ಬಿಬಿಎಂಪಿಯ ಕಳ್ಳಾಟ ಮತ್ತು ಕಳಪೆ ಕಾಮಗಾರಿಗಳಿಂದಾಗಿ ರಸ್ತೆಗಳು ಮಳೆನೀರಿನಲ್ಲಿ ತೋಯ್ದು ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಹೆಚ್ಚು ವಾಹನ ದಟ್ಟಣೆ ಇರುವ ನಗರದಲ್ಲಿ ಅಫಘಾತಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿವೆ. ಸಾರ್ವಜನಿಕರು ಅಪಘಾತದ ಭೀತಿಯಿಂದಲೇ ವಾಹನ ಚಲಾಯಿಸುವಂತಹ ಭಯದ ವಾತಾವರಣ ಬೆಂಗಳೂರಿನಲ್ಲಿ ಸೃಷ್ಟಿಯಾಗಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಜಿಲ್ಲಾಧ್ಯಕ್ಷರಾದ ಮೋಹನ್ ದಾಸರಿ ಆರೋಪಿಸಿದ್ದಾರೆ.
ಈ ಕುರಿತು ಇಂದು ಬೆಂಗಳೂನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಸ್ತೆಗುಂಡಿಗಳಲ್ಲಿ ನಿಂತ ನೀರು ಕೊಳಚೆಯಾಗಿ, ಕಸವು ರಸ್ತೆ ಬದಿಯೇ ಕೊಳೆತು ಸಾಂಕ್ರಮಿಕ ರೋಗಗಳನ್ನು ಹರಡುವ ವೈರಾಣುಗಳ ಉತ್ಪಾದನಾ ತಾಣವಾಗಿದೆ. ಇದೆಲ್ಲರಿಂದಾಗಿ ಬೆಂಗಳೂರಿನಾದ್ಯಂತ ಡೆಂಘೀ ಜ್ವರ ತಾಂಡವವಾಡುತ್ತಿದ್ದು, ಬೆಂಗಳೂರಿನ 62 ವಾರ್ಡ್ ಗಳು ಡೆಂಘೀ ಪೀಡಿತ ವಾರ್ಡ್ ಗಳಪಟ್ಟಿಯಲ್ಲಿವೆ. 2019ರ ಜನವರಿಯಿಂದ ಇಲ್ಲಿಯವರೆಗೆ 5352 ಡೆಂಘೀ ಪ್ರಕರಣಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ದಾಖಲಾಗಿವೆ. ಒಂದು ಕೋಟಿಗೂ ಅಧಿಕ ಜನರಿರುವ ಬೆಂಗಳೂರಿನಲ್ಲಿ ಜನರ ಆರೋಗ್ಯಕ್ಕಾಗಿ 2018-19ನೇ ಸಾಲಿನಲ್ಲಿ 100 ಕೋಟಿ ರೂಗಳಿಗಿಂತ ಹೆಚ್ಚು ಅನುದಾನವನ್ನು ಮೀಸಲಿಟ್ಟಿದ್ದು ಕೇವಲ 31 ಕೋಟಿ ರೂಗಳನ್ನು ಖರ್ಚುಮಾಡಿದೆ. ಇದರಲ್ಲಿ ಸರಾಸರಿ 29 ರೂಗಳನ್ನಷ್ಟೇ ಒಬ್ಬ ವ್ಯಕ್ತಿಯ ಆರೋಗ್ಯಕ್ಕೆ ಖರ್ಚು ಮಾಡಿದೆ. ಇಂತಹ ನಿರ್ಲಕ್ಷ್ಯವನ್ನು ನೋಡಿದರೆ, ಬಿಬಿಎಂಪಿಯ ಕಾರ್ಪೋರೇಟರ್ ಗಳೇ ಅನಾರೋಗ್ಯಕ್ಕೆ ತುತ್ತಾಗಿ ಕೆಲಸ ಮಾಡಲಾಗದೆ ಸೊರಗಿಹೋಗಿದ್ದಾರೆಯೇ ಎಂದೆನಿಸುತ್ತದೆ ಎಂದು ಅಸಮಾನಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಗುಂಡಿ ಬಿದ್ದ ರಸ್ತೆಗಳು, ಕಸದ ರಾಶಿಗಳಿಂದ ಬೆಂಗಳೂರು ತುಂಬಿಹೋಗಿದೆ. ಮಾರೇನಹಳ್ಳಿ, ಬೆಲ್ಲಹಳ್ಳಿ ಮತ್ತು ಮಿಟಗಾನಹಳ್ಳಿ ಕ್ವಾರಿಗಳು ಭರ್ತಿಯಾಗಿದ್ದು, ಕಸವನ್ನು ವಿಲೇವಾರಿ ಮಾಡಲು ಪರ್ಯಾಯ ಜಾಗವಿಲ್ಲದೆ, ಕಸವನ್ನು