Homeಕರ್ನಾಟಕಬಜೆಟ್ ಪೂರ್ವ ಸಮೀಕ್ಷೆ: ಸಾಲದ ಸುಳಿಯಲ್ಲಿ ಸರ್ಕಾರಗಳು

ಬಜೆಟ್ ಪೂರ್ವ ಸಮೀಕ್ಷೆ: ಸಾಲದ ಸುಳಿಯಲ್ಲಿ ಸರ್ಕಾರಗಳು

- Advertisement -
- Advertisement -

ಒಕ್ಕೂಟ ಸರ್ಕಾರ ಮತ್ತು ಕರ್ನಾಟಕ ಸರ್ಕಾರಗಳು ಸಾಲದ ಸುಳಿಯಲ್ಲಿ ಸಿಲುಕಿಕೊಂಡಿವೆ. ಸರ್ಕಾರಗಳಿಗೆ ಸಾಲ ಎತ್ತುವುದು ಒಂದು ಸಾಮಾನ್ಯ ವಿತ್ತೀಯ ಕ್ರಮ. ಸಾಲ ಮಾಡದಿದ್ದರೆ ಸರ್ಕಾರಗಳಿಗೆ ಬಂಡವಾಳ ಹೂಡಿಕೆ ಮಾಡುವುದು ಅಸಾಧ್ಯವಾಗಿಬಿಡುತ್ತದೆ. ಇಂದು ಸಾಲ ತಂದು ಬಂಡವಾಳ ಹೂಡಿಕೆ ಮಾಡಿದರೆ ಮುಂದೆ ಅದರಿಂದ ಹೆಚ್ಚಿನ ವರಮಾನವನ್ನು ಪಡೆಯಬಹುದು. ವ್ಯಕ್ತಿಗಳು ಮತ್ತು ಕಂಪನಿಗಳಿಗಿಂತ ಸರ್ಕಾರಗಳಿಗೆ ಸಾಲ ಎತ್ತುವ ಮತ್ತು ಸಾಲ ತೀರಿಸುವ ಸಾಮರ್ಥ್ಯವೂ ಉತ್ತಮವಾಗಿರುತ್ತದೆ. ಸರ್ಕಾರಗಳು ಎತ್ತಿದ ಸಾಲ ಮಿತಿಮೀರಿದಾಗ ಮತ್ತು ಅದನ್ನು ತೀರಿಸುವುದು ಸಾಧ್ಯವಾಗದಿದ್ದಾಗ ಸಮಸ್ಯೆಗಳು ಉದ್ಭವವಾಗುತ್ತವೆ. ಬಂಡವಾಳ ವೆಚ್ಚವನ್ನು ಭರಿಸುವುದಕ್ಕೆ ಬದಲಾಗಿ ಅನುಭೋಗಿ ವೆಚ್ಚಕ್ಕೆ ಸಾಲವನ್ನು ಬಳಸಿದಾಗ ಅಲ್ಲಿ ವಿತ್ತೀಯ ಶಿಸ್ತು ಇರುವುದಿಲ್ಲ. ಕಳೆದ ವರ್ಷ ಶ್ರೀಲಂಕಾದಲ್ಲಿ ವಿದೇಶಿ ಸಾಲ ಮಿತಿಮೀರಿದಾಗ, ಸಾಲ ತೀರಿಸುವುದು ಸಾಧ್ಯವಿಲ್ಲವೆಂದು ಸರ್ಕಾರವು ಘೋಷಿಸಿದಾಗ, ಸರ್ಕಾರದ ಹಣಕಾಸು ನಿರ್ವಹಣೆ ನೆಲ ಕಚ್ಚಿದಾಗ ಜನರು ಸರ್ಕಾರದ ವಿರುದ್ಧ ದಂಗೆಯೆದ್ದರು. ಅಲ್ಲಿನ ಅಧ್ಯಕ್ಷರು ಜೀವಭಯದಿಂದ ರಾಷ್ಟ್ರಪತಿ ಭವನದಿಂದ ಓಡಿ ಹೋಗಬೇಕಾಯಿತು.

