ತಮಿಳುನಾಡಿನ ಮಧುರೈ ಜಿಲ್ಲೆಯ ಪ್ರಸಿದ್ಧ ತಿರುಪರಂಕುಂದ್ರಂ ಮುರುಗನ್ ದೇವಸ್ಥಾನವಿರುವ ಬೆಟ್ಟದ ಮೇಲೆ ಮಾಂಸಾಹಾರ ಸೇವಿಸಿದ ಆರೋಪ ಹೊತ್ತಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸಂಸದರು, “ಆರೋಪವನ್ನು ಸಾಬೀತುಪಡಿಸಬೇಕು ಅಥವಾ ರಾಜೀನಾಮೆ ನೀಡಬೇಕು” ರಾಜ್ಯ ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರಿಗೆ ಸವಾಲು ಹಾಕಿದ್ದಾರೆ.
“ಅಣ್ಣಾಮಲೈ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ನಾನು ತಿರುಪರಂಕುಂದ್ರಂ ದೇವಸ್ಥಾನಕ್ಕೆ ಹೋಗಿ ಬಿರಿಯಾನಿ ತಿಂದಿದ್ದೇನೆ ಎಂದು ಅವರು ಹೇಳಿದರು. ನಾನು ಎಂದಿಗೂ ಬೆಟ್ಟಕ್ಕೆ ಹೋಗಿಲ್ಲ ಅಥವಾ ಮಾಂಸಾಹಾರ (ಆಹಾರ) ತಿಂದಿಲ್ಲ” ಎಂದು ರಾಮನಾಥಪುರಂ ಸಂಸದ ನವಾಸ್ ಕಾನಿ ಹೇಳಿದರು.
ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲಾಗುತ್ತಿದೆ ಎಂದು ಐಯುಎಂಎಲ್ ಸಂಸದರು ಪ್ರತಿಪಾದಿಸಿದರು. “ಬಿಜೆಪಿ ನಾಯಕರಾದ ಅಣ್ಣಾಮಲೈ, ಎಲ್ ಮುರುಗನ್ ಮತ್ತು ವನತಿ ಶ್ರೀನಿವಾಸನ್ ಅವರು ದೇವಾಲಯದ ಆವರಣದಲ್ಲಿ ಮಾಂಸಾಹಾರ ಸೇವಿಸಿದ್ದೇನೆ ಎಂದು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಣ್ಣಾಮಲೈ ತಮ್ಮ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ, ಅವರು ರಾಜೀನಾಮೆ ನೀಡಲು ಸಿದ್ಧರಿದ್ದಾರೆಯೇ” ಎಂದು ಅವರು ಸವಾಲು ಹಾಖಿದರು.
ಅವರ ಜೊತೆಗಿದ್ದ ಯಾರಾದರೂ ಮಾಂಸಾಹಾರ ಸೇವಿಸಿದ್ದಾರೆಯೇ ಎಂದು ಕೇಳಿದಾಗ, “ನಾನು ಬೆಟ್ಟಕ್ಕೆ ಹೋಗಲಿಲ್ಲ. ನನ್ನ ಜೊತೆ ಯಾರೂ ಬಂದಿಲ್ಲ. ನನ್ನ ಜೊತೆ ಬಂದವರು ಯಾರೂ ಮಾಂಸಾಹಾರ ಸೇವಿಸಲಿಲ್ಲ” ಎಂದು ಸ್ಪಷ್ಟನೆ ನೀಡಿದರು.
ಆದರೆ ಗುರುವಾರ ಮಾತನಾಡಿದ್ದ ಅವರು, “ನಾನು ಮಾಂಸಾಹಾರ ಸೇವಿಸಿಲ್ಲ. ಬೇರೆಯವರು ಸೇವಿಸಿದ್ದಾರೆ” ಎಂದು ಹೇಳಿದ್ದರು.
