ಕಳೆದ ಮೂರು ದಶಕಗಳಿಗೂ ಹೆಚ್ಚು ಸಮಯದಿಂದ ಅಮೆರಿಕದಲ್ಲಿ ನೆಲೆಸಿದ್ದ 73 ವರ್ಷದ ಪಂಜಾಬಿ ಮಹಿಳೆ
ಹರ್ಜಿತ್ ಕೌರ್ ಅವರನ್ನು ಈ ವಾರ ಭಾರತಕ್ಕೆ ಗಡಿಪಾರು ಮಾಡಲಾಗಿದೆ ಎಂದು ವರದಿಯಾಗಿದೆ. ಇದನ್ನು ವಲಸಿಗರ ಹಕ್ಕುಗಳ ಕಾರ್ಯಕರ್ತರು ‘ಕ್ರೂರ ಮತ್ತು ಅನಗತ್ಯ’ ಎಂದು ಕರೆದಿದ್ದಾರೆ.
ಕೌರ್ ಸೆಪ್ಟೆಂಬರ್ 23ರಂದು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ ಎಂದು indianexpress.com ವರದಿ ಮಾಡಿದೆ.
ಭಾನುವಾರ (ಸೆ.21) ರಾತ್ರಿ ಕೌರ್ ಅವರನ್ನು ಯುಎಸ್ ವಲಸೆ ಮತ್ತು ಕಸ್ಟಮ್ಸ್ ಜಾರಿ (ಐಸಿಇ) ಅಧಿಕಾರಿಗಳು ಅಮೆರಿಕದ ಬೇಕರ್ಸ್‌ಫೀಲ್ಡ್‌ನಿಂದ ಲಾಸ್ ಏಂಜಲೀಸ್‌ಗೆ ಇದ್ದಕ್ಕಿದ್ದಂತೆ ಕರೆದೊಯ್ದರು. ನಂತರ ಚಾರ್ಟರ್ಡ್ ವಿಮಾನದಲ್ಲಿ ಜಾರ್ಜಿಯಾಕ್ಕೆ ಕಳುಹಿಸಿದರು. ಅಲ್ಲಿಂದ ಭಾರತಕ್ಕೆ ಗಡಿಪಾರು ಮಾಡಿದರು ಎಂದು ಕೌರ್ ಪರ ವಕೀಲ ದೀಪಕ್ ಅಹ್ಲುವಾಲಿಯಾ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಕೌರ್ ಅವರ ಗಡಿಪಾರು ಬಹಳ ಕ್ರೂರವಾಗಿ ನಡೆದಿದೆ. ಅವರನ್ನು ದೀರ್ಘ ಸಮಯ ಸಂಕೋಲೆ, ಬರಿಯ ಕಾಂಕ್ರೀಟ್ ಕೊಠಡಿಗಳಲ್ಲಿ ಬಂಧಿಸಲಾಗಿತ್ತು. ಮೂಲಭೂತ ಸೌಕರ್ಯಗಳನ್ನು ನಿರಾಕರಿಸಲಾಗಿತ್ತು. ಕೊನೆಯದಾಗಿ ಆಕೆಗೆ ತನ್ನ ಕುಟುಂಬಕ್ಕೆ ವಿದಾಯ ಹೇಳಲು, ಆಕೆಯ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲೂ ಕೂಡ ಅವಕಾಶ ನೀಡಿರಲಿಲ್ಲ. ಈ ಗಡಿಪಾರು ಅಮಾನವೀಯ ಎಂದು ಅಹ್ಲುವಾಲಿಯಾ ವಿವರಿಸಿದ್ದಾರೆ.
ಕೌರ್ ಅವರ ಕುಟುಂಬವು ಅವರ ಪ್ರಯಾಣದ ದಾಖಲೆಗಳನ್ನು ಸಿದ್ದಗೊಳಿಸಿ ಅವರನ್ನು ವಾಣಿಜ್ಯ ವಿಮಾನದಲ್ಲಿ ವಾಪಸ್ ಕಳುಹಿಸುವಂತೆ ವಿನಂತಿಸಿತ್ತು. ಕೌರ್ ಅವರನ್ನು ವಾಣಿಜ್ಯ ವಿಮಾನದಲ್ಲಿ ಕಳುಹಿಸಿ, ಕೊನೆಯದಾಗಿ ಕೆಲ ಗಂಟೆಗಳ ಕಾಲ ಕುಟುಂಬಕ್ಕೆ ಭೇಟಿಯಾಗಲು ಅವಕಾಶ ಮಾಡಿಕೊಡಿ ಎಂದು ಎರಡು ಬೇಡಿಕೆಗಳನ್ನು ಅಧಿಕಾರಿಗಳ ಮುಂದೆ ಇಡಲಾಗಿತ್ತು. ಆದರೆ, ಅಧಿಕಾರಿಗಳು ಅವುಗಳನ್ನು ತಿರಸ್ಕರಿಸಿದರು ಎಂದು ಅಹ್ಲುವಾಲಿಯಾ ತಿಳಿಸಿದ್ದಾರೆ.
ಹರ್ಜಿತ್ ಕೌರ್ ಅವರ ಗಡಿಪಾರಿಗೆ ವಿರೋಧ ವ್ಯಕ್ತಪಡಿಸಿದ್ದ ಸಿಖ್ ಒಕ್ಕೂಟ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿರುವ ವೃದ್ಧ ವಿಧವೆಯ ಗಡಿಪಾರು ಸ್ವೀಕಾರ್ಹವಲ್ಲ ಎಂದಿತ್ತು.
