ಕಳೆದ ನಾಲ್ಕು ದಶಕಗಳಲ್ಲಿಯೇ ಭೀಕರ ಪ್ರವಾಹವನ್ನು ಎದುರಿಸುತ್ತಿರುವ ಪಂಜಾಬ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ನಲವತ್ತಾರು ಜನರು ಸಾವನ್ನಪ್ಪಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಶನಿವಾರದ ದೈನಂದಿನ ಪ್ರವಾಹ ಬುಲೆಟಿನ್‌ನಲ್ಲಿ ವರದಿಯಾಗಿರುವಂತೆ, ಹೊಸದಾಗಿ ಮೂರು ಸಾವುಗಳು ದಾಖಲಾದ ನಂತರ ಸಾವಿನ ಸಂಖ್ಯೆ 46ಕ್ಕೆ ಏರಿಕೆಯಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈ ಮಾಹಿತಿಯು ಆಗಸ್ಟ್ 1 ರಿಂದ ಸೆಪ್ಟೆಂಬರ್ 6 ರ ನಡುವಿನ ಅವಧಿಯನ್ನು ಒಳಗೊಂಡಿದೆ.
ರಾಜ್ಯ ಸರ್ಕಾರವು ಪ್ರವಾಹದಿಂದ 14,000 ಕೋಟಿ ರೂಪಾಯಿ ನಷ್ಟವನ್ನು ಅಂದಾಜಿಸಿದೆ ಎಂದು ವರದಿಯಾಗಿದೆ.
ಬುಲೆಟಿನ್ ಪ್ರಕಾರ, 1.75 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಹಾನಿಗೊಳಗಾಗಿದ್ದು, 1,996 ಹಳ್ಳಿಗಳ 3.87 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ.
ಪಂಜಾಬ್ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ತಕ್ಷಣಕ್ಕೆ ಆರ್ಥಿಕ ಸಹಾಯ ಕೋರಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಭಾರತೀಯ ಸೇನೆ, ಗಡಿ ಭದ್ರತಾ ಪಡೆ, ಪಂಜಾಬ್ ಪೊಲೀಸರು ಮತ್ತು ಜಿಲ್ಲಾ ಅಧಿಕಾರಿಗಳನ್ನು ಒಳಗೊಂಡ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐಗೆ ತಿಳಿಸಿದೆ.
ಕಳೆದ ಒಂದು ತಿಂಗಳಿನಿಂದ ಪಂಜಾಬ್ ಮತ್ತು ನೆರೆಯ ಪರ್ವತ ರಾಜ್ಯಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಸುಮಾರು 2,000 ಹಳ್ಳಿಗಳ ಮೇಲೆ ಪರಿಣಾಮ ಬೀರಿದೆ ಎಂದು ರಾಜ್ಯ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಹೇಳಿದ್ದಾರೆ.
ಸುಮಾರು 200 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, 7,000 ಕ್ಕೂ ಹೆಚ್ಚು ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಉತ್ತರದಾಯಿತ್ವ ಮತ್ತು ಬೆಂಬಲದ ಅವಶ್ಯಕತೆಯಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಹೇಳಿದ್ದಾರೆ.
ಪಂಜಾಬ್‌ನಲ್ಲಿನ ಬಿಕ್ಕಟ್ಟಿಗೆ ‘ರಾಜಕೀಯ ಅವಕಾಶವಾದ’ಕ್ಕಿಂತ ಸಹಯೋಗದ ಪ್ರತಿಕ್ರಿಯೆಯ ಅಗತ್ಯವಿದೆ ಎಂದಿದ್ದಾರೆ.
ಉತ್ತರ ಭಾರತದ ಇತರ ಭಾಗಗಳಲ್ಲಿಯೂ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಹಿಮಾಚಲ ಪ್ರದೇಶದಲ್ಲಿ ಜೂನ್ 20 ರಿಂದ ಸೆಪ್ಟೆಂಬರ್ 7 ರವರೆಗೆ ಮಳೆ ಸಂಬಂಧಿತ ಘಟನೆಗಳಲ್ಲಿ 366 ಸಾವುಗಳು ಸಂಭವಿಸಿವೆ ಮತ್ತು ಒಟ್ಟು 4,079 ಕೋಟಿ ರೂ. ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಇವುಗಳು ಭಾರೀ ಮಳೆಯಿಂದ ಉಂಟಾದ ಮೇಘಸ್ಪೋಟ, ದಿಢೀರ್ ಪ್ರವಾಹ ಮತ್ತು ಭೂಕುಸಿತಗಳಿಂದಾಗಿ ಸಂಭವಿಸಿವೆ.
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಯಮುನಾ ಕಣಿವೆಯಲ್ಲಿ ಶನಿವಾರ ಮೇಘಸ್ಫೋಟ ಸಂಭವಿಸಿದ್ದು, ನೌಗಾಂವ್ ಪ್ರದೇಶದಲ್ಲಿ ಭಾರಿ ಹಾನಿಯಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಯಮುನಾ ಕಣಿವೆಯ ಸಿಯೋರಿ ಫಾಲ್ ಪಟ್ಟಿ ಎಂಬಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಪ್ರವಾಹದಿಂದ ತುಂಬಿದ ಹೊಳೆಯಿಂದ ಕೆಸರು ತಗ್ಗು ಪ್ರದೇಶಗಳಿಗೆ ನುಗ್ಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಶಾಂತ್ ಆರ್ಯ ತಿಳಿಸಿದ್ದಾರೆ.
ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ ಮತ್ತು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಇಲ್ಲಿಯವರೆಗೆ ಯಾವುದೇ ಜೀವಹಾನಿ ವರದಿಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.