ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರ ನಟರಾದ ರನ್ಯಾ ರಾವ್ ಮತ್ತು ತರುಣ್ ಕೊಂಡೂರು ರಾಜು 31 ಕೆಜಿಗೂ ಹೆಚ್ಚು ಚಿನ್ನವನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಿದ್ದಾರೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಕೋರ್ಟ್‌ಗೆ ಹೇಳಿಕೊಂಡಿದೆ.
ಚಿನ್ನದ ಕಳ್ಳಸಾಗಣೆ ಪ್ರಕರಣದ ಎರಡನೇ ಆರೋಪಿ ರಾಜು (36)ಗೆ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡುವುದನ್ನು ಡಿಆರ್‌ಐ ಆಕ್ಷೇಪಿಸಿ ತನ್ನ ತನಿಖೆಯ ಹೊಸ ಮಾಹಿತಿಗಳನ್ನು ಬಹಿರಂಗಪಡಿಸಿದೆ. ಏಪ್ರಿಲ್ 7 ರಂದು ಸಿಸಿಎಚ್ -64 ಎಲ್‌ಎಕ್ಸ್‌ಐಐ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಐ ಪಿ ನಾಯಕ್ ಅವರು ರಾಜು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
33 ವರ್ಷದ ರನ್ಯಾ ಅವರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.2 ಕೆಜಿ ತೂಕದ 12.56 ಕೋಟಿ ರೂ. ಮೌಲ್ಯದ ಚಿನ್ನದೊಂದಿಗೆ ಬಂಧಿಸಲಾಗಿತ್ತು. ಆರು ದಿನಗಳ ನಂತರ, ಮಾರ್ಚ್ 9 ರಂದು ಡಿಆರ್‌ಐ ರಾಜು ಅವರನ್ನು ಬಂಧಿಸಿತ್ತು.
ರನ್ಯಾ ಮತ್ತು ರಾಜು ಇಬ್ಬರೂ ಚಿನ್ನದ ಕಳ್ಳಸಾಗಣೆಯಲ್ಲಿ ಮತ್ತು ಖರೀದಿಗೆ ಅಗತ್ಯವಾದ ಹಣವನ್ನು ರವಾನಿಸಲು ಹವಾಲಾ ವಹಿವಾಟಿನಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿಯನ್ನು ಆಧರಿಸಿ ಡಿಆರ್‌ಐ ಆಕ್ಷೇಪಣೆಗಳನ್ನು ಸಲ್ಲಿಸಿತ್ತು. ಈ ಇಬ್ಬರು 31 ಕೆಜಿಗಿಂತ ಹೆಚ್ಚು ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದು ಇದು “ಜಾಮೀನು ರಹಿತ ಅಪರಾಧ” ಎಂದು ಡಿಆರ್‌ಐ ನ್ಯಾಯಾಲಯಕ್ಕೆ ತಿಳಿಸಿದೆ.
ರಾಜು ಅಮೇರಿಕಾದ ನಾಗರಿಕರಾಗಿದ್ದು, ಅದನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಪರಾರಿಯಾಗುವ ಸಾಧ್ಯತೆ ಇದೆ ಎಂದು ಡಿಆರ್‌ಐ ವಾದಿಸಿದೆ. ಅವರು ಈ ಹಿಂದೆ ದೇಶದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು ಎಂದು ಡಿಆರ್‌ಐ ಹೇಳಿದ್ದು, ಅವರ ಕೃತ್ಯಗಳ ಬಗ್ಗೆ ಅವರಿಗೆ ಅರಿವಿತ್ತು ಎಂದು ಹೇಳಿದೆ.
“ಅರ್ಜಿದಾರರು (ರಾಜು) ಮತ್ತು ಆರೋಪಿ 1 (ರನ್ಯಾ ರಾವ್) ಇಬ್ಬರೂ ಸ್ವಯಂಪ್ರೇರಿತ ಹೇಳಿಕೆಗಳನ್ನು ನೀಡಿ, ಆರೋಪಿ 3 (ಸಾಹಿಲ್ ಸಕಾರಿಯಾ ಜೈನ್) ಸಹಾಯದಿಂದ ಸರಕು/ಚಿನ್ನದ ಕಳ್ಳಸಾಗಣೆ ಮತ್ತು ಭಾರತದಲ್ಲಿ ಆಭರಣಗಳ ರೂಪದಲ್ಲಿ ಮಾರಾಟ ಮಾಡಿರುವುದನ್ನು ಬಹಿರಂಗಪಡಿಸಿದ್ದಾರೆ. ಇದಲ್ಲದೆ, ಅವರು ಹವಾಲಾ ವ್ಯವಹಾರದಲ್ಲಿಯೂ ಭಾಗಿಯಾಗಿದ್ದಾರೆ ಎಂದು ಬಹಿರಂಗಪಡಿಸಲಾಗಿದೆ” ಎಂದು ಡಿಆರ್‌ಐ ಹೇಳಿಕೊಂಡಿದೆ.
