ಡಾ.ರಾಜ್‌ಕುಮಾರ್ ಕುಟುಂಬದ ಮಹಾನ್ ಪ್ರತಿಭೆ, ಮೇರು ನಟ, ಸಹೃದಯಿ ಪುನೀತ್ ರಾಜ್‌ಕುಮಾರ್ ಅವರು ನಾಲ್ಕು ದಶಕಗಳ ಸಿನಿಮಾ ಪಯಣವನ್ನು ಮುಗಿಸಿ ಇಹಲೋಹ ತ್ಯಜಿಸಿದ್ದಾರೆ.
ಬಾಲ ನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟ ಪುನೀತ್ ರಾಜ್‌ಕುಮಾರ್ ಅವರು ಕನ್ನಡಿಗರ ಹೃದಯದಲ್ಲಿ ನೆಲೆಸಿದರು. ನಟರಾಗಿ ಅಷ್ಟೇ ಆಗಿ ಉಳಿಯದೇ ಕನ್ನಡ ಚಿತ್ರರಂಗದಲ್ಲಿ ಹೊಸ ನೀರು ಹರಿಯಬೇಕೆಂದು ಹಂಬಲಿಸಿದ ವ್ಯಕ್ತಿ ಅವರಾಗಿದ್ದರು. ಚಿತ್ರರಂಗಕ್ಕೆ ಹೊಸದಾಗಿ ಕಾಲಿಟ್ಟವರನ್ನು ಪೊರೆಯುತ್ತಿದ್ದರು. ಸೋತವರಿಗೆ ಮತ್ತೊಂದು ಅವಕಾಶ ದೊರಕಿಸಿ ನೆಲೆ ನಿಲ್ಲಲು ಬೆನ್ನೆಲುಬಾಗಿದ್ದರು.
ಪುನೀತ್ ರಾಜ್‌ಕುಮಾರ್ ಮತ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಮಾಲೀಕತ್ವದ ಪಿ.ಆರ್.ಕೆ.ಪ್ರೊಡಕ್ಷನ್ಸ್ ಹೊಸ ತಂತ್ರಜ್ಞರು, ಯುವ ಪ್ರತಿಭೆಗಳನ್ನು ಹುಟ್ಟು ಹಾಕುವ ವೇದಿಕೆಯಾಗಿ ಹೊಮ್ಮಿದೆ. ಹೊಸ ಪ್ರತಿಭೆಗಳಿಗೆ ಪುನೀತ್ ರಾಜ್‌ಕುಮಾರ್ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.

2017ರಲ್ಲಿ ಸ್ಥಾಪನೆಯಾದ ಪಿ.ಆರ್.ಕೆ. ಪ್ರೊಡಕ್ಷನ್ಸ್ 2019ರಲ್ಲಿ ‘ಕವಲುದಾರಿ’ ಸಿನಿಮಾವನ್ನು ನಿರ್ಮಾಣ ಮಾಡಿತು. 2016ರಲ್ಲಿ ‘ಗೋದಿ ಬಣ್ಣ ಸಾಧಾರಣ ಮೈಕಟ್ಟು’ ಎಂಬ ಅತ್ಯುತ್ತಮ ಸಿನಿಮಾ ನೀಡಿದ ಹೇಮಂತ್ ಎಂ.ರಾವ್ ಅವರು ತಮ್ಮ ಎರಡನೇ ಸಿನಿಮಾ ‘ಕವಲುದಾರಿ’ ನಿರ್ದೇಶನಕ್ಕೆ ಪಿಆರ್‌ಕೆ ಅವಕಾಶ ನೀಡಿತು. ಯುವ ಪ್ರತಿಭೆ ರಿಷಿ ಹಾಗೂ ಹಿರಿಯ ನಟ ಅನಂತನಾಗ್ ಅವರು ಅಭಿನಯಿಸಿದ್ದ ಈ ಸಿನಿಮಾ, ಥ್ರಿಲ್ಲರ್ ಕಥೆಯೊಂದಿಗೆ ವಿಶಿಷ್ಟ ಅನುಭವವನ್ನು ಪ್ರೇಕ್ಷಕರಿಗೆ ನೀಡಿತು.
2020ರಲ್ಲಿ ತೆರೆಕಂಡ ‘ಮಾಯಾಬಜಾರ್’ ಹಾಸ್ಯಪ್ರಧಾನ ಸಿನಿಮಾ. ರಾಧಾಕೃಷ್ಣ ರೆಡ್ಡಿ ಎಂಬ ಹೊಸ ಪ್ರತಿಭೆ ನಿರ್ದೇಶನ ಮಾಡಲು ಪಿಆರ್‌ಕೆ ಪ್ರೊಡಕ್ಷನ್ ಅವಕಾಶ ನೀಡಿತು. ರಾಜ್ ಬಿ.ಶೆಟ್ಟಿ, ವಶಿಷ್ಟ ಎನ್.ಸಿಂಹ, ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ಸುಧಾರಾಣಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ದುಡ್ಡಿನ ಅನಿವಾರ್ಯತೆ ಹೊಂದಿದ್ದ ಪ್ರಾಮಾಣಿಕ ಪೊಲೀಸ್ ಅಧಿಕಾರಿ, ಒಬ್ಬ ಕಳ್ಳ ಹಾಗೂ ಜೀವನದಲ್ಲಿ ಸೆಟಲ್ ಆಗಬೇಕೆಂದು ಪರಿತಪಿಸುತ್ತಿರುವ ಪ್ರೇಮಿಯ ಸುತ್ತ ಎಣೆದ ಈ ಸಿನಿಮಾ, ನವಿರಾದ ಹಾಸ್ಯವನ್ನು ಕನ್ನಡಿಗರಿಗೆ ಉಣಬಡಿಸಿತ್ತು.
ಕೋವಿಡ್ ಬಿಕ್ಕಟ್ಟಿನಿಂದಾಗಿ ಜನರು ಓಟಿಟಿ ವೇದಿಕೆಯಲ್ಲಿ ಸಿನಿಮಾಗಳನ್ನು ನೋಡಲು ಶುರು ಮಾಡಿದರು. ಇತರೆ ಭಾಷಿಯ ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದ್ದಾಗ, ಕನ್ನಡದವರೂ ನೇರವಾಗಿ ಓಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡುವತ್ತ ಹೆಜ್ಜೆ ಇರಿಸಲು ಪಿಆರ್‌ಕೆ ಪ್ರೊಡಕ್ಷನ್ಸ್ ಕಾರಣವಾಯಿತು. ಪಿಆರ್‌ಕೆ ಪ್ರೊಡಕ್ಷನ್ಸ್‌ನಲ್ಲಿ ಮೂಡಿಬಂದ ‘ಲಾ’ (2020) ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಸಿನಿಮಾ.
ರಘು ಸಮರ್ಥ ಅವರು ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ನಟ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಜ್ವಲ್ ಅವರು ಮೊದಲ ಬಾರಿಗೆ ನಾಯಕ ನಟಿಯಾಗಿ ಅಭಿನಯಿಸಿದ್ದರು. ಕೋರ್ಟ್ ರೂಮ್ ಡ್ರಾಮಾವಾಗಿದ್ದ ಈ ಸಿನಿಮಾಕ್ಕೆ ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ‘ಸ್ಮೈಲ್ ಪ್ಲೀಸ್’ ಸಿನಿಮಾ ನಂತರ ರಘು ಸಮರ್ಥ ‘ಲಾ’ ಸಿನಿಮಾ ನಿರ್ದೇಶಿಸಿದ್ದರು.
ಇದನ್ನೂ ಓದಿರಿ: ಪುನೀತ್ ರಾಜ್‌ಕುಮಾರ್ ನಿಧನ: ಗಣ್ಯರ ಕಂಬನಿ, ಚಿತ್ರನಟ-ನಟಿಯರ ನುಡಿನಮನ
ಓಟಿಟಿಯಲ್ಲಿ ತೆರೆಕಂಡ ‘ಫ್ರೆಂಚ್ ಬಿರಿಯಾನಿ’ ಪಿಆರ್‌ಕೆ ಪ್ರೊಡಕ್ಷನ್ಸ್‌ನ ಮತ್ತೊಂದು ಸಿನಿಮಾ. ಪನ್ನಗ ಭರಣ (ಖ್ಯಾತ ನಿರ್ದೇಶಕ ಟಿ.ಆರ್.ನಾಗಭರಣ ಅವರ ಪುತ್ರ) ಅವರು 2017ರಲ್ಲಿ ‘ಹ್ಯಾಪಿ ನ್ಯೂ ಇಯರ್’ ನಿರ್ದೇಶಿಸಿದ್ದರು. ಆದರೆ ಅಷ್ಟಾಗಿ ಸದ್ದು ಮಾಡಲಿಲ್ಲ. ‘ಫ್ರೆಂಚ್ ಬಿರಿಯಾನಿ’ ಮೂಲಕ ನಿರ್ದೇಶನ ಮುಂದುವರಿಸಲು ಪಿಆರ್‌ಕೆ ಪ್ರೊಡಕ್ಷನ್ ಪ್ರೋತ್ಸಾಹ ನೀಡಿತು.
