ಅರುಣಾಚಲ ಪ್ರದೇಶ ಲೋಕಸೇವಾ ಆಯೋಗದ ವಿರುದ್ಧ ಶುಕ್ರವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬಳಿಕ ಇಟಾನಗರದಲ್ಲಿ ನಾಲ್ವರು ಭದ್ರತಾ ಅಧಿಕಾರಿಗಳು ಸೇರಿದಂತೆ ಹತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಪ್ರತಿಭಟನಾಕಾರರ ವಿರುದ್ಧ ಭದ್ರತಾ ಸಿಬ್ಬಂದಿ ಅಶ್ರುವಾಯು ಪ್ರಯೋಗಿಸಿ, ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಪೊಲೀಸ್ ಮಹಾನಿರೀಕ್ಷಕ ಚುಕು ಅಪಾ ಹೇಳಿದ್ದಾರೆ.
“ಕೆಲವು ಪ್ರತಿಭಟನಾಕಾರರು ಮೋಟಾರ್ ಸೈಕಲ್, ನಾಲ್ಕು ಚಕ್ರದ ವಾಹನವನ್ನು ಸುಟ್ಟುಹಾಕಿದಾಗ ಪರಿಸ್ಥಿತಿ ಹಿಂಸಾತ್ಮಕವಾಗಿ ಮಾರ್ಪಟ್ಟಿತು. ಆಸ್ತಿಪಾಸ್ತಿಗಳನ್ನು ಹಾನಿಗೊಳಿಸಲಾಗಿದೆ. ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆದಿದೆ” ಎಂದು ಅಪಾ ತಿಳಿಸಿದ್ದಾರೆ.
“ಯಾವುದೇ ಅಹಿತಕರ ಪರಿಸ್ಥಿತಿಯನ್ನು ಎದುರಿಸಲು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಇಟಾನಗರ ಪ್ರದೇಶದಲ್ಲಿ ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಅರುಣಾಚಲ ಪ್ರದೇಶ ಲೋಕಸೇವಾ ಆಯೋಗದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಇತ್ತೀಚೆಗೆ ಸೋರಿಕೆಯಾಗಿರುವುದನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಜೊತೆಗೆ ಶಂತನು ದಯಾಳ್ ಅವರನ್ನು ಅರುಣಾಚಲ ಪ್ರದೇಶ ಲೋಕಸೇವಾ ಆಯೋಗದ ಪರೀಕ್ಷೆಯ ಅಧ್ಯಕ್ಷರನ್ನಾಗಿ ನೇಮಿಸುವುದಕ್ಕೂ ಪ್ರತಿಭಟನಾಕಾರರು ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯ ನೇತೃತ್ವ ವಹಿಸಿರುವ ಪ್ಯಾನ್ ಅರುಣಾಚಲ ಜಂಟಿ ಸ್ಟೀರಿಂಗ್ ಕಮಿಟಿ (ಪಿಎಜೆಎಸ್‌ಸಿ) ಪ್ರತಿಕ್ರಿಯಿಸಿದ್ದು, “ದಯಾಳ್ ಅವರಿಗೆ 61 ವರ್ಷ ವಯಸ್ಸಾಗಿದೆ. ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಕೇವಲ ಒಂದು ವರ್ಷ ಮಾತ್ರ ಸಾಧ್ಯ. 62 ವರ್ಷಗಳಿಗೆ ಆಯೋಗದಿಂದ ನಿವೃತ್ತಿ ಹೊಂದುವುದು ಕಡ್ಡಾಯವಾಗಿದೆ” ಎಂದಿದೆ.
“ಸರ್ಕಾರ ಮತ್ತು ಆಯೋಗವು ತಮ್ಮ ಪತ್ರಿಕೆ-ಮಾರಾಟದ ವ್ಯವಹಾರವನ್ನು ಪೂರ್ಣಗೊಳಿಸುವ ಉದ್ದೇಶದಲ್ಲಿದೆ. ಅದಕ್ಕಾಗಿಯೇ ಅವರು ಕೇವಲ ಒಂದು ವರ್ಷ ಅಧಿಕಾರದಲ್ಲಿ ಉಳಿಯಲಿರುವ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಿಸಲು ಆತುರಪಡಲಾಗುತ್ತಿದೆ” ಎಂದು ಪಿಎಜೆಎಸ್‌ಸಿ ಸದಸ್ಯ ಗ್ಯಾಮರ್ ಪಡಂಗ್ ಗುರುವಾರ ಆರೋಪಿಸಿದ್ದಾರೆ.
ಇಟಾನಗರದಲ್ಲಿ ವ್ಯಾಪಾರ ಸಂಸ್ಥೆಗಳು, ಮಾರುಕಟ್ಟೆಗಳು, ಬ್ಯಾಂಕ್‌ಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಮತ್ತು ಖಾಸಗಿ ಕಚೇರಿಗಳನ್ನು ಮುಚ್ಚಿ ಒಂದು ದಿನದ ಬಂದ್‌ಗೆ ಕರೆ ನೀಡಲಾಗಿತ್ತು ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿರಿ: ಹರಿರ್ಯಾಣ- ರಾಜಸ್ಥಾನ ಗಡಿ: ಇಬ್ಬರು ಮುಸ್ಲಿಮರನ್ನು ಜೀವಂತವಾಗಿ ಸುಟ್ಟ ದುಷ್ಕರ್ಮಿಗಳು; ಸ್ಥಳೀಯರಲ್ಲಿ ಭೀತಿ
ರಾಜ್ಯದಲ್ಲಿನ ಎಲ್ಲಾ ನೇಮಕಾತಿ ಪರೀಕ್ಷೆಗಳನ್ನು ಕೇಂದ್ರ ಲೋಕಸೇವಾ ಆಯೋಗವು ನಡೆಸುತ್ತದೆ, ಪತ್ರಿಕೆ ಸೋರಿಕೆ ಕುರಿತು ತ್ರಿಸದಸ್ಯ ಸಮಿತಿಯ ವರದಿಯನ್ನು ಸಾರ್ವಜನಿಕಗೊಳಿಸಬೇಕು, ರಾಜ್ಯ ಆಯೋಗದ ಅಡಿಯಲ್ಲಿ ನಿಯೋಜಿಸಲಾದ ಮೂವರು ರಾಜ್ಯ ಸರ್ಕಾರಿ ಅಧಿಕಾರಿಗಳನ್ನು ಹಿಂಪಡೆಯಬೇಕು. ನೊಂದ ಅಭ್ಯರ್ಥಿಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಪಿಎಜೆಎಸ್‌ಸಿ ಒತ್ತಾಯಿಸಿದೆ.
ಅರುಣಾಚಲ ಪ್ರದೇಶ ಲೋಕಸೇವಾ ಆಯೋಗದ ವಿರುದ್ಧದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ, ರಾಜ್ಯ ಸಚಿವ ಸಂಪುಟವು ದಯಾಳ್ ಮತ್ತು ಇತರ ಅಧಿಕಾರಿಗಳ ಪ್ರಮಾಣವಚನ ಸಮಾರಂಭವನ್ನು ಶುಕ್ರವಾರ ರದ್ದುಗೊಳಿಸಿತು.
“ಈ ವಿಷಯವನ್ನು ಅರುಣಾಚಲ ಪ್ರದೇಶದ ಎಲ್ಲಾ ಸಮುದಾಯ-ಆಧಾರಿತ ಸಂಸ್ಥೆಗಳು ಮತ್ತು ಭಾಗಿಧಾರರೊಂದಿಗೆ ಚರ್ಚಿಸಲಾಗುವುದು” ಎಂದು ಕ್ಯಾಬಿನೆಟ್ ತಿಳಿಸಿರುವುದಾಗಿ ಅರುಣಾಚಲ ಟೈಮ್ಸ್ ವರದಿ ಮಾಡಿದೆ.


