ಮಾಜಿ ಉಪಮುಖ್ಯಮಂತ್ರಿ, ದಲಿತ ನಾಯಕ ಡಾ.ಜಿ.ಪರಮೇಶ್ವರ್ ಅವರ ಮೇಲೆ ನಡೆದಿರುವ ಕಲ್ಲು ತೂರಾಟಕ್ಕೆ ರಾಜ್ಯ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕೇಂದ್ರ ಗೃಹಸಚಿವರ ಹೇಳಿಕೆಯನ್ನು ಉಲ್ಲೇಖಿಸಿ, ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದೆ.
“ರಾಜ್ಯದಲ್ಲಿ ಆಗಲಿರುವ ಗಲಭೆಗಳಿಗೆ ಇದು ಪೂರ್ವ ಭಾವಿ ತಯಾರಿಯೇ?” ಇದು ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಕೊರಟಗೆರೆ ತಾಲ್ಲೂಕಿನ ಭೈರೇನಹಳ್ಳಿಯಲ್ಲಿ ಶುಕ್ರವಾರ ಪ್ರಚಾರದ ವೇಳೆ ಕಲ್ಲು ತೂರಿದ್ದು, ಪರಮೇಶ್ವರ ಗಾಯಗೊಂಡಿದ್ದಾರೆ. ತಲೆಗೆ ಗಾಯವಾಗಿದ್ದು, ಸಮೀಪದ ಅಕ್ಕಿರಾಮಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ನಂತರ ಅವರನ್ನು ತುಮಕೂರಿನ ಸಿದ್ಧಾರ್ಥ ಮೆಡಿಕಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಘಟನೆಯ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
“ಜಿ. ಪರಮೇಶ್ವರ ಅವರ ಮೇಲೆ ಷಡ್ಯಂತ್ರ ರೂಪಿಸಿ ಕಲ್ಲು ತೂರಿದ ಘಟನೆಯು ಕರ್ನಾಟಕವೇ ತಲೆತಗ್ಗಿಸುವಂತಹದ್ದು. ವಿರೋಧ ಪಕ್ಷಗಳ ನಾಯಕರ ಮೇಲೆ ಮೊದಲಿಂದಲೂ ವ್ಯವಸ್ಥಿತವಾಗಿ ದಾಳಿ ನಡೆಸಲಾಗುತ್ತಿದೆ. ಇದು ಅಮಿತ್ ಶಾ ಅವರ ‘ಗಲಭೆ ನಡೆಯುತ್ತದೆ’ ಎಂಬ ಎಚ್ಚರಿಕೆಯ ಹಿಂದಿನ ಪೂರ್ವಭಾವಿ ತಯಾರಿಗಳೇ? ದಲಿತ ನಾಯಕರ ಮೇಲೆ ಬಿಜೆಪಿಗೆ ಏಕಿಷ್ಟು ದ್ವೇಷ?” ಎಂದು ಪ್ರಶ್ನಿಸಿದೆ.
ರಾಜ್ಯದ ಕಾನೂನು ಸುವ್ಯವಸ್ಥೆಯನ್ನ ಯಾವ ಹಂತಕ್ಕೆ ತಂದಿಟ್ಟಿದ್ದೀರಿ @JnanendraAraga ಅವರೇ,@siddaramaiah ಅವರ ಮೇಲೆ ಮೊಟ್ಟೆ ದಾಳಿ ಮಾಡಿದವರ ಮೇಲೆ ಕ್ರಮವಿಲ್ಲ,@DrParameshwara ಅವರಿಗೆ ಸೂಕ್ತ ರಕ್ಷಣೆ ಇಲ್ಲ.
ಇದೆಲ್ಲವೂ ಬಿಜೆಪಿಯ ವೈಫಲ್ಯವೋ, ಷಡ್ಯಂತ್ರವೋ?
ಅಮಿತ್ ಶಾ ಅವರ ನಿರ್ದೇಶನದಂತೆ "ಗಲಭೆಯುಕ್ತ ಕರ್ನಾಟಕ" ಮಾಡಲು ತಯಾರಿಯೇ? pic.twitter.com/CiYCgonBE2— Karnataka Congress (@INCKarnataka) April 28, 2023
“ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಯಾವ ಹಂತಕ್ಕೆ ತಂದಿಟ್ಟಿದ್ದೀರಿ ಆರಗ ಜ್ಞಾನೇಂದ್ರ ಅವರೇ? ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ದಾಳಿ ಮಾಡಿದವರ ಮೇಲೆ ಕ್ರಮವಿಲ್ಲ. ಪರಮೇಶ್ವರ ಅವರಿಗೆ ಸೂಕ್ತ ರಕ್ಷಣೆ ಇಲ್ಲ. ಇದೆಲ್ಲವೂ ಬಿಜೆಪಿಯ ವೈಫಲ್ಯವೋ, ಷಡ್ಯಂತ್ರವೋ? ಅಮಿತ್ ಶಾ ಅವರ ನಿರ್ದೇಶನದಂತೆ ‘ಗಲಭೆಯುಕ್ತ ಕರ್ನಾಟಕ’ ಮಾಡಲು ತಯಾರಿಯೇ?” ಎಂದು ಕೇಳಿದಿದೆ.
