ಕೇಂದ್ರ ಸರ್ಕಾರ ಬೇಡಿಕೆಗಳ ಈಡೇರಿಕೆಗೆ ಹಿಂದೇಟು ಹಾಕುತ್ತಿರುವ ಹಿನ್ನೆಲೆ, ರೈತ ಸಂಘಟನೆಗಳು ಇಂದು (ಡಿ.30) ‘ಪಂಜಾಬ್ ಬಂದ್’ಗೆ ಕರೆಕೊಟ್ಟಿದ್ದು, ಬೆಳಿಗ್ಗೆಯೇ ಹಲವೆಡೆ ರಸ್ತೆಗಳನ್ನು ಮುಚ್ಚಿ ಪ್ರತಿಭಟಿಸಲಾಗಿದೆ.
ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆಗಳನ್ನು ಕೇಂದ್ರ ಒಪ್ಪಿಕೊಳ್ಳದಿರುವುದನ್ನು ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಕಳೆದ ವಾರ ಬಂದ್‌ಗೆ ಕರೆ ನೀಡಿದ್ದವು.
ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 4ರವರೆಗೆ ಬಂದ್ ಮಾಡಲು ರೈತರು ತೀರ್ಮಾನಿಸಿದ್ದಾರೆ. ಇಂದು ಬೆಳಿಗ್ಗೆ ಧರೇರಿ ಜತ್ತನ್ ಟೋಲ್ ಪ್ಲಾಝಾದಲ್ಲಿ ರೈತರು ಧರಣಿ ನಡೆಸಿದ್ದರಿಂದ ಪಟಿಯಾಲ-ಚಂಡೀಗಢ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಯಿತು.
ಅಮೃತಸರದ ಗೋಲ್ಡನ್ ಗೇಟ್‌ನಲ್ಲಿ, ರೈತರು ನಗರದ ಪ್ರವೇಶ ದ್ವಾರದ ಬಳಿ ಜಮಾಯಿಸಲು ಪ್ರಾರಂಭಿಸಿದ್ದು, ಬಟಿಂಡಾದ ರಾಂಪುರ ಫುಲ್‌ನಲ್ಲಿ ರಸ್ತೆ ತಡೆ ನಡೆಸಿದ್ದಾರೆ.
ಸಂಪೂರ್ಣ ಬಂದ್ ಇದ್ದರೂ ತುರ್ತು ಸೇವೆಗಳಿಗೆ ಅವಕಾಶ ನೀಡಲಾಗುವುದು ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಭಾನುವಾರ ಹೇಳಿದ್ದಾರೆ. ಆಸ್ಪತ್ರೆ, ವಿಮಾನ ನಿಲ್ದಾಣ, ಮದುವೆ, ಸಂದರ್ಶನ ಇತ್ಯಾದಿಗಳಿಗೆ ತೆರಳುವವರಿಗೆ ಓಡಾಡಲು ಅವಕಾಶ ನೀಡಲಾಗುವುದು. ಶಾಂತಿಯುತವಾಗಿ ಬಂದ್ ನಡೆಯಲಿದೆ ಎಂದು ಸರ್ವಾನ್ ಸಿಂಗ್ ತಿಳಿಸಿದ್ದಾರೆ.
ಈ ನಡುವೆ 70 ವರ್ಷ ವಯಸ್ಸಿನ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಉಪವಾಸ ಸತ್ಯಾಗ್ರಹ ಇಂದಿಗೆ (ಡಿ.30) 35ನೇ ದಿನಕ್ಕೆ ಕಾಲಿಟ್ಟಿದೆ. ದಲ್ಲೆವಾಲ್ ಇಲ್ಲಿಯವರೆಗೆ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸಿದ್ದಾರೆ. ನ್ಯಾಯಾಲಯ, ಸರ್ಕಾರ ಸೇರಿದಂತೆ ಯಾರ ಮನವೊಲಿಕೆಯೂ ಫಲ ಕೊಟ್ಟಿಲ್ಲ.
ದಲ್ಲೆವಾಲ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಸಲುವಾಗಿ ಮನವೊಲಿಸಲು ಸುಪ್ರೀಂ ಕೋರ್ಟ್ ಪಂಜಾಬ್ ಸರ್ಕಾರಕ್ಕೆ ಡಿಸೆಂಬರ್ 31 ರವರೆಗೆ ಗಡುವು ನೀಡಿದೆ. ಅಗತ್ಯವಿದ್ದರೆ ಕೇಂದ್ರದಿಂದ ಲಾಜಿಸ್ಟಿಕ್ ಬೆಂಬಲವನ್ನು ಪಡೆಯಲು ಸೂಚಿಸಿದೆ.
ರೈತರ ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ನೀಡುವವರೆಗೂ ಉಪವಾಸ ಮುರಿಯುವುದಿಲ್ಲ ಎಂದು ದಲ್ಲೆವಾಲ್ ಅವರು ಪಟ್ಟು ಹಿಡಿದಿದ್ದಾರೆ. ಅವರ ಆರೋಗ್ಯ ಪರಿಸ್ಥಿತಿ ಸಂಪೂರ್ಣ ಕ್ಷೀಣಿಸಿದೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ, ರೈತರ ಸಾಲ ಮನ್ನಾ, ಪಿಂಚಣಿ, ವಿದ್ಯುತ್ ದರಗಳಲ್ಲಿ ಹೆಚ್ಚಳ ಮಾಡಬಾರದು, ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು ಮತ್ತು 2021ರ ಲಖೀಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ‘ನ್ಯಾಯ’ ಒದಗಿಸಬೇಕು ಎಂದು ಆಗ್ರಹಿಸಿ ಈ ವರ್ಷದ ಆರಂಭದಿಂದ ರೈತರು ಪಂಜಾಬ್ -ಹರಿಯಾಣ ಗಡಿಯಲ್ಲಿ ಪ್ರತಿಭಟಿಸುತ್ತಿದ್ದಾರೆ.
ರೈತರು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ವರ್ಷದ ಫೆಬ್ರವರಿ 13ರಂದು ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು. ಆದರೆ, ಅವರು ದೆಹಲಿ ಪ್ರವೇಶಿಸದಂತೆ ಹರಿಯಾಣ ಸರ್ಕಾರ ಶಂಭು, ಖನೌರಿ ಗಡಿಯಲ್ಲಿ ತಡೆದಿತ್ತು. ಹಾಗಾಗಿ, ರೈತರು ಗಡಿಯಲ್ಲೇ ಕುಳಿತು ಪ್ರತಿಭಟನೆ ಮುಂದುವರೆಸಿದ್ದಾರೆ. ಎರಡ್ಮೂರು ಬಾರಿ ಪ್ರತಿಭಟನಾ ಸ್ಥಳದಿಂದ ದೆಹಲಿಗೆ ಮೆರವಣಿಗೆ ಪುನರಾರಂಭಿಸಲು ಪ್ರಯತ್ನಿಸಿದರೂ, ಹರಿಯಾಣದ ಬಿಜೆಪಿ ಸರ್ಕಾರದ ಪೊಲೀಸರು ಅಶ್ರುವಾಯು, ಜಲಫಿರಂಗಿ, ಲಾಠಿ ಏಟಿನ ಮೂಲಕ ರೈತರನ್ನು ತಡೆದಿದ್ದಾರೆ.
ಕಳೆದ ಡಿಸೆಂಬರ್ 6 ಮತ್ತು 14 ರ ನಡುವೆ ಮೂರು ಬಾರಿ ಕಾಲ್ನಡಿಗೆಯ ಮೂಲಕ ದೆಹಲಿಗೆ ಮೆರವಣಿಗೆ ಮಾಡಲು 101 ರೈತರ ತಂಡ ಪ್ರಯತ್ನಿಸಿತ್ತು. ಆದರೆ, ಹರಿಯಾಣದ ಪೊಲೀಸರು ಅದಕ್ಕೆ ಅವಕಾಶ ನೀಡಿಲ್ಲ.
ಜನವರಿ 4ರಂದು ಖನೌರಿಯಲ್ಲಿ ಕಿಸಾನ್ ಮಹಾಪಂಚಾಯತ್
ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪಂಜಾಬ್-ಹರಿಯಾಣದ ಖನೌರಿ ಗಡಿಯಲ್ಲಿ ಜನವರಿ 4ರಂದು ‘ಕಿಸಾನ್ ಮಹಾಪಂಚಾಯತ್’ ನಡೆಸಲಾಗುವುದು ಎಂದು ರೈತ ನಾಯಕರು ಘೋಷಿಸಿದ್ದಾರೆ.
ಖನೌರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೈತ ನಾಯಕ ಅಭಿಮನ್ಯು ಕೋಹರ್ ಅವರು, ಸುಮಾರು ನಾಲ್ಕು ದಶಕಗಳಿಂದ ರೈತಪರ ಹೋರಾಟ ನಡೆಸುತ್ತಿರುವ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ರೈತರನ್ನು ಭೇಟಿಯಾಗಲು ಇಚ್ಚಿಸಿದ್ದಾರೆ. ಅವರ ಆಕಾಂಕ್ಷೆಯನ್ನು ರೈತ ಸಂಘಟನೆಗಳು ಗೌರವಿಸಿದ್ದು, ಜನವರಿ 4ರಂದು ಮಹಾಪಂಚಾಯತ್ ನಡೆಸುವುದಾಗಿ ಘೋಷಿಸಿವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಅಲ್ಲಾ ಕುರಿತು ಸಾಲು: ‘ರಘುಪತಿ ರಾಘವ ರಾಜ ರಾಮ್’ ಹಾಡದಂತೆ ತಡೆದ ಬಿಜೆಪಿ ನಾಯಕರು