ಅನೇಕ ಅಧ್ಯಯನಗಳು ಹಾಗೂ ಬಜೆಟ್ ಸಾಂಖ್ಯಿಕ ವಿವರಗಳು ಒಕ್ಕೂಟ ಮತ್ತು ಕರ್ನಾಟಕ ಸರ್ಕಾರಗಳು ತಮ್ಮ ವಿತ್ತೀಯ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ ಎಂಬುದನ್ನು ಸೂಚಿಸುತ್ತಿವೆ. ಕಳೆದ ಎಂಟು ವರ್ಷಗಳಲ್ಲಿ ಭಾರತ ಮತ್ತು ಕರ್ನಾಟಕ ಸರ್ಕಾರಗಳ ಸಾಲವು ಮಿತಿಮೀರಿ ಬೆಳೆದಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಭಾರತ ಸರ್ಕಾರದ ಸಾರ್ವಜನಿಕ ಋಣ 2013-14ರಲ್ಲಿ ರೂ.39.42 ಲಕ್ಷ ಕೋಟಿಯಿದ್ದುದು ಮಾರ್ಚ್ 2022ರಲ್ಲಿ ರೂ.135.88 ಲಕ್ಷ ಕೋಟಿಯಾಗಿದೆ. ಅಂದರೆ ದೇಶ 1950ರಿಂದ 2014ರವರೆಗೆ ಕಳೆದ 70 ವರ್ಷಗಳಲ್ಲಿ ಮಾಡಿದ ಸಾಲ ರೂ.39.42 ಲಕ್ಷ ಕೋಟಿಯಾದರೆ ಕಳೆದ 8 ವರ್ಷಗಳಲ್ಲಿ ಸರ್ಕಾರಗಳು ಮಾಡಿರುವ ಸಾಲ ರೂ.96.46 ಲಕ್ಷ ಕೋಟಿ. ದೇಶದ ಒಟ್ಟು ಸಾಲವು ಮಾರ್ಚ್ 23 ರಹೊತ್ತಿಗೆ ರೂ.152.18 ಲಕ್ಷ ಕೋಟಿಯಾಗುವ ಸಾಧ್ಯತೆಯಿದೆ. ನಮ್ಮ ದೇಶದ ಸಾರ್ವಜನಿಕ ಋಣವು 2013-14 ಮತ್ತು 2021-22ರ ನಡುವೆ ಶೇ.286.04ರಷ್ಟು ಏರಿಕೆಯಾಗಿದೆ.

ಇದೇ ರೀತಿಯಲ್ಲಿ ಕರ್ನಾಟಕ ಸರ್ಕಾರದ ಸಾಲವು 2013-14ರಲ್ಲಿ ರೂ.1.39 ಲಕ್ಷ ಕೋಟಿಯಿದ್ದುದು 2017-18ರಲ್ಲಿ ರೂ.2.45 ಲಕ್ಷ ಕೋಟಿಯಾಗಿದೆ. ಇದು ಮತ್ತೆ 2021-22ರಲ್ಲಿ ರೂ.4.41 ಲಕ್ಷ ಕೋಟಿಯಾಗಿದೆ. ಕರ್ನಾಟಕವು ಸರಿಸುಮಾರು 6 ದಶಕಗಳಲ್ಲಿ ಮಾಡಿದ ಸಾಲ ರೂ.1.39 ಲಕ್ಷ ಕೊಟಿಯಾದರೆ ಕಳೆದ ಎಂಟು ವರ್ಷಗಳಲ್ಲಿ ಮಾಡಿರುವ ಸಾಲ ರೂ. 3.02 ಲಕ್ಷ ಕೋಟಿ.

ರಾಜ್ಯದ ಸಾಲದ ಬೆಳವಣಿಗೆಯು 2012-13ರಿಂದ 2017-18ರ ನಡುವಿನ ಐದು ವರ್ಷಗಳಲ್ಲಿ ವಾರ್ಷಿಕ ಶೇ.15.25ರಷ್ಟಾಗಿದ್ದರೆ 2017-18ರಿಂದ 2021-22ರ ಐದು ವರ್ಷಗಳ ನಡುವೆ ಸಾಲದ ಬೆಳವಣಿಗೆ ವಾರ್ಷಿಕ ಶೇ.16ರಷ್ಟಾಗಿದೆ.

ಕರ್ನಾಟಕ ಸರ್ಕಾರದ ರೆವಿನ್ಯೂ 2021-22ರಲ್ಲಿ ರೂ.1.89 ಲಕ್ಷ ಕೋಟಿ. ರಾಜ್ಯದ ವಾರ್ಷಿಕ ಬಡ್ಡಿ ಪಾವತಿ ರೂ.29394 ಕೋಟಿ. ಅಂದರೆ ರೆವಿನ್ಯೂ ಸಂಗ್ರಹದಲ್ಲಿ ಶೇ.15.47 ಬಡ್ಡಿಗೆ ಪಾವತಿಯಾಗುತ್ತದೆ. ಒಕ್ಕೂಟ ಸರ್ಕಾರವು 2021-22ರಲ್ಲಿ ನೀಡಿದ ಬಡ್ಡಿ ರೂ.8.14 ಲಕ್ಷ ಕೋಟಿ. ಇದು ಸದರಿ ವರ್ಷದ ರೆವಿನ್ಯೂ ಸ್ವೀಕೃತಿಯಲ್ಲಿ (ರೂ.20.04 ಲಕ್ಷ ಕೋಟಿ) ಶೇ.39.15 ರಷ್ಟಾಗುತ್ತದೆ.

ಸರ್ಕಾರದ ಸಾಲವು ಮಿತಿಮೀರಿ ಬೆಳೆಯುತ್ತಿರುವುದಕ್ಕೆ ಎರಡು ಕಾರಣಗಳಿವೆ.

(1) ಸರ್ಕಾರಗಳ ತೆರಿಗೆ ಸಂಗ್ರಹ ಹೆಚ್ಚಿನ ರೀತಿಯಲ್ಲಾಗುತ್ತಿಲ್ಲ. (2) ಸರ್ಕಾರಗಳ ಸಾರ್ವಜನಿಕ ವೆಚ್ಚ ಹೆಚ್ಚಾಗುತ್ತಿದೆ. ಕರ್ನಾಟಕ ಸರ್ಕಾರವು 2005-06ರಿಂದ ತನ್ನ ಬಜೆಟ್ಟಿನ ನಿರ್ವಹಣೆಯನ್ನು ಅತ್ಯಂತ ಕ್ಷಮತೆಯಿಂದ ನಿರ್ವಹಿಸಿಕೊಂಡು ಬಂದಿದೆ. ಉದಾ: ಒಂದು ದಶಕಕ್ಕೂ ಹೆಚ್ಚಿನ ಕಾಲ ರಾಜ್ಯವು ರೆವಿನ್ಯೂ ಬಜೆಟ್ಟಿನಲ್ಲಿ ಆಧಿಕ್ಯವನ್ನು ಸಾಧಿಸಿಕೊಂಡಿತ್ತು. ಇದನ್ನು ವಿತ್ತೀಯ ಶಿಸ್ತು ಎನ್ನುತ್ತೇವೆ. ರಾಜ್ಯವು 2005-06ರಿಂದ 2018-19ರವರೆಗೆ ರೆವಿನ್ಯೂ ಖಾತೆಯಲ್ಲಿ ಆಧಿಕ್ಯವನ್ನು ಕಾಯ್ದುಕೊಂಡು ಬಂದುದು ಒಂದು ದಾಖಲೆಯಾಗಿದೆ. ಇಂದು ರೆವಿನ್ಯೂ ಖಾತೆಯಲ್ಲಿ ಕೊರತೆಯುಂಟಾಗುತ್ತಿದೆ. ಕರ್ನಾಟಕವು ವಿತ್ತೀಯ ಶಿಸ್ತಿಗೆ ಹೆಸರುವಾಸಿಯಾಗಿತ್ತು. ಇಂದು ವಿತ್ತೀಯ ಮತ್ತು ಆರ್ಥಿಕ ಶಿಸ್ತು ಬಜೆಟ್ ನಿರ್ವಹಣೆಯಲ್ಲಿ ಕಾಣುತ್ತಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ.

ತೆರಿಗೆ ಸಂಗ್ರಹದಲ್ಲಿನ ಸಮಸ್ಯೆಗಳು

ಇಂದು ಕರ್ನಾಟಕವು ಹಣಕಾಸು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಒಕ್ಕೂಟ ಸರ್ಕಾರವು ಕರ್ನಾಟಕದ ಬಗ್ಗೆ ಪಾಲಿಸುತ್ತಿರುವ ಮಲತಾಯಿ ಧೋರಣೆ ಒಂದು ಮುಖ್ಯ ಕಾರಣವಾಗಿದೆ. ಸಂವಿಧಾನವು ರಾಜ್ಯಗಳಿಗೆ ನೀಡಿದ್ದ ತೆರಿಗೆ ವಿಧಿಸುವ-ಸಂಗ್ರಹಿಸಿಕೊಳ್ಳುವ ಮತ್ತು ಖರ್ಚು ಮಾಡುವ ಹಕ್ಕನ್ನು ಜಿಎಸ್‌ಟಿ (ಸರಕು-ಸೇವಾ ತೆರಿಗೆ) ಕಸಿದುಕೊಂಡಿದೆ. ಈ ಸಮಸ್ಯೆಯು ಇಂದು ಮತ್ತಷ್ಟು ಗಂಭೀರವಾಗುವ ಸಾಧ್ಯತೆಯಿದೆ. ಏಕೆಂದರೆ ಜಿಎಸ್‌ಟಿಗೆ ಒಕ್ಕೂಟ ಸರ್ಕಾರ ರಾಜ್ಯಗಳಿಗೆ ನೀಡುತ್ತಿದ್ದ ಪರಿಹಾರದ ಅವಧಿ 2022ಕ್ಕೆ ಮುಗಿದುಹೋಗಿದೆ. ಈ ಪರಿಹಾರ ನೀಡುವ ಕ್ರಮವನ್ನು ಮತ್ತೆ ಐದು ವರ್ಷ ಮುಂದುವರಿಸಲು ಅನೇಕ ರಾಜ್ಯಗಳು ಒತ್ತಾಯಿಸುತ್ತಿವೆ. ಇದೊಂದು ನ್ಯಾಯಯುತ ಹಾಗೂ ಒಕ್ಕೂಟ ತತ್ವಕ್ಕೆ ಅನುಗುಣವಾದ ಒತ್ತಾಯವಾಗಿದೆ. ಆದರೆ ನ್ಯಾಯಯುತ ಸಂಗತಿಗಳಿಗೆ ಮತ್ತು ಒಕ್ಕೂಟ ತತ್ವಕ್ಕೆ ವಿರೋಧಿಯಾಗಿರುವ ಭಾರತ ಸರ್ಕಾರವು ಈ ಒತ್ತಾಯವನ್ನು ಒಪ್ಪಿಕೊಳ್ಳುತ್ತಿಲ್ಲ. ಒಕ್ಕೂಟ ಸರ್ಕಾರದ ಮುಲಾಜಿನಲ್ಲಿ ಬದುಕುತ್ತಿರುವ ಕರ್ನಾಟಕ ಸರ್ಕಾರವು ಇದನ್ನು ಒತ್ತಾಯಿಸುತ್ತಿಲ್ಲ

