ಪ್ರತಾಪ್ ಗೌಡ ಪಾಟೀಲನ ಪ್ರಲಾಪ: ಮಸ್ಕಿಯ ಬಿಜೆಪಿ ಪರಾಜಿತ ಅಭ್ಯರ್ಥಿಯಿಂದ ತನಗೆ ಟಿಕೆಟ್ ನೀಡಬೇಕೆಂದು ಆಗ್ರಹ
ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ ಅತೃಪ್ತರ ಬಣ ಸೇರಿ ರಾಜೀನಾಮೆ ಕೊಟ್ಟು ಮುಂಬೈ ಸೇರಿದ್ದು ಸರಿಯಷ್ಟೇ. ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದ ಅವರು ಈಗ ಜನರ ಅಭಿಪ್ರಾಯ ಪಡೆದೇ ರಾಜಿನಾಮೆ ನೀಡಿದ್ದೇನೆ ಎಂದಿದ್ದಾರೆ. ಇದರಿಂದ ಮಸ್ಕಿ ಮತ್ತು ಸಿಂಧನೂರಿನಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿದ್ದು ಪರ-ವಿರೋಧದ ಅಲೆಯೆದ್ದಿದೆ.
ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ ನಾನು ಕ್ಷೇತ್ರದ ಜನರೊಡನೆ ಸಮಾಲೋಚನೆ ನಡೆಸಿ, ಅವರ ಅಭಿಪ್ರಾಯಪಡೆದೇ ರಾಜೀನಾಮೆ ನೀಡಿದ್ದೇನೆ ಎಂದು ಹೊಸ ವರಸೆ ಶುರು ಮಾಡಿದ್ದಾರೆ. ಇದಕ್ಕೆ ಒಹೋ ಮುಂಬೈ ಹೋಟೆಲ್‍ನಿಂದಲೇ ಜನಾಭಿಪ್ರಾಯ ಪಡೆದಿದ್ದೀರಿ ಎಂದು ಅವರು ಎದುರು ಕೇವಲ 213 ಮತಗಳಿಂದ ಸೋತ ಬಿಜೆಪಿಯ ಆರ್ ಬಸವನಗೌಡ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದ್ದಾರೆ.

ಅಷ್ಟೇ ಅಲ್ಲದೇ ಕಳೆದ ಬಾರಿ ಅತ್ಯಲ್ಪ ಮತಗಳಿಂದ ಸೋತ ಪ್ರತಾಪ್ ಗೌಡರು ಈಗ ಸೋಲಿನ ಭಯದಿಂದ, ಹಣದಾಸೆಯಿಂದ ರಾಜಿನಾಮೇ ನೀಡಿ ಬಿಜೆಪಿಯಿಂದ ಸ್ಪರ್ಧಿಸಲು ನೋಡುತ್ತಿದ್ದಾರೆ. ಮುಂದೆ ಅವರು ಗೆಲ್ಲುವದಿಲ್ಲ ಎಂದು ಅವರೇ ಹೇಳಿದ್ದಾರೆ, ಹಾಗಾಗಿ ತರಾತುರಿಯಲ್ಲಿ ಸಚಿವರಾಗಿ ದಿಢೀರ್ ದುಡ್ಡು ಮಾಡುವುದಕ್ಕೆ ಹೀಗೆಲ್ಲಾ ಆಡುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಬಿಜೆಪಿಯಿಂದ ಅವರಿಗಾಗಲೀ, ಅವರ ಮಕ್ಕಳಿಗಾಗಲೀ ಟಿಕೆಟ್ ನೀಡಬಾರದು. ಬರುವ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೇಟ್ ನೀಡಬೇಕು, ನಾನು ಬಿಜೆಪಿಗಾಗಿ ಹಗಲು ರಾತ್ರಿ ಕೆಲಸ ಮಾಡಿದ್ದೇನೆ. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಎಚ್ಚರಿಸಿದ್ದಾರೆ.