ಅರುಲ್ಮಿಗು ಸುಬ್ರಮಣಿಯಸ್ವಾಮಿ ದೇವಸ್ಥಾನದ ಜೊತೆಗೆ, ಸಿಕಂದರ್ ಬಾದುಷಾ ದರ್ಗಾ ಕೂಡ ಇರುವ ತಿರುಪರಂಕುಂದ್ರಂ ಬೆಟ್ಟಕ್ಕೆ ಪ್ರಾಣಿಗಳನ್ನು ಸಾಗಿಸುವುದನ್ನು ಪೊಲೀಸರು ನಿಲ್ಲಿಸಿದ ನಂತರ ಮಾಂಸಾಹಾರಿ ಆಹಾರದ ವಿವಾದ ಭುಗಿಲೆದ್ದಿತು.
ಬೆಟ್ಟಕ್ಕೆ ಬಲಿ ನೀಡಲು ಪ್ರಾಣಿಗಳನ್ನು ಸಾಗಿಸುವುದನ್ನು ಪೊಲೀಸರು ನಿಲ್ಲಿಸಿದರು. ಇದು ಜನರು ಮತ್ತು ಪೊಲೀಸರ ನಡುವೆ ಘರ್ಷಣೆಗೆ ಕಾರಣವಾಯಿತು. ಕಾನಿ ಈ ವಿಷಯವನ್ನು ವಿವರಿಸುತ್ತಾ, “ಬಲಿ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಪೊಲೀಸರು ಮತ್ತು ಜಿಲ್ಲಾಡಳಿತವು ಪ್ರಾಣಿ ಬಲಿ ಮೊದಲು ಪ್ರಚಲಿತವಾಗಿದೆಯೇ ಎಂದು ನೋಡಲು ವಿಚಾರಣೆ ನಡೆಸುತ್ತಿದೆ, ಹಾಗಿದ್ದಲ್ಲಿ ಅವರು ಅದನ್ನು ಅನುಮತಿಸುತ್ತಾರೆ” ಎಂದಿದ್ದರು.
ತಮಿಳುನಾಡು ವಕ್ಫ್ ಮಂಡಳಿಯ ಅಧ್ಯಕ್ಷರೂ ಆಗಿರುವ ಕಾನಿ, ವಕ್ಫ್ ಮಂಡಳಿಯ ಸುತ್ತಲಿನ ಭೂ ವಿವಾದದ ವಿಷಯದ ಬಗ್ಗೆಯೂ ಮಾತನಾಡಿದರು. “ಐವತ್ತು ಪ್ರತಿಶತ ಭೂಮಿ ಮತ್ತು ದರ್ಗಾ ವಕ್ಫ್ ಮಂಡಳಿಗೆ ಸೇರಿದ್ದು. ಅದನ್ನು ಸರ್ಕಾರಿ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ” ಎಂದು ಅವರು ಹೇಳಿದರು.
ಅಣ್ಣಾಮಲೈ ಮೊದಲು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ, ಕಾನಿ ಪವಿತ್ರ ಬೆಟ್ಟದ ಮೇಲೆ ಮಾಂಸಾಹಾರಿ ಆಹಾರವನ್ನು ಸೇವಿಸುತ್ತಿದ್ದಾರೆ ಎಂದು ಆರೋಪಿಸಿ ಪೋಸ್ಟ್ ಮಾಡಿದರು.
“ನಿರ್ದಿಷ್ಟವಾಗಿ ಹೇಳುವುದಾದರೆ, ಸಂಸತ್ ಸದಸ್ಯರಾದ ನವಾಜ್ ಗನಿ. ಎರಡು ಪಕ್ಷಗಳ ನಡುವೆ ವಿಭಜನೆಯನ್ನು ಪ್ರಚೋದಿಸುವ ಸಲುವಾಗಿ ಮಾಂಸಾಹಾರಿ ಆಹಾರವನ್ನು ಸೇವಿಸಿದರು, ಇದು ಸಂಪೂರ್ಣವಾಗಿ ತಪ್ಪು ಕೃತ್ಯ ಮಾತ್ರವಲ್ಲ, ಧಾರ್ಮಿಕ ಅಶಾಂತಿಗೆ ಕಾರಣವಾಗುವ ಕೃತ್ಯವೂ ಆಗಿದೆ” ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ; ಧ್ವನಿವರ್ಧಕ ಯಾವುದೇ ಧರ್ಮದ ಅವಿಭಾಜ್ಯ ಅಂಗವಲ್ಲ – ಬಾಂಬೆ ಹೈಕೋರ್ಟ್ ಆದೇಶ