ಮೇಲು ತೆರಿಗೆ ಮತ್ತು ತೆರಿಗೆ ಮೇಲಿನ ತೆರಿಗೆ

ಒಕ್ಕೂಟ ಸರ್ಕಾರವು ಮೇಲು ತೆರಿಗೆ (ಸರ್‌ಚಾರ್ಚ್) ಮತ್ತು ತೆರಿಗೆ ಮೇಲಿನ ತೆರಿಗೆ (ಸೆಸ್) ಮೂಲಕ ಅಪಾರ ರೆವಿನ್ಯೂ ಸಂಗ್ರಹಿಸಿಕೊಳ್ಳುತ್ತದೆ. ಒಕ್ಕೂಟ ಸರ್ಕಾರದ 2021-22ರ ಒಟ್ಟು ರೆವಿನ್ಯೂ ರೂ.27 ಲಕ್ಷ ಕೋಟಿಯಲ್ಲಿ ಮೇಲು ತೆರಿಗೆ ಮತ್ತು ತೆರಿಗೆ ಮೇಲಿನ ತೆರಿಗೆ ಪಾಲು ರೂ.7.06 ಲಕ್ಷ ಕೋಟಿ. ಈ ಸರ್‌ಚಾರ್ಚ್ ಮತ್ತು ಸೆಸ್‌ಗಳು 2011-12ರಲ್ಲಿ ಒಕ್ಕೂಟದ ಒಟ್ಟು ರೆವಿನ್ಯೂವಿನಲ್ಲಿ ಶೇ.10ರಷ್ಟಿದ್ದುದು 2021-22ರಲ್ಲಿ ಇದು ಶೇ.26ಕ್ಕೇರಿದೆ. ಇಲ್ಲಿನ ಸಮಸ್ಯೆಯೆಂದರೆ ಈ ಹಣವು ಒಕ್ಕೂಟದ ’ಹಂಚಿಕೊಳ್ಳುವ ತೆರಿಗೆ ರಾಶಿ’ಗೆ ಸೇರುವುದಿಲ್ಲ. ಈ ತೆರಿಗೆಗಳ ಹಣವನ್ನು ಒಕ್ಕೂಟ ಸಂಪೂರ್ಣವಾಗಿ ಅನುಭವಿಸುತ್ತಿದೆ. ಇದು ಸಂವಿಧಾನದತ್ತ ಒಕ್ಕೂಟ ತತ್ವದ ಉಲ್ಲಂಘನೆ ಮಾತ್ರವಲ್ಲ, ರಾಜ್ಯಗಳಿಗೆ ಒಕ್ಕೂಟ ಸರ್ಕಾರವು ಮಾಡುತ್ತಿರುವ ಅನ್ಯಾಯ. ವಿತ್ತಮಂತ್ರಿಯವರು ಸಂವಿಧಾನದ ಅನುಚ್ಛೇದ 270ರ ಪ್ರಕಾರ ಈ ತೆರಿಗೆಗಳ ಹಣವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕಾಗಿಲ್ಲ ಎನ್ನುತ್ತಾರೆ. ಈ ನಿಲುವು ಸಂವಿಧಾನದ ಮೂಲ ಆಶಯಕ್ಕೆ ಮತ್ತು ಒಕ್ಕೂಟ ತತ್ವದ ನಿಯಮಕ್ಕೆ ವಿರುದ್ಧವಾದುದು. ಮೇಲು ತೆರಿಗೆ ಮತ್ತು ತೆರಿಗೆ ಮೇಲಿನ ತೆರಿಗೆಯನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಉಪಯೋಗಿಸಬೇಕು. ಆದರೆ ಇಂದು ಒಕ್ಕೂಟ ಸರ್ಕಾರವು ಇದನ್ನು ತನ್ನ ಖಾಯಂ ರೆವಿನ್ಯೂ ಮೂಲವಾಗಿ ಬಳಸುತ್ತಿದೆ. ಈ ತೆರಿಗೆಗಳ ಹಣವನ್ನು ಹಂಚಿಕೊಳ್ಳುವ ರಾಶಿಗೆ ಸೇರಿಸಿದರೆ ಇದರಿಂದ ರಾಜ್ಯಗಳಿಗೆ ಸಾಕಷ್ಟು ಸಂಪನ್ಮೂಲ ದೊರೆಯುತ್ತದೆ.

15ನೆಯ ಹಣಕಾಸು ಆಯೋಗದ ವರದಿ

ನಮ್ಮ ದೇಶದಲ್ಲಿ ಒಕ್ಕೂಟ ಮತ್ತು ರಾಜ್ಯಗಳ ನಡುವಣ ಹಣಕಾಸು ಸಂಬಂಧಗಳನ್ನು ನಿರ್ವಹಿಸಲು ಸಂವಿಧಾನಾತ್ಮಕ ಕ್ರಮವೇ, ಐದು ವರ್ಷಗಳಿಗೊಮ್ಮೆ ರಾಷ್ಟ್ರಪತಿಗಳು ನೇಮಿಸುವ ಹಣಕಾಸು ಆಯೋಗ. ಈ ಆಯೋಗವು ಒಕ್ಕೂಟ ಸರ್ಕಾರ ಸಂಗ್ರಹಿಸಿಕೊಂಡ ಒಟ್ಟು ತೆರಿಗೆಯಲ್ಲಿ ಎಷ್ಟು ಭಾಗವನ್ನು ರಾಜ್ಯಗಳಿಗೆ ವರ್ಗಾಯಿಸಬೇಕು ಎಂಬುದನ್ನು ನಿರ್ಧರಿಸುತ್ತದೆ. ಇದಕ್ಕೆ ಆಯೋಗವು ಅನೇಕ ಸೂತ್ರಗಳನ್ನು ಅನುಸರಿಸುತ್ತದೆ. ಈ ಸೂತ್ರಗಳಲ್ಲಿ ಮುಖ್ಯವಾದುದು ಜನಸಂಖ್ಯೆ. ಹಣಕಾಸು ಆಯೋಗಗಳು 2012ರವರೆಗೆ 1971ರ ಜನಸಂಖ್ಯೆಯನ್ನು ಆಧಾರವನ್ನಾಗಿ ಮಾಡಿಕೊಂಡು ತಮ್ಮ ಶಿಫಾರಸ್ಸು ಮಾಡುತ್ತಿದ್ದವು. ಆದರೆ 15ನೆಯ ಹಣಕಾಸು ಆಯೋಗಕ್ಕೆ ಒಕ್ಕೂಟ ಸರ್ಕಾರವು 2011ರ ಜನಸಂಖ್ಯೆಯನ್ನು ಪರಿಗಣಿಸುವಂತೆ ಆದೇಶ ನೀಡಿದೆ. ಜನಸಂಖ್ಯೆಯ ಬೆಳವಣಿಗೆಯನ್ನು ತೀವ್ರಗತಿಯಲ್ಲಿ ನಿಯಂತ್ರಿಸಿರುವ ದಕ್ಷಿಣ ಭಾರತದ ರಾಜ್ಯಗಳಿಗೆ ಇದರಿಂದ ಅನ್ಯಾಯವಾಗುತ್ತದೆ ಎಂದು ಒತ್ತಾಯ ಮಾಡಿದರೂ ಕೇಳದೆ ಸರ್ವಾಧಿಕಾರಿ ಧೋರಣೆಯಿಂದ 2011ರ ಜನಸಂಖ್ಯೆಯನ್ನು ಆಧಾರವಾಗಿ ಮಾಡಿಕೊಳ್ಳುವ ಆದೇಶವನ್ನು ಒಕ್ಕೂಟ ಸರ್ಕಾರ ನೀಡಿದೆ. ಇದರಿಂದ 15ನೆಯ ಹಣಕಾಸು ಆಯೋಗದ ಶಿಫಾರಸ್ಸುಗಳಿಂದ ಕರ್ನಾಟಕವನ್ನೂ ಸೇರಿಸಿಕೊಂಡು ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಿದೆ. ಉದಾ: 2021-22ರಲ್ಲಿ ಹಣಕಾಸು ಆಯೋಗದ ಶಿಫಾರಸ್ಸಿನಂತೆ ದಕ್ಷಿಣ ಭಾರತದ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳು ಒಕ್ಕೂಟದ ಹಂಚುವ ತೆರಿಗೆ ರಾಶಿಯಲ್ಲಿ ಪಡೆದ ಪಾಲು ಶೇ.15.85ರಷ್ಟಾದರೆ ಉತ್ತರ ಭಾರತದ ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳು ಪಡೆದ ಪಾಲು ಶೇ.45.18. ಇಲ್ಲಿದೆ ಕರ್ನಾಟಕದ ಹಣಕಾಸು ಸಂಪನ್ಮೂಲದ ಸಮಸ್ಯೆ. ತೆರಿಗೆ ಮತ್ತು ತೆರಿಗೆಯೇತರ ಮೂಲಗಳಿಂದ ಸಂಪನ್ಮೂಲವನ್ನು ಸಂಗ್ರಹಿಸಿಕೊಳ್ಳುವುದರಲ್ಲಿ ವಿಫಲವಾದಾಗ, ಸಹಜವಾಗಿ ಸಾಲದ ಮೊರೆ ಹೋಗಬೇಕಾಗುತ್ತದೆ. ಕರ್ನಾಟಕ ಸರ್ಕಾರವು ಇಂತಹ ಕ್ರಮವನ್ನು ಅನಿವಾರ್ಯವಾಗಿ ಅನುಸರಿಸುತ್ತಿದೆ.

