Homeಕರ್ನಾಟಕಅಧಿಕಾರಕ್ಕೆ ಸತ್ಯ ನುಡಿದವರು; ಬಾಲನ್ ಎಂಬ ಬೆಂಕಿ ಚೆಂಡು

ಅಧಿಕಾರಕ್ಕೆ ಸತ್ಯ ನುಡಿದವರು; ಬಾಲನ್ ಎಂಬ ಬೆಂಕಿ ಚೆಂಡು

- Advertisement -
- Advertisement -

ಆ ಒಂದು ದಿನ ದಿಢೀರನೆ ಸ್ಫೋಟಿಸಿದ ಸದ್ದು ಕೇಳಿಬರುತ್ತದೆ. ಕಾರ್ಮಿಕರ ಕುಟುಂಬದವರೆಲ್ಲ ಓಡಿಹೋಗಿ ನೋಡಿದಾಗ ಆತಂಕ ಕಾದಿರುತ್ತದೆ. ಏಳೆಂಟು ಮಂದಿ ಕಾರ್ಮಿಕರು ಹತರಾಗಿದ್ದಾರೆ. ಅಂಬೂರು ಸುಬ್ಬ ಸತ್ತ, ಅರಣಿ ಸೀನಾ ಸತ್ತ, ಇರೋಡು ಕೃಷ್ಣಸ್ವಾಮಿ ಜೀವಂತವಿಲ್ಲ – ಹೀಗೆ ಆಕ್ರಂದನ ಮೊಳಗುತ್ತದೆ. ಹೆಣಗಳೂ ಸಿಗುತ್ತಿಲ್ಲ. ಕೆಲವರ ಕೈ ಹೋಯಿತು, ಕಾಲು ಹೋಯಿತು. ಭೀಕರ ಕಾಯಿಲೆಗಳಿಗೆ ತುತ್ತಾದರು. ಇಂತಹ ಭಯಂಕರ ಸನ್ನಿವೇಶದಿಂದ ಸಿಡಿದುಬಂದ ಕಿಡಿ ಎಸ್.ಬಾಲನ್.

ಕೋಲಾರದ ಚಿನ್ನದ ಗಣಿಯ ಕಾರ್ಮಿಕರೊಬ್ಬರ ಮಗ ಬಾಲನ್. ನಿಜವಾದ ಹೆಸರು ಬಾಲಕೃಷನ್ ಆದರೂ ತಮಿಳುನಾಡು ಹಾಗೂ ಕರ್ನಾಟಕಕ್ಕೆ ಬಾಲನ್ ಎಂದೇ ಚಿರಪರಿಚಿತ. ಬಾಲ್ಯದಲ್ಲಿ ‘ಬಾಲ’ ಎಂದೇ ಸಮುದಾಯದಲ್ಲಿ ಪ್ರೀತಿಪಾತ್ರರಾಗಿದ್ದ ಅವರು, ಆ ಸ್ಫೋಟದ ಬಳಿಕ ಯುವ ಮುಖಂಡರಾಗಿ ಹೊರಹೊಮ್ಮುತ್ತಾರೆ. ಆಗಿನ್ನೂ ಅವರ ವಯಸ್ಸು 15 ವರ್ಷ!

ಪಿಯುಸಿ ಓದುವಾಗಲೇ ಸಂಘಟನೆ, ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಆ ಬ್ಲಾಸ್ಟ್ ಘಟನೆ ನಡೆದಾಗ ಕೆಜಿಎಫ್ ಬಂದ್ ಮಾಡಿಸಿದ್ದರು. ಸಾವಿರಾರು ಹುಡುಗರು ಮೆರವಣಿಗೆ ಹೊರಟರು. ಲೀಡರ್ ಯಾರೆಂದು ಪೊಲೀಸರು ಹುಡುಕುತ್ತಿದ್ದರು. ಎಲ್ಲರೂ ‘ಬಾಲ, ಬಾಲ’ ಎಂದು ಹೆಸರು ಹೇಳತೊಡಗಿದರು. ಬಾಲ ಎಂದರೆ ಯಾರೋ ಇಪ್ಪತ್ತೋ, ಇಪ್ಪತ್ತೈದು ವರ್ಷದವನಿರಬಹುದೆಂದು ಪೊಲೀಸರು ಭಾವಿಸಿದ್ದರು. ಆದರೆ ಅಲ್ಲಿ ಲೀಡರ್ ಎನಿಸಿಕೊಂಡಿದ್ದು ಇನ್ನೂ ಮೀಸೆಯೂ ಚಿಗುರದ, ಹದಿನೈದು ವರ್ಷದ ಬಾಲ(ಕ). ಪೊಲೀಸರು ಆ ಬಾಲ(ಕ)ನೊಂದಿಗೆಯೇ ಮಾತುಕತೆ ನಡೆಸಿದರು.

