ಲೋಕಸಭೆ ಚುನಾವಣೆಯ ಮತ ಎಣಿಕೆಗೆ ಒಂದು ದಿನ ಮೊದಲು ಪಶ್ಚಿಮ ಬಂಗಾಳದ ಬರಾಸತ್ ಮತ್ತು ಮಥುರಾಪುರ ಲೋಕಸಭಾ ಕ್ಷೇತ್ರಗಳಲ್ಲಿ ತಲಾ ಒಂದು ಮತಗಟ್ಟೆಯಲ್ಲಿ ಮರು ಮತದಾನ ನಡೆಯುತ್ತಿದೆ.
ಚುನಾವಣಾ ಆಯೋಗದ ಆದೇಶದ ಪ್ರಕಾರ, ಬರಾಸತ್ ಸಂಸದೀಯ ಕ್ಷೇತ್ರದ -ದೇಗಂಗಾ ವಿಧಾನಸಭಾ ವ್ಯಾಪ್ತಿಯ 61 ಕದಂಬಗಚಿ ಸರದರ್ ಪದ ಎಫ್‌ಪಿ ಶಾಲೆಯ ಕೊಠಡಿ ಸಂಖ್ಯೆ 2 ಮತ್ತು ಮಥುರಾಪುರ ಸಂಸದೀಯ ಕ್ಷೇತ್ರದ ಕಾಕ್‌ಡಿವಿಸಿ ವಿಧಾನಸಭಾ ವ್ಯಾಪ್ತಿಯ 26 ಆದಿರ್ ಮಹಲ್ ಶ್ರೀಚೈತನ್ಯ ಬಿದ್ಯಾಪೀಠ ಎಫ್‌ಪಿ ಶಾಲೆಯಲ್ಲಿ ಮರು ಮತದಾನ ನಡೆಯುತ್ತಿದೆ.
ಈ ಎರಡೂ ಕ್ಷೇತ್ರಗಳಲ್ಲಿ ಜೂನ್ 1ರಂದು ಮತದಾನ ನಡೆದಿತ್ತು. ಶನಿವಾರ ನಡೆದ ಮತದಾನದ ವೇಳೆ ಚುನಾವಣಾ ಅಕ್ರಮ ವಿಚಾರಕ್ಕೆ ಸಂಬಂಧಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವ್ಯಾಪಕ ಹಿಂಸಾಚಾರ ನಡೆದಿದ್ದು, ಹಲವು ಮಂದಿ ಗಾಯಗೊಂಡಿದ್ದರು.
ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿ, ಲಾಠಿ ಪ್ರಹಾರ ನಡೆಸಿದ್ದರು. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿವಿಧ ರಾಜಕೀಯ ಪಕ್ಷಗಳು 1,899 ದೂರುಗಳನ್ನು ನೀಡಿವೆ ಎಂದು ಚುನಾವಣಾ ಆಯೋಗ ತಿಳಿಸಿದ್ದು, ಪೋಲಿಂಗ್ ಏಜೆಂಟರನ್ನು ಮತಗಟ್ಟೆ ಪ್ರವೇಶಿಸದಂತೆ ತಡೆದಿರುವುದು ಹಿಂಸಾಚಾರಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಈ ಮಧ್ಯೆ ಬಸಿರ್‌ಹತ್‌ನ ಸಂದೇಶಖಾಲಿಗೆ ಶನಿವಾರ ನಡೆದ ಹಿಂಸಾಚಾರದ ಆರೋಪಿಯನ್ನು ಬಂಧಿಸಲು ಪೊಲೀಸರು ಹೋದಾಗ, ಸ್ಥಳೀಯ ಮಹಿಳೆಯರು ಇದನ್ನು ವಿರೋಧಿಸಿ ಪೊಲೀಸರ ಜೊತೆ ಗಲಾಟೆ ನಡೆಸಿದ್ದಾರೆ. ಬಿಜೆಪಿ ಕಾರ್ಯಕರ್ತ ಸಾಧನ್ ನಂದಿಯನ್ನು ಬಂಧಿಸಲು ಸಂದೇಶಖಾಲಿಗೆ ತೆರಳಿದ್ದರು.
ಈ ಕುರಿತು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ವೀಕ್ಷಕರ ವರದಿ ಆಧರಿಸಿ ಚುನಾವಣಾ ಆಯೋಗವು ಮರು ಮತದಾನ ನಡೆಸಲು ಆದೇಶಿಸಿದೆ. ಲೋಕಸಭೆ ಚುನಾವಣೆಗೆ 7 ಹಂತಗಳಲ್ಲಿ ಮತದಾನ ಪೂರ್ಣಗೊಂಡಿದೆ. ನಾಳೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ದೇಶದ ಪ್ರಜೆಗಳ ಚಿತ್ತ ಚುನಾವಣಾ ಫಲಿತಾಂಶದತ್ತ ನೆಟ್ಟಿದೆ.
West Bengal | Re-polls ordered at one polling station each in the Barasat and Mathurapur Lok Sabha constituencies for General Elections
Voting took place at these stations on June 1 & fresh polling will be held on June 3 from 7 am to 6 pm.
#LokSabhaElections2024 pic.twitter.com/dsdUe0bai1
— Lok Poll (@LokPoll) June 3, 2024
ಇದನ್ನು ಓದಿ: ಸರಿಯಾದ ಸಮಯಕ್ಕೆ ಬಂಧಿಸದ ಕಾರಣ ನೀರವ್ ಮೋದಿ, ಮಲ್ಯ, ಮೆಹುಲ್ ಚೋಕ್ಸಿ ಭಾರತದಿಂದ ಪಲಾಯನ ಮಾಡಿದ್ರು: ಮುಂಬೈ ಕೋರ್ಟ್