ಇದನ್ನೂ ಓದಿ: ಬಾಯ್‌ಕಾಟ್‌ ಆರ್.ಅಶೋಕ್: ಮಂಡ್ಯದಲ್ಲಿ ಪೋಸ್ಟರ್ ಅಂಟಿಸಿದ ಬಿಜೆಪಿ ಕಾರ್ಯಕರ್ತರು!

ಸಾಮೂಹಿಕ ಆಸ್ತಿ ಮಾರಾಟ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ

’ಹಿರೇ ಮಗನ ಚಾಳಿ ಮನೆಮಂದಿಗೆಲ್ಲ’ ಎನ್ನುವಂತೆ ಒಕ್ಕೂಟ ಸರ್ಕಾರವು ತೆರಿಗೆ, ತೆರಿಗೆಯೇತರ ಮತ್ತು ಸಾಲದ ಮೂಲಗಳಿಂದ ಬರುವ ಸಂಪನ್ಮೂಲಗಳು ಸಾಲದಾಗಿ ಸಾಮೂಹಿಕ ಆಸ್ತಿಯ ಮಾರಾಟವನ್ನು ’ಅಸೆಟ್ ಮಾನಿಟೈಸೇಶನ್’ ಎನ್ನುವ ಹೆಸರಿನಲ್ಲಿ ಮಾಡುತ್ತಿದೆ. ಇದೇ ಹಾದಿಯಲ್ಲಿ ಕರ್ನಾಟಕ ಸರ್ಕಾರವು ತನ್ನ ಆಸ್ತಿಯನ್ನು ಮಾರಾಟ ಮಾಡುವ ಜನದ್ರೋಹಿ ಕೆಲಸವನ್ನು ಮಾಡುತ್ತಿದೆ. ಉದಾ: ಒಕ್ಕೂಟ ಸರ್ಕಾರ ತನ್ನ ವ್ಯಾಪ್ತಿಯಲ್ಲಿನ ಕರ್ನಾಟಕದ ’ವಿಶ್ವೇಶ್ವರಯ್ಯ ಐರನ್ ಆಂಡ್ ಸ್ಟೀಲ್ ವರ್ಕ್ಸ್’ ಕಂಪನಿಯನ್ನು ಮುಚ್ಚಿ ಮಾರಾಟ ಮಾಡಲು ಹೊರಟಿದೆ.

ಅಪ್ರತ್ಯಕ್ಷ ತೆರಿಗೆಗಳ ಅವಲಂಬನೆ

ಇಂದು ಒಕ್ಕೂಟ ಸರ್ಕಾರ ತನ್ನ ಹಣಕಾಸು ಸಂಪನ್ಮೂಲಕ್ಕೆ ಹೆಚ್ಚುಹೆಚ್ಚು ಅಪ್ರತ್ಯಕ್ಷ ತೆರಿಗೆಗಳನ್ನು ಅವಲಂಬಿಸುತ್ತಿದೆ. ಪ್ರತ್ಯಕ್ಷ ತೆರಿಗೆಗಳ ದರಗಳನ್ನು ಕಡಿಮೆ ಮಾಡುತ್ತಿದೆ. ಒಕ್ಕೂಟವು 2019ರಲ್ಲಿ ಕಾರ್ಪೋರೆಟ್ ತೆರಿಗೆಯನ್ನು ಶೇ.30ರಿಂದ ಶೇ.22ಕ್ಕೆ ಮತ್ತು ಹೊಸ ಉದ್ದಿಮೆಗಳ ತೆರಿಗೆಯನ್ನು ಶೇ.15ಕ್ಕಿಳಿಸಿದೆ.

ಒಕ್ಕೂಟ ಸರ್ಕಾರದ ಕಾರ್ಪೋರೆಟ್ ತೆರಿಗೆ ಮತ್ತು ಜಿಎಸ್‌ಟಿ ನಡುವಣ ತಾರತಮ್ಯದ ವಿರಾಟ್ ರೂಪ

ಮೂಲ: ಭಾರತ ಸರ್ಕಾರ 2022. ಒಕ್ಕೂಟ ಬಜೆಟ್ 2022-23. ಬಜೆಟ್ ಅಟ್ ಎ ಗ್ಲಾನ್ಸ್ (ಆವರಣದಲ್ಲಿನ ಅಂಕಿಗಳು ಒಟ್ಟು ತೆರಿಗೆಯ ಶೇಕಡ ಪ್ರಮಾಣವನ್ನು ಪ್ರತಿನಿಧಿಸುತ್ತವೆ).

ಕೋಷ್ಟಕದಲ್ಲಿ ತೋರಿಸಿರುವಂತೆ ಒಕ್ಕೂಟ ಸರ್ಕಾರಕ್ಕೆ ಸಾಮಾನ್ಯ ಜನರು ನೀಡುವ ತೆರಿಗೆ (ಜಿಎಸ್‌ಟಿ) ಅಧಿಕ: ಶ್ರೀಮಂತರು ನೀಡುವ ತೆರಿಗೆ (ಕಾರ್ಪೋರೆಟ್ ತೆರಿಗೆ) ಕಡಿಮೆ. ಇದು ಖಚಿತವಾಗಿ ಒಕ್ಕೂಟ ಸರ್ಕಾರದ ಪ್ರತಿಗಾಮಿ ತೆರಿಗೆ ನೀತಿಯನ್ನು ಎತ್ತಿತೋರಿಸುತ್ತದೆ. ನಮ್ಮ ಆರ್ಥಿಕತೆಯಲ್ಲಿ ಕಾರ್ಪೋರೆಟ್ ವಲಯದ ಲಾಭವು ವಿಪರೀತ ಏರಿಕೆಯಾಗುತ್ತಿದೆ. ಇದರಿಂದ ಆರ್ಥಿಕತೆಯಲ್ಲಿ ವರಮಾನ ಅಸಮಾನತೆಯು ಹೆಚ್ಚಾಗುತ್ತಿದೆ. ಇದಕ್ಕೆ 2023ರ ಆಕ್ಸ್‌ಫಾಮ್ ವರದಿಯನ್ನು ನೋಡಬಹುದು. ಇದರ ಪ್ರಕಾರ ದೇಶದಲ್ಲಿನ 100 ಅತಿಶ್ರೀಮಂತರ ಸಂಪತ್ತು ರೂ.54.12 ಲಕ್ಷ ಕೋಟಿ. ಈ ಸಂಪತ್ತಿನ ಮೇಲೆ ಶೇ.10ರಷ್ಟು ತೆರಿಗೆ ವಿಧಿಸಿದರೆ ರೂ.5.41 ಲಕ್ಷ ಕೋಟಿ ಸಂಗ್ರಹವಾಗುತ್ತದೆ. ನಮ್ಮ ಸರ್ಕಾರಗಳ ಸಾಲದ ಅವಲಂಬನೆಯು ಕಡಿಮೆಯಾಗಬೇಕು ಎಂದಾದರೆ ಕಾರ್ಪೋರೆಟ್ ವಲಯದ ಮೇಲೆ ಒಕ್ಕೂಟ ಸರ್ಕಾರ ಪ್ರತ್ಯಕ್ಷ ತೆರಿಗೆಗಳ ದರಗಳನ್ನು ಹೆಚ್ಚಿಸಬೇಕು ಮತ್ತು ರದ್ದುಪಡಿಸಿರುವ ಸಂಪತ್ತಿನ ತೆರಿಗೆಯನ್ನು ಮತ್ತೆ ಜಾರಿಗೆ ತರಬೇಕು. ಇದರಿಂದ ಒಕ್ಕೂಟ ಸರ್ಕಾರದ ರೆವಿನ್ಯೂ ಹೆಚ್ಚುತ್ತದೆ ಮತ್ತು ರಾಜ್ಯಗಳಿಗೆ ಹಂಚಬಹುದಾದ ತೆರಿಗೆ ರಾಶಿಯು ಅಧಿಕವಾಗುತ್ತದೆ. ಇಂದಿನ ರಾಜ್ಯ ಸರ್ಕಾರಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಒಕ್ಕೂಟ ತತ್ವದ ನಿಜ ಅನುಸರಣೆಯೇ ಪರಿಹಾರ.

ಕರ್ನಾಟಕ ಸರ್ಕಾರವು ಬಜೆಟ್ಟಿನಲ್ಲಿ ಮತ್ತು ಬಜೆಟ್ಟೇತರ ಕ್ರಮಗಳಲ್ಲಿ ಅತಿಯಾಗಿ ತನ್ನ ಅಭಿವೃದ್ಧಿಯೇತರ ವೆಚ್ಚಗಳನ್ನು ಮಾಡುತ್ತಿದೆ. ಉದಾ: ವಿವಿಧ ಬಲಾಢ್ಯ ಜಾತಿ ನಿಗಮಗಳಿಗೆ ನೂರಾರು ಕೋಟಿ ಅನುದಾನ ನೀಡುತ್ತಿದೆ. ಧಾರ್ಮಿಕ ಚಟುವಟಿಕೆಗಳಿಗೆ ಹಣವನ್ನು ನೀಡುತ್ತಿದೆ. ಮಣ್ಣಿನ ರಕ್ಷಣೆಗೆ ಕೃಷಿ ವಿಶ್ವವಿದ್ಯಾಲಯಗಳಿಗೆ ಅನುದಾನ ನೀಡುವುದಕ್ಕೆ ಪ್ರತಿಯಾಗಿ ಜಗ್ಗಿ ವಾಸುದೇವ ಎನ್ನುವವನಿಗೆ ನೂರಾರು ಕೋಟಿ ಹಣ ನೀಡುತ್ತಿದೆ. ಅಗತ್ಯವಿರಲಿ- ಇಲ್ಲದಿರಲಿ ಮೂಲಸೌಕರ್ಯಗಳ ಮೇಲೆ (ರಸ್ತೆ, ಕಟ್ಟಡಗಳು) ಸಾವಿರಾರು ಕೋಟಿ ಹಣ ವ್ಯಯಮಾಡುತ್ತಿದೆ. ವಿತ್ತೀಯ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ.

ಸಾರ್ವಜನಿಕ ಸಾಲ ಎನ್ನುವುದು ಔಷಧಿಯಾಗಬೇಕೇ ವಿನಾ ಆಹಾರವಾಗಬಾರದು. ಕರ್ನಾಟಕ ಸರ್ಕಾರವು ಇಂದು ಹಣಕಾಸು ಕೊರತೆಯನ್ನು ಅನುಭವಿಸುತ್ತಿದ್ದರೆ, ಸಾಲದ ಬಲೆಯಲ್ಲಿ ಸಿಲುಕಿದ್ದರೆ ಇದಕ್ಕೆ ಮೊದಲ ಪ್ರಮುಖ ಕಾರಣ ಒಕ್ಕೂಟ ಸರ್ಕಾರ ಕರ್ನಾಟಕದ ಬಗ್ಗೆ ಅನುಸರಿಸುತ್ತಿರುವ ಮಲತಾಯಿ ಧೋರಣೆ. ಎರಡನೆಯದು ವಿತ್ತೀಯ ಶಿಸ್ತನ್ನು ಕರ್ನಾಟಕ ಪಾಲಿಸುತ್ತಿಲ್ಲದಿರುವುದು. ಮೂರನೆಯದಾಗಿ ಅದು ಒಕ್ಕೂಟ ಸರ್ಕಾರದಿಂದ ಸಂವಿಧಾನದತ್ತವಾಗಿ ಬರಬೇಕಾದ ಹಣಕಾಸು ಸಂಪನ್ಮೂಲವನ್ನು ಒತ್ತಾಯಿಸುತ್ತಿಲ್ಲದಿರುವುದು. (ಉದಾ: 15ನೆಯ ಹಣಕಾಸು ಆಯೋಗವು 2020-21ರಲ್ಲಿ ರಾಜ್ಯಕ್ಕೆ ವಿಶೇಷ ಅನುದಾನ ರೂ.5495 ಕೋಟಿ ಶಿಫಾರಸ್ಸು ಮಾಡಿತ್ತು. ಇದನ್ನು ಒಕ್ಕೂಟದ ವಿತ್ತ ಮಂತ್ರಿ ತಿರಸ್ಕರಿಸಿದರು. ಕರ್ನಾಟಕವು ಇದನ್ನು ಪಡೆಯುವಲ್ಲಿ ವಿಫಲವಾಯಿತು). ಎಲ್ಲಿಯವರೆಗೆ ಕರ್ನಾಟಕ ಸರ್ಕಾರವು ಒಕ್ಕೂಟದ ಎದುರು ಅಡಿಯಾಳಾಗಿ ವ್ಯವಹರಿಸುತ್ತದೆಯೋ ಮತ್ತು ತನ್ನ ಸಂವಿಧಾನದತ್ತ ಸ್ವಾಯತ್ತ ಹಕ್ಕುಗಳನ್ನು ಒತ್ತಾಯಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಸಮಸ್ಯೆಗಳು ನಿವಾರಣೆಯಾಗುವುದಿಲ್ಲ. ಮುಂದೆ 2023-24ರ ಬಜೆಟ್ಟಿನಲ್ಲಿ ಒಕ್ಕೂಟ ಸರ್ಕಾರವು ಕರ್ನಾಟಕಕ್ಕೆ ಏನೆಲ್ಲ ಅನ್ಯಾಯ ಮಾಡುತ್ತಿದೆ ಎಂಬುದರ ಶ್ವೇತ್ರಪತ್ರವನ್ನು ಕರ್ನಾಟಕ ಸರ್ಕಾರ ಪ್ರಕಟಿಸಬೇಕು. ಹೆಚ್ಚುತ್ತಿರುವ ಸಾಲವನ್ನು ನಿಯಂತ್ರಿಸುವುದಕ್ಕೆ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬುದರ ವಿವರವನ್ನು ನೀಡಬೇಕು. ಹಾದಿಬೀದಿ ಯೋ(ಭೋ)ಗಿಗಳಿಗೆ ಸರ್ಕಾರ ಹಣ ನೀಡಬಾರದು. ರಾಜ್ಯದಲ್ಲಿ ತೆರಿಗೆ ತಕರಾರುಗಳಲ್ಲಿ ಸಿಲುಕಿರುವ ಬಾಕಿ 2022-23ರಲ್ಲಿ ರೂ.19755ಕೋಟಿ ಎನ್ನಲಾಗಿದೆ. ಇದನ್ನು ವಸೂಲು ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು. ಅನಗತ್ಯವಾಗಿ ಬಸ್ಸುಗಳ ಮೇಲೆ, ಪತ್ರಿಕೆಗಳಲ್ಲಿ, ರಸ್ತೆ ತಂಗುದಾಣಗಳಲ್ಲಿ ಜಾಹೀರಾತು ನೀಡುವುದನ್ನು ನಿಲ್ಲಿಸಿ ಹಣ ಉಳಿತಾಯ ಮಾಡಬೇಕು.

ಡಾ. ಟಿ. ಆರ್. ಚಂದ್ರಶೇಖರ

ಡಾ. ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿ.ಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿರುವ ಮುಂಚೂಣಿ ಚಿಂತಕರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...