ಮಣಿಪುರದಲ್ಲಿ ಇತ್ತೀಚಿಗೆ ನಡೆದ ಚುನಾವಣೆಯ ಫಲಿತಾಂಶವು, ಎಲ್ಲ ವಯೋಮಾನದ ಶಿಕ್ಷಿತ ಸಮುದಾಯವನ್ನು ಅಚ್ಚರಿ ಮತ್ತು ಆಳವಾದ ಆತ್ಮಾವಲೋಕನಕ್ಕೆ ದೂಡಿದೆ. ಚುನಾವಣಾ ಫಲಿತಾಂಶವು ನೈಜ ಜಗತ್ತಿನ ಅನುಭವವಾಗಿದ್ದು, ಶಿಕ್ಷಿತ ಮತ್ತು ಬುದ್ಧಿಜೀವಿ ವರ್ಗಗಳು ಈಗ ಈ ಅನಿರೀಕ್ಷಿತ ಫಲಿತಾಂಶಕ್ಕೆ ಸರಿಹೊಂದುವ ರೀತಿಯ ವ್ಯಾಖ್ಯಾನಗಳನ್ನು ಮತ್ತು ಕಾರಣಗಳನ್ನು ಹುಡುಕುವಲ್ಲಿ ನಿರತವಾಗಿವೆ.
ಚುನಾವಣೆಗಳು ಪ್ರಜಾಪ್ರಭುತ್ವದಲ್ಲಿನ ಪ್ರಕ್ರಿಯೆಯಾಗಿ, ಅತಿ ಕಡಿಮೆ ಸಮಯದಲ್ಲಿ ಬಹಳ ಆಳವಾದ ಮತ್ತು ವಿಸ್ತಾರವಾದ ಬದಲಾವಣೆಯ ಚಲನಶೀಲ ಶಕ್ತಿಯನ್ನು ಹೊಂದಿರುವ ಪ್ರಕ್ರಿಯೆಗಳಾಗಿವೆ. ಚುನಾವಣೆ ನಡೆದ ದಿನಗಳನ್ನು ಮತ್ತು ಅದರ ಹಿಂದಿನ ಕೆಲವು ದಿನಗಳನ್ನು ಮಣಿಪುರದಲ್ಲಿ ಈ ಹಿಂದೆಂದೂ ಕಾಣದಿದ್ದಷ್ಟು ಹಿಂಸೆಯ ದಿನಗಳನ್ನಾಗಿ ಗುರುತಿಸಬಹುದಾಗಿದೆ. ಇದರಲ್ಲಿ ಮೂರು ಅಂಶಗಳಿವೆ. ಮೊದಲನೆಯದಾಗಿ, ಬಿಜೆಪಿಯ ಮತ್ತು ಆಡಳಿತಾರೂಢ ಪಕ್ಷದ ಸದಸ್ಯರುಗಳಾಗಿ ಧಮ್ಕಿಯ-ಬೆದರಿಕೆಯ ರೀತಿಯ ಭಾಷಾಪ್ರಯೋಗವನ್ನು ಯಾವುದೇ ಅಂಜಿಕೆಯಿಲ್ಲದೆ ಮಾಡಿದ್ದು ಮತ್ತು ಅದನ್ನು ಕಾರ್ಯರೂಪಕ್ಕೂ ತಂದಿದ್ದು. ಎರಡನೆಯದಾಗಿ, ಬಹಳಷ್ಟು ಪ್ರಕರಣಗಳಲ್ಲಿ, ಈ ರೀತಿಯ ಹಲ್ಲೆಗಳಿಗೆ ಒಳಗಾಗಿದ್ದು ಹಿಂಸೆಗೆ ಹೆಸರಾದ ಕ್ಷೇತ್ರಗಳಲ್ಲಿ ಮತ್ತು ಬಿಜೆಪಿಯ ವಿರುದ್ಧವಾಗಿ ಸಮರ್ಥ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದ್ದ ಪಕ್ಷಗಳ ನಾಯಕರು ಮತ್ತು ಬೆಂಬಲಿಗರು. ಮೂರನೆಯದಾಗಿ, ತನ್ನ ಚುನಾವಣಾ ಪ್ರಣಾಳಿಕೆಯನ್ನು ಕೊನೆಯ ಕ್ಷಣದವರೆಗೂ ಬಿಡುಗಡೆಗೊಳಿಸದೆ ವಿಳಂಬಿಸುವ ಮೂಲಕ ಬಿಜೆಪಿ ಮುಕ್ತ ಸಾರ್ವಜನಿಕ ಚರ್ಚೆಗಳ ಸಾಧ್ಯತೆಗಳನ್ನು ಕ್ಷೀಣಗೊಳಿಸಿತು ಮತ್ತು ಬಿಜೆಪಿಯನ್ನು ಒಂದು ರಾಜಕೀಯ ಪಕ್ಷವೆಂದಾಗಲೀ ಅಥವಾ ಸರ್ಕಾರವನ್ನು ಮುನ್ನಡೆಸುತ್ತಿದ್ದ ಪಕ್ಷವೆಂದಾಗಲಿ ತಿಳಿದು ಅದರ ನಿಲುವುಗಳನ್ನು, ಸಾಧನೆಯನ್ನು ಮೌಲ್ಯಮಾಪನಕ್ಕೆ ಒಳಪಡಿಸುವುದನ್ನು ತಡೆಹಿಡಿಯಲಾಯಿತು.
ಬೆದರಿಕೆ-ಧಮ್ಕಿ ಮತ್ತು ಹಲ್ಲೆ-ಹಿಂಸೆಗಳನ್ನು ಹಿಂದೆಂದೂ ಕಂಡರಿಯದ ಪ್ರಮಾಣದಲ್ಲಿ ಬಳಸಿ ಚುನಾವಣೆಯ ಫಲಿತಾಂಶಗಳನ್ನು ಬದಲಾಯಿಸುವ ಕಾರ್ಯತಂತ್ರದ ಹಿನ್ನೆಲೆಯಲ್ಲಿ, ಶಿಕ್ಷಿತ ಮತ್ತು ತಿಳಿವಳಿಕೆಯುಳ್ಳ ಮತದಾರರಲ್ಲಿ ಬಹುತೇಕರು ಬಿಜೆಪಿಯು ಮತ್ತೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವುದು ಅನುಮಾನ ಎಂದೇ ಭಾವಿಸಿದ್ದರು. ಯಾವುದೇ ಪಕ್ಷ ಸರಳ ಬಹುಮತ ಸಾಧಿಸದೆ ಅತಂತ್ರ ವಿಧಾನಸಭೆಗೆ ಕಾರಣವಾಗುತ್ತದೆಯೆಂದೂ, ಅದರಲ್ಲೂ, 60 ಕ್ಷೇತ್ರಗಳಲ್ಲಿ ಬಿಜೆಪಿ ಕೇವಲ 15ರಲ್ಲಿ ಗೆಲುವು ಸಾಧಿಸುವುದೆಂದೇ ಬಹಳಷ್ಟು ಲೆಕ್ಕಾಚಾರಗಳು ಸೂಚಿಸಿದ್ದವು. ಆದರೆ 60 ಕ್ಷೇತ್ರಗಳಲ್ಲಿ 32ನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಬಿಜೆಪಿಯು ಸರಳ ಬಹುಮತ ಸಾಧಿಸಿದೆ.