ಹೀಗೆ ಬೆಳೆದುಬಂದ ಅವರು ಕಾರ್ಮಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡರು. ಜನರು ಪ್ರೀತಿಯಿಂದ ‘ಬಾಲನ್’ ಎಂದು ಕರೆದರು.

ಬಾಲನ್ ಬಾಲ್ಯದ ವಾತಾವರಣ ಹೇಗಿತ್ತು: ಹುಟ್ಟಿ ಬೆಳೆದಿದ್ದು ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ. ಅದು ಕಾರ್ಮಿಕರು ವಾಸವಿದ್ದ ಪ್ರದೇಶ. ದೊಡ್ಡದೊಡ್ಡ ಬಂಗಲೆಗಳಲ್ಲಿ ಬ್ರಾಹ್ಮಣ ಹಾಗೂ ಇತರೆ ಸವರ್ಣೀಯರು ವಾಸವಿದ್ದರು. ಅಲ್ಲಿನ ಡೈರೆಕ್ಟರ್, ಮ್ಯಾನೇಜಿಂಗ್ ಡೈರೆಕ್ಟರ್, ಎಲ್ಲ ಅಧಿಕಾರಿಗಳು ಕೂಡ ಬ್ರಾಹ್ಮಣರು ಅಥವಾ ಮುಂದುವರಿದ ಸಮುದಾಯಗಳಿಗೇ ಸೇರಿದವರಾಗಿದ್ದರು. ಶೂದ್ರರು ಮತ್ತು ದಲಿತರು ಲೈನ್ ಮನೆಗಳಲ್ಲಿ ವಾಸವಿದ್ದರು. ಒಂದೊಂದು ಗುಡಿಸಲಿನಲ್ಲೂ ಐದರಿಂದ ಎಂಟು ಜನ ಇರುತ್ತಿದ್ದರು. ಪ್ರತಿಯೊಂದಕ್ಕೂ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ. ಬೆಳಿಗ್ಗೆ ಟಾಯ್ಲೆಟ್‌ಗೂ ಕ್ಯೂ, ನೀರಿಗೂ ಕ್ಯೂ, ರೇಷನ್‌ಗೆ ಕ್ಯೂ, ಸೌದೆಗೂ ಕ್ಯೂ.
ಬಾಲನ್ ಅವರ ತಂದೆ ಗಣಿ ಕಾರ್ಮಿಕರಾಗಿದ್ದರು. ಆವರ ಸಂಬಳ ಹದಿನೈದರಿಂದ ಇಪ್ಪತ್ತು ರೂ ಇತ್ತು. ಚಪ್ಪಲಿ ಕೂಡ ಸರಿಯಾಗಿ ಇಲ್ಲದ ಬಾಲನ್ ಕಷ್ಟಪಟ್ಟು ಪದವೀಧರರಾದರು.

ಮಾರ್ಕ್ಸ್, ಅಂಬೇಡ್ಕರ್, ಪೆರಿಯಾರ್
ವಿದ್ಯಾರ್ಥಿ ದೆಸೆಯಲ್ಲಿಯೇ ಮಾರ್ಕ್ಸ್‌ವಾದದ ಮೇಲೆ ಭಾರಿ ಆಸಕ್ತಿ ತೆಳೆದವರು ಬಾಲನ್. ನಂತರ ಪೆರಿಯಾರ್, ಅಂಬೇಡ್ಕರ್ ಪ್ರಭಾವಕ್ಕೂ ಒಳಗಾದರು. ಕಮ್ಯುನಿಸ್ಟ್ ಪಕ್ಷವನ್ನು ಸೇರಿಕೊಂಡರು. ಆದರೆ ಕಮ್ಯುನಿಸ್ಟ್ ಪಕ್ಷದೊಂದಿಗೆ ಹೆಚ್ಚು ಕಾಲ ಇರಲಿಲ್ಲ. “ಹೋರಾಟ ಮಾಡಬೇಕು, ಸಂಘಟನೆ ಮಾಡಬೇಕೆಂಬ ಆಸೆ ಇತ್ತು. ಆದರೆ ಆ ಮುಖಂಡರು ನನ್ನನ್ನು ಹೊಡೆದಾಟಕ್ಕೆ ಹೋಗುವಂತೆ ಹೇಳುತ್ತಿದ್ದರು. ಅವನನ್ನು ಹೊಡೆಯಿರಿ, ಇವನನ್ನು ಹೊಡೆಯಿರಿ ಎಂದು ಕೆಟ್ಟದಾರಿಗೆ ಕರೆದೊಯ್ದರು. ಇದರಿಂದ ಬೇಸತ್ತು ನಾನು ಅವರಿಂದ ದೂರವಾದೆ” ಎನ್ನುತ್ತಾರೆ ಬಾಲನ್.

