ಜೈಲೂಟದಿಂದ ಮುಕ್ತಿ ಹೊಂದಿದ ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಮರಳಿ ‘ಮನೆಗೆ’ ಬಂದಿದ್ದಾರೆ. ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿರುವ ಅವರು ಮಧ್ಯಪ್ರದೇಶದಲ್ಲಿ ದಿಗ್ವಿಜಯ್ ಸಿಂಗ್ ವಿರುದ್ಧ ಸ್ಪರ್ಧಿಸಲಿದ್ದಾರೆ. ‘ಹಿಂದೂ ಅಥವಾ ಹಿಂದುತ್ವ ಭಯೋತ್ಪಾದನೆ’ ಎಂಬ ಪದ ಹೆಚ್ಚು ಚಾಲ್ತಿಗೆ ಬರಲು ಕಾರಣಾದವರಲ್ಲಿ ಪ್ರಗ್ಯಾ ಕೂಡ ಒಬ್ಬರು! 2008ರ ಮಲೆಗಾವ್ ಸ್ಫೋಟದ ಆರೋಪಿಗಳಲ್ಲಿ ಒಬ್ಬರಾಗಿದ್ದ ಸಾಧ್ವಿ ಪ್ರಜ್ಞಾ ಠಾಕೂರ್ ಮೋದಿ ಸರ್ಕಾರ ಬಂದ ನಂತರ ಅವರು ಜಾಮೀನು ಮೇಲೆ ಹೊರಗಿದ್ದು, ಇನ್ನೂ ಪ್ರಕರಣದ ತೀರ್ಪು ಹೊರಬಂದಿಲ್ಲ.
ಮಲೆಗಾವ್, ಸಂಜೋತಾ ಎಕ್ಸ್‍ಪ್ರೆಸ್ ಮತ್ತು ಮೆಕ್ಕಾ ಮದೀನಾ ಬಾಂಬ್ ಸ್ಫೋಟದಲ್ಲಿ ‘ಹಿಂದುತ್ವ’ ಪ್ರತಿಪಾದನೆಯ ಹಲವರು ಭಾಗಿಯಾಗಿರುವ ಆರೋಪಗಳಿದ್ದವು. ಮೋದಿ ಸರ್ಕಾರ ಬಂದ ನಂತರ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ತನಿಖೆಯಲ್ಲಿ ತೋರಿದ ‘ಜಾಣ ನಿರ್ಲಕ್ಷತನ’ದಿಂದಾಗಿ ಹಲವರ ವಿರುದ್ಧ ಸಾಕ್ಷ್ಯಗಳು ಉಲ್ಟಾ ಹೊಡೆದವು. ಪರಿಣಾಮವಾಗಿ ಅವರೆಲ್ಲ ಆರೋಪಮುಕ್ತರಾದರು ಎಂದು ಹಲವು ಹಿರಿಯ ವಕೀಲರೇ ಅಭಿಪ್ರಾಯ ಪಟ್ಟಿದ್ದನ್ನು ಇಲ್ಲಿ ನೆನೆಯಬಹುದು. ಸದ್ಯ ಪ್ರಗ್ಯಾ ಮಲೆಗಾವ್ ಸ್ಫೋಟದ ಪ್ರಕರಣದಲ್ಲಿ ಆರೋಪಿಯೇ.
‘ಕೇಸರಿ ಭಯೋತ್ಪಾದನೆಯಲ್ಲಿ ಆರೋಪಿಗಳಾಗಿದ್ದವರಿಗೆ ಬಿಜೆಪಿ ಮತ್ತು ಸಂಘ ಪರಿವಾರದ ನಂಟು ಇರುವುದು ಸ್ಪಷ್ಟವಾಗಿದೆ. ಅದಕ್ಕೆ ತಕ್ಕಂತೆಯೇ ಇವತ್ತು ಸಾಧ್ವಿ ಪ್ರಗ್ಯಾ ಬಿಜೆಪಿಗೆ ಅಧಿಕೃತವಾಗಿಯೇ ಪ್ರವೇಶ ಪಡೆದಿದ್ದಾರೆ. ಅವರು ಮಧ್ಯಪ್ರದೇಶದ ಭೂಪಾಲಿನಲ್ಲಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‍ಸಿಂಗ್ ವಿರುದ್ಧ ಸ್ಪರ್ಧಿಸಲಿದ್ದಾರೆ. ಈ ಹಿಂದೆ ‘ಕೇಸರಿ ಭಯೋತ್ಪಾದನೆ’ ವಿರುದ್ಧ ದಿಗ್ವಿಜಯ್‍ಸಿಂಗ್ ಸಾಕಷ್ಟು ಟೀಕೆಗಳನ್ನು ಮಾಡಿದ್ದರು. ಈಗ ದಿಗ್ವಿಜಯ್‍ಸಿಂಗ್ ಮತ್ತು ಪ್ರಜ್ಞಾ ನಡುವಿನ ಸ್ಪರ್ಧೆ ಕುತೂಹಲ ಹುಟ್ಟಿಸಿದೆ.
ಭೂಪಾಲಿನಲ್ಲಿ ಸ್ಪರ್ಧಿಸಲು ಬಿಜೆಪಿಯ ಹಿರಿಯ ನಾಯಕರಾದ ನರೇಂದ್ರ ಸಿಂಗ್ ತೋಮರ್, ಶಿವರಾಜಸಿಂಗ್ ಚೌಹಾಣ್ ಮತ್ತು ಉಮಾಭಾರತಿಯವರು ನಿರಾಕರಿಸಿದ್ದು ಪ್ರಗ್ಯಾರನ್ನು ಕಣಕ್ಕಿಳಿಸಲು ಬಿಜೆಪಿ ಯೋಚಿಸಿದೆ.
ಮೆಕ್ಕಾ ಮದೀನಾ ಸ್ಪೋಟ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದ ಮೊದಲಿಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಆದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಎನ್‍ಐಎ ತನಿಖೆಯ ದಾರಿ ತಪ್ಪಿಸಿದ ಪರಿಣಾಮ ಅಸೀಮಾನಂದ ಆರೋಪಮುಕ್ತರಾದರು. ಈಗ ಇಂಥದ್ದೇ ಸ್ಫೋಟ ಪ್ರಕರಣದಲ್ಲಿ ಆರೋಪಯಾಗಿರುವ ಪ್ರಗ್ಯಾ ಬಿಜೆಪಿಗೆ ಬರುವ ಮೂಲಕ, ‘ಕೇಸರಿ ಭಯೋತ್ಪದನೆ’ಯೊಂದಿಗೆ ಯಾವ ಸಂಘಟನೆಯ ತಳುಕಿದೆ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ.