ರಾಹುಲ್ ಗಾಂಧಿಯವರ ಭಾರತೀಯ ಪೌರತ್ವವನ್ನು ರದ್ದುಗೊಳಿಸಲು ಕೋರಿರುವ ತಮ್ಮ ಮನವಿ ಕುರಿತು ನಿರ್ಧರಿಸಲು ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ವಕೀಲ ಸತ್ಯ ಸಬರ್ವಾಲ್ ಮೂಲಕ ಸುಬ್ರಮಣಿಯನ್ ಸ್ವಾಮಿ ಅರ್ಜಿ ಸಲ್ಲಿಸಿದ್ದಾರೆ. ಅದು ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ.
ಆಗಸ್ಟ್ 2019ರಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದ ಸುಬ್ರಮಣಿಯನ್ ಸ್ವಾಮಿ, “ರಾಹುಲ್ ಗಾಂಧಿ ಸ್ವಯಂ ಪ್ರೇರಿತರಾಗಿ ತಾನು ಬ್ರಿಟನ್ ಪ್ರಜೆ ಎಂದು ಬ್ರಿಟಿಷ್ ಸರ್ಕಾರಕ್ಕೆ ಹೇಳಿದ್ದಾರೆ. ಅಲ್ಲದೆ, ಅವರು ಅಲ್ಲಿನ ಪಾಸ್‌ಪೋರ್ಟ್ ಕೂಡ ಹೊಂದಿದ್ದಾರೆ. ಈ ಮೂಲಕ ಭಾರತೀಯ ಪೌರತ್ವ ನಿಯಮಗಳನ್ನು ಉಲ್ಲಂಘಿಸಿದ್ದಾರೆ” ಎಂದು ಆರೋಪಿಸಿದ್ದರು.
ರಾಹುಲ್ ಗಾಂಧಿ ಭಾರತದ ಸಂವಿಧಾನ ವಿಧಿ 9 ಮತ್ತು ಭಾರತೀಯ ಪೌರತ್ವ ಕಾಯ್ದೆ-1955 ಅನ್ನು ಉಲ್ಲಂಘಿಸಿದ್ದಾರೆ. ಇದರಿಂದ ಅವರು ಭಾರತೀಯ ಪೌರತ್ವ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದರು.
ಭಾರತದ ಸಂವಿಧಾನದ 9ನೇ ವಿಧಿಯು ಯಾವುದೇ ವ್ಯಕ್ತಿಯು ಯಾವುದೇ ಇತರ ರಾಷ್ಟ್ರದ ಪೌರತ್ವವನ್ನು ಸ್ವಯಂ ಪ್ರೇರಣೆಯಿಂದ ಪಡೆದುಕೊಂಡರೆ, ಅವರನ್ನು ಭಾರತದ ಪ್ರಜೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳುತ್ತದೆ.
ರಾಹುಲ್ ಗಾಂಧಿಯವರು ಬ್ರಿಟನ್‌ನಲ್ಲಿ 2003ರಲ್ಲಿ ನೊಂದಾಯಿಸಿರುವ ಬ್ಯಾಕ್‌ಆಪ್ಸ್ ಲಿಮಿಟೆಡ್ ಹೆಸರಿನ ಕಂಪನಿಯ ನಿರ್ದೇಶಕರು ಮತ್ತು ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ತನ್ನ ಪತ್ರದಲ್ಲಿ ಹೇಳಿದ್ದರು. ಅಕ್ಟೋಬರ್ 10,2005 ಮತ್ತು ಅಕ್ಟೋಬರ್ 31,2006 ರಂದು ಸಲ್ಲಿಸಿದ ಕಂಪನಿಯ ವಾರ್ಷಿಕ ರಿಟರ್ನ್ಸ್‌ನಲ್ಲಿ ಗಾಂಧಿಯವರು ತಮ್ಮ ರಾಷ್ಟ್ರೀಯತೆಯನ್ನು ಬ್ರಿಟಿಷ್ ಎಂದು ಘೋಷಿಸಿದ್ದರು ಎಂದು ಆರೋಪಿಸಿದ್ದರು.
ಮುಂದುವರೆದು, ಫೆಬ್ರವರಿ 17, 2009 ರಂದು ದಾಖಲಿಸಿರುವ ಕಂಪನಿಯ ವಿಸರ್ಜನೆಯ ಅರ್ಜಿಯಲ್ಲಿ ರಾಹುಲ್ ಗಾಂಧಿಯವರ ರಾಷ್ಟ್ರೀಯತೆಯನ್ನು ಮತ್ತೆ ಬ್ರಿಟಿಷ್ ಎಂದೇ ಉಲ್ಲೇಖಿಸಲಾಗಿದೆ ಎಂದಿದ್ದ ಸ್ವಾಮಿ, ಇದು ಭಾರತದ ಸಂವಿಧಾನ ವಿಧಿ 9 ಮತ್ತು ಭಾರತೀಯ ಪೌರತ್ವ ಕಾಯ್ದೆ-1955 ಉಲ್ಲಂಘಿಸುತ್ತದೆ ಎಂದಿದ್ದರು.
ಸ್ವಾಮಿ ಅವರ ಪತ್ರದ ಹಿನ್ನೆಲೆ ಗೃಹ ಇಲಾಖೆ ಏಪ್ರಿಲ್ 29,2019 ರಂದು ರಾಹುಲ್ ಗಾಂಧಿಯವರಿಗೆ ಪತ್ರ ಬರೆದು ಹದಿನೈದು ದಿನಗಳೊಳಗೆ ಈ ವಿಷಯದಲ್ಲಿ “ವಾಸ್ತವ ಸ್ಥಿತಿಯನ್ನು ತಿಳಿಸುವಂತೆ” ಕೇಳಿಕೊಂಡಿತ್ತು.
ಕಳೆದ ಆಗಸ್ಟ್ 10ರಂದು ತನ್ನ ಹಳೆಯ ಪತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಸ್ವಾಮಿ, “ರಾಹುಲ್ ಗಾಂಧಿ 2003ರಲ್ಲಿ ಬ್ರಿಟಿಷ್ ಪೌರತ್ವ ಪಡೆದು ವಿದೇಶಿ ಪ್ರಜೆಯಾಗಿರುವಾಗ ಮತ್ತು ಲಂಡನ್‌ನಲ್ಲಿ ಬ್ಯಾಕ್ ಓಪ್ಸ್ ಎಂಬ ಕಂಪನಿಯನ್ನು ಪ್ರಾರಂಭಿಸಿರುವಾಗ ಮೋದಿ ಮತ್ತು ಶಾ ಅವರನ್ನು ರಕ್ಷಿಸುತ್ತಿರುವುದು ಏಕೆ? ಅವರ ಭಾರತೀಯ ಪೌರತ್ವ ಅಮಾನ್ಯವಾಗಿದೆ. ಮೋದಿ ರಕ್ಷಣೆ ಮುಂದುವರಿಸಿದರೆ ನಾನು ಮೋದಿ ಮತ್ತು ಶಾ ವಿರುದ್ಧ ಕೇಸು ದಾಖಲಿಸಬೇಕಾಗುತ್ತದೆ” ಎಂದು ಬರೆದುಕೊಂಡಿದ್ದರು.
Why is Modi and Shah protecting Rahul Gandhi when he is a foreign citizen having acquired British Citizenship in 2003, and started a company called Back Opps in London? His Indian citizen is invalid. If Modi continues to protect, I will have to file a case against him Modi&Shah pic.twitter.com/3QsPpi7e8f
— Subramanian Swamy (@Swamy39) August 10, 2024
ಇವತ್ತು (ಆ.16) ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಸ್ವಾಮಿ “ನನ್ನ ಅಸೋಸಿಯೇಟ್ ಅಡ್ವೊಕೇಟ್ ಸತ್ಯ ಸಬರ್ವಾಲ್ ಅವರು ರಾಹುಲ್ ಗಾಂಧಿಯವರನ್ನು ವಿಚಾರಣೆಗೆ ಒಳಪಡಿಸಲು ಮತ್ತು ಅವರ ಭಾರತೀಯ ಪೌರತ್ವವನ್ನು ಏಕೆ ಕಿತ್ತುಕೊಳ್ಳಬಾರದು ಎಂಬ ಕಾರಣವನ್ನು ತೋರಿಸಲು ಗೃಹ ಸಚಿವಾಲಯದ ವಿಫಲತೆಯ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ರಾಹುಲ್ ಗಾಂಧಿಯವರು ಗೃಹ ಸಚಿವಾಲಯಕ್ಕೆ ಉತ್ತರಿಸಲು ನಿರಾಕರಿಸಿದ್ದಾರೆ, ಆದ್ದರಿಂದ ಪಿಐಎಲ್. ನಾನು ಅಸೋಸಿಯೇಟ್ಸ್ ವಿಶೇಷ್ ಕನೋರಿಯಾ ಅವರಿಗೆ ಧನ್ಯವಾದ ಹೇಳುತ್ತೇನೆ” ಎಂದು ತಿಳಿಸಿದ್ದಾರೆ.
My Associate Advocate Satya Sabharwal has filed A PIL on the failure of the Home Ministry to prosecute Rahul Gandhi and show cause why he not be stripped of his Indian citizenship. Rahul Gandhi has refused to reply to HM hence the PIL. I also thank Associates Vishesh Kanoria.
— Subramanian Swamy (@Swamy39) August 16, 2024
ಇದನ್ನೂ ಓದಿ : ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ : ನಾಳೆ (ಆ.17) ದೇಶದಾದ್ಯಂತ ವೈದ್ಯರ ಪ್ರತಿಭಟನೆ