ಪಕ್ಷದ ಭಾಗವಾಗಿ ಹಲವು ಹೋರಾಟ ಸಂಘಟಿಸಿದರೂ ನಾಯಕರೆಂದು ಬಾಲನ್‌ರನ್ನು ಗುರುತಿಸಲಿಲ್ಲ. ಬೆಂಗಳೂರಿಗೆ ಹೋರಾಟಕ್ಕೆ ಬರುವಾಗಲೆಲ್ಲ ರೈಲ್ವೆ ಸ್ಟೇಷನ್‌ವರೆಗೂ ನಡೆದದ್ದನ್ನು, ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದ್ದನ್ನು, ದಿನವೆಲ್ಲ ನೀರು ಕುಡಿದು ಹೊಟ್ಟೆ ತುಂಬಿಸಿಕೊಂಡಿದ್ದು, ಘೋಷಣೆ ಕೂಗುತ್ತಾ ಹಾಡಿದ್ದನ್ನು ನೆನೆಯುತ್ತಾರೆ ಬಾಲನ್. ಹೋರಾಟದ ಬದುಕಿನ ನಡುವೆಯೇ ಕಾನೂನು ವಿದ್ಯಾರ್ಥಿಯಾದರು. ಈ ನಂತರದಲ್ಲಿ ಟ್ರೇಡ್ ಯೂನಿಯನ್‌ಗಳನ್ನು ಕಟ್ಟಬೇಕೆಂದು ನಿರ್ಧರಿಸಿ ಮುನ್ನಡೆದರು.

ಮೊಟ್ಟಮೊದಲಿಗೆ ಬಿಇಎಂಎಲ್ ಕಾಂಟ್ರಾಕ್ಟ್ ಲೇಬರ್ ಸಂಘಟನೆಯನ್ನು ರೂಪಿಸಿದರು. ಈ ಕಾರ್ಮಿಕರಿಗೆ 8 ರೂಪಾಯಿ ಸಂಬಳವಿತ್ತು. ಹೋರಾಟ ಫಲವಾಗಿ 16 ರೂಪಾಯಿಯಾಯ್ತು. ಅದೇ ಸಂದರ್ಭದಲ್ಲಿ ಮತ್ತೊಂದು ಕೈಗಾರಿಕೆಯ ನಾಲ್ಕು ಸಾವಿರ ಯುವಕರನ್ನು ಒಗ್ಗೂಡಿಸಿ ದೊಡ್ಡ ಮೆರವಣಿಗೆ ನಡೆಸಿದರು.
ರೈಲ್ವೆ ಗ್ಯಾಂಗ್‌ಮ್ಯಾನ್ ಸಂಘಟನೆಯನ್ನೂ ಮಾಡಿದರು. ಬಂಡೆ ಹೊಡೆಯುವವರು, ಕಟ್ಟಡ ಕಟ್ಟುವವರನ್ನು ಸಾವಿರಾರು ಸಂಖ್ಯೆಯಲ್ಲಿ ಒಟ್ಟುಗೂಡಿಸಿದರು. ಕಲ್ಲನ್ನು ಕತ್ತರಿಸಿ ಟ್ರಿಮ್ ಮಾಡುವವರಿಗೆ ಮೂರೂವರೆ ರೂಪಾಯಿ ಸಿಗುತ್ತಿತ್ತು. ಹೋರಾಟ ರೂಪಿಸಿ ಹನ್ನೆರಡೂವರೆ ರೂಪಾಯಿಗೆ ಹೆಚ್ಚಿಸಿದರು ಬಾಲನ್. ಕ್ವಾರಿ ಮಾಫಿಯಾಗಳು ಬಾಲನ್ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿದ್ದೂ ಉಂಟು.

ಬಿಜಿಎಂಎಲ್ ಕಾರ್ಮಿಕರ ಪರವಾಗಿ ದೊಡ್ಡ ಮಟ್ಟದಲ್ಲಿ ಹೋರಾಡಿದರು. ಎಲ್ಲ ಪಕ್ಷದವರು ಕಾರ್ಮಿಕರಿಗೆ ಸುಳ್ಳುಗಳನ್ನು ಹೇಳಿಕೊಂಡು ಬರುತ್ತಿದ್ದರು. ಸುಮಾರು ಐದಾರು ಸಾವಿರ ಕಾರ್ಮಿಕರನ್ನು ಒಂದುಗೂಡಿಸಿ ದೊಡ್ಡಮಟ್ಟದಲ್ಲಿ ಹೋರಾಟ ನಡೆಸಿದರು. ಈ ಹೋರಾಟದ ಭಾಗವಾಗಿ ಗೋಡೌನ್ ಲೂಟಿ ಮಾಡುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ನಾಲ್ಕೈದು ಸಾವಿರ ಕಾರ್ಮಿಕರು ಗೋಡೋನ್‌ಗೆ ನುಗ್ಗಿ ಅಕ್ಕಿಯನ್ನೆಲ್ಲ ಹೊತ್ತೊಯ್ದರು.