ಸೆಪ್ಟೆಂಬರ್ 8ರಂದು ಕೌರ್ ಅವರನ್ನು ಬಂಧಿಸಲಾಗಿತ್ತು. ಸ್ಯಾನ್ ಫ್ರಾನ್ಸಿಸ್ಕೋ ಐಸಿಇ ಕಚೇರಿಯಲ್ಲಿ ನಿಯಮಿತ ತಪಾಸಣೆಗಾಗಿ ಹೋಗಿದ್ದಾಗ ಬಂಧಿಸಿ, ಫ್ರೆಸ್ನೋ ಮತ್ತು ಬೇಕರ್ಸ್‌ಫೀಲ್ಡ್‌ನಲ್ಲಿರುವ ಬಂಧನ ಕೇಂದ್ರಗಳಲ್ಲಿ ಇರಿಸಲಾಗಿತ್ತು. ಈ ವೇಳೆ ಅವರಿಗೆ ವೈದ್ಯರು ನಿರಂತರವಾಗಿ ತೆಗೆದುಕೊಳ್ಳಲು ಸೂಚಿಸಿರುವ ಔಷಧಿಗಳನ್ನು ಎರಡು ವಾರಗಳ ನಿರಾಕರಿಸಿಲಾಗಿತ್ತು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಕೌರ್ 1992ರಲ್ಲಿ ಒಂಟಿ ತಾಯಿಯಾಗಿ ಅಮೆರಿಕಕ್ಕೆ ವಲಸೆ ಹೋದವರು. ಭಾರತೀಯ ಸೀರೆ ಅಂಗಡಿಯಲ್ಲಿ ಹೊಲಿಗೆಗಾರ್ತಿಯಾಗಿ ಕೆಲಸ ಮಾಡಿದವರು. ಅಮೆರಿಕ ಸರ್ಕಾರಕ್ಕೆ ತೆರಿಗೆಗಳನ್ನೂ ಪಾವತಿಸಿದವರು. ಅಲ್ಲಿನ ಗುರುದ್ವಾರಗಳಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿದವರು.
ಅವರ ಆಶ್ರಯ ಕೋರಿಕೆಯನ್ನು ತಿರಸ್ಕರಿಸಿ 2005 ರಲ್ಲಿ ಗಡಿಪಾರು ಆದೇಶ ಹೊರಡಿಸಲಾಗಿತ್ತು. ಆದರೂ, 13 ವರ್ಷಗಳಿಗಿಂತ ಹೆಚ್ಚು ಕಾಲ ಅವರು ಐಸಿಇ ನಿಯಮಗಳನ್ನು ಪಾಲಿಸಿಕೊಂಡು, ಚೆಕ್-ಇನ್‌ಗಳಿಗೆ ಹಾಜರಾಗಿಕೊಂಡು ಹಾಗೂ ಭಾರತೀಯ ಕಾನ್ಸುಲೇಟ್‌ನಿಂದ ವಿಳಂಬವಾದ ಪ್ರಯಾಣ ದಾಖಲೆಗಳಿಗಾಗಿ ಕಾಯುತ್ತಾ ಕೆಲಸದ ಪರವಾನಗಿಗಳನ್ನು ನವೀಕರಿಸಿಕೊಂಡು ಇದ್ದರು.
ಅಮೆರಿಕದೊಂದಿಗಿನ ದೀರ್ಘಕಾಲದ ಸಂಬಂಧ ಮತ್ತು ಶುದ್ಧ ದಾಖಲೆಯ ಹೊರತಾಗಿಯೂ, ಹರ್ಜಿತ್ ಕೌರ್ ಅವರ ಅನಿರೀಕ್ಷಿತ ಗಡಿಪಾರು ವಿರೋಧಿಸಿ ಕ್ಯಾಲಿಫೋರ್ನಿಯಾದಲ್ಲಿ ಪ್ರತಿಭಟನೆಗಳು ನಡೆದಿವೆ. ಎಲ್ ಸೋಬ್ರಾಂಟೆಯಲ್ಲಿ ನೂರಾರು ಜನರು ಒಟ್ಟುಗೂಡಿ, “ನಮ್ಮ ಅಜ್ಜಿಯನ್ನು ಬಿಟ್ಟು ಬಿಡಿ, ಹರ್ಜಿತ್ ಕೌರ್ ಇಲ್ಲಿಗೆ ಸೇರಿದವರು” ಎಂದು ಬರೆದಿರುವ ಫಲಕಗಳನ್ನು ಹಿಡಿದು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಯುಎಸ್ ಕಾಂಗ್ರೆಸ್ ಸದಸ್ಯ ಜಾನ್ ಗರಮೆಂಡಿ, ಕ್ಯಾಲಿಫೋರ್ನಿಯಾ ಸೆನೆಟರ್ ಜೆಸ್ಸಿ ಅರೆಗ್ವಿನ್ ಮತ್ತು ಸ್ಥಳೀಯ ನಾಯಕರು ಐಸಿಇಗೆ ತನ್ನ ಕ್ರಮವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ. ಕೌರ್ ಅವರ ಬಂಧನ ‘ತಪ್ಪಾದ ಆದ್ಯತೆ’ ಎಂದು ಹೇಳಿದ್ದಾರೆ.
Courtesy : indianexpress.com