ಶಾಸಕರ ವಿರುದ್ಧ ಸಿಂಧನೂರಿನಲ್ಲಿ ಪ್ರತಿಭಟನೆ
ಇನ್ನೊಂದು ಕಡೆ ಜನಾಭಿಪ್ರಾಯ ಸಂಗ್ರಹಿಸಿದ್ದೇನೆ ಎಂದು ಸುಳ್ಳು ಹೇಳಿರುವ ಶಾಸಕ ಕ್ಷೇತ್ರಕ್ಕೆ ಬಂದು ಎಲ್ಲಿ, ಯಾರಿಂದ ಜನಾಭಿಪ್ರಾಯ ಸಂಗ್ರಹಿಸಿದ್ದೀರಿ ಎಂಬ ಮಾಹಿತಿ ನೀಡಬೇಕು. ಜನ ಮಸ್ಕಿಯಲ್ಲಿ ಬರದಿಂದ, ಕುಡಿಯುವ ನೀರಿಲ್ಲದೇ ಸಾಯುತ್ತಿದ್ದರೆ ಈ ಶಾಸಕರಿಗೆ ಹಣದ ಮದವೇರಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರೈತರು, ಯುವಜನರು ಆರ್.ವೈ.ಎಫ್ ಮತ್ತು ಕೆ.ಆರ್.ಎಸ್ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಸಿಂಧನೂರಿನಲ್ಲಿ ಪ್ರತಾಪ್ ಗೌಡರ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಸತತ 3 ಬಾರಿ ಶಾಸಕರಾಗಿ 11 ವರ್ಷ ಆಳ್ವಿಕೆ ನಡೆಸಿದ್ದರೂ ಮಸ್ಕಿ ಕ್ಷೇತ್ರ ತೀರಾ ಹಿಂದುಳಿದಿದೆ, 50 ಕೋಟಿಯ ಕುಡಿಯುವ ನೀರಿನ ಯೋಜನೆಗಳು ಹಳ್ಳ ಹಿಡಿದಿವೆ, ಇದಕ್ಕೆಲ್ಲಾ ಶಾಸಕರೇ ಕಾರಣ ಎಂದು ಆರ್‍ವೈಎಫ್‍ನ ನಾಗರಾಜ್ ಪೂಜಾರ್ ಆರೋಪಿಸಿದ್ದಾರೆ.
ಮಂಗಳವಾರ ಪ್ರತಾಪ್ ಗೌಡ ಪಾಟೀಲರು ಮಾಧ್ಯಮದ ಎದುರು “ನಾನು ರಾಜೀನಾಮೆ ಕೊಡಬೇಕೆಂದು ಜನರೇ ಅಭಿಪ್ರಾಯ ನೀಡಿದ್ದಾರೆ, ನಾನು ಜನರ ತೀರ್ಪಿಗೆ ತಲೆಬಾಗಿದ್ದೇನೆ ಅಷ್ಟೇ, ನನ್ನ ವಿರುದ್ಧ ಮಾತಾಡುವವರು ಇದನ್ನು ಅರ್ಥ ಮಾಡಿಕೊಳ್ಳಬೇಕೆಂದು ಆವೇಶಭರಿತವಾಗಿ ಮಾತನಾಡಿದ್ದರು”. ಅಷ್ಟೇ ಅಲ್ಲದೇ ಮುಂಬೈನಲ್ಲಿ ಕೆಲ ಶಾಸಕರು ಇಲ್ಲ ನಾವು ಕಾನೂನುಕ್ರಮಕ್ಕೆ ಒಳಗಾಗುವುದಕ್ಕಿಂತ ವಾಪಸ್ ಹೋಗಿಬಿಡೋಣ ಎಂದರೆ ಇಲ್ಲ ನಾವು ಇನ್ನು ಸ್ವಲ್ಪ ಕಾದುನೋಡೋಣ ಎಂದು ಪ್ರತಾಪ್ ಗೌಡರೇ ಉಳಿದ ಅತೃಪ್ತರನ್ನು ಸಮಾಧಾನಿಸಿದ್ದಾರಂತೆ.

ಇದರಿಂದ ಸಿಟ್ಟಿಗೆದ್ದಿರುವ ಕ್ಷೇತ್ರದ ಜನತೆ ಒಂದು ತಿಂಗಳಿಂದ ಈ ಶಾಸಕರು ಕ್ಷೇತ್ರದ ಕಡೆ ಮುಖ ಹಾಕಿಲ್ಲ. ತಮ್ಮ ನಾಲ್ಕೈದು ಚೇಲಾಗಳ ಅಭಿಪ್ರಾಯ ಪಡೆದು ಅದನ್ನೇ ಇಡೀ ಕ್ಷೇತ್ರದ ಜನಾಭಿಪ್ರಾಯ ಪಡೆದಿದ್ದೇನೆ ಎಂದು ಹೇಳಿಕೊಳ್ಳುತ್ತಾ ಸ್ವಾರ್ಥಕ್ಕಾಗಿ ರಾಜೀನಾಮೆ ಕೊಟ್ಟಿರುವ ಪ್ರತಾಪ್ ಗೌಡರಿಗೆ ಸರಿಯಾಗಿ ಬುದ್ದಿ ಕಲಿಸುತ್ತೇವೆ, ಈ ಕುರಿತು ಸ್ಪೀಕರ್ ರವರಿಗೂ ದೂರು ಸಲ್ಲಿಸುತ್ತೇವೆ ಎಂದು ನಾಗರಾಜ್ ಪೂಜಾರ್ ಕಿಡಿಕಾರಿದ್ದಾರೆ.


