Homeಮುಖಪುಟಅದಾನಿಗೆ ಲಾಭ ಮಾಡಲು ವಿದ್ಯುತ್‍ ದರ ಏರಿಕೆ: ದೆಹಲಿಯಲ್ಲಿ ಸಾಧ್ಯವಾಗಿದ್ದು ಇಲ್ಲೇಕೆ ಇಲ್ಲ?

ಅದಾನಿಗೆ ಲಾಭ ಮಾಡಲು ವಿದ್ಯುತ್‍ ದರ ಏರಿಕೆ: ದೆಹಲಿಯಲ್ಲಿ ಸಾಧ್ಯವಾಗಿದ್ದು ಇಲ್ಲೇಕೆ ಇಲ್ಲ?

ದೆಹಲಿ ಸರ್ಕಾರ ವಿದ್ಯುತ್ ಉತ್ಪಾದನೆ ಮಾಡುತ್ತಿಲ್ಲ. ಆದರು ಅದು ತನ್ನ ಜನರಿಗೆ 200 ಯುನಿಟ್‍ ಮಾಸಿಕ ಉಚಿತ ವಿದ್ಯುತ್‍ ನೀಡಲು ಸಾಧ್ಯ ಆಗುವುದಾದರೆ ಕರ್ನಾಟಕದಲ್ಲಿ ಅದು ಏಕೆ ಸಾಧ್ಯವಿಲ್ಲ ಎಂದು ಆಪ್ ಪ್ರಶ್ನಿಸಿದೆ.

- Advertisement -

ನೀವು ಮನೆಯಲ್ಲಿ ಮಾಸಿಕ 200 ಯುನಿಟ್ ವಿದ್ಯುತ್‍ ಬಳಸಿದರೆ, ಇನ್ಮುಂದೆ 1,260 ರೂ. ಬಿಲ್‍ ಕಟ್ಟಬೇಕು. ವರ್ಷಕ್ಕೆ ಇದು 15 ಸಾವಿರ ರೂ. ಆಗುತ್ತದೆ! ನಿಮ್ಮನ್ನು ಮನೆಯಲ್ಲಿ ಕೂಡಿ ಹಾಕಿ, ನಿಮ್ಮ ಆದಾಯವನ್ನು ಕಿತ್ತುಕೊಳ್ಳಲಾಗಿದೆ. ಅನಿವಾರ್ಯವಾಗಿ ಟಿವಿ, ಫ್ರಿಡ್ಜ್ ಬಳಕೆ ಹೆಚ್ಚುವುದರಿಂದ ವಿದ್ಯುತ್‍ ಬಳಕೆಯೂ ಹೆಚ್ಚುತ್ತದೆ. ಸಂಬಳ ಪಡೆಯುವ ವರ್ಗಕ್ಕೇ ಇದು ಭಾರ. ಆದರೆ ನಿಶ್ಚಿತ ಆದಾಯವಿಲ್ಲದ, ಅಸಂಘಟಿತ ವಲಯಕ್ಕೆ ಸೇರಿದ ಮತ್ತು ಲಾಕ್‍ ಡೌನ್‍ ಕಾರಣಕ್ಕೆ ಕೆಲಸವೂ ಇಲ್ಲದಿರುವ ಜನತೆಗೆ ಇದೊಂದು ದೊಡ್ಡ ಹೊರೆಯಾಗಿದೆ.

ಆದರೆ ಯಡಿಯೂರಪ್ಪ ಸರ್ಕಾರದ ವಿದ್ಯುತ್‍ ದರ ಏರಿಕೆಯಿಂದ ಅತಿ ಹೆಚ್ಚು ಖುಷಿಗೊಂಡವರು ಗುಜರಾತ್‍ನ ಗೌತಮ್‍ ಅದಾನಿ ಎಂಬ ದೊಡ್ಡ ಕಾರ್ಪೊರೇಟ್ ಉದ್ಯಮಿ!

ಅದಾನಿ ಕಂಪನಿಗೆ ಲಾಭ ಮಾಡಲು ಕನ್ನಡಿಗರನ್ನು ಸರ್ಕಾರ ಪಿಕ್‍ಪಾಕೆಟ್‍ ಮಾಡುತ್ತಿದೆ ಎಂದು ಕಾಂಗ್ರೆಸ್‍, ಜೆಡಿಎಸ್‍ ಮತ್ತು ಇತರ ಪಕ್ಷಗಳು ಇದನ್ನು ಖಂಡಿಸಿವೆ. ಆದರೆ ರಾಜ್ಯದ ಆಮ್‍ ಆದ್ಮಿ ಪಕ್ಷ ಸ್ಪಷ್ಟ ದಾಖಲೆಗಳೊಂದಿಗೆ, ಇದು ಅದಾನಿಗೆ ಲಾಭ ಮಾಡಿಕೊಡುವ ಕುತಂತ್ರ ಎಂದು ನಿರೂಪಿಸಿದೆ. ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿವರಗಳನ್ನು ನೀಡಲಾಗಿದೆ.

