ಮೇ 19, 2024ರಂದು ಮಹಾರಾಷ್ಟ್ರದ ಪುಣೆಯ ಕಲ್ಯಾಣ ನಗರ ಜಂಕ್ಷನ್ ಬಳಿ ನಡೆದ ಐಷಾರಾಮಿ ಪೋರ್ಶೆ ಕಾರು ಅಪಘಾತ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಿನಿಮೀಯ ಶೈಲಿಯಲ್ಲಿ ಪ್ರಕರಣ ತಿರುಚಲು ಯತ್ನ, ಕಾನೂನಿನ ಮೇಲೆ ಪ್ರಭಾವ ಬೀರುವ ಯತ್ನ ಸೇರಿದಂತೆ ಹಲವು ಮಹತ್ವದ ಬೆಳವಣಿಗೆಗಳು ಈ ಪ್ರಕರಣದಲ್ಲಿ ನಡೆದಿದೆ.
ಇತ್ತೀಚಿನ ಮಾಹಿತಿ ಪ್ರಕಾರ, ಆರೋಪಿ ಬಾಲಕನ ರಕ್ತದ ಮಾದರಿಯನ್ನು ತಿರುಚಿ ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಪುಣೆಯ ಸಸೂನ್ ಜನರಲ್ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥರೂ ಸೇರಿದ್ದಾರೆ.
ಡಾ. ಅಜಯ್ ತಾವಡೆ ಮತ್ತು ಡಾ. ಹರಿ ಹಾರ್ನರ್ ಬಂಧಿತರು. ಇವರಿಂದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡ ಪೊಲೀಸರು ಪರಿಶೀಲನೆ ನಡೆಸಿದಾಗ, ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಅಜಯ್ ತಾವಡೆ ಅಪಘಾತ ನಡೆದ ದಿನ ರಾತ್ರಿ ಬಾಲಕನ ತಂದೆಗೆ ಕರೆ ಮಾಡಿರುವುದು ತಿಳಿದು ಬಂದಿದೆ.
ಇಬ್ಬರು ವೈದ್ಯರು ಬಾಲಕನ ರಕ್ತದ ಮಾದರಿ ಪರಿಶೀಲಿಸಿ, ಆತ ಮದ್ಯಪಾನ ಮಾಡಿರಲಿಲ್ಲ ಎಂದು ವರದಿ ನೀಡಿದ್ದರು. ಆದರೆ, ಪೊಲೀಸರು ರೆಸ್ಟೋರೆಂಟ್ ಸಿಸಿಟಿವಿ ಪರಿಶೀಲಿಸಿದಾಗ, ಅದರಲ್ಲಿ ಬಾಲಕ ಮದ್ಯಪಾನ ಮಾಡಿರುವುದು ರೆಕಾರ್ಡ್ ಆಗಿತ್ತು. ಈ ಮೂಲಕ ವೈದ್ಯರ ಕಳ್ಳಾಟ ಬಯಲಾಗಿದೆ.
ಪ್ರಕರಣದ ವಿವರಣೆ : ಮೇ 19ರಂದು ಬೆಳಗಿನ ಜಾವ 3:15ರ ಸುಮಾರಿಗೆ ಪುಣೆ ನಗರದಲ್ಲಿ ಪಾರ್ಟಿ ಮುಗಿಸಿದ ಸ್ನೇಹಿತರ ಗುಂಪೊಂದು ಬೈಕ್ ಏರಿ ತಮ್ಮ ಮನೆಗೆ ತೆರಳುತ್ತಿತ್ತು. ಈ ವೇಳೆ ಕಲ್ಯಾಣ ನಗರ ಜಂಕ್ಷನ್ ಬಳಿ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಐಷರಾಮಿ ಪೋರ್ಶೆ ಕಾರು ವೇಗವಾಗಿ ಬಂದು ಬೈಕೊಂದಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಬೈಕ್‌ನಲ್ಲಿದ್ದ ಮಧ್ಯ ಪ್ರದೇಶ ಮೂಲಕ ಇಬ್ಬರು ಐಟಿ ಉದ್ಯೋಗಿಗಳಾದ ಅನಿಸ್ ಅವಧಿಯಾ ಮತ್ತು ಅಶ್ವಿನಿ ಕೋಸ್ಟಾ ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು, ಬಾಲಕನನ್ನು ಕಾರಿನಿಂದ ಕೆಳಗಿಳಿಸಿ ಥಳಿಸಿದ್ದರು. ಬಳಿಕ ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ಬಾಲಕನನ್ನು ಬಾಲ ನ್ಯಾಯಮಂಡಳಿ ಮುಂದೆ ಹಾಜರುಪಡಿಸಿದ್ದರು. ಮಂಡಳಿ, ಬಾಲಕನಿಗೆ ಷರತ್ತುಬದ್ದ ಜಾಮೀನು ನೀಡಿತ್ತು. ಆದರೆ, ಜಾಮೀನಿಗೆ ವಿಧಿಸಿದ್ದ ಷರತ್ತು ಜನರನ್ನು ಅಶ್ಚರ್ಯಗೊಳಿಸಿತ್ತು. ಕಾರು ಅಪಘಾತದ ಬಗ್ಗೆ ಸುದೀರ್ಘ ಪ್ರಬಂಧ ಬರೆಯಬೇಕು, ಸಂಚಾರಿ ಪೊಲೀಸರ ಜೊತೆ 15 ದಿನಗಳ ಕಾಲ ಕೆಲಸ ಮಾಡಬೇಕು ಇತ್ಯಾದಿ ಷರತ್ತುಗಳನ್ನು ವಿಧಿಸಲಾಗಿತ್ತು.
ಆರೋಪಿ ಬಾಲಕ ಪುಣೆಯ ಬ್ರಹ್ಮ ರಿಲಿಯಾಲ್ಟಿ ಬಿಲ್ಡರ್ ಮಾಲೀಕ ವಿಶಾಲ್ ಅಗರ್ವಾಲ್ ಅವರ ಪುತ್ರನಾಗಿದ್ದಾನೆ. ಬಾಲಕನಿಗೆ ಶ್ರೀಮಂತ ಹಿನ್ನೆಲೆ ಇರುವುದರಿಂದ ಕ್ಷುಲ್ಲಕ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ. ಎರಡು ಜೀವಗಳಿಗೆ ಬೆಲೆ ಇಲ್ಲವೇ? ಎಂದು ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. “ಮೋದಿಯ ಎರಡು ಭಾರತದಲ್ಲಿ ನ್ಯಾಯವು ಸಂಪತ್ತನ್ನು ಅವಲಂಭಿಸಿದೆ” ಎಂದಿದ್ದರು. ಪುಣೆ ಕಾಂಗ್ರೆಸ್ ಅಪಘಾತ ಸ್ಥಳದಲ್ಲಿ ಪ್ರಬಂಧ ಸ್ಪರ್ದೆ ಏರ್ಪಡಿಸಿ ವಿಭಿನ್ನವಾಗಿ ಪ್ರತಿಭಟಿಸಿತ್ತು.
“ಯರವಾಡ ಠಾಣೆಯ ಅಧಿಕಾರಿ ಬಾಲಕನಿಗೆ ಪಿಝ್ಝಾ ಬರ್ಗರ್ ತರಿಸಿಕೊಟ್ಟು, ಮೃತರ ಕುಟುಂಬಸ್ಥರಿಗೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ” ಎಂದು ಪ್ರಕಾಶ್ ಅಂಬೇಡ್ಕರ್ ಆರೋಪಿಸಿದ್ದರು.
ಜನಾಕ್ರೋಶ ಹೆಚ್ಚಾಗುತ್ತಿದ್ದಂತೆ ಬಾಲ ನ್ಯಾಯಮಂಡಳಿ ಬಾಲಕನಿಗೆ ನೀಡಿದ್ದ ಜಾಮೀನು ರದ್ದುಪಡಿಸಿತ್ತು. ಈ ನಡುವೆ ಆತನ ತಂದೆಯನ್ನು ಪೊಲೀಸರು ಬಂಧಿಸಿದ್ದರು.
ಬಳಿಕ ಆರೋಪಿ ಬಾಲಕ ಮದ್ಯಪಾನ ಮಾಡಿ ವೇಗವಾಗಿ ಕಾರು ಚಲಾಯಿಸಿದ್ದ ಎಂಬ ವಿಷಯ ಬಯಲಾಗಿತ್ತು. ಅಪಘಾತ ನಡೆದ ದಿನ ರಾತ್ರಿ 9:30ರಿಂದ ಮಧ್ಯರಾತ್ರಿ 1 ತನಕ ಬಾಲಕ ತನ್ನ ಗೆಳೆಯರೊಂದಿಗೆ ರೆಸ್ಟೋರೆಂಟ್‌ಗೆ ತೆರಳಿ ಮದ್ಯಪಾನ ಮಾಡಿದ್ದ ಎಂದು ವರದಿಯಾಗಿತ್ತು. ಇದಕ್ಕೆ ಸಾಕ್ಷಿಯಾಗಿ ರೆಸ್ಟೋರೆಂಟ್ ಸಿಸಿಟಿವಿ ದೃಶ್ಯ ಹೊರಬಿದ್ದಿತ್ತು.