ಮರೆಯಲಾಗದ ಟಾಯ್ಲೆಟ್ ಪ್ರತಿಭಟನೆ
ಕೋಲಾರ ಗಣಿ ಮುಚ್ಚಿದ ಬಳಿಕ ಸುಮಾರು ಮೂರು ಲಕ್ಷ ಜನ ಬಳಸುವ ಸಾರ್ವಜನಿಕ ಟಾಯ್ಲೆಟ್‌ಗಳನ್ನು ಮುನ್ಸಿಪಾಲಿಟಿ ಬಂದ್ ಮಾಡಿತು. ಮಹಿಳೆಯರೆಲ್ಲ ಬಯಲು ಶೌಚಾಲಯಕ್ಕೆ ಹೋಗುವಂತಾಯಿತು. ಹೀಗಿದ್ದಾಗ ಮುನ್ಸಿಪಾಲಿಟಿಗೆ ಬಾಲನ್ ಎಚ್ಚರಿಕೆ ಕೊಟ್ಟರು. ಟಾಯ್ಲೆಟ್‌ಗಳನ್ನು ತೆರೆಯದಿದ್ದರೆ ನಾವು ಮುನ್ಸಿಪಾಲಿಟಿಯನ್ನೇ ಟಾಯ್ಲೆಟ್ ಆಗಿ ಬಳಸುತ್ತೇವೆ ಎಂದರು. ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸದ ಕಾರಣ ಮುನ್ಸಿಪಾಲಿಟಿಗೆ ಹೋಗಿ ಟಾಯ್ಲೆಟ್ ಮಾಡುವ ಹೋರಾಟ ನಡೆಸಲಾಯಿತು. ಆಗಲೂ ಬಗ್ಗಲಿಲ್ಲ. ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದರು. ಸಮಸ್ಯೆ ಬಗೆಹರಿಯಲಿಲ್ಲ. ಒಂದು ದಿನ ಮೂವತ್ತು ಬಕಿಟ್‌ಗಳಲ್ಲಿ ಕಕ್ಕಸ್ಸನ್ನು ತುಂಬಿಕೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಾವಿರಕ್ಕೂ ಹೆಚ್ಚು ಹುಡುಗರು ಜೊತೆಯಲ್ಲಿದ್ದರು. ಮೆರವಣಿಗೆ ಮಾಡಿಕೊಂಡು ಹೋಗಿ ಮುನ್ಸಿಪಾಲಿಟಿ ಕಮಿಷನರ್ ಕಾರಿನ ಮೇಲೆ ಕಕ್ಕಸ್ಸನ್ನು ಎರಚಲಾಯಿತು. ಪೊಲೀಸರು ಸಿಕ್ಕಾಪಟ್ಟೆ ಲಾಠಿ ಚಾರ್ಜ್ ಮಾಡಿದರು. ಪೊಲೀಸರಿಗೂ ಕಕ್ಕಸ್ಸನ್ನು ಎರಚಲಾಯಿತು. ಹೋರಾಟಗಾರರನ್ನು ಹಿಡಿದು ಲಾಕಪ್ ಹಾಕಿದರು. ಕೋಲಾರದಲ್ಲಿ ನಡೆಸಿದ ಈ ಹೋರಾಟವನ್ನೂ ಬಾಲನ್ ನೆನಪಿಸಿಕೊಳ್ಳುವುದು ಹೀಗೆ.

