Homeಅಂಕಣಗಳುನಾಗಸುಧೆ ಜಗಲಿಯಿಂದಆ ತೆಳ್ಳಗಿನ-ಬೆಳ್ಳಗಿನ ಹಿಮದ ಹಾಸಿನ ಮೇಲೆ ನನ್ನೂರ ಹೆಸರ ಬರೆದೆ!

ಆ ತೆಳ್ಳಗಿನ-ಬೆಳ್ಳಗಿನ ಹಿಮದ ಹಾಸಿನ ಮೇಲೆ ನನ್ನೂರ ಹೆಸರ ಬರೆದೆ!

- Advertisement -
- Advertisement -

ಕಾವ್ಯಾ ಮತ್ತು ಸಂತೋಷರಿಂದ ಕಳೆದ ಐದಾರು ವರ್ಷಗಳಿಂದಲೂ ಆಗಾಗ ಆಹ್ವಾನಗಳು ಬರುತ್ತಲೇ ಇದ್ದವು; ಆ ಜಾಗತಿಕ ಸುಂದರ ನಗರದ ದರ್ಶನಕ್ಕೆ! ಏನೇನೋ ಸಬೂಬು ಹೇಳಿ ನಾವೂ ಮುಂದೂಡುತ್ತಲೇ ಬಂದೆವು, ಆದರೆ ಈ ಸಲ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಂತಾಯಿತು; ಹೊಸ ಪಾಪುವಿನ ನಿರೀಕ್ಷೆಯಲಿ. ಬರದೇ ಸತಾಯಿಸುತ್ತಲೇ ಇದ್ದೆವೆಂಬ ಸಿಟ್ಟಿನಿಂದ ಅಸಲು ಬಡ್ಡಿ ಎಲ್ಲಾ ಸೇರಿಸಿದ ಇವರು ನಮ್ಮನ್ನು ಐದು ತಿಂಗಳುಗಳ ಕಾಲ ತಮ್ಮ ಪ್ರೀತಿಯ ಬಂಧನದಲ್ಲಿ ಬಂಧಿಸಿದ್ದರು.

ವಿಮಾನ ಪ್ರಯಾಣದ ಖುಷಿ ಈ ಮೊದಲೇ ಅನುಭವಿಸಿದ್ದರೂ ಇಂತಹ ಹದಿನೆಂಟು ತಾಸುಗಳ ಸುದೀರ್ಘ ಅವಧಿಯ ಪ್ರಯಾಣದ ಕಸರತ್ತು ಇದೇ ಮೊದಲು. ಅಂತೂ ನಮ್ಮೆಲ್ಲಾ ತಾಂತ್ರಿಕ ವಿಧಿವಿಧಾನಗಳನ್ನು ಮುಗಿಸಿ ನೆವಾರ್ಕ ಏರ್‌ಫೋರ್ಟ ನಿಂದ ಹೊರಬರುತ್ತಿದ್ದಂತೆಯೇ ಪುಟ್ಟ ಬಸಿರ ಹೊಟ್ಟೆಯೊಂದಿಗೆ ಬಂದ ಕಾವ್ಯ ಮತ್ತು ಸಂತೋಷರನ್ನು ಕಂಡು ವಾತ್ಸಲ್ಯ ಉಕ್ಕಿಬಂದು ಮೂಕ ವಿಸ್ಮಿತರಾದೆವು. ಸುನಂದಾ ಸ್ಥಿತಪ್ರಜ್ಞಳಂತೆ ಕಂಡರೂ ನಾನಂತೂ ವರ್ಣಿಸಲಾಗದ ಹೊಸ ಜಗತ್ತನ್ನು ಕಂಡುಂಡು ಅನುಭವಿಸತೊಡಗಿದೆ. ಸಂತೋಷನ ಲೆಫ್ಟ್ ಹ್ಯಾಂಡ್ ಡ್ರೈವ್ ಕಾರು ನೆವಾರ್ಕ ಏರ್‌ಫೋರ್ಟ ನಿಂದ ಬ್ರಿಡ್ಜ ವಾಟರಿನ ವೆಂಡರ್ ವೀರ್ ರಸ್ತೆಯ ಇವರ ಮನೆಯ ದಾರಿಗುಂಟ ಅಗಲಗಲವಾದ ರಸ್ತೆಗಳಲಿ ಕಾರುಗಳೇ ತುಂಬಿ ತುಳುಕುತ್ತಿದ್ದ ದೃಶ್ಯ ಮತ್ತು ಅದರ ದೀಪದ ಬೆಳಕುಗಳು ನನಗೆ ಆಗಸದಲಿ ಮಿನುಗುತ್ತಿರುವ ನಕ್ಷತ್ರಗಳಂತೆ ಕಂಡವು. ಅದೇ ಖುಷಿಯಲಿ ನಾವು ಮನೆ ತಲುಪಿದೆವು.

ಕಾವ್ಯಾ ಮೊದಲೇ ಹೇಳಿದ್ದಳು; ಸಂತೋಷ ಸಿಸ್ತಿನ ಸಿಪಾಯಿ, ತೋರಿಕೆ ಅಲಸ್ಯ ಅವನಿಗಾಗದು, ಎಲ್ಲವೂ ಕ್ರಮಬದ್ಧವಾಗಿ; ಜಾಗರೂಕತೆಯಿಂದ ನಡೆಯಬೇಕು, ಇವೆಲ್ಲವೂ ನಮ್ಮ ಆರೋಗ್ಯದ ಒಳಿತಿಗಾಗಿಯೇ ಎಂದು. ಈ ಐದು ತಿಂಗಳಿನ ಇರುವಿಕೆಯ, ವಾಸ್ತವ್ಯದ ರೂಪರೇಶೆ ತಯಾರಿಸಲಾಯಿತು. ಇವುಗಳಲ್ಲಿ ಅತೀ ಮುಖ್ಯವಾದುದು ದಿನದ ‘ವಾಕ್’. ಸಂತೋಷನ ದೃಷ್ಟಿಯಲ್ಲಿ ಪ್ರತೀ ವ್ಯಕ್ತಿಯೂ ಹತ್ತು ಸಾವಿರ ಹೆಜ್ಜೆ ಹಾಕಲೇಬೇಕಂತೆ ಆರೋಗ್ಯಕ್ಕೆ ಅನುಗುಣವಾಗಿ. ಮೊದಲೇ ಮೈಕೊರೆಯುವ ಚಳಿ, ಅದರಲ್ಲಿ ವಾಕ್ ಬೇರೆ ಕೇಡು ಎಂದು ಮನದಲೇ ಒಟಗುಡುತ್ತ ಎಲ್ಲರೊಡನೆ ಫುಲ್ ಡ್ರೆಸ್ಸಿನಲಿ ತಯಾರಾದೆನು.

ಸಂಜೆ ಐದರ ನಂತರ ಒಂದೂವರೆ ತಾಸಿನ ತನಕ ಸಂತೋಷ – ಕಾವ್ಯಾರ ಹಿಂದೆ-ಹಿಂದೆ ರಸ್ತೆ ಗುಂಟ ಸಾಗುತ್ತಿತ್ತು ನಮ್ಮ ಪಯಣ ಚಳಿಯ ಮರೆತು; ವಿಶ್ವದ ಹೊಸ ಹೊಸ ಮುಖಗಳ ದರ್ಶನದೊಂದಿಗೆ. ಹದಿನೈದು ದಿನಗಳ ಅನುಭವದೊಂದಿಗೆ ನಮ್ಮಷ್ಟಕ್ಕೇ ನಮಗೇ ಬಿಟ್ಟುಬಿಟ್ಟರು ಅದೇ ವೆಂಡರ್ ವೀರ್- ಪೆಟರ್ ಸನ್- ಗ್ಲೆನ್ ಆಯರ್- ಹಂಟ್ಲೀ ವೇ – ವಾಲ್ಟರ್ ಬ್ರೂಕ್ ದಿಂದ ಮತ್ತದೇ ನಮ್ಮ ವೆಂಡರ್ ವೀರ್ ಗೆ.

ಐದು ತಿಂಗಳ ವಾಸ್ತವ್ಯದಲ್ಲಿ ಈ ವಾಕ್ ನಮಗೆ ಹಲವು ಬಗೆಯ ಅನುಭವ ಮತ್ತು ಖುಷಿ ನೀಡಿತು. ರಸ್ತೆಯ ಇಕ್ಕೆಲಗಳಲ್ಲಿ ಹಚ್ಚಹಸಿರಿನ ಗಿಡಮರಗಳು, ಅಲ್ಲಲ್ಲಿ ಸ್ವಯಂ ವೇಗ ನಿಯಂತ್ರಣದ ಕೈಫಲಕ, ರಸ್ತೆಯ ಕ್ರಾಸಿಂಗ್ ನಲ್ಲಿ ಪಾದಚಾರಿಗಳಿಗೆ ಪರಿಚಿತ ವಾಹನದೊಡೆಯನ ನಗುಮುಖ, ಮತ್ತೆ ಮತ್ತೆ ಹಿಂಡು-ಹಿಂಡಾಗಿ ಎದುರಾಗುವ ಚಿಗರೆಗಳ ಪಾದರಸದಂತಹ ಓಡಾಟ, ಘನ ಗಾಂಭೀರ್ಯದ ಬಾತುಕೋಳಿಯ ನಡಿಗೆ, ಸಾಕುಪ್ರಾಣಿಗಳ ಮಲಮೂತ್ರಕ್ಕಾಗಿಯೇ ಅಲ್ಲಲ್ಲಿ ತಂಗುದಾಣ, ಹಿಂದೆಂದೂ ಕಾಣದಿದ್ದರೂ ಮಾನವೀಯ ಸಂಬಂಧದ ದ್ಯೋತಕವಾಗಿ, ಎದುರಾದಾಗ ‘ಹಾಯ್ ಹಲೋ’ ಗಳ ಮುಗುಳುನಗೆ. ಬಾಲ-ವೃದ್ಧರಿಗೆ ತೋರುತ್ತಿರುವ ಆದರಣೀಯ ನೋಟ, ಭಾರತೀಯ ಭಾಷೆಗಳು ಕಿವಿಗೆ ಬಿದ್ದೊಡನೆ ನಿಂತು ಮಾತಾಡುವ ಭಾರತೀಯ ಮನಸ್ಸುಗಳು, ಹೀಗೆ ಒಂದೇ ಎರಡೇ? ನಿಜವಾಗಿಯೂ ಅಮೇರಿಕೆಯ ಆ ನೆಲದಲ್ಲಿ ಮಾನವೀಯ ಸಂಬಂಧ, ಮನುಷ್ಯ ಪ್ರೀತಿ, ಮಾನವೀಯ ಮೌಲ್ಯದ ಗುಣಮಟ್ಟ ಇಷ್ಟೊಂದಿದೆಯೆಂದು ನನಗೆ ಗೊತ್ತೇ ಇರಲಿಲ್ಲ.

ಭಾರತದ ಯಾವ ಹುಲ್ಲು ಹಾಸಿನ ಮೇಲೂ ಕುಳಿತು ಅರಿವಿಲ್ಲದ ನಾವು ಆ ಸ್ವಚ್ಛ ಗರಿಕೆಯ ಮೇಲೆ ಎಷ್ಟೋ ನಿಮಿಷ ಕಳೆದೆವು, ಅದೇ ನಮ್ಮ ಕಡಮೆಯ ಬಯಲೋ; ಅಲಗೇರಿಯ ಹೊಂಯಿಗೆ ರಾಶಿಯೋ ಎಂಬ ಭಾವದಲಿ.

ಬರುಬರುತ್ತಾ ಹವಾಮಾನವೇ ಬದಲಾಯಿತು. ಮುಂಜಾನೆಯ ಚಳಿಯೊಡನೆ ತುಂತುರು ಮಳೆಯ ನರ್ತನ, ಒಣಗಿದ ಗಿಡಮರಗಳೆಲ್ಲಾ ಒಮ್ಮೆಲೇ ಚಿಗುರಿ ಹೂಗಳಿಂದ ಹೊಸ ಲೋಕ ಕಂಗೊಳಿಸಿ ಪ್ರೇಮ ಕವಿತೆಗಳು ಹಾಡತೊಡಗಿದವು. ಅಗಸದಿ ಬರ್ಫದ ಮಳೆ ಸುರಿಯತೊಡಗಿ ಹೊಸ ಲೋಕದ ಸೃಷ್ಟಿ. ಎಲ್ಲೆಲ್ಲೂ ಹಿಮಗಡ್ಡೆಯ ಹಾಸಿಗೆ. ಅಂದು ಬಂಕೀಕೊಡ್ಲಿನ ಚಂಪಾ ಸೃಷ್ಟಿ ತೇರಿನಲಿ ಶರಬತ್ತು ತಯಾರಿಸಲು ಕೆರೆಯುತ್ತಿದ್ದ ಐಸಿನ ತುಂಡುಗಳೇ ಅದ್ಭುತ ಅನಿಸುತ್ತಿದ್ದ ನನಗೆ ಈಗ ಭೂಮಿಯ ತುಂಬೆಲ್ಲ ಹಿಮದ ಹಾಸಿಗೆ. ಸಂತೋಷ ಮನೆಯ ಹೊರಗೆ ಬಂದು ಸಲಿಕೆಯಂತಹ ಆಯುಧ ಹಿಡಿದು ಬರ್ಫಿನ ರಾಶಿಗಳನ್ನು ಬಾಗಿಲಿನ ಎದುರಿನಿಂದ ತೆರವುಗೊಳಿಸುತ್ತಿದ್ದ. ಕನ್ನಡದ ಡಾ. ರಾಜಕುಮಾರನ ಕಾಶ್ಮೀರದ ಸಿನೆಮಾ ದೃಶ್ಯ ನೆನಪಾಗಿ ಆ ಹಿಮಗಳ ರಾಶಿಯ ಕಂಡು ಕುಣಿದು ಕುಪ್ಪಳಿಸಿದೆ. ಊರಲ್ಲಿ ಆಗಾಗ ಮಳೆಯೊಡಣೆ ಬಿದ್ದ ಆಣೆಕಲ್ಲು ಗಳನ್ನು ಬಾಯಲ್ಲಿಟ್ಟು ಸಂಭ್ರಮಿಸುವಂತೆ ಇದರ ರುಚಿಯನ್ನೂ ನೋಡಿ , ಆ ತೆಳ್ಳಗಿನ – ಬೆಳ್ಳಗಿನ ಹಿಮದ ಹಾಸಿನ ಮೇಲೆ ನನ್ನೂರ ಹೆಸರು ಬರೆದು ತಂಪನೆಯ ಆ ಚಳಿಯಲ್ಲೂ ರೋಮಾಂಚಿತನಾದೆ!

ಡಾಕ್ಟ್ರು ಕೊಟ್ಟ ದಿನ ಮುಗಿದರೂ ಪಾಪು ಹೊಟ್ಟೆಯೊಳಗಿಂದಲೇ ತನ್ನ ಬಾಲಲೀಲೆಗಳ ತೋರಿಸುತ್ತಿದ್ದುದರಿಂದ ಕಾವ್ಯಾ ಮೆತ್ತಗಾಗಿ, ‘ಇನ್ನೆಷ್ಟು ದಿನ ನನಗೀ ಕಲ್ಲಂಗಡಿ ಹಣ್ಣಿನ ಸಹವಾಸ’ ಎಂದು ತನ್ನ ಭಾರವಾದ ಹೊಟ್ಟೆಯನ್ನು ಮುಟ್ಟಿಕೊಳ್ಳುತ್ತ ಹೇಳುತ್ತಿದ್ದಳು. ಎಲ್ಲವೂ ವ್ಯವಸ್ಥಿತವಾಗಿಯೇ ರೂಪಗೊಂಡಿತ್ತು. ನಮ್ಮ ಸಣ್ಣ ಮಗಳು ನವ್ಯಾ ಕಳೆದೆರಡು ತಿಂಗಳ ಹಿಂದೆಯೇ ಇಲ್ಲಿಗೆ ಬಂದವಳು ‘ವಿಸ್ಮಯ’ ಅಂತ ಹೆಸರಿಟ್ಟೇ ಹೋಗಿದ್ದಳು. ಸಂತೋಷನು ಒಂದು ವಾರದ ಮೊದಲೇ ತನ್ನ ಕಾರಿನಲ್ಲಿಯ ಹಿಂಬದಿಯ ಎಡಸೀಟಿನಲ್ಲಿ ಪಾಪುವಿಗಾಗಿ ಪುಟ್ಟ ಆಸನ ತಯಾರಿಸಿ ಸಂಭ್ರಮದಲ್ಲಿದ್ದ. ಅಲ್ಲಿಯ ಪದ್ದತಿಯೇ ಹಾಗಂತೆ. ಕಾರಿನಲ್ಲಿ ಶಿಶುವಿನ ಸೀಟು ಇಲ್ಲದಿದ್ದಲ್ಲಿ , ಪಾಪುವನ್ನು ನಮ್ಮ ಜೊತೆಗೆ ಮನೆಗೆ ಕಳುಹಿಸಲು ಆಸ್ಪತ್ರೆಯವರು ತಕರಾರು ತೆಗೆಯುತ್ತಾರಂತೆ. ಕಾವ್ಯಳಿಗೆ ಹೆರಿಗೆಯ ನೋವು ಕಾಣಿಸಿಕೊಂಡ ರಾತ್ರಿ ಸಂತೋಷ ಮತ್ತು ಕಾವ್ಯಾ ಇಬ್ಬರೇ ಯಾವ ಆತಂಕಗಳೂ ಇಲ್ಲದೇ ಅನುದಿನ ವಾಕಿಂಗಿಗೆ ಹೋಗುವಂತೆ ತಯಾರಾಗಿ ಆಸ್ಪತ್ರೆಗೆ ಹೋದರು. ನಿಮ್ಮ ಜೊತೆಯಲ್ಲಿ ನಾವು ಯಾರಾದರೂ ಬರಬೇಕೇ ಅಂತ ಕೇಳಿದಾಗ ಸಂತೋಷ ‘ಬೇಡ, ಮನೆಯಲ್ಲೇ ಆರಾಮಾಗಿರಿ, ನಾವು ನಾಳೆ ಪಾಪುವನ್ನು ಮನೆಗೆ ತರುತ್ತೇವೆ ಅಂತ ಯಾವ ದುಗುಡವೂ ಇಲ್ಲದೇ ಹೇಳಿದ್ದ. ಆನಂತರ ಎಂಟ್ಹತ್ತು ತಾಸುಗಳವರೆಗೆ ಸಣ್ಣಗೆ ನೋವು ತಿಂದ ಕಾವ್ಯಾ ಮರುದಿನ ‘ವಿಸ್ಮಯ’ ನನ್ನು ಭೂಮಿಗೆ ತಂದಳು. ನಮಗೋ ಮೊಮ್ಮಗನನ್ನು ನೋಡುವ ಆತುರ ಕಾತುರ. ಸಂತೋಷ ಅಲ್ಲಿಂದಲೇ ಮೊಬೈಲಿನಲ್ಲಿ ವಿಡಿಯೋ ಕಾಲ್ ಮುಖಾಂತರ ನಮಗೆ ಮೊಮ್ಮಗನನ್ನು ತೋರಿಸಿದ. ಮೂರನೇ ದಿನ ಮನೆಗೆ ಪುಟ್ಟ ದೇವರು ಆಗಮಿಸಿದಂತೆ ವಿಸ್ಮಯ ನಮ್ಮೆಲ್ಲರ ಕಣ್ಮಣಿಯಾದ. ಹುಟ್ಟುವ ಮೊದಲೇ ನಾಮಕರಣ ಮುಗಿದಿದ್ದರಿಂದ ವಿಸ್ಮಯ ತೊಟ್ಟಿಲಲ್ಲಿ ಮುದ್ದಾಗಿ ಕೈಕಾಲಾಡಿಸುತ್ತ ಪವಡಿಸಿದ. ಇಲ್ಲಿಯ ತರಹ ಅಲ್ಲಿ ಪಾಪುವನ್ನು ನೋಡಲು ಮನೆಗೆ ಬಂದು ಮಾತನಾಡಿಸುವ ಪದ್ದತಿ ಇಲ್ಲದ್ದು ನನಗೆ ಅಚ್ಚರಿಯ ವಿಷಯವೇ. ಆದರೆ ಮೂರು ತಿಂಗಳು ತುಂಬಿದ ನಂತರ ಅಲ್ಲಿಯ ಕನ್ನಡದ ಲೇಖಕಿ ಕವಿಯಿತ್ರಿ ಮೀರಾ ರಾಜಗೋಪಾಲ ಆಗಮಿಸಿ ನಮ್ಮೆಲ್ಲರೊಂದಿಗೆ ಒಂದು ದಿನ ಕಳೆದು ಹೋದರು.

ಅಮೇರಿಕೆಯ ನೆಲೆಯಲ್ಲಿ ಭಾರತೀಯ ದೇವರಿಗೇನೂ ಕೊರತೆಯಿಲ್ಲ. ವೀಕೆಂಡಿಗಾಗಿಯೇ ದರುಶನಕೆ ಕಾಯುವ ಇಲ್ಲಿಂದ ಹೋದ ವೃದ್ಧ ಪಾಲಕರಿಗಂತೂ ದೇವಸ್ಥಾನಗಳಿಗೆ ಹೋಗುವ ಸುಗ್ಗಿ. ನ್ಯೂಜೆರ್ಸಿಯಲ್ಲಿ ಉಡುಪಿಯ ಶ್ರೀಕೃಷ್ಣ, ತಿರುಪತಿಯ ಬಾಲಾಜಿ ಮತ್ತು ಗುಜರಾತಿನ ಸ್ವಾಮಿ ನಾರಾಯಣ ಸುಪ್ರಸಿದ್ಧರು. ಬಹುಶಃ ಸ್ವಾಮಿ ನಾರಾಯಣನಿಗಿಂತ ಸಿರಿವಂತ ದೇವರು ಅಮೆರಿಕೆಯಲ್ಲಿ ಇನ್ನೊಂದಿರಲಿಕ್ಕಿಲ್ಲ. ಝಗಮಗಿಸುವ ಬಂಗಾರದ ಆಭರಣಗಳ ಕಂಡು. ವಿದೇಶೀಯರು ಇಂಡಿಯಾ ಅಂದರೆ ಬಂಗಾರ ಅಂತ ತಿಳಿದರೂ ಅತಿಶಯೋಕ್ತಿಯಲ್ಲ. ಅಂಥ ಸಮಯದಲ್ಲೇ ಒಂದು ಶನಿವಾರ ಸಂತೋಷ ಉಡುಪಿಯ ಶ್ರೀಕೃಷ್ಣ ದೇವಾಲಯಕ್ಕೆ ಕರೆದೊಯ್ದಿದ್ದ; ದರುಶನಕೆ ಅಲ್ಲದಿದ್ದರೂ ಅಲ್ಲಿಗೆ ಬರುತ್ತಿದ್ದ ಕನ್ನಡಿಗರ ಮುಖದ ನಗೆ ಕಾಣಲು ತುಂಬ ಆನಂದವೆನಿಸುತ್ತಿತ್ತು. ಅಲ್ಲಿ ಬೆರಗೆಂಬಂತೆ ಪಕ್ಕದಿಂದ ಬಂದ ‘ಕಡಮೆ ಸರ್’ ಎಂಬ ಆತ್ಮೀಯ ದನಿಗೆ ತಿರುಗಿದೆ. ದಂಪತಿಗಳಿಬ್ಬರೂ ನಗುಮೊಗದಿಂದ ‘ನಾವು ನಿಮ್ಮ ಫೇಸ್ ಬುಕ್ ಸ್ನೇಹಿತರು’ ಎಂದಾಗಲಂತೂ ಅಚ್ಚರಿಗೊಂಡೆ. ಎಲ್ಲಿಯ ಅಮೆರಿಕಾ, ಎಲ್ಲಿಯ ಫೇಸ್ಬುಕ್, ಮಾತು ಹೊರಡದಾಯಿತು. ಮೂಲತಃ ಸಿರಸಿ-ಶಿವಮೊಗ್ಗ ಕಡೆಯ ಉತ್ಸಾಹೀ ಕನ್ನಡ ಮನಸ್ಸಿನ ಸರಿತಾ ನವಲಿ – ಆಹಿಶ್ ಭಾರದ್ವಾಜ್ ಬದುಕು ಕಟ್ಟಿಕೊಳ್ಳುತ್ತಾ ಕನ್ನಡ ಕಟ್ಟುವ ಕೆಲಸದಲ್ಲಿ ಆ ನೆಲದಲ್ಲಿ ಮನೆ – ಮನ ಮಾಡಿ ನೆಲೆಗೊಂಡಿದ್ದರು.