ಈ ಬೆನ್ನಲ್ಲೇ ಪುಣೆ ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ಅಪ್ರಾಪ್ತಗೆ ಮದ್ಯ ಪೂರೈಸಿದ ಪುಣೆಯ ಕೋಸಿ ರೆಸ್ಟೋರೆಂಟ್ ಮತ್ತು ಹೋಟೆಲ್ ಬ್ಲಾಕ್ ಕ್ಲಬ್‌ಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಬೀಗ ಜಡಿದಿದ್ದರು.
ಬಾಲಕ ಕಾರು ಚಲಾಯಿಸುತ್ತಿರಲಿಲ್ಲ ಎಂದು ಬಿಂಬಿಸಲು ಯತ್ನ
ಬಾಲಕ ಉದ್ಯಮಿಯ ಮಗನಾಗಿರುವುದರಿಂದ ಆರೋಪವನ್ನು ಬೇರೊಬ್ಬನ ತಲೆಗೆ ಕಟ್ಟುವ ಪ್ರಯತ್ನ ನಡೆದಿತ್ತು. ಆದರೆ, ಅದು ವಿಫಲವಾಗಿದೆ. ಅಪಘಾತದ ವೇಳೆ ಬಾಲಕ ಕಾರು ಓಡಿಸುತ್ತಿರಲಿಲ್ಲ. ಆತನ ಕುಟುಂಬದ ಕಾರು ಚಾಲಕ ಚಾಲನೆ ಮಾಡುತ್ತಿದ್ದ ಎಂದು ಆರಂಭದಲ್ಲಿ ಹೇಳಲಾಗಿತ್ತು. ಬಳಿಕ ಬಾಲಕನ ತಂದೆಯೇ ಕಾರು ಓಡಿಸುತ್ತಿದ್ದರು ಎನ್ನಲಾಗಿತ್ತು. ಆದರೆ, ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳು ಇದನ್ನು ಅಲ್ಲಗಳೆದಿದ್ದರು. ಅಪಘಾತದ ವೇಳೆ ಬಾಲಕನೇ ಕಾರು ಓಡಿಸುತ್ತಿದ್ದ ಎಂದಿದ್ದರು.
ಬಾಲಕ ಕಾರು ಓಡಿಸುತ್ತಿರಲಿಲ್ಲ ಎಂದು ಬಿಂಬಿಸಲು ಯತ್ನಿಸಿರುವುದರಲ್ಲಿ ಪೊಲೀಸರ ಕೈವಾಡವೂ ಬಯಲಾಗಿತ್ತು. ಈ ಹಿನ್ನೆಲೆ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.
ಯರವಾಡ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದ ಪ್ರಕರಣವನ್ನು, ಪ್ರಸ್ತುತ ಪುಣೆ ಪೊಲೀಸರ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ಬಾಲಕನ ಅಜ್ಜನ ಬಂಧನ
ಪ್ರಕರಣದ ಮಹತ್ವದ ಬೆಳವಣಿಗೆಯಲ್ಲಿ ಪೊಲೀಸರು ಬಾಲಕನ ಅಜ್ಜ ಸುರೇಂದ್ರ ಕುಮಾರ್ ಅಗರ್ವಾಲ್ ಎಂಬವರನ್ನು ಬಂಧಿಸಿದ್ದಾರೆ. ಈತ ಕುಟುಂಬದ ಚಾಲಕನನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡು, ಅಪಘಾತದ ಹೊಣೆ ಹೊತ್ತುಕೊಳ್ಳುವಂತೆ ಆತನಿಗೆ ಬೆದರಿಕೆ ಹಾಕಿದ ಆರೋಪವಿದೆ. ಸುರೇಂದ್ರ ಕುಮಾರ್ ವಿರುದ್ಧ ಪೊಲೀಸರು ಅಪಹರಣ ಮತ್ತು ಅಕ್ರಮ ಬಂಧನದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಐಷಾರಾಮಿ ಪೋರ್ಶೆ ಕಾರನ್ನು ಅಜ್ಜ ಸುರೇಂದ್ರ ಕುಮಾರ್ ಮೊಮ್ಮಗನಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಕೊಟ್ಟಿದ್ದರು ಎಂದು ಹೇಳಲಾಗ್ತಿದೆ.
ಆರೋಪಿ ಬಾಲಕನನ್ನು ಜೂನ್ 5ರವರೆಗೆ ಬಾಲಕ ವೀಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಆತನ ತಂದೆ ಮತ್ತು ಅಜ್ಜ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇದನ್ನೂ ಓದಿ : ರಫಾ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಿದ ಇಸ್ರೇಲ್: 40 ಪ್ಯಾಲೆಸ್ತೀನಿಯರು ಸಾವು