ನವೆಂಬರ್ 1, 2020ರ ನಂತರ ಪ್ರತಿ ಯೂನಿಟ್‍ಗೆ 40 ಪೈಸೆ (ಶೇ.6) ಏರಿಕೆಯಾಗಿದ್ದ ವಿದ್ಯುತ್ ದರವನ್ನು ಈಗ ಸರ್ಕಾರ ಮತ್ತೆ ಏರಿಕೆ ಮಾಡಿದೆ. ಪ್ರತೀ ಯೂನಿಟ್‍ಗೆ 30 ಪೈಸೆ (ಶೇ.4) ಏರಿಸಿ ಈಗಾಗಲೇ ಕೋವಿಡ್ ಲಾಕ್ ಡೌನ್‌ಗಳ ಪರಿಣಾಮ ತೀವ್ರ ಸಂಕಷ್ಟದಲ್ಲಿ ಇರುವ ಜನತೆಯ ಮೇಲೆ ಸರಕಾರ ದೊಡ್ಡ ಹೊರೆಯನ್ನು ಹಾಕಿದೆ ಎಂದು ಆಮ್‍ ಆದ್ಮಿ ಆರೋಪಿಸಿದೆ.

ಅದಾನಿಗೆ ಹೇಗೆ ಲಾಭ?

ರಾಜ್ಯ ಸರ್ಕಾರ ಅದಾನಿ ಕಂಪನಿಗಳಿಂದ ವಿದ್ಯುತ್‍ ಮತ್ತು ಕಲ್ಲಿದಲ್ಲನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಖರೀದಿಸುತ್ತಿದೆ. ರಾಜ್ಯದ ಎಲ್ಲ ವಿದ್ಯುತ್‍ ಸರಬರಾಜು ಕಂಪನಿಗಳು ನಷ್ಟ ತೋರಿಸುತ್ತಿದ್ದರೆ, ಅದಾನಿಯ ಪವರ್ ಕಂಪನಿ ಬಂಪರ್ ಲಾಭ ಗಳಿಸಿದೆ. ಅದನ್ನು ಅದು ಅಧಿಕೃತವಾಗಿ ಘೋಷಿಸಿದೆ ಕೂಡ. ಅದರ ಪತ್ರಿಕಾ ಪ್ರಕಟಣೆ ಪ್ರಕಾರ, 2021ರ ನಾಲ್ಕನೇ ತ್ರೈಮಾಸಿಕದಲ್ಲಿ ಅದು 2,143 ಕೋಟಿ ರೂ. ಲಾಭ ಗಳಿಸಿದೆ. ಹಿಂದಿನ ವರ್ಷ ದ ನಾಲ್ಕನೆ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು ಶೇ.496 ಏರಿಕೆ. 2021ರ ಆರ್ಥಿಕ ವರ್ಷದಲ್ಲಿ ಅದು 10,597 ಕೋಟಿ ರೂ. ಗಳಿಸಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.50ರಷ್ಟು ಏರಿಕೆಯಾಗಿದೆ!

ಅದಾನಿ ಪವರ್ ಕಂಪನಿಯು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಜೊತೆ ವಿದ್ಯುತ್‍ ಮಾರಾಟದ ಒಪ್ಪಂದ ಮಾಡುತ್ತಿದೆ. ಅಂದರೆ ಅದಾನಿಗೆ ಸಿಗುತ್ತಿರುವ ಲಾಭದಲ್ಲಿ ನಾವು ನೀವೆಲ್ಲ ಅನಗತ್ಯವಾಗಿ ಹೆಚ್ಚುವರಿಯಾಗಿ ಕಟ್ಟುತ್ತಿರುವ ವಿದ್ಯುತ್‍ ಬಿಲ್‍ನ ಪಾಲೂ ಇದೆ!

