ತಮಿಳುನಾಡಿನಲ್ಲಿ 2021ರಲ್ಲಿ ಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ರಾಜಕೀಯ ಚತುರ ಪ್ರಶಾಂತ್ ಕಿಶೋರ್ ಅವರ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ ಜೊತೆ ಒಪ್ಪಂದ ಮಾಡಿಕೊಳ್ಳಲು ಡಿಎಂಕೆ ಮುಂದಾಗಿದೆ. ಇದಕ್ಕೆ ಪ್ರತಿಪಕ್ಷಗಳು ಮತ್ತು ರಾಜಕೀಯ ವಿಶ್ಲೇಷಕರು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಪ್ರಶಾಂತ್ ಕಿಶೋರ್ ಸಂಸ್ಥೆಯ ಸಹಯೋಗದೊಂದಿಗೆ ಮುನ್ನಡೆದರೆ ಗೆಲುವು ಖಚಿತ ಎಂಬುದನ್ನು ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ನಂಬಿದೆ. ಹೀಗಾಗಿ ಒಪ್ಪಂದಕ್ಕೆ ಮುದ್ರೆ ಒತ್ತಲು ಸ್ಟಾಲಿನ್ ಮುಂದಾಗಿದ್ದಾರೆ ಎಂದು ವರದಿಗಳು ಹೇಳಿವೆ.
2019ರ ನವೆಂಬರ್ ನಲ್ಲಿ ಮತ್ತೊಬ್ಬ ರಾಜಕೀಯ ವಿಶ್ಲೇಷಕ ಸುನಿಲ್ ಕೊನೆಲೆಲು ಮತ್ತು ಡಿಎಂಕೆ ನಡುವೆ ಅಸಮಾಧಾನದ ಭುಗಿಲೆದ್ದ ಹಿನ್ನೆಲೆಯಲ್ಲಿ ಅವರೊಂದಿಗೆ ಕೆಲಸ ಮಾಡಲು ಡಿಎಂಕೆ ಹಿಂದೇಟು ಹಾಕಿದೆ. ಅದೇ ಕಾರಣಕ್ಕಾಗಿಯೇ ಪ್ರಶಾಂತ್ ಕಿಶೋರ್ ಗುಂಪಿನೊಂದಿಗೆ ಕೈಜೋಡಿಸಲು ಸಿದ್ದತೆ ನಡೆಸಿದೆ.
ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು 2019ರ ಲೋಕಸಭಾ ಚುನಾವಣೆಯಲ್ಲಿ ಕೆಲವು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು 39 ಸ್ಥಾನಗಳಲ್ಲಿ 38 ಸ್ಥಾನಗಳನ್ನು ಗೆದ್ದಿತ್ತು. ನಂತರ 22 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲೂ ಡಿಎಂಕೆ 13 ಸ್ಥಾನಗಳನ್ನು ಗಳಿಸಿ ಪ್ರಾಬಲ್ಯವನ್ನು ಮೆರೆದಿತ್ತು. ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಡಿಎಂಕೆ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು.
ಇದನ್ನೂ ಓದಿ: 2014ರಲ್ಲಿ ಮೋದಿ ಗೆಲುವಿಗಾಗಿ ದುಡಿದ ಈಗ ಮೋದಿ ವಿರುದ್ಧವೇ ತೊಡೆ ತಟ್ಟಿರುವ ಈ ಪ್ರಶಾಂತ್ ಕಿಶೋರ್ ಯಾರು?
ಈ ಬೆಳವಣಿಗೆಗಳು ಡಿಎಂಕೆ ಪಕ್ಷದಲ್ಲಿ ಹೊಸ ಆಶಾಭಾವನೆಯನ್ನು ಮೂಡಿಸಿದ್ದು 2021ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಭವಿಷ್ಯ ಉಜ್ವಲವಾಗಿರುವುದನ್ನು ಮನಗಂಡಿರುವ ಡಿಎಂಕೆ ಪ್ರಶಾಂತ್ ಕಿಶೋರ್ ಅವರನ್ನು ತಮ್ಮ ತಂಡದಲ್ಲಿ ಸೇರ್ಪಡೆ ಮಾಡಿಕೊಳ್ಳುವ ನಿರ್ಧಾರವು ವಿರೋಧಿಗಳ ಪಾಳೆಯದಲ್ಲಿ ಹುಬ್ಬೇರಿಸುವಂತೆ ಮಾಡಿದೆ.
ಸದ್ಯಕ್ಕೆ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಆಪ್ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪರವಾಗಿ ಕೆಲಸ ಮಾಡಲಿದ್ದಾರೆ.
ಐ-ಪ್ಯಾಕ್ ಜೊತೆ ಕೈಜೋಡಿಸುವ ಡಿಎಂಕೆ ನಿರ್ಧಾರದ ಪ್ರತಿಕ್ರಿಯೆ ನೀಡಿರುವ ಎಐಎಡಿಎಂಕೆ ಸಚಿವ ಡಿ.ಜಯಕುಮಾರ್ ಎಂ.ಕೆ. ಸ್ಟಾಲಿನ್ ಅವರನ್ನು ಇನ್ನು ಮುಂದ ಪಿ.ಕೆ.ಸ್ಟಾಲಿನ್ ಎಂದು ಕರೆಯಬೇಕು ಎಂದು ಗೇಲಿ ಮಾಡಿದ್ದಾರೆ. ಏಕೆಂದರೆ ಡಿಎಂಕೆ ನಾಯಕ ಸ್ಟಾಲಿನ್, ರಾಜಕೀಯ ಚತುರ ಕಿಶೋರ್ ಅವರ ಆಜ್ಞೆಗಳನ್ನು ಕೇಳುವುದಿಲ್ಲ. ಡಿಎಂಕೆ ಪಕ್ಷದ ನಾಯಕರ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದೆ. ಆದ್ದರಿಂದ ಸ್ಟಾಲಿನ್ ವಿಧಾನಸಭಾ ಚುನಾವಣೆಗೆ ತಂತ್ರಜ್ಞರನ್ನು ನೇಮಿಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು


