ಪ್ರಯಾಗ್‌ರಾಜ್ ಮಹಾ ಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಬಗ್ಗೆ ಚರ್ಚೆ ನಡೆಸುವಂತೆ ಮತ್ತು ಮೃತಪಟ್ಟವರ ಪಟ್ಟಿ ನೀಡುವಂತೆ ಒತ್ತಾಯಿಸಿ ಸೋಮವಾರ (ಫೆ.3) ಲೋಕಸಭೆಯಲ್ಲಿ ವಿರೋಧ ಪಕ್ಷಗಳು ನಡೆಸಿದ ತೀವ್ರ ಪ್ರತಿಭಟನೆ ನಡೆಸಿದವು.
ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಭಾಷಣ, ಬಜೆಟ್ ಮಂಡನೆ ಬಳಿಕ ಇಂದು ಕಲಾಪ ಪ್ರಾರಂಭಗೊಳ್ಳುತ್ತಿದ್ದಂತೆ, ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷದ ಸಂಸದರು ಎದ್ದು ನಿಂತು ಇತ್ತೀಚೆಗೆ ಮಹಾ ಕುಂಭ ಮೇಳದಲ್ಲಿ ಸಂಭವಿಸಿದ ದುರಂತದ ಬಗ್ಗೆ ಚರ್ಚೆಗೆ ಒತ್ತಾಯಿಸಿದರು.
ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಿ, ಸರ್ಕಾರದ ವಿರುದ್ದ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದರು.
ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪ ನಾಯಕ ಗೌರವ್ ಗೊಗೊಯ್ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ನೇತೃತ್ವದಲ್ಲಿ, ವಿರೋಧ ಪಕ್ಷದ ಸಂದರು ಪ್ರಶ್ನೋತ್ತರ ಅವಧಿಯನ್ನು ಸ್ಥಗಿತಗೊಳಿಸುವಂತೆ ಮತ್ತು ಕಾಲ್ತುಳಿತದ ಬಗ್ಗೆ ಚರ್ಚೆ ನಡೆಸುವಂತೆ ಪಟ್ಟು ಹಿಡಿದರು. ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಪೂರ್ಣ ಪಟ್ಟಿಯನ್ನು ಕೇಳಿದರು.
ಈ ವೇಳೆ, ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ಮಾಡಿರುವ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ತಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸಬಹುದು ಎಂದು ಸ್ಪೀಕರ್ ಓಂ ಬಿರ್ಲಾ ಪ್ರತಿಭಟನಾ ನಿರತ ಸಂಸದರಿಗೆ ತಿಳಿಸಿದರು.
“ಗೌರವಾನ್ವಿತ ರಾಷ್ಟ್ರಪತಿಗಳು ಮಹಾ ಕುಂಭ ಮೇಳದ ದುರಂತದ ಬಗ್ಗೆ ಉಲ್ಲೇಖಿಸಿದ್ದಾರೆ. ಚರ್ಚೆಯ ಸಮಯದಲ್ಲಿ ನೀವು ನಿಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸಬಹುದು” ಎಂದರು.
ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗುವ ಪ್ರಶ್ನೋತ್ತರ ಅವಧಿಗೆ ಅಡ್ಡಿಪಡಿಸಬಾರದು. ವಿರೋಧ ಪಕ್ಷದ ಸದಸ್ಯರು ಸದನವನ್ನು ಸುಗಮವಾಗಿ ನಡೆಸಲು ಅವಕಾಶ ನೀಡಬೇಕು ಎಂದು ಓಂ ಬಿರ್ಲಾ ಕೋರಿದರು.
ಚರ್ಚೆಯಲ್ಲಿ ಭಾಗವಹಿಸಲು ಸದಸ್ಯರು ದಿನಗಟ್ಟಲೆ ಕಾಯುವುದರಿಂದ ಪ್ರಶ್ನೋತ್ತರ ಅವಧಿ ಸುಗಮವಾಗಿ ನಡೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಸದನ ಸರಿಯಾಗಿ ನಡೆಯುವುದು ನಿಮಗೆ ಇಷ್ಟವಿಲ್ಲ. ಜನರು ನಿಮ್ಮನ್ನು ಆಯ್ಕೆ ಮಾಡಿದ್ದು ಸದನವನ್ನು ಅಡ್ಡಿಪಡಿಸಲು ಮತ್ತು ಘೋಷಣೆಗಳನ್ನು ಕೂಗಲಾ? ಎಂದು ಕೇಳಿದರು.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ವಿರೋಧ ಪಕ್ಷದ ಸದಸ್ಯರ ನಡವಳಿಕೆಯನ್ನು ಖಂಡಿಸಿದರು. “ಇಂತಹ ಅಡ್ಡಿ ಮತ್ತು ಗದ್ದಲ ಒಳ್ಳೆಯದಲ್ಲ” ಎಂದರು.
“ನೀವು (ಸ್ಪೀಕರ್) ಅವರಿಗೆ (ವಿರೋಧ ಪಕ್ಷ) ಪದೇ ಪದೇ ಮನವಿ ಮಾಡಿದ್ದೀರಿ. ಆದರೆ ಅವರು ಕೇಳುತ್ತಿಲ್ಲ” ಎಂದು ಸ್ಪೀಕರ್ ಪರ ವಹಿಸಿ ರಿಜಿಜು ಮಾತನಾಡಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆ ಪ್ರತಿಪಕ್ಷಗಳು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದಾಗ, ಪ್ರಶ್ನೋತ್ತರ ಅವಧಿಗೆ ಯಾವುದೇ ಅಡ್ಡಿಯಾಗದಂತೆ ಮತ್ತು ಈ ಸಮಯದಲ್ಲಿ ಸದನ ಸುಗಮವಾಗಿ ನಡೆಯುವಂತೆ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸ್ಪೀಕರ್ ಬಿರ್ಲಾ ಹೇಳಿದರು.
ಮಧ್ಯಾಹ್ನ 12 ಗಂಟೆಯ ನಂತರ (ಶೂನ್ಯ ಅವಧಿ) ಎಲ್ಲಾ ಸಂಬಂಧಿತ ಸಮಸ್ಯೆಗಳನ್ನು ಎತ್ತುವಂತೆ ನಾವು ವ್ಯವಸ್ಥೆ ಮಾಡಬೇಕು ಎಂದರು.
ಪ್ರಶ್ನೋತ್ತರ ಅವಧಿ ಮುಗಿದ ನಂತರ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಮತ್ತು ಎಸ್‌ಪಿ ಸೇರಿದಂತೆ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ನಂತರ ಅವರು ಹಿಂತಿರುಗಿದರು.
ರಾಜ್ಯಸಭೆಯಲ್ಲೂ ಪ್ರತಿಭಟನೆ
ಕಳೆದ ವಾರ ಮಹಾ ಕುಂಭ ಮೇಳದಲ್ಲಿ ನಡೆದ ಕಾಲ್ತುಳಿತದಲ್ಲಿ ಹಲವಾರು ಜನರು ಸಾವನ್ನಪ್ಪಿದ ಘಟನೆಯ ಬಗ್ಗೆ ತಕ್ಷಣದ ಚರ್ಚೆಗೆ ಸಭಾಧ್ಯಕ್ಷ ಜಗದೀಪ್ ಧನ್ಕರ್ ಒಪ್ಪದ ಕಾರಣ, ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು ಸದನದಿಂದ ಹೊರ ನಡೆದರು.
ಪಟ್ಟಿ ಮಾಡಲಾದ ವ್ಯವಹಾರ ಸ್ಥಗಿತಗೊಳಿಸಿ, ಮಹಾ ಕುಂಭ ಮೇಳದ ಕಾಲ್ತುಳಿತ ಘಟನೆ ಸೇರಿದಂತೆ ಇತರ ಸಮಸ್ಯೆಗಳ ಕುರಿತ ಚರ್ಚೆಗೆ ಆಗ್ರಹಿಸಿ ನಿಯಮ 267ರ ಅಡಿ 9 ನೋಟಿಸ್‌ಗಳನ್ನು ಸ್ವೀಕರಿಸಿದ್ದಾಗಿ ಜಗದೀಪ್ ಧನ್ಕರ್ ತಿಳಿಸಿದರು.
ಪ್ರಮೋದ್ ತಿವಾರಿ ಮತ್ತು ದಿಗ್ವಿಜಯ ಸಿಂಗ್ (ಕಾಂಗ್ರೆಸ್), ಸಾಗರಿಕಾ ಘೋಷ್ (ಟಿಎಂಸಿ), ಜಾವೇದ್ ಅಲಿ ಮತ್ತು ರಾಮ್‌ಜಿ ಲಾಲ್ ಸುಮನ್ (ಸಮಾಜವಾದಿ ಪಕ್ಷ), ಮತ್ತು ಜಾನ್ ಬ್ರಿಟಾಸ್ (ಸಿಪಿಐ) ಮಹಾಕುಂಭ ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸಿ ನೋಟಿಸ್ ನೀಡಿದ್ದಾರೆ ಎಂದು ಹೇಳಿದರು.
ಸಂವಿಧಾನ ಮತ್ತು ಅಂಬೇಡ್ಕರ್‌ಗೆ ಅವಮಾನ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವರು ನೀಡಿದ ತಾರತಮ್ಯ ಮತ್ತು ಜಾತಿವಾದಿ ಹೇಳಿಕೆಗಳು ನೋಟಿಸ್‌ಗಳಲ್ಲಿ ಪ್ರಸ್ತಾಪಿಸಿದ ವಿಷಯಗಳು ಎಂದು ವರದಿಯಾಗಿದೆ.
ನಿಯಮ 267ರ ಅಡಿಯಲ್ಲಿನ ನೋಟಿಸ್‌ಗಳಿಗೆ ಸಂಬಂಧಿಸಿದಂತೆ ತಮ್ಮ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ಧನ್ಕರ್ ಅವರು, ನೋಟಿಸ್‌ಗಳನ್ನು ಅನುಮೋದಿಸಲಿಲ್ಲ ಮತ್ತು ನಿಗದಿತ ಶೂನ್ಯ ವೇಳೆಯಲ್ಲಿ ಮುಂದುವರೆದರು. ಆ ಸಮಯದಲ್ಲಿ ಸದಸ್ಯರು ಅಧ್ಯಕ್ಷರ ಅನುಮತಿಯೊಂದಿಗೆ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.
ನೋಟಿಸ್ ತಿರಸ್ಕಾರವು ಅಧಿವೇಶನದಲ್ಲಿ ಕಾಂಗ್ರೆಸ್, ಎಸ್‌ಪಿ, ಡಿಎಂಕೆ, ಎಎಪಿ, ಆರ್‌ಜೆಡಿ, ಸಿಪಿಐ ಮತ್ತು ಸಿಪಿಎಂ ಸೇರಿದಂತೆ ವಿರೋಧ ಪಕ್ಷದ ಸಂಸದರ ತೀವ್ರ ಪ್ರತಿಭಟನೆಗೆ ಕಾರಣವಾಯಿತು.
ಬಿಜೆಪಿ ರಾಜ್ಯಾಧ್ಯಕ್ಷನಿಂದ ಸಾಮೂಹಿಕ ಅತ್ಯಾಚಾರ | ಹುದ್ದೆಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ ಹರಿಯಾಣ ಸಚಿವ