ಶಿಕ್ಷಿತ ಮತ್ತು ತಿಳಿದ ಎಲೈಟ್ ವರ್ಗದ ನಿರೀಕ್ಷೆಯು ಪೂರಾಪೂರ ಹುಸಿಯಾಗಿರುವುದು, ಈ ವರ್ಗದ ಜನರಲ್ಲಿ ಸಾಮಾನ್ಯ ಮತದಾರರ ಮನಸನ್ನು ಪ್ರಭಾವಿಸಿರುವುದು ಏನೆಂಬ ಯಕ್ಷಪ್ರಶ್ನೆಯೊಂದು ಮೂಡಿ ಕಾಡುತ್ತಿದೆ. ಇಲ್ಲಿ, ಸೂಕ್ಷ್ಮವಾಗಿ ಗಮನಿಸಿದರೆ, ಈ ಪ್ರಭಾವವು ಕೆಲಸ ಮಾಡಿರುವುದು ಮತದಾನ ನಡೆದ ಎರಡು ಹಂತಗಳ ಮುಂಚಿನ ಸುಮಾರು 5-6 ದಿನಗಳಲ್ಲಿ ಮಾತ್ರ ಎಂಬುದು ತಿಳಿಯುತ್ತದೆ. ಶಿಕ್ಷಿತ ಸಮುದಾಯವು ತಮ್ಮನ್ನು ಬೆಂಬಲಿಸುತ್ತಿಲ್ಲ ಎಂಬುದನ್ನು ಆರಂಭದಲ್ಲೇ ಬಿಜೆಪಿಯು ಮನಗಂಡಂತಿದೆ. ಆದಕಾರಣ ಶಿಕ್ಷಿತ ಸಮುದಾಯವನ್ನು ಬಿಟ್ಟು ಇತರೆ ಮತ ಗುಂಪುಗಳ ಬಗ್ಗೆ ಗಮನ ಹರಿಸಿದೆ.
ಆಗ ಮೂರು ಮತ ಗುಂಪುಗಳು ಬಹುಮುಖ್ಯವಾಗಿರುವುದು ಗೋಚರಿಸುತ್ತದೆ ಮತ್ತು ಅದು ಬಿಜೆಪಿಯ ಪರ ಮತಗಳು ಬೀಳುವುದನ್ನು ಖಾತ್ರಿಪಡಿಸಿದ್ದು ಕಂಡುಬರುತ್ತದೆ.
ಒಂದು, ಒಟ್ಟು ಮತದಾರರಲ್ಲಿ ಸುಮಾರು 80%ರಷ್ಟಿರುವವರು ಬಡ ಕುಟುಂಬಗಳು. ಇನ್ನುಳಿದ 20% ಮತದಾರರಲ್ಲಿ ಅರ್ಧದಷ್ಟು ಮಾತ್ರ (10%) ಯಾವ ಪಕ್ಷವನ್ನು ಬೆಂಬಲಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ನಿಲುವುಗಳನ್ನು ಹೊಂದಿದ್ದು ಇನ್ನುಳಿದ 10% ಮತದಾರರು ಯಾವುದೇ ಪಕ್ಷಕ್ಕೂ ಮತ ಚಲಾಯಿಸುವವರಾಗಿದ್ದರು. (ಅಂದರೆ ಬೇರೆಬೇರೆ ಪ್ರಭಾವಕ್ಕೆ ಒಳಗಾಗುವಂತವರು.) ಎರಡನೆಯದಾಗಿ, ನಿರೀಕ್ಷೆಯಂತೆಯೇ, ಸಾಮೂಹಿಕ ನಿರುದ್ಯೋಗದ ಸಮಸ್ಯೆಯ ಮತ್ತು ನೌಕರಿಗಳು ಸೃಷ್ಟಿಯಾಗದ ಹಿನ್ನೆಲೆಯಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿದ್ದ ಯುವಕರಲ್ಲಿ ಹಿಂಸಾತ್ಮಕ ಭಾವನೆಗಳನ್ನು ಬಳಸಿ ಕೆರಳಿಸಬಹುದು ಎಂಬುದನ್ನು ಮನಗಂಡಿದ್ದು ಮತ್ತು ಮೂರನೆಯದಾಗಿ, ಹಿಂಸೆಯ ನಿರಂತರ ಮುಂದುವರೆಸುವಿಕೆಯು, ಅಪಾಯಕ್ಕೆ ತುತ್ತಾಗಬಹುದಾದ ಸಮುದಾಯಗಳನ್ನು ಶರಣಾಗತಿ ಕಡೆಗೆ ಮತ್ತು ಮೆಚ್ಚುಗೆ ವ್ಯಕ್ತಪಡಿಸುವುದಕ್ಕೆ ಕಾರಣವಾಗುತ್ತದೆ.