ನಗರದ ಬೀದಿ ಬೀದಿಗಳಲ್ಲಿ ಗುಡ್ಡೆ ಹಾಕಲಾಗಿದ್ದು, ಬೀದಿಗಳೇ ಕಸ ವಿಲೇವಾರಿ ಘಟಕಗಳಂತಾಗಿವೆ. NGT (ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ)ಯು ಪ್ರತಿ ವಾರ್ಡ್ ನಲ್ಲಿಯೂ ಜೈವಿಕ ಮತ್ತು ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಬೇಕು ಎಂದು ಹೇಳಿತ್ತು. ಆದರೆ ಅದನ್ನು ಪ್ರಾಯೋಗಿಕವಾಗಿ ಜಾರಿ ಮಾಡಲು ಸಾಧ್ಯವಿಲ್ಲ, ಎಲ್ಲಾ ವಾರ್ಡ್ ಗಳಲ್ಲಿಯೂ ನಮ್ಮಲ್ಲಿ ಜಾಗವಿಲ್ಲ ಎಂದು ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣಾ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಬೇಜವಾಬ್ದಾರಿ ಹೇಳಿಕೆಯನ್ನು ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಕ್ಕೊತ್ತಾಯಗಳು
• ರಾಜ್ಯ ಸರ್ಕಾರ ತಡೆಹಿಡಿದಿರುವ ಬಿಬಿಎಂಪಿ ಬಜೆಟನ್ನು ತುರ್ತಾಗಿ ಅನುಷ್ಠಾನ ಮಾಡಬೇಕು.
• ಬೆಂಗಳೂರಿನ ಬಗ್ಗೆ ಕಾಳಜಿ ಇರುವ ನಗರಾಭಿವೃದ್ಧಿ ಸಚಿವರನ್ನು ಕೂಡಲೇ ನೇಮಕ ಮಾಡಿ, ಬೆಂಗಳೂರಿನ ಸಮಸ್ಯೆಗಳನ್ನು ಬಗೆಹರಿಸಲು ಕಾರ್ಯೋನ್ಮುಖರಾಗಬೇಕು.
• ಎಲ್ಲಾ ವಾರ್ಡ್ ಗಳಲ್ಲಿಯೂ ಜೈವಿಕ ಮತ್ತು ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಿ ವೈಜ್ಞಾನಿಕವಾಗಿ ಕಸ ನಿರ್ವಹಣೆ ಮಾಡಬೇಕು.
• ಕಸ ವಿಲೇವಾರಿಯ ಟೆಂಡರ್ ಪ್ರಕ್ರಿಯೆಯನ್ನು ಇನ್ನೂ ಸಮಯವಿಳಂಬ ಮಾಡದೆ ಪ್ರಕ್ರಿಯೆ ಮುಗಿಸಬೇಕು.
• ಪ್ರತಿ ವಾರ್ಡ್ಗಳಿಗೂ ಅಗತ್ಯವಿರುವಷ್ಟು ಪೌರ ಕಾರ್ಮಿಕರನ್ನು ನೇಮಿಸಬೇಕು. ಅವರು ಸುರಕ್ಷಿತವಾಗಿ ಕೆಲಸ ಮಾಡಲು ಬೇಕಾಗಿರುವ ಸಾಮಗ್ರಿಗಳನ್ನು ಒದಗಿಸಬೇಕು.
• ಬೆಂಗಳೂರು ಜನರ ಆರೋಗ್ಯಕ್ಕೆ ಮೀಸಲಿಟ್ಟಿರುವ ಹಣವನ್ನು ಸಮರ್ಪಕವಾಗಿ ಬಳಸಿ, ಡೆಂಘೀ ನಿಯಂತ್ರಣಕ್ಕೆ ಮುಂದಾಗಬೇಕು.
• ರಸ್ತೆಗಳಲ್ಲಿರುವ ಗುಂಡಿಗಳನ್ನು ತುರ್ತಾಗಿ ಮುಚ್ಚಿಸಬೇಕು. ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರನ್ನು ಮುಂದಿನ ಟೆಂಡರ್ ಗಳಿಗೆ ನಿರ್ಭಂದಿಸಬೇಕು
ಇವಿಷ್ಟು ಹಕ್ಕೊತ್ತಾಯಗಳ ಈಡೇರಿಕೆಗೆ ಆಮ್ ಆದ್ಮಿ ಪಕ್ಷವು ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.