ನಾವು ಬರುವ ಸುದ್ದಿ ಮೊದಲೇ ಅರಿತಿದ್ದ ಅಲ್ಲಿಯ ‘ಕನ್ನಡ ಸಾಹಿತ್ಯ ರಂಗ’ ದವರು ನ್ಯೂಜೆರ್ಸಿಯಲ್ಲಿ ನಡೆಯುವ ಒಂಬತ್ತನೇಯ ವಸಂತ ಸಾಹಿತ್ಯೋತ್ಸವಕ್ಕೆ ಕನ್ನಡದ ಖ್ಯಾತ ಬರಹಗಾರರಾದ ವಸುಧೇಂದ್ರ, ಡಾ. ವಸುಂಧರಾ ಭೂಪತಿ ಮತ್ತು ಸುನಂದಾ ಜೊತೆ ನನ್ನನ್ನೂ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದು ಬದುಕಿನಲ್ಲಿ ಮರೆಯಲಾಗದ ಸಂಗತಿಯೆನಿಸಿತು. ನ್ಯೂಜೆರ್ಸಿಯ ಮಾಲ್ಟರ್ನ ನಗರದಲ್ಲಿ ಹಿರಿಯ ಕನ್ನಡ ಮನಸ್ಸುಗಳಾದ ನಾಗ ಐತಾಳ, ಮೈ ಶ್ರೀ ನಟರಾಜ, ಗುರುಪ್ರಸಾದ ಕಾಗಿನೆಲೆ, ಶ್ರೀಕಾಂತ ಬಾಬು ಮತ್ತು ನಮ್ಮ ಹನೇಹಳ್ಳಿಯವರೇ ಆದ ಪ್ರಕಾಶ ನಾಯಕರವರ ನೇತೃತ್ವದ ಪಡೆ ಎರಡು ದಿನಗಳ ಈ ಕನ್ನಡ ಹಬ್ಬವನ್ನು ಯಶಸ್ವಿಯಾಗಿ ನೆರವೇರಿಸಿ ಸಪ್ತಸಾಗರದಾಚೆಯ ಆ ನಾಡಲ್ಲಿ ಕನ್ನಡದ ಗಂಧವ ಮೆತ್ತಿದರು. ಅಂದಿನ ಕಾರ್ಯಕ್ರಮದಲ್ಲಿ ನಮ್ಮಿಬ್ಬರೊಡನೆ ಕಾವ್ಯಾಳೂ ವೇದಿಕೆಯಲ್ಲಿದ್ದದ್ದು ನಮ್ಮ ಸಾಹಿತ್ಯ ಬದುಕಿನ ಮೈಲಿಗಲ್ಲು. ಸುನಂದಾ ಇತ್ತೀಚಿನ ಕನ್ನಡ ಕತೆಗಳ ಕುರಿತು ಮಾತನಾಡಿದರೆ, ನಾನು ತೊಂಬತ್ತರ ಯುವಕ ನಾಗ ಐತಾಳರ ‘ಸ್ಮರಣೆ ಸಾಲದೇ’ ಪುಸ್ತಕ ಪರಿಚಯಿಸಿ ಆ ದಂಪತಿಗಳ ಖುಷಿಯಲಿ ಒಂದಾದೆ.

ಅಂದು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ವಸುಂಧರಾ ಭೂಪತಿಯವರ ಕನಸಿನ ಕೂಸಾದ ‘ನಿಮ್ಮ ಮನೆಗೆ ನಮ್ಮ ಪುಸ್ತಕ’ ಕಾರ್ಯಕ್ರಮದ ಇಪ್ಪತ್ತೈದನೆಯ ಸರಣಿಯನ್ನು ಸರಿತಾ ಮತ್ತು ಭಾರಧ್ವಾಜ ದಂಪತಿಗಳ ಮನೆಯಲ್ಲಿ ಯಶಸ್ವಿಯಾಗಿ ನಡೆಸಿದ್ದು ನಮ್ಮಿಬ್ಬರೊಂದಿಗೆ ಕಾವ್ಯಳೂ ಭಾಗವಹಿಸಿ ಕನ್ನಡದ ಖುಷಿಗೆ ಕಾರಣಳಾದಳು. ನ್ಯೂಜೆರ್ಸಿಯ ಕನ್ನಡ ಬರಹಗಾರರೇ ಸೇರಿ ನಡೆಸುತ್ತಿರುವ ‘ಪ್ರಸ್ತಾಪ’ ಕನ್ನಡಪರ ಮನಸ್ಸಿನ ಕಾರ್ಯಕ್ರಮದಲ್ಲಿ ರಾಮಕೃಷ್ಣ ಅವರ ಮನೆಯಲ್ಲಿ ಸುನಂದಾ ಕತೆಗಳ ಕುರಿತು ಮಾತನಾಡಿದರೆ, ನಾನು ‘ನಾನು ಮತ್ತು ನನ್ನ ಕವಿತೆ’ ಕುರಿತು ಮಾತನಾಡಿ ಆ ನಾಡಿನಲ್ಲಿ ‘ನಾಗಸುಧೆ’ ಯ ಕಂಪಬೀರಿ ಎಲ್ಲ ಮನಸ್ಸುಗಳ ಮಂದಹಾಸದಲ್ಲಿ ಒಂದಾದೆವು.