“ಯಾವುದೇ ಒಬ್ಬ ವ್ಯಕ್ತಿ ಏನೇ ಹೇಳಿದರೂ ಅದನ್ನು ಸರಿಯಾಗಿ ಕೇಳಿಸಿಕೊಳ್ಳಬೇಕು ಇಲ್ಲದೇ ಹೋದರೆ ಒಂದಷ್ಟು ಅನಾಹುತಗಳಾಗುತ್ತವೆ” ಎಂಬುದನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನವನ್ನು ಫ್ರೆಂಚ್ ಬಿರಿಯಾನಿಯಲ್ಲಿ ಮಾಡಲಾಯಿತು. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ಈ ಸಿನಿಮಾಮಕ್ಕೆ ಬಂದವು. ಡ್ಯಾನಿಷ್ ಸೇಟ್, ಸಾಲ್ ಯುಸೆಫ್ ಅಭಿನಯಿಸಿದ್ದರು. ಸಾಮಾಜಿಕ ಮಾಧ್ಯಮವಾದ ಟಿಕ್‌ಟಾಕ್ ಮೂಲಕ ಜನಪ್ರಿಯರಾಗಿದ್ದ ದಿಶಾ ಮದನ್ ಅವರು ಮೊದಲ ಭಾರಿಗೆ ಸಿನಿಮಾದಲ್ಲಿ ಅಭಿನಯಿಸಲು ‘ಫ್ರೆಂಚ್ ಬಿರಿಯಾನಿ’ ಅವಕಾಶ ನೀಡಿತ್ತು.
ಪಿಆರ್‌ಕೆ ನಿರ್ಮಾಣದ ಮತ್ತೊಂದು ಸಿನಿಮಾ ‘ಫ್ಯಾಮಿಲಿ ಪ್ಯಾಕ್’ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಯಾಗಬೇಕಿದೆ. ಅರ್ಜುನ್ ಕುಮಾರ್ ಎಸ್. ನಿರ್ದೇಶಿಸಲು ಪಿಆರ್‌ಕೆ ಅವಕಾಶ ನೀಡಿದೆ. ಈ ಹಿಂದೆ ಲಿಖಿತ್ ಶೆಟ್ಟಿ ಹಾಗೂ ಅರ್ಜನ್ ಕುಮಾರ್ ಅವರು ಸಂಕಷ್ಟಕರ ಗಣಪತಿ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಪಿಆರ್‌ಕೆ ಪ್ರೊಡಕ್ಷನ್ಸ್ ಈ ಹೊಸ ಪ್ರತಿಭೆಗಳು ಬೆಳೆಯಲು ಅವಕಾಶ ನೀಡಿದೆ. ರಂಗಾಯಣ ರಘು, ಅಚ್ಯುತ್ ಕುಮಾರ್, ದತ್ತಣ್ಣ, ತಿಲಕ್, ನಾಗಭೂಷಣ್ ಮುಖ್ಯಭೂಮಿಕೆಯಲ್ಲಿ ಇದ್ದಾರೆ.
‘ರಾಮ್ ರಾಮ ರೇ’, ‘ಒಂದಲ್ಲ ಎರಡಲ್ಲ’ ಥರದ ಸಂವೇದನಾಶೀಲ ಸಿನಿಮಾಗಳನ್ನು ನಿರ್ದೇಶಿಸಿರುವ ಡಿ.ಸತ್ಯಪ್ರಕಾಶ್ ಅವರು ತಮ್ಮ ಮುಂದಿನ ಸಿನಿಮಾವನ್ನು ಪಿಆರ್‌ಕೆ ಮೂಲಕ ಹೊರ ತರುತ್ತಿದ್ದಾರೆ. ಚಿತ್ರೀಕರಣ ಮುಕ್ತಾಯವಾಗಿದೆ. ರಾಘವ್ ನಾಯಕ್, ಪ್ರಶಾಂತ್ ರಾಜ್ ಅವರ ನಿರ್ದೇಶನದಲ್ಲಿ ಮೂಡಿರುವ ಸಿನಿಮಾಕ್ಕೆ ಪಿಆರ್‌ಕೆ ನಿರ್ಮಾಣದ ಹೊಣೆ ಹೊತ್ತಿದೆ.
‘ಎರಡು ನಿಮಿಷ ಮಾತನಾಡಿದರೂ ತನ್ಮಯತೆ ಇರುತ್ತಿತ್ತು’
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಜಟ್ಟ, ಮೈತ್ರಿ, ಅಮರಾವತಿ ಸಿನಿಮಾಗಳ ನಿರ್ದೇಶಕ ಬಿ.ಎಂ.ಗಿರಿರಾಜ್, ಮೈತ್ರಿ ಸಿನಿಮಾ ನಿರ್ದೇಶಿಸುವಾಗ ಪುನೀತ್ ರಾಜ್‌ಕುಮಾರ್ ಅವರೊಂದಿಗಿನ ಅನುಭವಗಳನ್ನು ಹಂಚಿಕೊಂಡರು.
