“ಹಿಂತೆಗೆದುಕೊಂಡ ಮೂರು ಕೃಷಿ ಕಾನೂನುಗಳನ್ನು ನಂತರದ ದಿನಗಳಲ್ಲಿ ಮತ್ತೆ ಜಾರಿಗೆ ತರಬಹುದು” ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ರೈತ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ, “ಸರ್ಕಾರದ ಅಹಂ ಮುರಿಯಲು ಎಲ್ಲಾ ಸಮಯದಲ್ಲಿಯೂ ಸಜ್ಜಾಗಿದ್ದೇವೆ” ಎಂದು ಎಚ್ಚರಿಕೆ ನೀಡಿದೆ.
ಇಂದು ಮಹಾರಾಷ್ಟ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ತೋಮರ್, “ನಾವು ಕೃಷಿ ತಿದ್ದುಪಡಿ ಕಾನೂನುಗಳನ್ನು ಜಾರಿಗೆ ತಂದೆವು. ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರದಲ್ಲಿ ಸುಧಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಜಾರಿಗೆ ತಂದ ಈ ಕಾನೂನುಗಳನ್ನು ಕೆಲವು ಜನರು ಇಷ್ಟಪಡಲಿಲ್ಲ. ಆದರೆ ಸರ್ಕಾರ ನಿರಾಶೆಗೊಂಡಿಲ್ಲ. ನಾವು ಒಂದು ಹೆಜ್ಜೆ ಹಿಂದೆ ಸರಿದಿದ್ದೇವೆ ಮತ್ತು ನಾವು ಮತ್ತೆ ಮುಂದುವರಿಯುತ್ತೇವೆ. ಏಕೆಂದರೆ ರೈತರು ಭಾರತದ ಬೆನ್ನೆಲುಬು” ಎಂದು ಹೇಳಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಸಂಯುಕ್ತ ಕಿಸಾನ್ ಮೋರ್ಚಾ “ಕೃಷಿ ಸಚಿವ ನರೇಂದ್ರ ತೋಮರ್ ಅವರ ಈ ಹೇಳಿಕೆ ದುರಹಂಕಾರದಿಂದ ಕೂಡಿದೆ. ಬಿಜೆಪಿ ಸರ್ಕಾರ ಒಂದು ಹೆಜ್ಜೆ ಹಿಂದೆ ಸರಿದು ಮತ್ತು ಎರಡು ಹೆಜ್ಜೆ ಮುಂದೆ ಹೋಗಬೇಕೆಂದು ಭಾವಿಸಿದರೆ ಅದು ಸಾಧ್ಯವಿಲ್ಲ. ರೈತರು ಮತ್ತು ರೈತ ಸಂಘಟನೆಗಳು ಎಂಎಸ್‌ಪಿ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಒಗ್ಗಟ್ಟಾಗಿವೆ ಮತ್ತು ಈ ಸರ್ಕಾರದ ಅಹಂ ಮುರಿಯಲು ಎಲ್ಲಾ ಸಮಯದಲ್ಲೂ ಸಿದ್ಧವಾಗಿದ್ದೇವೆ” ಎಂದು ಹೇಳಿದೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸುಗ್ರೀವಾಜ್ಞೆ ಮೂಲಕ ವಿವಾದಿತ 3 ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿತ್ತು. ನಂತರ ಎರಡೂ ಸದನಗಳಲ್ಲಿ ಅಂಗೀಕರಿಸಿತ್ತು. ಈ ಕುರಿತು ದೇಶಾದ್ಯಂತದ ರೈತರು 15 ತಿಂಗಳಿಗೂ ಹೆಚ್ಚು ಕಾಲ ಹೋರಾಟ ನಡೆಸಿದ್ದರು. ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ರೈತರು ದೆಹಲಿಯ ಗಡಗಳಲ್ಲಿ ಮೊಕ್ಕಾಂ ಹೂಡಿದ್ದರು. ಕೊನೆಗೂ ರೈತರ ಸುಧೀರ್ಘ ಹೋರಾಟಕ್ಕೆ ಮಣಿದ ಸರ್ಕಾರ ನವೆಂಬರ್ 29 ರಂದು ಸಂಸತ್ತಿನ ಅಧಿವೇಶನದಲ್ಲಿ 3 ಕಾಯ್ದೆಗಳನ್ನು ವಾಪಸ್ ಪಡೆದಿದೆ. ರೈತರ ಎಲ್ಲಾ ಹಕ್ಕೊತ್ತಾಯಗಳನ್ನು ಒಪ್ಪಿಕೊಂಡು ಎಂಎಸ್‌ಪಿ ಜಾರಿಗಾಗಿ ಕಾನೂನು ರಚಿಸುವುದಾಗಿ ರೈತರಿಗೆ ಲಿಖಿತ ಭರವಸೆ ನೀಡಿದೆ. ತದನಂತರ ರೈತರು ತಮ್ಮ ಐತಿಹಾಸಿಕ ರೈತ ಹೋರಾಟವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದ್ದಾರೆ.
ವಿವಾದಿತ ಕೃಷಿ ಕಾಯ್ದೆಗಳನ್ನು ಮತ್ತೆ ಜಾರಿಗೊಳಿಸುವ ಸೂಚನೆ ನೀಡಿದ ಕೇಂದ್ರ ಕೃಷಿ ಸಚಿವ ತೋಮರ್


