ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಹಾಸನದ ಸಂಸದ ಮತ್ತು ಅಮಾನತುಗೊಂಡ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಗೆ ಸಹಕರಿಸುತ್ತಿಲ್ಲ ಎಂದು ಮೂಲಗಳು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಇಂದು ಅಥವಾ ಸೋಮವಾರ ಕ್ರೈಂ ಸ್ಪಾಟ್‌ನಲ್ಲಿ ವಿಚಾರಣೆ ನಡೆಸಲು ಮುಂದಾಗಿದೆ.
ಹಾಸನ ಜಿಲ್ಲೆಯ ಹಾಲಿ ಸಂಸದ ಪ್ರಜ್ವಲ್ ರೇವಣ್ಣಗೆ ಮೇ 31ರಂದು ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಬಂಧಿಸಲಾಯಿತು. ಲೈಂಗಿಕ ದೌರ್ಜನ್ಯದ ವಿಡಿಯೋ ವೈರಲ್ ಬಳಿಕ ಅವರು ಏಪ್ರಿಲ್‌ನಲ್ಲಿ ದೇಶದಿಂದ ಪರಾರಿಯಾಗಿದ್ದರು.
ಸತತ ಎರಡು ದಿನಗಳ ಕಾಲ ಎಸ್‌ಐಟಿಯ ಪ್ರಶ್ನೆಗಳಿಗೆ ಪ್ರಜ್ವಲ್ ರೇವಣ್ಣ ನುಣುಚಿಕೊಳ್ಳುವ ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣವು ತನ್ನ ವಿರುದ್ಧದ ಷಡ್ಯಂತ್ರವಾಗಿದ್ದು, ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ನಿಮ್ಮ ತಾಯಿ ಇಲ್ಲದ ಸಂದರ್ಭದಲ್ಲಿ ಹೊಳೆನರಸೀಪುರದಲ್ಲಿರುವ ಮನೆಗೆ ಏಕೆ ಹೋಗಿದ್ದು? ಮನೆಯಲ್ಲಿ ಎಷ್ಟು ಮಂದಿ ಕೆಲಸಗಾರರು ಇದ್ದಾರೆ? ಎಂದು ಹಲವು ಪ್ರಶ್ನೆಗಳನ್ನು ಪ್ರಜ್ವಲ್ ರೇವಣ್ಣ ಅವರಿಗೆ ಎಸ್‌ಐಟಿ ತನಿಖಾಧಿಕಾರಿಗಳು ಕೇಳಿದ್ದು, ಕೆಲವು ಫೋಟೊಗಳನ್ನು ತೋರಿಸಿ ಇವರು ನಿಮಗೆ ಗೊತ್ತಾ? ಎಂದು ಕೇಳಿದಾಗ ಅದಕ್ಕೆ ಪ್ರಜ್ವಲ್ ರೇವಣ್ಣ ಅವರು ಗೊತ್ತಿಲ್ಲ, ಹಾಸನ ತೋಟದ ಮನೆಗಳಲ್ಲಿ ತುಂಬಾ ಜನ ಕೆಲಸದವರಿದ್ದಾರೆ. ಯಾರೆಂಬುದು ಗೊತ್ತಿಲ್ಲ. ಯಾರು ಎಂಬುದು ನೆನಪಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದಲ್ಲದೆ ದೂರು ಕೊಟ್ಟವರು ಯಾರು? ನೀವು ಹೇಳುತ್ತಿರುವ ಮಹಿಳೆಯ ಪರಿಚಯವೇ ನನಗಿಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ. ಈ ಹಿನ್ನೆಲೆ ಹಾಸನ ಜಿಲ್ಲೆಯ ಹೊಳೆನರಸೀಪುರಕ್ಕೆ ಪ್ರಜ್ವಲ್ ರೇವಣ್ಣ ಅವರನ್ನು ಕರೆದುಕೊಂಡು ಹೋಗಿ ಎಸ್‌ಐಟಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಮಂಗಳವಾರ ನಡೆಯಲಿರುವ ಲೋಕಸಭೆ ಚುನಾವಣೆಯ ಮತ ಎಣಿಕೆಗೆ ಮುನ್ನ ಕನಿಷ್ಠ ಸೋಮವಾರದೊಳಗೆ ಸ್ಥಳ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತನಿಖಾ ತಂಡ ಮುಂದಾಗಿದೆ. ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ಅವರಿಗೆ ಎಸ್‌ಐಟಿ ನೋಟಿಸ್ ನೀಡಿದ್ದು, ಅವರು ವಿಚಾರಣೆಗೆ ಹಾಜರಾಗಿಲ್ಲ ಎಂದು ತಿಳಿದು ಬಂದಿದೆ.
ಇದನ್ನು ಓದಿ: ಲೋಕಸಭೆ ಚುನಾವಣೆ-2024: ಎಕ್ಸಿಟ್ ಪೋಲ್‌ನಲ್ಲಿ ಎನ್‌ಡಿಎಗೆ ಬಹುಮತ; ಇಲ್ಲಿದೆ ಚುನಾವಣೋತ್ತರ ಸಮೀಕ್ಷಾ ಫಲಿತಾಂಶಗಳ ವಿವರಗಳು…