“ಪುನೀತ್ ರಾಜ್‌ಕುಮಾರ್ ಅವರ ದೊಡ್ಡತನವೆಂದರೆ ನೀವು ಅಪರಿಚಿತರಿದ್ದರೂ ಅವರ ಬಳಿ ಎರಡು ನಿಮಿಷ ಮಾತನಾಡಿದರೂ ಆ ಎರಡು ನಿಮಿಷ ನಿಮಗೆ ವಿಶೇಷವೆನಿಸುತ್ತಿತ್ತು. ಈ ಸಮಯ ನಿಮಗಾಗಿ ಮೀಸಲಾಗಿದೆ ಎಂಬುದನ್ನು ಪುನೀತ್ ರಾಜ್‌ಕುಮಾರ್ ಅವರು ಮನದಟ್ಟು ಮಾಡಿ ಮಾತನಾಡುತ್ತಿದ್ದರು. ನಾನು ಅವರ ಮನೆಗೆ ಮೈತ್ರಿ ಸಿನಿಮಾದ ಕತೆ ಹೇಳಲು ಹೋದಾಗ ನಾನು ಯಾರು ಎಂಬುದು ಯಾರಿಗೂ ಗೊತ್ತಿರಲಿಲ್ಲ. ಆಗ ನನ್ನ ಯಾವ ಸಿನಿಮಾವೂ ಬಿಡುಗಡೆಯಾಗಿರಲಿಲ್ಲ. ಅವರೇ ಬಂದು ಕರೆದುಕೊಂಡು ಹೋಗಿ ಬಹಳ ಪ್ರೀತಿಯಿಂದ ಮಾತನಾಡಿದರು. ಅವರು ಇಲ್ಲ ಎಂದು ಹೇಳಿದರೂ, ನಮಗೆ ಯಾರಿಗೂ ನೋವಾಗದಂತೆ ಹೇಳುತ್ತಿದ್ದರು. ಅವರು ಹೇಳಿದ್ದನ್ನು ಅಲ್ಲಗಳೆಯಲು ಸಾಧ್ಯವಾಗದಂತೆ ಮನದಟ್ಟು ಮಾಡುತ್ತಿದ್ದರು” ಎಂದರು ಗಿರಿರಾಜ್.
ಮುಂದುವರಿದು, “ಮೈತ್ರಿ ಸಿನಿಮಾ ಹೆಸರಘಟ್ಟದಲ್ಲಿ ಶೂಟ್ ಆಗುತ್ತಿತ್ತು. ನೂರೈವತ್ತು ಮಕ್ಕಳು ಬಂದಿದ್ದರು. ಸಂಯೋಜಕರು ಮಕ್ಕಳನ್ನು ಎಲ್ಲಿಂದಲೋ ಕರೆತಂದಿದ್ದರು. ಪುನೀತ್ ರಾಜ್ ಕುಮಾರ್ ಅವರು ಮಕ್ಕಳನ್ನು ನೋಡಿ, ಅವರು ಬರಿಗಾಲಲ್ಲಿ ಓಡಾಡುತ್ತಿದ್ದಾರೆ ಎಂದು ಎಲ್ಲ ಮಕ್ಕಳಿಗೂ ಫುಟ್‌ವೇರ್‌ಗಳನ್ನು ತರಿಸಿಕೊಟ್ಟರು. ಅವರು ಮಾಡಿರುವ ಮೈತ್ರಿಯಂತಹ ಸಿನಿಮಾ- ಸ್ಟಾರ್ ನಟರು ರಿಸ್ಕ್ ತೆಗೆದುಕೊಳ್ಳುವಂತಹದ್ದು. ಹೊಸತನ ಬರಬೇಕೆಂಬುದು ಅವರ ಉದ್ದೇಶವಾಗಿತ್ತು. ಕೊನೆಗೆ ಅವರೇ ಪ್ರೊಡಕ್ಷನ್ ಹೌಸ್ ತೆರೆದರು. ಹೊಸ ಬರಹಗಾರರಿಗೆ ಒತ್ತು ನೀಡುತ್ತಿದ್ದರು. ಸ್ಟಾರ್ ನಟರಿಗಿಂತ ರಂಗಭೂಮಿ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದರು. ಜಂಟಲ್ ಮ್ಯಾನ್ ಎಂಬುದಕ್ಕೆ ಮೂರ್ತರೂಪ ಪುನೀತ್ ರಾಜ್‌ಕುಮಾರ್” ಎಂದು ಬಣ್ಣಿಸುತ್ತಾರೆ ಗಿರಿರಾಜ್.
ಇದನ್ನೂ ಓದಿರಿ: ಮತ್ತೆ ಮತ್ತೆ ಗುನುಗುವಂತೆ ಮಾಡುವ ಅಪ್ಪು ಕಂಠಸಿರಿಯಲ್ಲಿ ಮೂಡಿದ ಹಾಡುಗಳಿವು