ರಾಜು ಅವರು ಅಮೆರಿಕಾ ಪ್ರಜೆಯಾಗಿದ್ದು, ಅವರ ವಿಧವೆ ತಾಯಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ರಾಜು ಅವರ ವಕೀಲರು ವಾದಿಸಿದ್ದಾರೆ. ರಾಜು ಅವರ ತಾಯಿಗೆ ಬೆಂಗಳೂರಿನಲ್ಲಿ “ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು” ಹೊಂದಿದ್ದಾರೆ, ಆದ್ದರಿಂದ ಅವರು ತಲೆಮರೆಸಿಕೊಳ್ಳುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
“ಅರ್ಜಿದಾರ ರಾಜು ಅವರಿಂದ ಏನನ್ನೂ ವಶಪಡಿಸಿಕೊಳ್ಳಲಾಗಿಲ್ಲ ಮತ್ತು ಅವರ ವಿರುದ್ಧ ಯಾವುದೇ ದೋಷಾರೋಪಣೆಯ ವಸ್ತುಗಳು ಕಂಡುಬಂದಿಲ್ಲ” ಎಂದು ರಾಜು ಪರ ವಕೀಲರು ಪ್ರತಿಪಾದಿಸಿದರು. ರಾಜು ದುಬೈ ಮತ್ತು ಇತರ ದೇಶಗಳಲ್ಲಿ ಚಿನ್ನದ ವ್ಯವಹಾರವನ್ನು ಹೊಂದಿದ್ದರು, ಆದ್ದರಿಂದ ಕಸ್ಟಮ್ಸ್ ಕಾಯ್ದೆ, 1962 ಅವರಿಗೆ ಅನ್ವಯಿಸಲಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
“ಅರ್ಜಿದಾರ (ರಾಜು) ದುಬೈನಲ್ಲಿ ಆರೋಪಿ 1 (ರನ್ಯಾ) ಗೆ ಚಿನ್ನವನ್ನು ಮಾರಾಟ ಮಾಡಿದ್ದಾರೆ. ಆದರೆ ಆರೋಪಿ ರನ್ಯಾ ಅದನ್ನು ಭಾರತಕ್ಕೆ ಕಳ್ಳಸಾಗಣೆ ಮಾಡುತ್ತಿದ್ದಾರೆ ಅವರಿಗೆ ತಿಳಿದಿಲ್ಲ” ಎಂದು ಅವರ ವಕೀಲರು ಪ್ರತಿಪಾದಿಸಿದ್ದಾರೆ. ನ್ಯಾಯಾಲಯವು ಎರಡೂ ಕಡೆಯ ವಾದಗಳನ್ನು ಆಲಿಸಿ ಅವರ ಅರ್ಜಿಯನ್ನು ವಜಾ ಮಾಡಿದೆ.
“ಅರ್ಜಿದಾರ (ರಾಜು) ಮತ್ತು ಆರೋಪಿ 1 (ರನ್ಯಾ) ಇಬ್ಬರ ಸ್ವಯಂಪ್ರೇರಿತ ಹೇಳಿಕೆಯ ಪ್ರಕಾರ, ಅವರು 20-25 ಬಾರಿ ದುಬೈಗೆ ಪ್ರಯಾಣಿಸಿದ್ದಾರೆ ಮತ್ತು ಅದೇ ದಿನ ಭಾರತಕ್ಕೆ ಮರಳಿದ್ದಾರೆ. ಇದು ಅವರ ಕಾರ್ಯವೈಖರಿಯನ್ನು ಬಹಿರಂಗಪಡಿಸಿದೆ” ಎಂದು ನ್ಯಾಯಾಧೀಶರು ಹೇಳಿದ್ದಾರೆ.
“ಇಡೀ ಸಂಗತಿಯನ್ನು ಪರಿಗಣಿಸಿದಾಗ, ಈ ಪ್ರಕರಣದಲ್ಲಿ ಸಮುದಾಯದ ಹಿತಾಸಕ್ತಿ ಇದೆ ಎಂದು ತಿಳಿದುಬಂದಿದೆ. ಅರ್ಜಿದಾರರಿಗೆ ಜಾಮೀನು ನೀಡಿದರೆ ಪಲಾಯನ ಮಾಡುವ ಅಪಾಯವಿರುತ್ತದೆ ಮತ್ತು ಅದು ಸಮಾಜಕ್ಕೆ ತಪ್ಪು ಸಂಕೇತವನ್ನು ನೀಡುತ್ತದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಅರ್ಜಿದಾರರು ಜಾಮೀನು ಮಂಜೂರಾತಿಗೆ ಅರ್ಹರಲ್ಲ ಎಂದು ನಾನು ಅಭಿಪ್ರಾಯಪಡುತ್ತೇನೆ” ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಅಂಬೇಡ್ಕರ್ ಪ್ರಶಸ್ತಿ | ಮಾವಳ್ಳಿ ಶಂಕರ್, ಲಕ್ಷ್ಮೀಪತಿ, ಇಂದೂಧರ ಹೊನ್ನಾಪುರ ಸೇರಿ 15 ಮಂದಿ ಆಯ್ಕೆ
ಅಂಬೇಡ್ಕರ್ ಪ್ರಶಸ್ತಿ | ಮಾವಳ್ಳಿ ಶಂಕರ್, ಲಕ್ಷ್ಮೀಪತಿ, ಇಂದೂಧರ ಹೊನ್ನಾಪುರ ಸೇರಿ 15 ಮಂದಿ ಆಯ್ಕೆ