2019ರಲ್ಲಿ ಅದಾನಿಯ ಉಡುಪಿ ಪವರ್ ಕಾರ್ಪೋರೇಷನ್‌ಗೆ ಪಾವತಿಸಿದ ವಿವರ
2021ರಲ್ಲಿ ಅದಾನಿಯ ಉಡುಪಿ ಪವರ್ ಕಾರ್ಪೋರೇಷನ್‌ಗೆ ಪಾವತಿಸಿದ ವಿವರ

‘ಕಳೆದ ಎರಡು ವರ್ಷಗಳಿಂದ ಕರ್ನಾಟಕ ಸರ್ಕಾರ ಅದಾನಿ ಪವರ್ ಕಂಪನಿಯಿಂದ ಖರೀದಿ ಮಾಡುತ್ತಿರುವ ವಿದ್ಯುತ್‌ನ  ಬೆಲೆ ಸತತವಾಗಿ ಏರುತ್ತಿದೆ. ಬೆಸ್ಕಾಂ ಅದಾನಿಯಿಂದ ಖರೀದಿಸುವ ವಿದ್ಯುತ್ ಬೆಲೆ ಪ್ರತಿ ಯುನಿಟ್‍ಗೆ 4.76 ರೂಪಾಯಿಯಿಂದ 6.80 ರೂಪಾಯಿಗೆ ಏರಿದೆ, ಒಟ್ಟಾರೆ 2.02 ರೂಪಾಯಿ (ಶೇ. 42) ಏರಿಕೆ ಎಂದ ಶಾಂತಲಾ ದಾಮ್ಲೆ ಆರೋಪಿಸಿದ್ದಾರೆ.

ಇದನ್ನೂ ಓದಿ; 35000 ಸಾವಿರದಿಂದ ಸೊನ್ನೆ ರೂಗಿಳಿದ ವಿದ್ಯುತ್ ಬಿಲ್: ದೆಹಲಿ ಆಪ್ ಸರ್ಕಾರ ಮಾಡಿದ ಮೋಡಿಯಾದರೂ ಏನು ಗೊತ್ತೆ?

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಆಮ್‍ ಆದ್ಮಿ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್‍ ಜೈನ್‍, ‘ಐಐಟಿಗಳ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‍ ವಿಭಾಗದ ತಜ್ಞ ಇಂಜಿನಿಯರ್‌ಗಳ ಜೊತೆ ಮಾತಾಡಿದ್ದೇವೆ. ಯಾವ ಕಾರಣಕ್ಕೂ ಒಂದು ಯುನಿಟ್‍ಗೆ ಸರ್ಕಾರಗಳು 3.20 ರೂ.ಗಿಂತ ಹೆಚ್ಚಿನ ಹಣವನ್ನು ಖಾಸಗಿ ವಿದ್ಯುತ್‍ ಕಂಪನಿಗಳಿಗೆ ನೀಡುವ ಅಗತ್ಯವೇ ಇಲ್ಲ ಎಂದು ಅವರು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಪ್ರತಿ ಯುನಿಟ್‍ಗೆ 6.80 ರೂ ನೀಡುವ ಮೂಲಕ ಅನಗತ್ಯವಾಗಿ ಎರಡು ಪಟ್ಟಿಗಿಂತ ಹೆಚ್ಚಿನ ದರವನ್ನು ನೀಡಿ ಅದಾನಿಗೆ ಲಾಭ ಮಾಡಿಕೊಡುತ್ತಿದೆ. ಅದಾನಿ ಮೋದಿಯವರ ಆಪ್ತರು ಎಂಬುದು ರಹಸ್ಯವೇನಲ್ಲ. ಹೀಗಾಗಿ ರಾಜ್ಯ ಬಿಜೆಪಿ ಸರ್ಕಾರ ಅದಾನಿಗೆ ಲಾಭ ಮಾಡಲು ಜನರ ಮೇಲೆ ಹೊರೆ ಹೇರುತ್ತಿದೆ. ಇಲ್ಲಿ ಸಹಜವಾಗಿ ಕಮೀಷನ್‍ ವ್ಯವಹಾರ ಇದ್ದೇ ಇರುತ್ತದೆ’ ಎಂದು ಆರೋಪಿಸಿದರು.