ಕೋಲಾರ ಜಿಲ್ಲೆಯ ಹಳ್ಳಿಹಳ್ಳಿಯನ್ನೂ ಬಾಲನ್ ಸುತ್ತಾಡಿದ್ದಾರೆ. ಅಸಂಘಟಿತ ವಲಯದ ಕಾರ್ಮಿಕರನ್ನು ಒಗ್ಗೂಡಿಸಬೇಕು ಎಂದು ಬೆಂಗಳೂರು, ಕೋಲಾರ, ಹುಬ್ಬಳ್ಳಿ, ಧಾರಾವಾಡ, ಗುಲ್ಬರ್ಗ ಹೀಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಓಡಾಡಿದ್ದಾರೆ. ಬೆಂಗಳೂರಿನಲ್ಲಿರುವ ಕ್ವಾರಿಗಳಿಗೆ ಹೋಗಿ ಅಲ್ಲಿನ ಕಾರ್ಮಿಕರನ್ನು ಸಂಘಟಿಸಿದ್ದಾರೆ. ಕೋಲಾರದಿಂದ ಬೆಂಗಳೂರಿಗೆ ಸುಮಾರು ಮೂವತ್ತರಿಂದ ನಲವತ್ತು ಸಾವಿರ ಕಾರ್ಮಿಕರನ್ನು ಕರೆದುಕೊಂಡು ಬಂದು ಹೋರಾಟ ನಡೆಸಿದ್ದಾರೆ. ಇದರ ಫಲವಾಗಿ ಕಟ್ಟಡ ಕಾರ್ಮಿಕರ ಬೋರ್ಡ್ ರಚನೆಯಾಗಿದೆ. ಸುಮಾರು ಮೂರು ಸಾವಿರ ಕಾರ್ಮಿಕರನ್ನು ನವದೆಹಲಿಗೆ ಕರೆದುಕೊಂಡು ಹೋಗಿ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಪೌರಕಾರ್ಮಿಕರ ಪರ ಹೋರಾಟ
2002ರಲ್ಲಿ ಕೋಲಾರದಿಂದ ಬೆಂಗಳೂರಿಗೆ ಬಂದು ಬಾಲನ್ ನೆಲೆಸಿದರು. ಆ ಸಂದರ್ಭದಲ್ಲಿ ಪೌರಕಾರ್ಮಿಕರ ಕಷ್ಟಗಳನ್ನು ಗಮನಿಸಿದರು. ಅವರ ಮಾಸಿಕ ಸಂಬಳ 1200 ರೂಪಾಯಿ ಇತ್ತು. ಅದನ್ನೂ ಸರಿಯಾಗಿ ಗುತ್ತಿಗೆದಾರರು ನೀಡುತ್ತಿರಲಿಲ್ಲ. ತಮ್ಮ ಸಂಬಳವನ್ನು ಪೌರಕಾರ್ಮಿಕರು ಭಿಕ್ಷೆ ಬೇಡಿ ಪಡೆದುಕೊಳ್ಳಬೇಕಿತ್ತು. ಸುಮಾರು ಮೂರು ಸಾವಿರ ಪೌರಕಾರ್ಮಿಕರನ್ನು ಒಗ್ಗೂಡಿಸಿ ಹೋರಾಟ ಶುರುಮಾಡಿದರು ಬಾಲನ್. 2.500 ರೂಪಾಯಿಗೆ ಸಂಬಳ ಏರಿಕೆಯಾಯಿತು. ನಂತರ 5,000ಕ್ಕೆ ಏರಿಕೆ ಮಾಡಿಸಲಾಯಿತು. ಹೀಗೆ ಕಾಲಕಾಲಕ್ಕೆ ಪೌರಕಾರ್ಮಿಕರ ಮಾಸಿಕ ವೇತನ ಹೆಚ್ಚಳವಾಗುವಲ್ಲಿ ಬಾಲನ್ ಶ್ರಮಿಸಿದ್ದಾರೆ. ‘ಪೊಲೀಸರಿಂದ, ರೌಡಿಗಳಿಂದ ಹಲವು ಸಲ ದಾಳಿಗಳಾಗಿವೆ. ಬಿಬಿಎಂಪಿ ಕಚೇರಿಯಲ್ಲಿಯೇ ದಾಳಿ ನಡೆದಿದೆ’ ಎಂದು ನೆನೆಯುತ್ತಾರೆ ಅವರು.
ರೇಸ್‌ಕೋರ್ಸ್ ಕಾರ್ಮಿಕರನ್ನು ಕೆಲಸದಿಂದ ತೆಗೆದಿದ್ದರು. ಆ ಕಾರ್ಮಿಕರನ್ನು ಸಂಘಟಿಸಿ 21 ದಿನ ಕಾರ್ಮಿಕರ ಭವನದಲ್ಲೇ ಮಲಗಿದರು. ದೊಡ್ಡ ಹೋರಾಟ ಆದ ಮೇಲೆ ಕಾರ್ಮಿಕರಿಗೆ ಪರಿಹಾರ ದೊರಕಿತು. ಗ್ರಾಚ್ಯುಟಿ ರಿಟರ್ನ್ ಈ ಹಿಂದೆ ಕೇವಲ 35 ಸಾವಿರ ರೂ. ಇತ್ತು. ಈಗ ಏಳರಿಂದ ಹತ್ತು ಲಕ್ಷದವರೆಗೆ ರಿಟರ್ನ್ ಆಗುತ್ತಿದೆ. ಹೆಚ್ಚುವರಿ ಸಮಯ ಕೆಲಸ ಮಾಡಿದರೆ ಹೆಚ್ಚುವರಿ ಹಣ ಪಾವತಿಯಾಗುತ್ತಿದೆ.

