Homeಮುಖಪುಟಏಕನಾಥ್ ಶಿಂಧೆ ಬಣವೇ ನಿಜವಾದ ಶಿವಸೇನೆ: ಚುನಾವಣಾ ಆಯೋಗ ಆದೇಶ

ಏಕನಾಥ್ ಶಿಂಧೆ ಬಣವೇ ನಿಜವಾದ ಶಿವಸೇನೆ: ಚುನಾವಣಾ ಆಯೋಗ ಆದೇಶ

- Advertisement -
- Advertisement -

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವೇ ನಿಜವಾದ ಶಿವಸೇನೆ ಎಂದು ಗುರುತಿಸಿ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಚುನಾವಣಾ ಆಯೋಗವು ನಿಗದಿಪಡಿಸಿದೆ.

ಶುಕ್ರವಾರ ಪ್ರಕಟಿಸಲಾದ 78 ಪುಟಗಳ ಆದೇಶದಲ್ಲಿ ಚುನಾವಣಾ ಆಯೋಗವು, “2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಗೆದ್ದ 55 ಅಭ್ಯರ್ಥಿಗಳ ಪೈಕಿ  ಶಿಂಧೆ ಅವರನ್ನು ಬೆಂಬಲಿಸುವ 40 ಶಾಸಕರು ಇದ್ದಾರೆ. ಅವರ ಪರವಾಗಿ ಸುಮಾರು 76% ಮತಗಳು ಬಿದ್ದಿವೆ. ಮತ್ತೊಂದೆಡೆ, ಉದ್ಧವ್ ಠಾಕ್ರೆ ಬಣದ 15 ಶಾಸಕರಿದ್ದು, ಅವರಿಗೆ 23.5% ಮತಗಳು ಬಂದಿವೆ” ಎಂದು ತಿಳಿಸಿದೆ.

“2019ರ ಲೋಕಸಭೆ ಚುನಾವಣೆಯಲ್ಲಿ ಶಿವಸೇನೆಯ ಪರವಾಗಿ ಚಲಾವಣೆಯಾದ ಒಟ್ಟು ಮತಗಳಲ್ಲಿ 73% ಶಿಂಧೆ ಬಣದ 13 ಸಂಸದರು ಪಡೆದರೆ, ಕೇವಲ 27% ಮತಗಳು ಠಾಕ್ರೆ ಪಾಳಯದ ಸಂಸದರಿಗೆ ಬಂದಿವೆ” ಎಂದಿದೆ.

ಶಿವಸೇನೆ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್‌ನ ಒಗ್ಗೂಡಿ ರಚಿಸಿದ ಮಹಾರಾಷ್ಟ್ರದ ಹಿಂದಿನ ಸರ್ಕಾರದ ವಿರುದ್ಧ ಶಿಂಧೆ ಮತ್ತು ಇತರ ಶಾಸಕರ ಗುಂಪು ಬಂಡಾಯವೆದ್ದ ನಂತರ ಮಹಾ ಅಘಾಡಿ ಸರ್ಕಾರವು ಜೂನ್‌ನಲ್ಲಿ ವಿಭಜನೆಯಾಯಿತು.

ಒಂದು ವಾರಕ್ಕೂ ಹೆಚ್ಚು ಕಾಲ ನಡೆದ ರಾಜಕೀಯ ನಾಟಕದ ನಂತರ, ಸಮ್ಮಿಶ್ರ ಸರ್ಕಾರ ಪತನವಾಯಿತು. ಜೂನ್ 30ರಂದು ಶಿಂಧೆಯವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಭಾರತೀಯ ಜನತಾ ಪಕ್ಷದ ದೇವೇಂದ್ರ ಫಡ್ನವಿಸ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಠಾಕ್ರೆ ಮತ್ತು ಶಿಂಧೆ ನೇತೃತ್ವದ ಎರಡು ಬಣಗಳ ನಡುವೆ ನಿಜವಾದ ಶಿವಸೇನೆ ಯಾವುದೆಂಬ ಜಟಾಪಟಿ ಉಂಟಾಗಿತ್ತು. ಅದಕ್ಕಾಗಿ ಚುನಾವಣಾ ಸಂಸ್ಥೆಯನ್ನು ಸಂಪರ್ಕಿಸಿದ್ದವು.

ಶಿಂಧೆ ಅವರನ್ನು ಬಾಳಾಸಾಹೆಬಂಚಿ ಶಿವಸೇನೆ ಎಂದು ಕರೆಯಲಾಗುವುದು ಎಂದು ಚುನಾವಣಾ ಆಯೋಗ ಮಧ್ಯಂತರ ನಿರ್ಧಾರದಲ್ಲಿ ಹೇಳಿತ್ತು. ಈ ಬಣವು ತನ್ನ ಮಧ್ಯಂತರ ಚಿಹ್ನೆಯಾಗಿ ಎರಡು ಕತ್ತಿಗಳು ಮತ್ತು ಗುರಾಣಿಯನ್ನು ಆರಿಸಿಕೊಂಡಿದೆ.

ಮಧ್ಯಂತರ ಹೆಸರು ಮತ್ತು ಚಿಹ್ನೆಯನ್ನು ಸ್ಥಗಿತದಲ್ಲಿ ಇಡಲಾಗುವುದು ಎಂದು ಚುನಾವಣಾ ಸಂಸ್ಥೆ ತಿಳಿಸಿದೆ. ರಾಜ್ಯದಲ್ಲಿ ವಿಧಾನಸಭಾ ಉಪಚುನಾವಣೆ ಮುಗಿಯುವವರೆಗೆ ಉದ್ಧವ್ ಠಾಕ್ರೆ ಬಣವು ತನ್ನ ಮಧ್ಯಂತರ ಚಿಹ್ನೆ – ಜ್ವಾಲೆಯ ಜ್ಯೋತಿಯನ್ನು ಇಟ್ಟುಕೊಳ್ಳಲು ಚುನಾವಣಾ ಆಯೋಗವು ಅನುಮತಿ ನೀಡಿದೆ.

ಶುಕ್ರವಾರ ಸಂಜೆ, ಶಿಂಧೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಚುನಾವಣಾ ಆಯೋಗದ ನಿರ್ಧಾರವು ಸತ್ಯ ಮತ್ತು ಜನರ ವಿಜಯವಾಗಿದೆ. ನಾನು ಚುನಾವಣಾ ಆಯೋಗಕ್ಕೆ ಧನ್ಯವಾದ ಹೇಳುತ್ತೇನೆ. ಪ್ರಜಾಪ್ರಭುತ್ವದಲ್ಲಿ ಬಹುಮತ ಪರಿಗಣನೆಯಾಗುತ್ತದೆ. ಇದು ಬಾಳಾಸಾಹೇಬರ [ಠಾಕ್ರೆ] ಪರಂಪರೆಯ ವಿಜಯವಾಗಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ಅದಾನಿ ಹಗರಣ| ಸುಪ್ರೀಂ ಕೋರ್ಟ್ ಮುಂದಿವೆ ನಾಲ್ಕು ಅರ್ಜಿ

ಚುನಾವಣಾ ಆಯೋಗವು ಅರ್ಹತೆಯ ಆಧಾರದಲ್ಲಿ ನಿರ್ಧಾರ ಕೈಗೊಂಡಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

ಇದರ ನಡುವೆ ಠಾಕ್ರೆ ಬಣದ ಸಂಸದ ಸಂಜಯ್ ರಾವುತ್ ಪ್ರತಿಕ್ರಿಯಿಸಿ, “ಚುನಾವಣಾ ಆಯೋಗದ ನಿರ್ಧಾರವು ಪ್ರಜಾಪ್ರಭುತ್ವದ ಕೊಲೆಯಾಗಿದೆ” ಎಂದು ಬಣ್ಣಿಸಿದ್ದಾರೆ.

“ನಾವು ಈ ನಿರ್ಧಾರವನ್ನು ಪ್ರಶ್ನಿಸುತ್ತೇವೆ. ಇಂತಹ ನಿರ್ಧಾರವನ್ನು ನಿರೀಕ್ಷಿಸಲಾಗಿತ್ತು. ಇದೆಲ್ಲವೂ ಒತ್ತಡದಲ್ಲಿ ನಡೆದಿದೆ. ನನಗೆ ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲ” ಎಂದು ಟೀಕಿಸಿದ್ದಾರೆ.

‘ಶಿವಸೇನೆಯ ಸಂವಿಧಾನ ಪ್ರಜಾಸತ್ತಾತ್ಮಕವಲ್ಲ’

ಚುನಾವಣಾ ಆಯೋಗವು ತನ್ನ ಆದೇಶದಲ್ಲಿ, ಶಿವಸೇನೆ ಪಕ್ಷದ ಸಂವಿಧಾನವು ಪ್ರಜಾಸತ್ತಾತ್ಮಕವಲ್ಲ ಎಂದು ಗುರುತಿಸಿದೆ.

2018ರಲ್ಲಿ ಪಕ್ಷದ ಸಂವಿಧಾನದಲ್ಲಿ ಮಾಡಲಾದ ತಿದ್ದುಪಡಿಗಳ ಬಗ್ಗೆ ಚುನಾವಣಾ ಆಯೋಗಕ್ಕೆ ತಿಳಿಸಲಾಗಿಲ್ಲ ಎಂದು ಅದು ಗಮನಿಸಿದೆ. ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ತಂದ ಪ್ರಜಾಸತ್ತಾತ್ಮಕ ಮಾನದಂಡಗಳನ್ನು ತೆಗೆದುಹಾಕಲಾಗಿದೆ ಎಂದು ಆಯೋಗ ಉಲ್ಲೇಖಿಸಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳು

ಠಾಕ್ರೆ ನೇತೃತ್ವದ ಸರ್ಕಾರದ ಪತನ ಮತ್ತು ಶಿಂಧೆ ಪ್ರಮಾಣ ವಚನಕ್ಕೆ ಕಾರಣವಾದ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಎರಡು ಬಣಗಳು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read