2018ರ ಸರ್ಕಾರಿ ದಾಖಲೆ ಪ್ರಕಾರ, ಉಡುಪಿ ಪವರ್ ಕಾರ್ಪೋರೇಷನ್‍ ಲಿಮಿಟೆಡ್‍ (ಯುಪಿಸಿಎಲ್‍-ಅದಾನಿ ಕಂಪನಿ) ಕಂಪನಿಯಿಂದ ಯುನಿಟ್‍ಗೆ 4.76 ರೂ. ದರದಲ್ಲಿ ವಿದ್ಯುತ್‍ ಖರೀದಿಸಿದ ಸರ್ಕಾರ ಒಟ್ಟು 2,085 ಕೋಟಿ ರೂ.ಗಳನ್ನ ಅದಾನಿ ಕಂಪನಿಗೆ ಪಾವತಿಸಿದೆ. ಈಗ ಯಡಿಯೂರಪ್ಪ ಸರ್ಕಾರವು ಯುನಿಟ್‍ಗೆ 6.80 ರೂ ದರದಲ್ಲಿ ಖರೀದಿ ಮಾಡುತ್ತಿದೆ! ಹೀಗೆ ಅದಾನಿ ಕಂಪನಿಗೆ ದುಪ್ಪಟ್ಟು ಹಣ ನೀಡಿ, ಆ ನಷ್ಟವನ್ನು ತುಂಬಿಕೊಳ್ಳಲು ವಿದ್ಯುತ್‍ ದರ ಏರಿಸಲಾಗುತ್ತಿದೆ ಎಂದು ಆಮ್‍ ಆದ್ಮಿ ಆರೋಪಿಸಿದೆ.

ದೆಹಲಿಯಲ್ಲಿ ಸಾಧ್ಯವಾಗಿದ್ದು ಇಲ್ಲೇಕೆ ಇಲ್ಲ?

‘ದೆಹಲಿಯ ಜನತೆ ತಿಂಗಳಿಗೆ 200 ಯುನಿಟ್ ಉಚಿತ ವಿದ್ಯುತ್ ಬಳಸುತ್ತಾರೆ. ದೆಹಲಿಯ ಶೇ.70 ಜನ ವಿದ್ಯುತ್ ಬಿಲ್ ಪಾವತಿಸುವುದೇ ಇಲ್ಲ! ಕಳೆದ ಆರು ವರ್ಷಗಳಲ್ಲಿ ವಿದ್ಯುತ್ ಬೆಲೆ ಏರಿಕೆಯಾಗಿಯೇ ಇಲ್ಲ’ ಎಂದು ಶಾಂತಲ ದಾಮ್ಲೆ ಹೇಳುತ್ತಾರೆ.

‘ಕರ್ನಾಟಕವು ಲಭ್ಯವಿರುವ ಎಲ್ಲಾ ನೈಸರ್ಗಿಕ ಮೂಲಗಳನ್ನು ಅಂದರೆ ನೀರು, ಗಾಳಿ ಮತ್ತು ಸೌರ ಶಕ್ತಿಯನ್ನು ಬಳಸಿ ವಿದ್ಯುತ್ ಉತ್ಪಾದಿಸುತ್ತದೆ. ಹೀಗಿದ್ದೂ ಸರಕಾರ ವಿದ್ಯುತ್ ಬೆಲೆ ಏರಿಸಿ ಜನತೆಯನ್ನು ಯಾಕೆ ಹಿಂಸಿಸುತ್ತಿದೆ? ವಿದ್ಯುತ್ ನಿರ್ವಹಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆಯೇ?’ ಎಂದು ಅವರು ಪ್ರಶ್ನಿಸುತ್ತಾರೆ.

‘ಕಳೆದ ವರ್ಷ ಕಲ್ಲಿದ್ದಿಲಿನ ಬೆಲೆ ಇಳಿದಿದ್ದರೂ ಅದಾನಿ ಪವರ್ ಕರ್ನಾಟಕ ಸರ್ಕಾರಕ್ಕೆ ಅಧಿಕ ಬೆಲೆಗೆ  ಕಲ್ಲಿದ್ದಲು ಮತ್ತು  ವಿದ್ಯುತ್‍ ಮಾರಿತ್ತು. ಆ ಸಂದರ್ಭದಲ್ಲಿ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರೇ ಇಂಧನ ಖಾತೆಯನ್ನು ಹೊಂದಿದ್ದರು. ರಾಜ್ಯ ಮುಗ್ಗಟ್ಟಿನಲ್ಲಿ ಬಳಲಿ ಹೋಗಿದ್ದಾಗ ಯಡಿಯೂರಪ್ಪನವರಿಗೆ ಜನರ ದುಡ್ಡಿನಿಂದ ಅದಾನಿ ಪವರ್‌ನ ಜೇಬು ತುಂಬಿಸುವ ನೀಚ ಮನಸ್ಸಾದರೂ ಹೇಗೆ ಬಂತು?’ ಎಂದು ಆಮ್‍ ಆದ್ಮಿ ಪ್ರಶ್ನೆ ಎತ್ತಿದೆ.

