ನಂತರ ಜಾಮೀನು ಪಡೆದಿದ್ದರು. ಇತ್ತೀಚೆಗೆ ಮುಂಬೈ ಕ್ರೈಂ ಬ್ರಾಂಚ್ ವಿಶೇಷ ತಂಡ ಮತ್ತೆ ಅವರನ್ನು ವಿಚಾರಣೆಗೆ ಕರೆಸಿತ್ತು.
ಇಬ್ಬರು ಮಹಿಳೆಯರಿಂದ ಬಂದ ದೂರುಗಳ ಆಧಾರದ ಮೇಲೆ ಮಾಲ್ವಾನಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರೆ, ಮತ್ತೊಬ್ಬ ಮಹಿಳೆ ಮುಂಬೈನಿಂದ 120 ಕಿ.ಮೀ ದೂರದಲ್ಲಿರುವ ಲೋನವ್ಲಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮುಂಬೈ ಅಪರಾಧ ವಿಭಾಗವು ಈ ಪ್ರಕರಣವನ್ನು ವಹಿಸಿಕೊಳ್ಳುವ ಮೊದಲು, ಅಶ್ಲೀಲ ಚಿತ್ರಗಳ ದಂಧೆಯ ಬಗ್ಗೆ ಇಬ್ಬರು ನಟಿಯರಿಂದ ಮಹಾರಾಷ್ಟ್ರ ಸೈಬರ್ ಇಲಾಖೆಗೆ ದೂರು ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಹಿಂದೆ ತಿಳಿಸಿದ್ದಾರೆ.
“ಕೆಲವು ಹೊಸಬರು ಮತ್ತು ಕಿರಿಯ ಕಲಾವಿದರಿಗೆ ಅವಕಾಶ ನೀಡುವುದಾಗಿ ವೆಬ್ ಸರಣಿಗಳು ಅಥವಾ ಸಣ್ಣ ಚಿತ್ರಗಳಲ್ಲಿ ನಟಿಸುವಂತೆ ಆಮಿಷ ಒಡ್ಡಲಾಗಿದೆ. ಈ ಕಲಾವಿದರನ್ನು ಆಡಿಷನ್‌ಗೆ ಕರೆದು ಬೋಲ್ಡ್ ದೃಶ್ಯಗಳಲ್ಲಿ ನಟಿಸುವಂತೆ ಹೇಳಲಾಗಿದೆ. ಬಳಿಕ ಅವುಗಳನ್ನು ಕಲಾವಿದರ ಇಚ್ಛೆಗೆ ವಿರುದ್ಧವಾಗಿ ಅರೆ ನಗ್ನ ಅಥವಾ ನಗ್ನ ದೃಶ್ಯಗಳಾಗಿ ಮಾರ್ಪಡು ಮಾಡಲಾಗಿದೆ ಎಂದು ತನಿಖೆಯ ಸಮಯದಲ್ಲಿ ಬೆಳಕಿಗೆ ಬಂದಿದೆ” ಎಂದು ಅಧಿಕಾರಿ ಹೇಳಿದ್ದಾರೆ.
ಜುಲೈ 27 ರಂದು ರಾಜ್ ಕುಂದ್ರಾ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದಲ್ಲಿ ಈವರೆಗೆ ಕನಿಷ್ಠ 11 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ ಕುಂದ್ರಾ ಬಂಧನ: ಶೃಂಗಾರ ಅಶ್ಲೀಲವಲ್ಲ, ನನ್ನ ಪತಿ ನಿರಪರಾಧಿ ಎಂದ ನಟಿ ಶಿಲ್ಪಾ ಶೆಟ್ಟಿ