“ಉತ್ತರ ಪ್ರದೇಶ, ಬಿಹಾರದಿಂದ ಬಿಜೆಪಿ ಬಾಡಿಗೆ ಗೂಂಡಾಗಳನ್ನು ಕರೆಸಿ ಪ್ರತಿ ಕ್ಷೇತ್ರಗಳಲ್ಲಿ ಬಿಟ್ಟಿರುವುದು ವರದಿಯಾಗಿದೆ. ಈ ಗೂಂಡಾಪಡೆ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಷಡ್ಯಂತ್ರ ನಡೆಸಿರುವುದಕ್ಕೆ ಜಿ. ಪರಮೇಶ್ವರ ಅವರ ಮೇಲಿನ ಹಲ್ಲೆಯೇ ಸಾಕ್ಷಿ. ಚುನಾವಣಾ ಆಯುಕ್ತರು ಶಾಂತಿಯುತ ಮತದಾನ ನಡೆಸಲು ಕ್ರಮವಹಿಸಬೇಕು” ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಗಲಭೆ ಉಂಟಾಗುತ್ತದೆ ಎಂಬ ಗೃಹ ಸಚಿವ ಅಮಿತ್ ಶಾ ಹೇಳಿಕೆ ವಿರುದ್ಧ ಕಾಂಗ್ರೆಸ್ ಈಗಾಗಲೇ ದೂರು ಸಲ್ಲಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಮತ್ತು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರಾದ ಗೌರವ್ ವಲ್ಲಭ್‌ರವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತೇರದಾಳದಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಅಮಿತ್ ಶಾ, ”ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಿದರೆ ರಾಜ್ಯವು ಗಲಭೆಗಳಿಂದ ತುಂಬಿಹೋಗುತ್ತದೆ. ವಂಶಾಡಳಿತ ಮುನ್ನೆಲೆಗೆ ಬರುತ್ತದೆ” ಎಂದು ಹೇಳಿದ್ದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಿಂಸಾಚಾರ ನಡೆಯುತ್ತದೆ ಎಂದು ರಾಜ್ಯದ ಮತದಾರರಿಗೆ ಬೆದರಿಕೆ ಒಡ್ಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಬೆಂಗಳೂರಿನ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.
ಈ ಹೇಳಿಕೆಯನ್ನು ಖಂಡಿಸಿರುವ ಜೈರಾಮ್ ರಮೇಶ್ ಅವರು, ”ಭಯ ಹುಟ್ಟುಹಾಕುವ ಸಲುವಾಗಿಯೇ ಇಂತಹ ಹೇಳಿಕೆ ನೀಡಲು ನಾಚಿಕೆಯಾಗುವುದಿಲ್ಲವೇ?” ಎಂದು ಪ್ರಶ್ನೆ ಮಾಡಿದ್ದಾರೆ.
“ಅಮಿತ್ ಶಾ ಹೇಳಿಕೆಯು ಅತ್ಯಂತ ನಿರ್ಲಜ್ಜತನದ ಮತ್ತು ಬೆದರಿಸುವ ಹೇಳಿಕೆಯಾಗಿದೆ. ಭಾರತದ ಮೊಟ್ಟಮೊದಲ ಗೃಹ ಸಚಿವರಿಂದ ನಿಷೇಧಿಸಲ್ಪಟ್ಟ ಸಂಘಟನೆ(ಆರ್ ಎಸ್ಎಸ್)ಗೆ ನಿಷ್ಠರಾಗಿರುವ ಕೇಂದ್ರ ಗೃಹ ಸಚಿವರು ಈಗ ಚುನಾವಣಾ ಪ್ರಚಾರದ ಸಮಯದಲ್ಲಿ ಸೋಲಿನ ಆತಂಕದಿಂದ ಬೆದರಿಕೆಗಳನ್ನು ಹಾಕುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿರಿ: ಬಿಜೆಪಿ ಬಹುಮತ ಪಡೆಯುವುದಿಲ್ಲ ಎಂಬುದನ್ನು ಧ್ವನಿಸಿತೇ ಪ್ರೀತಂಗೌಡರ ಭಾಷಣ?