ಇಲ್ಲಿ ನಾವು ಬಡತನದ ವ್ಯಾಪಕತೆ ಮತ್ತು ಕೊರೊನಾದ ಕಾರಣದಿಂದಾಗಿ ಅದು ಇನ್ನಷ್ಟು ಸಂಕಿರ್ಣಗೊಂಡಿದ್ದನ್ನು ಮನಗಾಣಬಹುದು. ಬಡತನವು, ಎಂತಹದ್ದೇ ಸಂದರ್ಭದಲ್ಲೂ ಯಾವ ಕುಟುಂಬವು ಅಪೇಕ್ಷಿಸುವಂತಹದ್ದಲ್ಲ. ಭ್ರಷ್ಟಾಚಾರದಿಂದಾಗಿ ಅವಕಾಶಗಳು ಸಮವಾಗಿ ಹಂಚಿಕೆಯಾಗುವುದಿಲ್ಲ ಎಂಬುದರ ಜೊತೆಗೆ ಆದಾಯ ಗಳಿಕೆಗೆ ಸರಿಯಾದ ಅವಕಾಶಗಳಿಲ್ಲ ಎಂಬುದೂ ಕೂಡಿ ಬಡತನದ ಸಂಕಷ್ಟಗಳನ್ನು ಬಹಳಷ್ಟು ಉಲ್ಬಣಿಸಿದೆ. ಇದು, ಅಧಿಕಾರ ಒಡ್ಡುವ ಸುಳ್ಳು ಆಶ್ವಾಸನೆಗಳಿಗೆ ಅಥವಾ ತತ್ ಕ್ಷಣದ ಮೋಹಗಳಿಗೆ, ಬಡಕುಟುಂಬಗಳ ಮತ ಚಲಾಯಿಸುವ ಹಕ್ಕು ಮತ್ತು ಅದರೊಳಗಿನ ಆಯ್ಕೆಗಳನ್ನು ಅತೀ ಸುಲಭವಾಗಿ ತುತ್ತಾಗಿಸುತ್ತವೆ. ಕಳೆದ ಎರಡು ವರ್ಷಗಳ ಕೋವಿಡ್ ಸಾಂಕ್ರಾಮಿಕವು ಆಹಾರ ಮತ್ತು ಆರೋಗ್ಯವೆಂಬ ದಿನನಿತ್ಯ ಜೀವನದ ಸಮಸ್ಯೆಗಳಿಂದ ಬಡ ಕುಟುಂಬಗಳು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ. ತಮ್ಮ ಜೀವನದ ಸಂಕಷ್ಟಗಳನ್ನು ಎದುರಿಸುವ ತಾಕತ್ತು ಈ ಹಿಂದೆ ಅಷ್ಟಿಷ್ಟೋ ಇದ್ದಿದ್ದನ್ನು ಸಾಂಕ್ರಾಮಿಕವು ಕಿತ್ತುಕೊಂಡಿದೆ.