ಎಚ್‌ಎಎಲ್‌ನಲ್ಲಿ ಆರು ಸಾವಿರ ಗುತ್ತಿಗೆ ಕಾರ್ಮಿಕರಿಗೆ ಕಡಿಮೆ ಕೂಲಿ ಸಿಗುತ್ತಿತ್ತು. ಕ್ಯಾಂಟೀನ್ ಸೌಲಭ್ಯ ಇರಲಿಲ್ಲ. ಬೋನಸ್, ಓಟಿ ಸೌಲಭ್ಯವೂ ಇರಲಿಲ್ಲ. ಗುಲಾಮರಂತೆ ಆ ಕಾರ್ಮಿಕರನ್ನು ನಡೆಸಿಕೊಳ್ಳಲಾಗುತ್ತಿತ್ತು. ಆರು ಸಾವಿರ ಕಾರ್ಮಿಕರನ್ನು ಒಂದುಗೂಡಿಸಿ, ಹೋರಾಟ ನಡೆಸಿದರು. ಈಗ ದಿನಕ್ಕೆ ಸಾವಿರ ರೂ.ವರೆಗೂ ಕೂಲಿ ಸಿಗುತ್ತಿದೆ ಎನ್ನುತ್ತಾರೆ ಬಾಲನ್.

ಬಿಇಎಂಎಲ್, ಬಿಎಚ್‌ಇಎಲ್ ಕಾರ್ಮಿಕರಿಗೆ ಎರಡು ಡಿಎ, ಹಾಜರಾತಿ ಬೋನಸ್ ಕೊಡಿಸಲಾಗಿದೆ. ತಮಿಳುನಾಡಿನ ರಾಣಿಪೇಟೆ, ತಿರುಚಿಯಲ್ಲಿರುವ ಬಿಎಚ್‌ಇಎಲ್ ಗುತ್ತಿಗೆ ಕಾರ್ಮಿಕರನ್ನು ಸಂಘಟಿಸಿದ್ದಾರೆ. ಬೆಂಗಳೂರಿನಲ್ಲಿ ಒಳಚರಂಡಿ ಶುಚಿಗೊಳಿಸುವ ಕಾರ್ಮಿಕರು ಹಾಗೂ ವಾಟರ್ ವರ್ಕ್ಸ್ ಕಾರ್ಮಿಕರನ್ನು ಸಂಘಟನೆ ಮಾಡಿದ್ದಾರೆ. ಒಳಚರಂಡಿ ಶುಚಿಗೊಳಿಸುವ ಕಾರ್ಮಿಕರಿಗೆ ಆರು ಸಾವಿರ ಇದ್ದ ಸಂಬಳ ಈಗ 23,000ಕ್ಕೆ ಏರಿಕೆಯಾಗಿದೆ. ಈ ಹೋರಾಟದಲ್ಲಿ ಭಾಗಿಯಾದ ಸಂತೃಪ್ತಿಯನ್ನು ಬಾಲನ್ ವ್ಯಕ್ತಪಡಿಸುತ್ತಾರೆ.
ತಮಿಳು, ತೆಲುಗು, ಕನ್ನಡ ಹಾಗೂ ಇಂಗ್ಲಿಷನಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಬಾಲನ್ ಬರುತ್ತಾರೆಂದರೆ ನೂರಾರು, ಸಾವಿರಾರು ಜನ ಕಾರ್ಮಿಕರು ಜಮಾಯಿಸಿ ಭಾಷಣ ಆಲಿಸುತ್ತಾರೆ. ಅಂಬೇಡ್ಕರ್‌ವಾದ, ಮಾರ್ಕ್ಸ್‌ವಾದ, ಪೆರಿಯಾರ್‌ವಾದವನ್ನು ನಿರಂತರ ಪ್ರಚಾರ ಮಾಡುತ್ತಲೇ ಇದ್ದಾರೆ.

ತಮ್ಮ ಹೋರಾಟದ ಬದುಕಿನ ಕುರಿತು ಸಂತೃಪ್ತಿ ವ್ಯಕ್ತಪಡಿಸುವ ಅವರು, “ಇಷ್ಟೆಲ್ಲ ಕೆಲಸ ಮಾಡಿದ್ದೇನೆ. ಆದರೆ ಕಾರ್ಮಿಕರಿಂದ ಒಂದು ರೂಪಾಯಿ ತಿಂದಿಲ್ಲ. ಅವರ ದುಡ್ಡಲ್ಲಿ ಒಂದು ಟೀಯನ್ನೂ ಕುಡಿದಿಲ್ಲ. ವಸೂಲಿಯಾಗಿರುವ ಲಕ್ಷಾಂತರ ರೂಪಾಯಿಗಳನ್ನು ಕಾರ್ಮಿಕರ ಹೆಸರಲ್ಲೇ ಬ್ಯಾಂಕ್‌ನಲ್ಲಿ ಇಟ್ಟಿದ್ದೇವೆ. ಪ್ರವಾಸ ವೆಚ್ಚವನ್ನೂ ನಾನು ಅವರಿಂದ ತೆಗೆದುಕೊಂಡಿಲ್ಲ. ಟ್ರೇಡ್ ಯೂನಿಯನ್‌ಗಳಿಗೆ ನನ್ನ ಸೇವೆ ಉಚಿತ” ಎನ್ನುತ್ತಾರೆ.