ಮಗಳ ಮನೆಯಾದ್ದರಿಂದ ಸಪ್ತಸಾಗರ ದಾಟಿದರೂ ನಮ್ಮ ಊಟೋಪಚಾರದಲಿ ಯಾವುದೇ ಬದಲಾವಣೆಯಾಗಿಲ್ಲ. ಸಂತೋಷ ಅಲ್ಲಿಯ ಅನೇಕ ಮಾಲ್ ಗಳ ತೋರಿಸಿದ. ಇಂಡಿಯನ್ ಮಾಲ್ ನಲ್ಲಿ ಅದೇ ಪಾರ್ಲೆ ಬಿಸ್ಕೆಟ್, ಚಾವಿ ಕಡ್ಡಿ ಪೆಟ್ಟಿಗೆ, ಕೊಲ್ಗೆಟ್ ಪೇಸ್ಟ್ ಮತ್ತು ಬ್ರೆಶ್ಯುಗಳ ಕಂಡು ಬೆರಗಾದೆ. ಮೀನು – ಮಾಂಸ, ಕಲಗ – ಚಿಪ್ಪೆಕಲ್ಲು, ಇಲ್ಲಿಯದೇ ಬೆಂಡೆ ಹೀರೆ ಬಸಲೆ ತರಕಾರಿಗಳು. ‘ಲಿಬರ್ಟಿ ಸ್ಟೆಚ್ಯು’ ದಿಂದ ಹಿಡಿದು ‘ಸ್ವಾತಂತ್ರ್ಯದ ಗಂಟೆ ‘ ವರೆಗಿನ ಎಲ್ಲಾ ಪ್ರೇಕ್ಷಣೀಯ ಸ್ಥಳಗಳನ್ನೂ, ರಡ್ಗರ್-ಪ್ರಿನ್‌ಸ್ಟನ್, ಪೆನ್ಸಿಲ್ವೇನಿಯಾ ವನ್ನೊಳಗೊಂಡು ಎಂಟ್ಹತ್ತು ಜಗದ್ವಿಖ್ಯಾತ ವಿಶ್ವವಿದ್ಯಾಲಯಗಳನ್ನು ಸಂತೋಷನ ಕೆಲಸದ ವೇಳೆಯ ಹೊಂದಾಣಿಕೆಯಲಿ ಕಂಡೆವು; ಅಮೇರಿಕೆಯ ಖುಷಿ ಉಂಡೆವು.

  • ಪ್ರಕಾಶ ಕಡಮೆ
ಪ್ರಕಾಶ ಕಡಮೆ

ಫೋಟೋ ಕೃಪೆ: ಸಂತೋಷ ನಾಗರಕಟ್ಟೆ, ನ್ಯೂಜೆರ್ಸಿ

(ಜನಪರ ಕಾಳಜಿಯ ಕವಿ ಪ್ರಕಾಶ ಕಡಮೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಗಾಣದೆತ್ತು ಮತ್ತು ತೆಂಗಿನಮರ, ಆ ಹುಡುಗಿ, ಅಮ್ಮನಿಗೊಂದು ಕವಿತೆ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ)


ಇದನ್ನೂ ಓದಿ: ಮಮತೆಯ ಮಮತಾಗೆ ‘ಮಯೂರ’ ನ ಮನ್ನಣೆ: ಪ್ರಕಾಶ ಕಡಮೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...