ಅಧಿಕಾರದಲ್ಲಿದ್ದರಿಂದ ಆದ ಅನುಕೂಲಗಳು ಇವೇ ಆಗಿವೆ – ಸಂಕಷ್ಟದಲ್ಲಿದ್ದ 80% ಮತದಾರರಿಗೆ ಆ ತಕ್ಷಣಕ್ಕೆ ಬೇಕಿರುವ ಅಗತ್ಯಗಳನ್ನು ಪೂರೈಸಿದರೆ ಅವರ ಮತಗಳನ್ನು ಒಲಿಸಿಕೊಳ್ಳುವುದು ಕಷ್ಟವಲ್ಲ; ಹೇಗಿದ್ದರೂ ಬಡವರು ಹೊತ್ತಿಂದಹೊತ್ತಿಗೆ ತಾನೇ ಬದುಕುವುದು! ಸಾಂಕ್ರಾಮಿಕದೊಂದಿಗೆ ಬಡತನವೂ ಸೇರಿರುವುದರಿಂದ ಯಾವುದೇ ರಾಜಕೀಯ ಪಕ್ಷವಾಗಲೀ ಬಡವರ ಆಯ್ಕೆಗಳ ಖರೀದಿಗೆ ಮುಂದಾಗುವಂತೆ ಮಾಡುತ್ತದೆ. ’ಬಹುಸಂಖ್ಯಾತ’ 80% ಜನರಿಗೆ ಅತೀ ಹೆಚ್ಚು ಹಣ ಹಂಚುವ ಪಕ್ಷವು, ಚುನಾವಣಾ ಫಲಿತಾಂಶದ ವೇಳೆಗೆ ಜನರ ಆಯ್ಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಆದಕಾರಣ, ಮಣಿಪುರದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶವನ್ನು ನಿರ್ಣಯಿಸಿದ ಮೂರು ಅಂಶಗಳೆಂದರೆ – ಬಡತನ, ಸಾಂಕ್ರಾಮಿಕ ಮತ್ತು ಗೌಪ್ಯ ಮಾರುಕಟ್ಟೆಯಲ್ಲಿ ನಡೆದ ಮತಗಳ ಕೊಳ್ಳುವಿಕೆ. ಸಂವಿಧಾನವು ಸಮಾನತೆಯನ್ನು ಉಲ್ಲೇಖಿಸಿದರೂ, ಅತೀ ಹೆಚ್ಚು ವ್ಯಾಪಕವಾಗಿರುವ ಬಡತನದ ವಾಸ್ತವತೆಯು ಅಧಿಕಾರಸ್ಥರು ಆ ಹೊತ್ತಿನ ಸಾಮಾಜಿಕ ಭ್ರಷ್ಟಾಚಾರದಲ್ಲಿ ತೊಡಗುವಂತೆ ಮಾಡಿ, ಪ್ರಜಾಪ್ರಭುತ್ವದ ಅತೀ ಮುಖ್ಯ ಪ್ರಕ್ರಿಯೆಯಲ್ಲಿ ಗೆಲುವು ಸಾಧಿಸಲು ಕಾರಣವಾಗುತ್ತದೆ. ಆದ್ದರಿಂದ, ಅಧಿಕಾರದಲ್ಲಿರುವ ಜನರಿಗೆ ಮತ್ತು ಮುಂದೆ ಅಧಿಕಾರ ಹಿಡಿಯಬೇಕಾದ ಜನರ ಹಿತಾಸಕ್ತಿಯು ಬಡತನದ ಮುಂದುವರಿಕೆಯನ್ನು ಬಯಸುತ್ತವೆ. ಬಡತನದ ಜೊತೆ ಸಾಂಕ್ರಾಮಿಕವೂ ಕೂಡಿ ಅಧಿಕಾರಸ್ಥರು ಸಾಮಾಜಿಕ ಭ್ರಷ್ಟಾಚಾರದಲ್ಲಿ ತೊಡಗಲು ಬಯಸಿದಷ್ಟು ಹೆಚ್ಚೆಚ್ಚು ಒಳ್ಳೆಯ ಸಂದರ್ಭವನ್ನು ಒದಗಿಸಿಕೊಡುತ್ತದೆ. ಇಂತಹ ಸಂದರ್ಭಗಳಲ್ಲಿ ಯಾವುದೇ ಬಡವ ಕೂಡ ತಾನು ಹೊಂದಿರುವ ಯಾವುದೇ ಮಹತ್ವದ ಮತ್ತು ವಿರಳ ಶಕ್ತಿಯಾದ, ಐದು ವರ್ಷಕ್ಕೊಮ್ಮೆ ಮಾತ್ರ ಸಿಗುವ ಮತ ಚಲಾಯಿಸುವ ಹಕ್ಕನ್ನೂ ಮಾರುಕಟ್ಟೆಯಲ್ಲಿ ಅತಿಹೆಚ್ಚು ಬೆಲೆಗೆ ಮಾರಿಕೊಳ್ಳಲು
ಉತ್ಸುಕನಾಗಿರುತ್ತಾನೆ. ಆದ್ದರಿಂದ ಮತಗಳನ್ನು ಕೊಳ್ಳಲು ಮಾರುಕಟ್ಟೆಯೂ ಆ ಕ್ಷಣವೇ ಸೃಷ್ಟಿಯಾಗುತ್ತದೆ. ಇದರಲ್ಲಿ, ಮತಗಳಿಗೆ ಅತೀ ಹೆಚ್ಚು ಬೆಲೆ ಕೂಗುವವನು ಅವನ್ನು ಪಡೆದುಕೊಳ್ಳುತ್ತಾನೆ.
ಆದ್ದರಿಂದ, ಮಣಿಪುರದ ಚುನಾವಣೆಯ ಫಲಿತಾಂಶವು ನಮಗೆ ತಿಳಿಸುವ ಪಾಠ ಇಂತಿದೆ: ಚುನಾವಣೆಯ ಹಿತಾಸಕ್ತಿಗಾಗಿ ಬಡತನವನ್ನು ’ಮುಂದುವರೆಸಬೇಕಾಗುತ್ತದೆ’ ಮತ್ತು ಅಧಿಕಾರಸ್ಥ ವರ್ಗವು ಬಡತನವನ್ನು ಮುಂದುವರೆಸಲು ಸಾಧ್ಯವಾದರೆ ಆಡಳಿತದ ಗುಣಮಟ್ಟ ಮತ್ತು ರೀತಿ-ನೀತಿಗಳ ಬಗ್ಗೆ ಚಿಂತಿಸುವ ಯಾವುದೇ ಅಗತ್ಯವಿಲ್ಲ. ಪ್ರಜಾಪ್ರಭುತ್ವದ ಜ್ವಲಂತ ಸಮಸ್ಯೆಗಳನ್ನು ಮುಂದೆ ರಚಿಸಲಾಗುವ ಸರ್ಕಾರವು ನೀಡುವ ಅನುದಾನದಿಂದ ನಡೆಸಲಾಗುವ ವಿಚಾರ ಸಂಕಿರಣದಲ್ಲಿ ಚರ್ಚಿಸಿಕೊಳ್ಳೋಣ!
ಕನ್ನಡಕ್ಕೆ: ಶಶಾಂಕ್

ಪ್ರೊ. ಅಮರ್ ಯುಮ್ನಮ್
ಮಣಿಪುರ ವಿಶ್ವವಿದ್ಯಾಲಯದ ನಿವೃತ್ತ ಉಪ ಕುಲಪತಿಗಳು ಮತ್ತು ಅರ್ಥಶಾಸ್ತ್ರ ಪ್ರಾಧ್ಯಾಪಕರು
ಇದನ್ನೂ ಓದಿ: ರಾಜಕೀಯ ಪಕ್ಷಗಳು ಚುನಾವಣಾ ಭರವಸೆಗಳನ್ನು ಈಡೇರಿಸದಿದ್ದರೆ ದಂಡ ವಿಧಿಸಲು ಸಾಧ್ಯವಿಲ್ಲ: ಅಲಹಾಬಾದ್ ಹೈಕೋರ್ಟ್