“ನನ್ನ ಮೇಲೆಯೂ ಹಲವಾರು ಕೇಸ್‌ಗಳನ್ನು ಹಾಕಿದ್ದಾರೆ. ನನ್ನನ್ನು ಕೆಜಿಎಫ್‌ನಲ್ಲಿ ರೌಡಿಶೀಟರ್ ಎಂದು ನಮೂದಿಸಿದ್ದಾರೆ. ಕಾರ್ಮಿಕ ಹೋರಾಟದ ಫಲವಾಗಿ ಕೋಲಾರದಲ್ಲಿ ನನ್ನ ವಿರುದ್ಧ ಸುಮಾರು ಇಪ್ಪತ್ತು ಕೇಸ್‌ಗಳಿದ್ದವು. ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿತ್ತು. ವೇದಿಕೆ ಮೇಲೆ ಇದ್ದಾಗ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದುಂಟು. ಬೀದಿ ಹೋರಾಟದ ಸಂದರ್ಭಗಳಲ್ಲೂ ದಾಳಿಗಳಾಗಿವೆ” ಎಂದು ನೆನೆಯುತ್ತಾರೆ ಅವರು.

ವಕೀಲರಾಗಿ ಬಾಲನ್
ಬಾಲನ್ ಅವರ ಹೋರಾಟ ಬದುಕಿನಷ್ಟೇ ಅವರ ವೃತ್ತಿ ಬದುಕು ಕೂಡ ಗಮನಾರ್ಹ. ಅಪರಾಧ ಪ್ರಕರಣಗಳ ವಕೀಲರಾಗಿ ಇವರು ಮನೆಮಾತಾಗಿದ್ದಾರೆ. ಕರ್ನಾಟಕದಲ್ಲಿ ಸದ್ದು ಮಾಡಿದ ದೊಡ್ಡದೊಡ್ಡ ಪ್ರಕರಣಗಳ ವಕೀಲರಾಗಿ ಕೆಲಸ ಮಾಡಿದ್ದಾರೆ. ಎನ್‌ಕೌಂಟರ್, ಬಾಂಬ್ ಸ್ಫೋಟ ಮುಂತಾದ ಪ್ರಕರಣಗಳು, ಅಮಾಯಕರ ಮೇಲೆ ದಾಖಲಾದ ಯುಎಪಿಎ, ಎನ್‌ಐಎ ಪ್ರಕರಣಗಳನ್ನು ಕೈಗೆತ್ತಿಕೊಂಡ ಹೆಗ್ಗಳಿಕೆಯೂ ಇವರಿಗಿದೆ. ದಕ್ಷಿಣ ಭಾರತದಲ್ಲಿ ದಾಖಲಾಗಿರುವ ಯುಎಪಿಎ, ಎನ್‌ಐಎ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶನವನ್ನೂ ಇವರು ಮಾಡುತ್ತಿದ್ದಾರೆ. 2020ರಲ್ಲಿ ನೂರಾರು ಪ್ರಖ್ಯಾತ ವಕೀಲರನ್ನು ಒಂದು ಕಡೆ ಸೇರಿಸಿ ಸಮಾವೇಶವನ್ನೂ ನಡೆಸಿದ್ದರು. ಈ ಪ್ರಕರಣಗಳನ್ನು ನಿಭಾಯಿಸುವ ಕುರಿತು ಚರ್ಚೆ ನಡೆದಿತ್ತು.

ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿಯೂ ಬಾಲನ್ ಕೆಲಸ ಮಾಡುತ್ತಿದ್ದಾರೆ. “ಒಂದೂ ರೂಪಾಯಿ ಕೂಡ ತೆಗೆದುಕೊಂಡಿಲ್ಲ. ಇದರಲ್ಲಿ ನ್ಯಾಯ ಸಿಗಬೇಕು ಎನ್ನುವುದು ನನ್ನ ಹೋರಾಟ” ಎನ್ನುತ್ತಾರೆ ಅವರು. ಇಷ್ಟೇ ಅಲ್ಲದೇ ಹಲವು ಪ್ರಕರಣಗಳಲ್ಲಿ ಸ್ಪೆಷಲ್ ಪ್ರಾಸಿಕ್ಯೂಟರ್ ಆಗಿದ್ದಾರೆ.

“ಭ್ರಷ್ಟಾಚಾರ ಪ್ರಕರಣಗಳನ್ನು ಕೈಗೆತ್ತಿಕೊಂಡರೆ ಲಕ್ಷಾಂತರ ಹಣ ಬರುತ್ತದೆ. ಆದರೆ ನಾನು ಅವುಗಳನ್ನು ತೆಗೆದುಕೊಳ್ಳುವುದಿಲ್ಲ. ಹೆಣ್ಣುಮಕ್ಕಳ ರೇಪ್ ಪ್ರಕರಣಗಳು ಬಂದಾಗ ಆರೋಪಿ ಮುಗ್ಧ ಎಂದು ಗೊತ್ತಾದಾಗ ಮಾತ್ರ ಪ್ರಕರಣ ಕೈಗೆತ್ತಿಕೊಳ್ಳುತ್ತೇನೆ. ಇಲ್ಲವಾದರೆ ಎಷ್ಟು ಲಕ್ಷ ಕೊಟ್ಟರೂ ಅಂತಹ ಪ್ರಕರಣಗಳನ್ನು ಮುಟ್ಟುವುದಿಲ್ಲ. ನನ್ನ ಕೇಸು, ನನ್ನ ಕಾಸು ಎಂದು ಹೋಗುವವನು ನಾನಲ್ಲ. ನ್ಯಾಯ ಸಿಗಬೇಕಾದ ಪ್ರಕರಣಗಳನ್ನು ಮಾತ್ರ ನಡೆಸುತ್ತೇನೆ. ಹೆಣ್ಣುಮಕ್ಕಳಿಗೆ ದೌರ್ಜನ್ಯಗಳಾದಾಗ ಅವರ ಪರ ನಿಂತು ಕೆಲಸ ಮಾಡಿದ್ದೇನೆ. ಸಂತ್ರಸ್ತ ಹೆಣ್ಣುಮಕ್ಕಳಿಂದ ಹಣ ಪಡೆದುಕೊಳ್ಳುವುದಿಲ್ಲ” ಎನ್ನುವುದು ಬಾಲನ್ ಅವರ ಬದ್ಧತೆ.

“ಟ್ರೇಡ್ ಯೂನಿಯನ್, ಕಾರ್ಮಿಕರ ಕೆಲಸಗಳಿಗೆ ನನ್ನ ಸೇವೆ ಉಚಿತ. ಕಾನೂನು ಕ್ಷೇತ್ರದ ಕೆಲವು ಪ್ರಕರಣಗಳಲ್ಲಿ ನಾನು ಶುಲ್ಕವನ್ನು ಪಡೆಯುತ್ತೇನೆ. ನಾನು ಟಿಪಿಕಲ್ ಕಾರ್ಪೊರೆಟ್ ಲಾಯರ್ ಅಲ್ಲ. ಹಾಗೆಯೇ ನಾನು ಮಾನವ ಹಕ್ಕುಗಳ ಹೋರಾಟದ ವಕೀಲ ಎಂದೂ ಹೇಳಿಕೊಳ್ಳುವುದಿಲ್ಲ. ಒಬ್ಬ ಗಣಿ ಕಾರ್ಮಿಕನ ಮಗನಾಗಿ ನೊಂದವರ ಪರ ಕೆಲಸ ಮಾಡುವುದು, ಕಾರ್ಮಿಕರಿಗಾಗಿ ಹೋರಾಡುವುದು ನನ್ನ ಕರ್ತವ್ಯ ಎಂದು ತಿಳಿಸಿದ್ದೇನೆ. ಇದು ಫ್ಯಾಷನ್ ಅಲ್ಲ. ಹಾಗೆಂದು ನಾನು ಲೀಡರ್ ಅಲ್ಲ, ಆದರೆ ಬೀದಿ ಹೋರಾಟಗಾರ” ಎನ್ನುವುದು ಬಾಲನ್ ಅವರ ಸ್ಪಷ್ಟನುಡಿ.

ಇಷ್ಟೇ ಅಲ್ಲದೆ ಟಿ.ವಿ.ಗಳಿಗೆ ಸಂದರ್ಶನಗಳನ್ನು ನೀಡುವುದು, ಪಂಚಿಂಗ್ ಆಗಿ ಮಾತನಾಡಿ ಕೇಳುಗರನ್ನು ಆಕರ್ಷಿಸುವುದು ಬಾಲನ್ ಅವರ ಮತ್ತೊಂದು ಗುಣ. ಅಂದಹಾಗೆ ಅವರಿಗೆ ಈಗ 63 ವರ್ಷ ವಯಸ್ಸು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬಾಲನ್ ರವರ ಕುರಿತ ಪರಿಚಯ ಚೆನ್ನಾಗಿ ಮೂಡಿ ಬಂದಿದೆ.ಅವರ ಕುರಿತು ಪುಸ್ತಕ ಪ್ರಕಟವಾದರೆ ಮುಂದಿನ ತಲೆಮಾರಿಗೆ ದಾಖಲೆಯಾಗಲಿದೆ.ಅವರ ಎಲ್ಲ ನಿಲುವುಗಳನ್ನು ಒಪ್ಪಲಾಗದಿದ್ದರುಸದ್ಯ ಕೇಸು ಕಾಸು ಅಂತಾ ಬಡಿದಾಡುವ ವಕೀಲರ ಮಧ್ತೆ ಗಟ್ಟಿ ಗುಂಡಿಗೆಯಿಂಥ ಲಾಯರ್ ಅಂತೂ ಕರ್ನಾಟಕಕ್ಕೆ ಬೇಕಿದೆ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...