ಮೇ 19 ರಂದು ಪುಣೆಯ ಕಲ್ಯಾಣಿ ನಗರದಲ್ಲಿ ಕುಡಿದ ಅಮಲಿನಲ್ಲಿ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಗುದ್ದಿ, ಅವರ ಸಾವಿಗೆ ಕಾರಣನಾದ 17 ವರ್ಷದ ಅಪ್ರಾಪ್ತರ ಕುಟುಂಬವೂ ಕುಡಿದ ಅಮಲಿನಲ್ಲಿ ಆಸ್ಪತ್ರೆಗೆ ಬಂದಿತ್ತು ಎಂದು ತಿಳಿದುಬಂದಿದೆ. ತಮ್ಮ ಮಗನನ್ನು ಉಳಿಸಲು ಕುಟುಂಬವು ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಪಿತೂರಿ ನಡೆಸಲು ಪ್ರಯತ್ನಿಸಿದೆ ಎಂದು ಪುಣೆ ಪೊಲೀಸರು ಹೇಳಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಎನ್‌ಡಿಟಿವಿ’ ವರದಿ ಮಾಡಿದೆ.
ಆರೋಪಿಯ ತಂದೆ, ತಾಯಿ ಮತ್ತು ಸಹೋದರ ಅವರು ಸಾಸೂನ್ ಆಸ್ಪತ್ರೆಗೆ ಬಂದಾಗ ಪಾನಮತ್ತರಾಗಿದ್ದರು. ಅಪ್ರಾಪ್ತ ಬಾಲಕನ ರಕ್ತದ ಮಾದರಿಗಳನ್ನು ಬದಲಾಯಿಸಲು ವೈದ್ಯರಿಗೆ ಲಂಚ ನೀಡಿ, ಆತನನ್ನು ಈ ಪ್ರಕರಣದಿಂದ ಉಳಿಸುವಂತೆ ಆದೇಶವನ್ನು ನೀಡಿದ್ದರು. ಇದು ಅಪ್ರಾಪ್ತರ ರಕ್ತದಲ್ಲಿನ ಆಲ್ಕೋಹಾಲ್ ಮಟ್ಟವನ್ನು ಸುಳ್ಳು ಮಾಡುವ ಪ್ರಯತ್ನವಾಗಿತ್ತು ಎಂದು ತಿಳಿದುಬಂದಿದೆ.
ಅಪ್ರಾಪ್ತ ಬಾಲಕನ ರಕ್ತದ ಮಾದರಿಗಳನ್ನು ಅವನ ತಂದೆ ಅಥವಾ ಸಹೋದರನೊಂದಿಗೆ ವಿನಿಮಯ ಮಾಡಿಕೊಳ್ಳುವುದು ಮೂಲ ಯೋಜನೆಯಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ. ಆದರೆ, ಅವರಿಬ್ಬರೂ ತುಂಬಾ ಕುಡಿದಿದ್ದರಿಂದ, ಅವರ ತಾಯಿಯಿಂದ ರಕ್ತದ ಮಾದರಿಯನ್ನು ತೆಗೆದುಕೊಳ್ಳಲಾಗಿದೆ, ನಂತರ ಅವರನ್ನು ಪ್ರಕರಣದಲ್ಲಿ ಬಂಧಿಸಲಾಯಿತು.
ಪ್ರಕರಣದ ಪ್ರತ್ಯಕ್ಷದರ್ಶಿಗಳ ಪ್ರಕಾರ, ಹುಡುಗ ತುಂಬಾ ಕುಡಿದು ನಡೆದಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಆದರೆ, ಪ್ರಾಥಮಿಕ ಪರೀಕ್ಷೆಯ ಸಮಯದಲ್ಲಿ ರಕ್ತ ಪರೀಕ್ಷೆಯ ವರದಿಗಳು ಅವನ ರಕ್ತದಲ್ಲಿ ಆಲ್ಕೋಹಾಲ್ ಇರಲಿಲ್ಲ ಎಂದು ಹೇಳಿವೆ. ರಕ್ತದ ಮಾದರಿಗಳನ್ನು ವಿನಿಮಯ ಮಾಡಿಕೊಂಡಿದ್ದಕ್ಕಾಗಿ ಸಸೂನ್ ಆಸ್ಪತ್ರೆಯ ಇಬ್ಬರು ವೈದ್ಯರು, ಆಸ್ಪತ್ರೆಯ ಸಿಬ್ಬಂದಿ ಮತ್ತು ಇಬ್ಬರು ಮಧ್ಯವರ್ತಿಗಳನ್ನು ಈಗಾಗಲೇ ಬಂಧಿಸಲಾಗಿದೆ.
ಘಟನೆಯ ಸಮಯದಲ್ಲಿ ಕಾರಿನಲ್ಲಿದ್ದ ಇತರ ಇಬ್ಬರು ಅಪ್ರಾಪ್ತರ ರಕ್ತದ ಮಾದರಿಗಳನ್ನು ಬದಲಾಯಿಸಲು ಪ್ರಯತ್ನಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಮೂರು ಗಂಡು ಮಕ್ಕಳಿಗೆ ತಾಯಿಯ ರಕ್ತವನ್ನು ಬಳಸುವುದು ಮೂಲ ಯೋಜನೆಯಾಗಿತ್ತು. ಆದರೆ, ರಕ್ತದ ಗುಂಪು ಹೊಂದಿಕೆಯಾಗದ ಕಾರಣ ತೊಡಕಾಗಿತ್ತು ಎಂದು ವರದಿ ಮಾಡಲಾಗಿದೆ.
ಪುಣೆ ಪೊಲೀಸರು ಗುರುವಾರ ಪೋರ್ಷೆ ಹಿಟ್ ಅಂಡ್ ರನ್ ಪ್ರಕರಣದಲ್ಲಿ 17 ವರ್ಷದ ಬಾಲಾಪರಾಧಿ ವಿರುದ್ಧ ಸಾಕ್ಷ್ಯ ನಾಶ ಮತ್ತು ನಕಲಿ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅಪರಾಧಗಳನ್ನು ಸೇರಿಸಿದ್ದಾರೆ. ಹೊಸ ಆರೋಪಗಳನ್ನು ಒಳಗೊಂಡ “ಪೂರಕ ಅಂತಿಮ ವರದಿ” ಯನ್ನು ಇಲ್ಲಿನ ಬಾಲ ನ್ಯಾಯ ಮಂಡಳಿ (ಜೆಜೆಬಿ) ಮುಂದೆ ಸಲ್ಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಘಟನೆಯ ಸಮಯದಲ್ಲಿ ಕಾರಿನ ವೇಗದ ಬಗ್ಗೆ ತಾಂತ್ರಿಕ ದತ್ತಾಂಶವನ್ನು ಹೊಸದಾಗಿ ಸೇರಿಸಲಾದ ವಿಭಾಗಗಳನ್ನು ದೃಢೀಕರಿಸಲು ಸಾಕ್ಷಿಗಳ ಹೇಳಿಕೆಗಳ ಜೊತೆಗೆ ವರದಿಯಲ್ಲಿ ಸೇರಿಸಲಾಗಿದೆ.
ಇದನ್ನೂ ಓದಿ; ತೆಲಂಗಾಣ: ಶವ ಸಂಸ್ಕಾರ ಮಾಡದಂತೆ ದಲಿತ ಕುಟುಂಬವನ್ನು ತಡೆದ ರಿಯಲ್ ಎಸ್ಟೇಟ್ ಏಜೆಂಟ್‌ಗಳು