ದೆಹಲಿ ಸರ್ಕಾರ ವಿದ್ಯುತ್ ಉತ್ಪಾದನೆ ಮಾಡುತ್ತಿಲ್ಲ. ಅದು ಖಾಸಗಿ ಕಂಪನಿಗಳಿಂದ ವಿದ್ಯುತ್‍ ಖರೀದಿಸಿಯೂ ತನ್ನ ಜನರಿಗೆ 200 ಯುನಿಟ್‍ ಮಾಸಿಕ ವಿದ್ಯುತ್‍ ನೀಡಲು ಸಾಧ್ಯ ಆಗುವುದಾದರೆ ಕರ್ನಾಟಕದಲ್ಲಿ ಅದು ಏಕೆ ಸಾಧ್ಯವಿಲ್ಲ? ಇವತ್ತು ಅತ್ಯಧಿಕ ವಿದ್ಯುತ್‍ ಉತ್ಪಾದಿಸುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಇಲ್ಲಿ ಎಲ್ಲ ಪ್ರಕಾರಗಳ ವಿದ್ಯುತ್‍ ಉತ್ಪಾದನೆಯಾಗುತ್ತಿದೆ. ಆದರೂ ಖಾಸಗಿ ಕಂಪನಿಗಳಿಂದ ಖರೀದಿಸುವುದೇಕೆ? ನಮ್ಮಲ್ಲಿ ಉತ್ಪಾದನೆಯಾಗುವ ಮತ್ತು ಸೆಂಟ್ರಲ್‍ ಗ್ರಿಡ್‍ನಿಂದ ಉತ್ಪಾದನೆಯಾಗುವ ವಿದ್ಯುತ್‍ ನಮಗೆ ಸಾಲುತ್ತಿಲ್ಲವೆ? ಈ ಕುರಿತಾಗಿ ಒಂದು ಸಮರ್ಪಕ ವಿದ್ಯುತ್‍ ಆಡಿಟ್‍ ಮಾಡಬೇಕು ಎಂದು ಒತ್ತಾಯಿಸಬೇಕಾಗಿದೆ.

ಪಿ.ಕೆ. ಮಲ್ಲನಗೌಡರ್


ಇದನ್ನೂ ಓದಿ: ಕರ್ನಾಟಕದಲ್ಲಿ 1560ರೂ ವಿದ್ಯುತ್‌ ಬಿಲ್ ಕಟ್ಟಬೇಕಾದರೆ ದೆಹಲಿಯಲ್ಲಿ ಅಷ್ಟೂ ವಿದ್ಯುತ್‌ ಉಚಿತ!

ಮಲ್ಲನಗೌಡರ್‌ ಪಿ.ಕೆ
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಂಜಾಬ್‌: ಅಧಿಕಾರದ ಕಿತ್ತಾಟಕ್ಕೆ ಅಂತ್ಯ; ಸಿಎಂ ಅಭ್ಯರ್ಥಿ ಘೋಷಿಸಲು ನಿರ್ಧರಿಸಿದ ಕಾಂಗ್ರೆಸ್‌ | Naanu Gauri

ಪಂಜಾಬ್‌: ಅಧಿಕಾರದ ಕಿತ್ತಾಟಕ್ಕೆ ಅಂತ್ಯ; ಸಿಎಂ ಅಭ್ಯರ್ಥಿ ಘೋಷಿಸಲು ನಿರ್ಧರಿಸಿದ ಕಾಂಗ್ರೆಸ್‌

0
ಅಧಿಕಾರದ ಕಚ್ಚಾಟಕ್ಕೆ ಅಂತ್ಯ ಹಾಡಲು ಪಂಜಾಬ್‌ನಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮೊದಲೇ ಘೋಷಿಸಲು ಕಾಂಗ್ರೆಸ್ ನಿರ್ಧರಿಸಿದೆ. ಜಲಂಧರ್‌ನ ಆನ್‌ಲೈನ್‌ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶೀಘ್ರದಲ್ಲೇ ಕಾರ್ಯಕರ್ತರೊಂದಿಗೆ ಚರ್ಚಿಸಿ...
Wordpress Social Share Plugin powered by Ultimatelysocial