ಹತ್ತು ವರ್ಷದ ದಲಿತ ಬಾಲಕಿ ಮೇಲೆ ನಿವೃತ್ತ ಪೊಲೀಸ್ ಪೇದೆ ಅತ್ಯಾಚಾರಕ್ಕೆ ಯತ್ನಿಸಿ, ಲೈಂಗಿಕ ಕಿರುಕುಳ ನೀಡಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.
‘ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ’ (ಪೋಕ್ಸೋ) ಹಾಗೂ ‘ಎಸ್‌ಸಿ, ಎಸ್‌ಟಿ ಸಮುದಾಯಗಳ ಮೇಲಿನ ದೌರ್ಜನ್ಯಗಳ ತಡೆ ಕಾಯ್ದೆ’ಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ರಾಮನಗರ ಟೌನ್ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗುವಿನ ತಾಯಿ ಘಟನೆಯ ಕುರಿತು ದೂರು ನೀಡಿದ್ದು, ನಿವೃತ್ತ ಪೊಲೀಸ್ ಪೇದೆ ಮಲ್ಲಿಕಾರ್ಜುನ್ (65) ಎಂಬಾತನ ವಿರುದ್ಧ ಎಫ್‌ಐಆರ್ ಆಗಿದೆ. ಆರೋಪಿಯನ್ನು ಬಂಧಿಸಲಾಗಿದೆ.
ಸಂತ್ರಸ್ತ ಬಾಲಕಿಯ ತಾಯಿ ದೂರಿನಲ್ಲಿ ಹೇಳಿದ್ದೇನು?
“ದಿನಾಂಕ 16-10-2022ರಂದು ಮಧ್ಯಾಹ್ನ 12 ಗಂಟೆ ವೇಳೆಯಲ್ಲಿ ನನ್ನ ಮಗಳು ಹೆದರಿಕೊಂಡು ಹಾಗೂ ಜ್ವರದಿಂದ ಬಳಲುತ್ತಿರುವುದನ್ನು ಗಮನಿಸಿದೆ. ಯಾಕಮ್ಮ? ಏನಾಯಿತು? ಎಂದು ಕೇಳಿದಾಗ, -ಅಮ್ಮ ನನಗೆ ಭಯವಾಗುತ್ತಿದೆ- ಎಂದಳು. ಭಯದಿಂದ ನನ್ನನ್ನು ಬಿಗಿದಪ್ಪಿಕೊಂಡಳು. ಭಯಪಡಬೇಡ ಏನಾಯಿತೆಂದು ಹೇಳು ಎಂದಾಗ ವಿಷಯ ತಿಳಿಸಿದಳು.”
“ದಿನಾಂಕ 14-10-2022ರಂದು (ಶುಕ್ರವಾರ) ಸಂಜೆ 7.30ರ ವೇಳೆಯಲ್ಲಿ ನಮ್ಮ ಗ್ರಾಮದ ಮಲ್ಲಿಕಾರ್ಜುನ್ ಎಂಬವರ ಅಂಗಡಿಗೆ ಹೋಗಿದ್ದೆ. ಆಗ ಆ ಅಂಕಲ್ ನನ್ನ ಬಟ್ಟೆ ಬಿಚ್ಚುವಂತೆ ಗದರಿಸಿದರು ಎಂದು ಮಗಳು ತಿಳಿಸಿದಳು. ಆಗ ನನ್ನ ಮಗಳು ಆಗಲ್ಲ ಎಂದಾಗ ಹೆದರಿಸಿದ್ದಾನೆ. ಬಲವಂತವಾಗಿ ಬಟ್ಟೆ ಬಿಚ್ಚಿಸಿದ್ದಾನೆ.”
“ಅಂಗಡಿ ಮಾಲೀಕನೂ ಆಗಿರುವ ಮಲ್ಲಿಕಾರ್ಜುನ, ತನ್ನ ಹೆಂಡತಿ ಆಟೋದಲ್ಲಿ ಬಂದಿದ್ದು ನೋಡಿದ ತಕ್ಷಣವೇ ನನ್ನ ಮಗಳ ಗುಪ್ತಾಂಗಳನ್ನು ಮುಟ್ಟಿದ್ದಾನೆ. ನನ್ನ ಮಗಳು ಮಲ್ಲಿಕಾರ್ಜುನನ ಕೈಯನ್ನು ಕಚ್ಚಿ ಓಡಿ ಬಂದಿದ್ದಾಳೆ. ಇದರಿಂದ ಭಯಭೀತಳಾಗಿದ್ದ ನನ್ನ ಮಗಳು ಎರಡು ದಿನಗಳಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು.”
“ನಾನು ದಿನಾಂಕ 16-10-2022ರಂದು ಮಧ್ಯಾಹ್ನ 12 ಗಂಟೆಯ ಸಮಯದಲ್ಲಿ ಮಲ್ಲಿಕಾರ್ಜುನ್‌ನ ಹೆಂಡತಿಯ ಹತ್ತಿರ ಘಟನೆಯನ್ನು ವಿವರಿಸಿ, ನನ್ನ ಮಗಳಿಗೆ ಆಗಿರುವ ಅನ್ಯಾಯವನ್ನು ಹೇಳಿದೆ. ಪೊಲೀಸರಿಗೆ ದೂರು ನೀಡಿರೆಂದು ಮಲ್ಲಿಕಾರ್ಜುನ್ ಅವರ ಹೆಂಡತಿ ತಿಳಿಸಿದರು.”
“ಊರಿನ ಗ್ರಾಮಸ್ಥರಿಗೆ ತಿಳಿಸಿದೆ. ನಂತರ ಮಲ್ಲಿಕಾರ್ಜುನ್ ಮನೆ ಹತ್ತಿರ ಹೋಗಿ ನ್ಯಾಯ ಕೇಳಿದಾಗ ನೀವು ‘ಹೊಲೆಯರು, ನಮ್ಮ ಮನೆಯ ಹತ್ತಿರ ಯಾಕೆ ಬಂದಿರಿ ’ ಎಂದು ಜಾತಿ ನಿಂದನೆ ಮಾಡಿದ್ದಾರೆ. ಊರಿನ ಜನರಿಗೂ ಬೈದಿದ್ದಾನೆ. ಊರಿನ ಜನರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.”
-ಹೀಗೆ ನೊಂದ ತಾಯಿ ದೂರು ನೀಡಿದ್ದಾರೆ.
ನ್ಯಾಯಾಂಗ ತನಿಖೆಗೆ ಆಗ್ರಹ
ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ, ಹಿಂಸೆ ಮತ್ತು ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚುತ್ತಲಿವೆ. ಚಿತ್ರದುರ್ಗದಲ್ಲಿ ಮಕ್ಕಳ ಮೇಲೆ ಅತ್ಯಾಚಾರ ನಡೆದಿದೆ. ಮಳವಳ್ಳಿಯಲ್ಲಿ ಮೊನ್ನೆಯಷ್ಟೇ ಬಾಲಕಿ ಮೇಲಿನ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಈಗ ರಾಮನಗರದಲ್ಲಿ ಪ್ರಕರಣದ ವರದಿಯಾಗಿದೆ ಎಂದು ರಾಮನಗರ ಜಿಲ್ಲಾ, ಉಪವಿಭಾಗಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರಾದ ಸಮತಾ ರಾಣಿ, ವಿ.ವೆಂಕಟೇಶ್, ಎನ್.ಹರೀಶ್ ಬೇಸರ ವ್ಯಕ್ತಪಡಿಸಿದ್ದಾರೆ.
“ನಿವೃತ್ತ ಪೊಲೀಸ್ ಪೇದೆ ಮಲ್ಲಿಕಾರ್ಜುನ್ ಅತ್ಯಾಚಾರದ ಆರೋಪಿಯಾಗಿದ್ದು, ಪ್ರಕರಣ ದಾಖಲಿಸುವುದು ವಿಳಂಬವಾಗಿದೆ. ಸಿಡಬ್ಲ್ಯೂಸಿ ಗಮನಕ್ಕೆ ತರುವುದು ತಡವಾಗಿದೆ. ಹೀಗಾಗಿ ತಪ್ಪಿತಸ್ಥ ಪೊಲೀಸರ ವಿರುದ್ಧವೂ ತನಿಖೆ ನಡೆಸಬೇಕು. ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿರಿ: ಮಂಡ್ಯ: ಟ್ಯೂಷನ್‌ಗೆ ಬಂದಿದ್ದ ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿದ ಶಿಕ್ಷಕ
ಮಂಡ್ಯದ ಮಳವಳ್ಳಿಯಲ್ಲಿ ಟ್ಯೂಷನ್‌ಗೆಂದು ತೆರಳಿದ್ದ 6ನೇ ತರಗತಿ ವಿದ್ಯಾರ್ಥಿನಿಯೊಬ್ಬರು ನಿರ್ಮಾಣ ಹಂತದ ಮನೆಯ ಮುಂಭಾಗದಲ್ಲಿದ್ದ ನೀರಿನ ಸಂಪ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಟ್ಯೂಷನ್ ನೀಡುತ್ತಿದ್ದ ಶಿಕ್ಷಕ ಕಾಂತರಾಜು ಬಾಲಕಿಯನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿತ್ತು.
ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ತಮ್ಮ ಮಠದಲ್ಲಿ ಓದುತ್ತಿದ್ದ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಪ್ರಕರಣ ದಾಖಲಾಗಿ, ಬಂಧನದಲ್ಲಿದ್ದಾರೆ. ಅಲ್ಲದೆ ಋತುಮತಿಯಾಗದ ಹೆಣ್ಣುಮಕ್ಕಳ ಮೇಲೂ ಮರುಘಾ ಮಠಾಧೀಶರು ಅತ್ಯಾಚಾರ ಎಸಗಿರುವ ಆರೋಪ ಬಂದಿದೆ.


